ನಮ್ಮ ಶರೀರವು ೫ ಕೋಶಗಳಿಂದ ನಿರ್ಮಾಣವಾಗಿದೆ, ಅನ್ನಮಯಕೋಶ ಅವುಗಳಲ್ಲಿ ಒಂದು ! ಆಹಾರವು ನಮ್ಮ ದೇಹದ ಅವಿಭಾಜ್ಯ ಭಾಗವಾಗಿದೆ, ಅದರೊಂದಿಗೆ ಅದು ಮನುಷ್ಯನ ಮನಸ್ಸನ್ನೂ ಸಾತ್ತ್ವಿಕಗೊಳಿಸುತ್ತದೆ. ನಾವು ಏನು ತಿನ್ನುತ್ತೇವೆ, ಎಂಬುದರ ಮೇಲೆ ನಮ್ಮ ಹೆಚ್ಚಿನ ವಿಚಾರಗಳು ಅವಲಂಬಿಸಿರುತ್ತವೆ. ಭಾರತೀಯ ಆಹಾರಶಾಸ್ತ್ರದ ಉಗಮವು ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿ ಅಥವಾ ಆಯುರ್ವೇದದಲ್ಲಿದೆ. ಒಂದು ವೇಳೆ ಆಯುರ್ವೇದದಲ್ಲಿನ ಮೂಲ ಆಹಾರದ ನಿಯಮಗಳನ್ನು ಪಾಲಿಸಿದರೆ, ಡಾಕ್ಟರರ ಬಳಿ ಹೋಗುವ ಅವಶ್ಯಕತೆಯೇ ಇಲ್ಲ, ಇದು ನಿಜವೇ ಆಗಿದೆ !
ಮೊದಲನೆಯದಾಗಿ ಗಮನದಲ್ಲಿಡಬೇಕಾದುದೇನೆಂದರೆ ಪ್ರತಿಯೊಬ್ಬರ ಪ್ರಕೃತಿಗನುಸಾರ ಅವರ ತಿನ್ನುವ-ಕುಡಿಯುವ ನಿಯಮಗಳು ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ. ದಿನಚರಿ, ಕೆಲಸದ ಪದ್ಧತಿ ಇವುಗಳ ಹಾಗೆ ಆಹಾರದ ಅವಶ್ಯಕತೆಯೂ ಬದಲಾಗಬಹುದು. ಒಬ್ಬನಿಗೆ ಯಾವುದಾದರೂ ಪದಾರ್ಥ ಆವಶ್ಯಕವಿದ್ದರೆ, ಅದು ಇತರರಿಗೆ ಆವಶ್ಯಕವಿರುತ್ತದೆ ಎಂದೇನಿಲ್ಲ. ಆದರೂ ಸಹ ಎಲ್ಲರಿಗಾಗಿ ಆಹಾರದ ಕೆಲವು ನಿಯಮಗಳು ಸಮಾನವಾಗಿಯೇ ಇರುತ್ತವೆ.
ಆಹಾರದ ಕೆಲವು ನಿಯಮಗಳು
೧. ಬೆಳಗ್ಗೆ ಹೊಟ್ಟೆ ಸ್ವಚ್ಛವಾಗುವುದು ಅತ್ಯಂತ ಮಹತ್ವದ್ದಾಗಿದೆ. ಹೊಟ್ಟೆ ಸ್ವಚ್ಛವಾಗದಿದ್ದರೆ, ರಾತ್ರಿ ಮಲಗುವಾಗ ಹಾಲು-ತುಪ್ಪ, ಉಗುರುಬೆಚ್ಚಗಿನ ನೀರು-ತುಪ್ಪ, ಒಣದ್ರಾಕ್ಷಿಯ ಕಶಾಯ ಇತ್ಯಾದಿಗಳನ್ನು ಸೇವಿಸಿದರೆ ಹೊಟ್ಟೆ ಸ್ವಚ್ಛವಾಗುತ್ತದೆ ಹೊಟ್ಟೆ ಸ್ವಚ್ಛವಾಗದಿದ್ದರೆ, ನಂತರ ತಿಂದಿದ್ದು ಸರಿಯಾಗಿ ಜೀರ್ಣವಾಗುವುದಿಲ್ಲ.
೨. ‘ತಿಂಡಿಯನ್ನು ಹೊಟ್ಟೆ ತುಂಬ ತಿನ್ನಬೇಕು’, ಎಂಬುದು ಸದ್ಯದ (ಟ್ರೆಂಡ್) ಪದ್ಧತಿಯಾಗಿದೆ; ಆದರೆ ಒಂದು ವೇಳೆ ಹಸಿವು ಆಗದಿದ್ದರೆ, ತಿಂಡಿಯನ್ನು ತಿನ್ನಬಾರದು. ಬದಲಾಗಿ ೧ ಕಪ್ ಹಸುವಿನ ಹಾಲನ್ನು ಕುಡಿಯಬಹುದು. ಚಳಿಗಾಲದಲ್ಲಿ ಪ್ರಕೃತಿ ಸರಿಯಾಗಿದ್ದರೆ ಹೊಟ್ಟೆ ತುಂಬ ತಿನ್ನಬೇಕು.
೩. ಪ್ರತಿ ೨ ಗಂಟೆಗಳಿಗೊಮ್ಮೆ ಸ್ವಲ್ಪ ಸ್ವಲ್ಪ ತಿನ್ನುವುದೆಂದರೆ, ಅರ್ಧ ಬೇಯಿಸಿದ ಅನ್ನದಲ್ಲಿ ಹೊಸ ಅಕ್ಕಿಯನ್ನು ಹಾಕಿ ಬೇಯಿಸಿದಂತಾಗುತ್ತದೆ. ಮೊದಲಿನ ಮತ್ತು ಹೊಸ ಆಹಾರವು ಸರಿಯಾಗಿ ಜೀರ್ಣವಾಗುವುದೇ ಇಲ್ಲ. ಮಧ್ಯಾಹ್ನದ ಊಟದ ಸಮಯ ಬೆಳಗ್ಗೆ ೧೧ ರಿಂದ ೧ ಗಂಟೆಯ ವರೆಗೆ ಮತ್ತು ರಾತ್ರಿಯ ಊಟವು ಸೂರ್ಯಾಸ್ತದ ಆಸುಪಾಸು, ಅಂದರೆ ಸಾಯಂಕಾಲ ೭ ರಿಂದ ರಾತ್ರಿ ೮ ಗಂಟೆಯ ಒಳಗೆ ಇರಬೇಕು.
೪. ಮಧ್ಯಾಹ್ನದ ಊಟದಲ್ಲಿ ಎಲ್ಲ ರಸಗಳು ಇರಬೇಕು. ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರು ಇಂತಹ ಪದಾರ್ಥಗಳು ಇರಬೇಕು. ಮುಖ್ಯವಾಗಿ ಮಧುರ ಅಥವಾ ಸಿಹಿ ರಸವಿರಬೇಕು. ಗೋದಿ ಮತ್ತು ಅಕ್ಕಿ ಇವು ಸಿಹಿ ರಸದಲ್ಲಿ ಬರುತ್ತವೆ.
೫. ಕೆಲವರು ಕೇವಲ ‘ಸಲಾಡ್’ (ಕೊಸಂಬರಿ) ಮತ್ತು ಕಾಫಿ ಅಥವಾ ಉಸುಳಿ ಹಾಗೂ ಹಣ್ಣು ಇಂತಹ ಊಟವನ್ನು ಮಾಡುತ್ತಾರೆ. ಅದರಿಂದ ತೂಕವು ಕಡಿಮೆಯಾಗಲು ಸಹಾಯವಾಗುತ್ತಿರಬಹುದು; ಆದರೆ ದೇಹದಲ್ಲಿನ ಅಗ್ನಿಗಾಗಿ ಅದು ಹಾನಿಕರವಾಗಿದೆ. ಸಾಮಾನ್ಯವಾಗಿ ಈ ರೀತಿಯ ನಿರಂತರ ಆಹಾರದಿಂದ ಶುಷ್ಕತೆ ಹೆಚ್ಚಾಗುತ್ತದೆ, ವಾತ ಹೆಚ್ಚಾಗುತ್ತದೆ, ಆಮ್ಲಪಿತ್ತ, ತೇಗು. ಹೊಟ್ಟೆ ಉಬ್ಬುವಂತಹ ತೊಂದರೆಗಳು ಉಂಟಾಗುತ್ತವೆ. ಇಷ್ಟು ಮಾಡಿದರೂ ನೀವು ದೀರ್ಘಕಾಲದ ವರೆಗೆ ತೆಗೆದುಕೊಳ್ಳಲೂ ಸಾಧ್ಯವಿಲ್ಲ. ಅನ್ನ, ಬೇಳೆ, ಚಪಾತಿ/ರೊಟ್ಟಿ ಈ ರೀತಿ ಊಟವಿರಬೇಕು. ಇದರೊಂದಿಗೆ ಚಟ್ನಿ ನಡೆಯುತ್ತದೆ. ಮಧ್ಯಾಹ್ನದ ಊಟದಲ್ಲಿ ಮಜ್ಜಿಗೆ ಅವಶ್ಯವಾಗಿರಬೇಕು. ಅದನ್ನು ಮನೆಯಲ್ಲಿಯೇ ಮಾಡಿರಬೇಕು. ಕಫ ಅಥವಾ ಗಂಟಲಿನ ತೊಂದರೆ ಇರುವವರು ರಾತ್ರಿಯ ಸಮಯದಲ್ಲಿ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಬಾರದು.
೬. ಉತ್ತಮ ರೀತಿಯಲ್ಲಿ ಆಹಾರ ಜೀರ್ಣವಾಗಲು ಹಸಿ ಶುಂಠಿ (ಅಲಾ) ಮತ್ತು ಸೈಂಧವ ಲವಣವನ್ನು ಊಟದ ಮೊದಲು ತಿನ್ನಬೇಕು. ಊಟವನ್ನು ಸಿಹಿ ಪದಾರ್ಥಗಳಿಂದ ಪ್ರಾರಂಭಿಸಬೇಕು. ಎಲ್ಲ ಧಾನ್ಯಗಳೂ ಸಿಹಿ ರಸದಲ್ಲಿ ಬರುತ್ತವೆ. ಅನ್ನ, ರೊಟ್ಟಿ ಅಥವಾ ಚಪಾತಿ ಏನೂ ಆಗಬಹುದು.
೭. ಹುಳಿ ಮತ್ತು ಉಪ್ಪು ಪದಾರ್ಥಗಳನ್ನು ಊಟದಲ್ಲಿ ಮಧ್ಯ ಮಧ್ಯದಲ್ಲಿ ನೆಕ್ಕಿಕೊಳ್ಳಬೇಕು. ಇದರಲ್ಲಿ ಹುಣಸೆಹಣ್ಣು-ಖರ್ಜೂರ ಚಟ್ನಿ, ಕರಿಬೇವಿನ ಚಟ್ನಿ, ಶುಂಠಿಯ ಚಟ್ನಿ, ಅನ್ನ-ತೊವ್ವೆಯಲ್ಲಿನ ಉಪ್ಪು, ಕೊಸಂಬರಿ, ನಿಂಬೆಹಣ್ಣು, ಚಟ್ನಿ, ಮಜ್ಜಿಗೆ ಈ ಪದಾರ್ಥಗಳಿರುತ್ತವೆ.
೮. ಊಟದ ಕೊನೆಗೆ ಕಹಿ ಮತ್ತು ಖಾರದ ಪದಾರ್ಥಗಳಿರಬೇಕು. ಇದರಲ್ಲಿ ಇತರ ಪಲ್ಯ, ಅದರಲ್ಲಿನ ಮಸಾಲೆ, ಒಗ್ಗರಣೆಯಲ್ಲಿ ಹಾಕಿದ ಮೆಂತೆಕಾಳು, ಸಾಸಿವೆ, ಅರಿಶಿಣ, ಇಂಗು, ಪಂಚಾಮೃತದ ಕಾಯಿಪಲ್ಲೆ, ಚಟ್ನಿಗಳು ಇತ್ಯಾದಿ ಪದಾರ್ಥಗಳು ಸೇರಿವೆ. ತಾಂಬೂಲವನ್ನು ಅವಶ್ಯ ತಿನ್ನಬೇಕು.
೯. ಸಾಯಂಕಾಲದ ಊಟವನ್ನು ಸೂರ್ಯಾಸ್ತದ ಮೊದಲು ಅಥವಾ ಅದರ ಹತ್ತಿರದ ಸಮಯದಲ್ಲಿ ತೆಗೆದುಕೊಂಡರೆ ಉತ್ತಮ. ಇದರಿಂದ ಒಳ್ಳೆಯ ರೀತಿಯಲ್ಲಿ ಜೀರ್ಣ ಆಗುತ್ತದೆ. ಒಂದು ವೇಳೆ ಸರಿಯಾಗಿ ಹಸಿವಾಗದಿದ್ದರೆ ಮತ್ತು ಕೆಲಸಗಳಿದ್ದರೆ ಒಂದು ವೇಳೆ ಮಧ್ಯಾಹ್ನ ೪-೫ ಗಂಟೆಗೆ ತಿಂಡಿ ತಿಂದಿದ್ದರೆ, ರಾತ್ರಿ ಕೇವಲ ಹೆಸರುಬೇಳೆಯ ಪದಾರ್ಥ ತಿನ್ನುವುದು ಉತ್ತಮ !
೧೦. ಊಟದ ನಂತರ ಹಣ್ಣುಗಳನ್ನು ತಿನ್ನಬಾರದು. ಎರಡು ಊಟಗಳ ಮಧ್ಯದಲ್ಲಿ ತಿನ್ನಬೇಕು. ಸಾಧ್ಯವಾದಷ್ಟು ನೀವು ಎಲ್ಲಿರುತ್ತಿರೋ, ಆ ಪ್ರದೇಶದಲ್ಲಿ ಸಿಗುವ ಹಣ್ಣುಗಳನ್ನೇ ತಿನ್ನಬೇಕು.
೧೧. ಹುಳಿ (ಹುದುಗಿಸಿದ) ಪದಾರ್ಥಗಳು, ಪನ್ನೀರ್, ಮೊಸರು ಈ ಪದಾರ್ಥಗಳನ್ನು ಅಪರೂಪಕ್ಕೊಮ್ಮೆ ತಿನ್ನಬೇಕು.
೧೨. ಹಿಂದಿನ ದಿನದ ಅಥವಾ ತಂಗಳು ಏನೂ ತಿನ್ನಬಾರದು. ಕೇಕ್, ಬಿಸ್ಕತ್ತು, ಖಾರಿ, ಟೊಸ್ಟ್ ಇವುಗಳೂ ತಂಗಳು ಪದಾರ್ಥಗಳಾಗಿವೆ. ತಕ್ಷಣ ನಿಮಗೆ ಯಾವ ಲಕ್ಷಣಗಳು ಕಂಡುಬರದಿದ್ದರೂ, ಸತತವಾಗಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ತೊಂದರೆಗಳಾಗುತ್ತವೆ. ಇದರ ಮೇಲೆ ಸಂಶೋಧನೆಯನ್ನೂ ಮಾಡಲಾಗಿದೆ.
೧೩. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಅಡುಗೆಯನ್ನು ಮಾಡಲು ಒಬ್ಬ ವ್ಯಕ್ತಿಯನ್ನು ಇಡಲಾಗುತ್ತದೆ ಅಥವಾ ಕಂಪನಿಯ ಉಪಾಹಾರಗೃಹದಲ್ಲಿ ತಿನ್ನಲಾಗುತ್ತದೆ. ವಾಸ್ತವದಲ್ಲಿ ನಿಮಗಾಗಿ ಆಹಾರವನ್ನು ತಯಾರಿಸುವ ವ್ಯಕ್ತಿಗೂ ನಿಮ್ಮ ಬಗ್ಗೆ ಸದ್ಭಾವನೆಯಿರುವುದು ಮಹತ್ವದ್ದಾಗಿದೆ. ಸಿಟ್ಟಿಗೆದ್ದು, ಕೋಪಗೊಂಡು ಅಥವಾ ದಣಿದು ಅಡುಗೆ ಮಾಡಿದರೆ ಅದರಿಂದ ದೈಹಿಕ ಮತ್ತು ಮಾನಸಿಕ ರೀತಿಯಲ್ಲಿ ಒಳ್ಳೆಯ ಪರಿಣಾಮ ಕಂಡುಬರುವುದಿಲ್ಲ. ಆದ್ದರಿಂದ ಸಹಾಯಕ್ಕೆ ಒಬ್ಬ ವ್ಯಕ್ತಿ ಮತ್ತು ಅಡುಗೆಯನ್ನು ಸ್ವತಃ ಅಥವಾ ಮನೆಯಲ್ಲಿನ ವ್ಯಕ್ತಿಯು ಮಾಡುವುದು ಉತ್ತಮ !
೧೪. ಚಳಿ ಮತ್ತು ಮಳೆಗಾಲದ ಕಾಲಾವಧಿಯಲ್ಲಿ ಊಟದೊಂದಿಗೆ ಮಧ್ಯಮಧ್ಯದಲ್ಲಿ ಉಗುರುಬಿಸಿ ನೀರನ್ನು ಕುಡಿಯಬೇಕು. ಮಜ್ಜಿಗೆ, ಮಜ್ಜಿಗೆಯ ಸಾರು, ಸಾರು ಹೀಗೆ ತಿಳಿ ಪದಾರ್ಥಗಳು ಊಟದಲ್ಲಿ ಹೆಚ್ಚು ಪ್ರಮಾಣದಲ್ಲಿದ್ದರೆ ಹೆಚ್ಚು ನೀರು ಕುಡಿಯುವ ಅವಶ್ಯಕತೆ ಇರುವುದಿಲ್ಲ. ಕೇವಲ ರೊಟ್ಟಿ-ಪಲ್ಯ ಅಥವಾ ಚಪಾತಿ-ಪಲ್ಯ ಇದ್ದಾಗ ಮಧ್ಯಮಧ್ಯದಲ್ಲಿ ಸ್ವಲ್ಪ ಸ್ವಲ್ಪ ನೀರು ಕುಡಿಯಬೇಕು.
೧೫. ಎರಡು ತುತ್ತು ಕಡಿಮೆ ತಿನ್ನುವುದು ಯಾವಾಗಲೂ ಒಳ್ಳೆಯದು. ಕಡಿಮೆ ಮಾತುಕತೆ, ಕಡಿಮೆ ನಗು ಹಾಗೂ ಮನಃ ಪೂರ್ವಕವಾಗಿ ಮತ್ತು ರುಚಿಯನ್ನು ಸವಿಯುತ್ತ ತಿನ್ನಬೇಕು. ಸದ್ಯದ ಭಾಷೆಯಲ್ಲಿ ‘Mindful eating is healthy eating’ ಹೀಗೆ ಹೇಳುತ್ತಾರಲ್ಲ. (ಅರ್ಥ : ಗಮನವಿಟ್ಟು ತಿನ್ನುವುದು ಆರೋಗ್ಯಕರ ಆಹಾರವಾಗಿದೆ.)
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.
(ಆಧಾರ : ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆಯವರ ಫೇಸಬುಕ್)