ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

ಸೂರ್ಯ ಉದಯಿಸುವ ಮೊದಲು ಏಳಬೇಕು !

‘ಸೂರ್ಯೋದಯದ ನಂತರ ಮಲಗಿರುವುದು’, ಆರೋಗ್ಯದ, ಹಾಗೆಯೇ ಧರ್ಮಶಾಸ್ತ್ರದ ದೃಷ್ಟಿಯಿಂದಲೂ ಅಯೋಗ್ಯವಾಗಿದೆ. ಇದಕ್ಕೆ ಧರ್ಮಶಾಸ್ತ್ರ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳಿದೆ.

ಸೂರ್ಯೇಣಾಭ್ಯುದಿತೋ ಯಶ್ಚ ತ್ಯಕ್ತಃ ಸೂರ್ಯೇಣ ವಾ ಸ್ವಪನ್ |

ಅನ್ಯತ್ರಾತುರಭಾವಾತ್ತು ಪ್ರಾಯಶ್ಚಿತ್ತೀ ಭವೆನ್ನರಃ || – ವಿಷ್ಣುಪುರಾಣ, ಅಂಶ ೩, ಅಧ್ಯಾಯ ೧೧, ಶ್ಲೋಕ ೧೦

ಅರ್ಥ : ಯಾವ ಮನುಷ್ಯನು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮಲಗಿಕೊಂಡಿರುತ್ತಾನೆಯೋ, ಅವನು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ಅನಾರೋಗ್ಯ ಪೀಡಿತ ವ್ಯಕ್ತಿಗೆ ಈ ನಿಯಮವು ಅನ್ವಯಿಸುವುದಿಲ್ಲ.’  (೨೪.೧೦.೨೦೨೨)

ಬಿಸಿನೀರು ಕುಡಿಯಬೇಕೋ ತಣ್ಣೀರು ಕುಡಿಯಬೇಕೋ ?

‘ಚಳಿಗಾಲದಲ್ಲಿ ಬಿಸಿನೀರು, ಬೇಸಿಗೆಯಲ್ಲಿ ತಣ್ಣೀರನ್ನು ಕುಡಿಯಬೇಕು. ತಣ್ಣೀರು ಎಂದರೆ ಶೀತಕಪಾಟಿನಲ್ಲಿರುವುದಲ್ಲ. ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿನ ನೀರನ್ನು ಕುಡಿಯುವುದರಿಂದ ಮನಸ್ಸು ಪ್ರಸನ್ನವಾಗುತ್ತದೆ. ಇತರ ಋತುಗಳಲ್ಲಿ ಮಡಕೆಯ ನೀರನ್ನು ಕುಡಿಯಬಾರದು. ಸೀನುವುದು, ನೆಗಡಿ, ಗಂಟಲಲ್ಲಿ ಕಫವಾಗುವುದು, ಜ್ವರ, ದಮ್ಮು ಈ ರೋಗಗಳಿರುವಾಗ ಸಾಮಾನ್ಯ (ಕುದಿಸದಿರುವ) ತಣ್ಣೀರನ್ನು ಕುಡಿಯಬಾರದು. ಅವರು ಕುದಿಸಿದ ನೀರನ್ನು ಉಗುರುಬಿಸಿ ಅಥವಾ ತಂಪು ಮಾಡಿ ಕುಡಿಯಬೇಕು.’ (೧೩.೧೧.೨೦೨೨)

ದೇಹವನ್ನು ಆರೋಗ್ಯವಾಗಿಡಲು ಇಷ್ಟೇ ಮಾಡಿರಿ !

‘ಕೇವಲ ‘ಪ್ರತಿದಿನ ವ್ಯಾಯಾಮವನ್ನು ಮಾಡುವುದು’ ಮತ್ತು ‘ದಿನಕ್ಕೆ ೨ ಬಾರಿ ಆಹಾರವನ್ನು ತೆಗೆದುಕೊಳ್ಳುವುದು’, ಈ ಎರಡೇ ವಿಷಯಗಳನ್ನು ನಿತ್ಯ ಆಚರಣೆಯಲ್ಲಿಟ್ಟರೆ, ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಬೇರೆ ಏನು ಮಾಡುವ ಅಗತ್ಯವಿಲ್ಲ, ಈ ೨ ಕೃತಿಗಳಿಗೆ ಅಷ್ಟು ಮಹತ್ವವಿದೆ.’ (೧೯.೯.೨೦೨೨)

ತಿಂಡಿತಿನಿಸುಗಳ ಸಂದರ್ಭದಲ್ಲಿ ವಿವೇಕವನ್ನು ಜಾಗೃತವಾಗಿಡಿ !

‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು. ಒಣಹಣ್ಣುಗಳು ದುಬಾರಿ ಎನಿಸಿದರೆ ಬೆಲ್ಲ-ಶೇಂಗಾ, ಎಳ್ಳು-ಬೆಲ್ಲ, ಹುರಿದ ಪುಟಾಣಿ, ಅಂಟಿನ ಅಥವಾ ಮೆಂತೆಹಿಟ್ಟಿನ ಉಂಡೆ ಇವುಗಳಂತಹ ಪೌಷ್ಠಿಕ ಆಹಾರಗಳನ್ನು ಹಸಿವಾದಾಗ ತಿನ್ನಬೇಕು. ಪೌಷ್ಠಿಕವಲ್ಲದ, ಎಣ್ಣೆಯುಕ್ತ, ‘ಪ್ರಿಸರ್ವೇಟಿವ್ (ಆಹಾರ ಪದಾರ್ಥಗಳು ಹಾಳಾಗಬಾರದೆಂದು ಹಾಕಿದ ರಾಸಾಯನಿಕ ಪದಾರ್ಥ)’ ಹಾಕಿದ ಮತ್ತು ಆರೋಗ್ಯವನ್ನು ಹಾಳು ಮಾಡುವ ಪದಾರ್ಥಗಳನ್ನು ತಿನ್ನುವುದಕ್ಕಿಂತ ಪೌಷ್ಠಿಕ, ಸಾತ್ತ್ವಿಕ ಮತ್ತು ನೈಸರ್ಗಿಕ ಪದಾರ್ಥಗಳನ್ನು ತಿನ್ನಬೇಕು. ಚಾಕಲೇಟ್ ಇತ್ಯಾದಿ ಪದಾರ್ಥಗಳನ್ನು ಕೆಲವೊಮ್ಮೆ ತಿನ್ನಬಹುದು; ಆದರೆ ಅವುಗಳನ್ನು ಸತತವಾಗಿ ತಿನ್ನುವುದನ್ನು ತಡೆಯಬೇಕು.’ (೧೫.೮.೨೦೨೨)

ಗೃಹಿಣಿಯರೇ, ಮಧ್ಯಾಹ್ನದ ಊಟದಲ್ಲಿ ವೈವಿಧ್ಯವಿರಲಿ !

‘ಮನುಷ್ಯನು ರುಚಿಪ್ರಿಯನಾಗಿದ್ದಾನೆ. ಪ್ರತಿಯೊಬ್ಬರೂ ವಿವಿಧ ಪ್ರಕಾರದ ರುಚಿಕರ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಅನೇಕ ಬಾರಿ ಮನೆಯಲ್ಲಿ  ದಿನನಿತ್ಯ ಉಪಾಹಾರಕ್ಕಾಗಿ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ; ಆದರೆ ಮಧ್ಯಾಹ್ನದ ಊಟದಲ್ಲಿ ‘ಅದೇ ಅದೇ’ ಇರುತ್ತದೆ. ಹೀಗೆ ಆಗುವುದರಿಂದ ಮನೆಯ ವ್ಯಕ್ತಿಗಳಿಗೆ ಹಸಿವು ಇಲ್ಲದಿದ್ದರೂ ಕೇವಲ ರುಚಿಗಾಗಿ ಉಪಾಹಾರವನ್ನು ತಿನ್ನುವ ಇಚ್ಛೆಯಾಗುತ್ತದೆ. ಆದುದರಿಂದ ಬೆಳಗ್ಗಿನ ಅಥವಾ ಸಾಯಂಕಾಲದ ಉಪಾಹಾರವನ್ನು ಬಿಡಲು ಆಗುವುದಿಲ್ಲ. ಮನೆಯ ಜನರಿಗೆ ೨ ಬಾರಿಯೇ ಆಹಾರವನ್ನು ತೆಗೆದುಕೊಳ್ಳುವ ಆರೋಗ್ಯಕರ ರೂಢಿಯನ್ನು ಮಾಡುವುದಿದ್ದರೆ, ಮಧ್ಯಾಹ್ನದ ಊಟದಲ್ಲಿ ವೈವಿಧ್ಯವನ್ನು ತರಬೇಕು. ಗೃಹಿಣಿಯರು ಯಾವಾಗಲೂ ಹೊಸದನ್ನು ಕಲಿಯುವ ರೂಢಿಯನ್ನು ಮಾಡಿದರೆ ಅದು ಸಹಜವಾಗಿ ಸಾಧ್ಯವಾಗುತ್ತದೆ.’  (೩೦.೯.೨೦೨೨)

ಯಾರಿಗೆ ಒಲೆ ಉರಿಸಲು ಬರುತ್ತದೆಯೋ, ಅವರಿಗೆ ಆರೋಗ್ಯದಿಂದಿರುವ ಗುಟ್ಟು ತಿಳಿದಿರುತ್ತದೆ !

‘ಒಲೆಯನ್ನು ಉರಿಸುವಾಗ ಕೇವಲ ಕಟ್ಟಿಗೆಯ ಸಣ್ಣ ಸಣ್ಣ ತುಂಡುಗಳನ್ನು ಸುಟ್ಟರೆ, ಅದು ಬೇಗ ಉರಿಯುತ್ತದೆ ಮತ್ತು ಪುನಃ ಪುನಃ ಕಟ್ಟಿಗೆಯ ತುಂಡುಗಳನ್ನು ಒಳಗೆ ಸರಿಸಬೇಕಾಗುತ್ತದೆ. ಒಲೆ ಸರಿಯಾಗಿ ಹೊತ್ತಿಸುವ ಮೊದಲೇ ದೊಡ್ಡ ಕಟ್ಟಿಗೆಗಳನ್ನು ಒಳಗೆ ಸರಿಸಿದರೆ ಅವು ಉರಿಯುವುದಿಲ್ಲ; ಕೇವಲ ಹೊಗೆ ಏಳುತ್ತದೆ. ಆದುದರಿಂದ ಒಲೆಯನ್ನು ಹೊತ್ತಿಸುವುದಿದ್ದರೆ, ಮೊದಲು ಚಿಕ್ಕ ಚಿಕ್ಕ ಕಟ್ಟಿಗೆ ತುಂಡುಗಳನ್ನು ಸುಡಬೇಕಾಗುತ್ತದೆ. ಅವು ಸರಿಯಾಗಿ ಉರಿಯುತ್ತಿರುವಾಗ ನಿಧಾನವಾಗಿ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಒಳಗೆ ಸರಿಸಲಾಗುತ್ತದೆ. ಒಮ್ಮೆ ದೊಡ್ಡ ಕಟ್ಟಿಗೆಗಳು ಉರಿಯತೊಡಗಿದ ನಂತರ ಅದು ಮಂದವಾಗಿ ಉರಿಯುತ್ತಿರುತ್ತದೆ. ಆಗ ಮೇಲಿಂದ ಮೇಲೆ ಕಟ್ಟಿಗೆಗಳನ್ನು ಒಳಗೆ ಸರಿಸಬೇಕಾಗುವುದಿಲ್ಲ.

ಜಠರಾಗ್ನಿಯ ವಿಷಯದಲ್ಲಿಯೂ (ಶರೀರದ ಪಚನಶಕ್ತಿಯ ಬಗ್ಗೆಯೂ) ಇದೇ ರೀತಿ ಇರುತ್ತದೆ. ಜಠರಾಗ್ನಿಯಿಂದಲೇ ನಮ್ಮ ಆರೋಗ್ಯವು ಅವಲಂಬಿಸಿರುದೆ. ಜಠರಾಗ್ನಿಯ ಸಂದರ್ಭದಲ್ಲಿ ‘ಚಿಕ್ಕ ತುಂಡುಗಳು’, ಅಂದರೆ ‘ಪಚನವಾಗಲು ಹಗುರ ಪದಾರ್ಥಗಳು, ಉದಾ. ಅರಳು, ಮೆತ್ತಗಿರುವ ಅನ್ನ, ತೊವ್ವೆಅನ್ನ, ನೀರುದೋಸೆ, ತುಪ್ಪ, ಹಾಗೆಯೇ ಸೇಬು, ಮೋಸಂಬಿ, ಕಲ್ಲಂಗಡಿ ಇಂತಹ ಸಹಜವಾಗಿ ಪಚನವಾಗುವ ಹಣ್ಣುಗಳು ಮತ್ತು ಹೆಚ್ಚಿನ ತರಕಾರಿಗಳು’, ‘ದೊಡ್ಡ ಸೌದೆ’, ಅಂದರೆ ‘ಪಚನವಾಗಲು ಜಡ ಪದಾರ್ಥಗಳು, ಉದಾ. ಚಪಾತಿ, ದ್ವಿದಳ ಧಾನ್ಯಗಳು, ಮೊಸರು, ಒಣ ಹಣ್ಣುಗಳು (ಡ್ರೈಫ್ರುಟ್ಸ್), ಆಲೂಗಡ್ಡೆ, ಬೀಟರೂಟ್, ಸುವರ್ಣಗಡ್ಡೆ ಇಂತಹ ಗಡ್ಡೆ ತರಕಾರಿಗಳು, ಹಾಗೆಯೇ ಬಾಳೆಹಣ್ಣು, ಅಂಜೂರ, ಮಾವಿನಹಣ್ಣು ಮತ್ತು ಹಲಸು ಇಂತಹ ಹಣ್ಣುಗಳು’. ಕೇವಲ ಹಗುರ ಪದಾರ್ಥಗಳನ್ನು ತಿನ್ನುತ್ತಿದ್ದರೆ ಮೇಲಿಂದ ಮೇಲೆ ಹಸಿವಾಗುತ್ತದೆ. ಹಸಿವು ಹೆಚ್ಚಾದ ನಂತರ ಹಂತಹಂತವಾಗಿ ಆಹಾರದ ಪ್ರಮಾಣವನ್ನು ಹೆಚ್ಚಿಸಿದರೆ ಅಥವಾ ಜಡ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿದರೆ ಮಧ್ಯಾಹ್ನದ ಮತ್ತು ರಾತ್ರಿಯ ಊಟದ ನಡುವೆ ಏನೂ ತಿನ್ನುವ ಅಗತ್ಯವಿರುವುದಿಲ್ಲ. ಆದುದರಿಂದ ತಮ್ಮ ಪಚನಶಕ್ತಿಯ ಅಂದಾಜು ತೆಗೆದುಕೊಂಡು ಆಹಾರದ ಪ್ರಮಾಣವನ್ನು ಮತ್ತು ಪದಾರ್ಥಗಳನ್ನು ನಿರ್ಧರಿಸುವುದು ಆವಶ್ಯಕವಿದೆ.’ (೨೨.೧೦.೨೦೨೨)

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.