ಕೇವಲ ೨ ಸಲ ಆಹಾರ ಸೇವಿಸುವ ಆರೋಗ್ಯಕರ ಅಭ್ಯಾಸವಾಗಲು ಇದನ್ನು ಮಾಡಿ !

ವೈದ್ಯ ಮೇಘರಾಜ ಪರಾಡಕರ್
ಒಂದು ಬಾರಿ ಉಣ್ಣುವವನು ಯೋಗಿ, ಎರಡು ಬಾರಿ ಉಣ್ಣುವವನು ಭೋಗಿ ಮತ್ತು ಮೂರು ಅಥವಾ ಅದಕ್ಕಿಂತ ಹೆಚ್ಚು ಸಲ ಉಣ್ಣುವವನು ರೋಗಿ !

ಪ್ರಶ್ನೆ

ನನಗೆ ಶರೀರವನ್ನು ಆರೋಗ್ಯವಾಗಿಡಲು ದಿನದಲ್ಲಿ ೨ ಸಲ ಆಹಾರವನ್ನು ಸೇವಿಸುವುದಿದೆ; ಆದರೆ ಬೆಳಗ್ಗೆ ಅಥವಾ ಸಾಯಂಕಾಲ ಉಪಹಾರವನ್ನು ಮಾಡದಿದ್ದರೆ, ನನ್ನ ಮೈ ನಡುಗುತ್ತದೆ. ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿಯುತ್ತದೆ. ಹೀಗಿರುವಾಗ ನಾನು ಕೇವಲ ೨ ಸಲ ಆಹಾರ ಸೇವಿಸುವುದು ನನ್ನ ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿದೆಯೇ ?

ಉತ್ತರ : ೧. ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ೨ ಸಲವೇ ಆಹಾರವನ್ನು ತೆಗೆದುಕೊಳ್ಳುವ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು !

ನಾವು ಶರೀರಕ್ಕೆ ಯಾವ ರೀತಿಯ ಅಭ್ಯಾಸಗಳನ್ನು ಮಾಡುತ್ತೇವೆಯೋ, ಅವುಗಳಂತೆ ಶರೀರ ನಡೆದುಕೊಳ್ಳುತ್ತದೆ. ನಾವು ಒಳ್ಳೆಯ ಅಭ್ಯಾಸಗಳನ್ನು ಮಾಡಿದರೆ ನಮಗೆ ಒಳ್ಳೆಯ ಆರೋಗ್ಯ ಲಭಿಸುತ್ತದೆ. ನಾವು ತಪ್ಪು ಅಭ್ಯಾಸಗಳನ್ನು ಮಾಡಿದರೆ, ರೋಗಗಳಾಗುತ್ತವೆ. ಇಲ್ಲಿಯವರೆಗೆ ನಮಗೆ ದಿನದಲ್ಲಿ ೪ ಬಾರಿ ತಿನ್ನುವ ತಪ್ಪು ಅಭ್ಯಾಸವಾಗಿದೆ. ಈಗ ನಾವು ಒಮ್ಮೆಲೆ ೨ ಬಾರಿ ಆಹಾರವನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದೇವೆ; ಆದರೆ ಈ ಮೊದಲಿನ ಅಭ್ಯಾಸಕ್ಕನುಸಾರ ಆಹಾರದ ಸಮಯವಾದಾಗ, ಶರೀರದಲ್ಲಿ (ಹೊಟ್ಟೆಯಲ್ಲಿ) ಪಿತ್ತ ಸ್ರವಿಸುತ್ತದೆ, ಕೆಲವರ ಶಾರೀರಿಕ ಕ್ಷಮತೆ ಚೆನ್ನಾಗಿರುತ್ತದೆ. ಅವರಿಗೆ ಈ ಸ್ರವಿಸಿದ ಪಿತ್ತದ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಅವರು ಸಹಜವಾಗಿ ೪ ಬಾರಿ ತಿನ್ನುವ ತಪ್ಪು ಅಭ್ಯಾಸವನ್ನು ಬಿಟ್ಟು ೨ ಬಾರಿ ಆಹಾರವನ್ನು ತೆಗೆದುಕೊಳ್ಳುವ ಒಳ್ಳೆಯ ಅಭ್ಯಾಸವನ್ನು ಮಾಡಬಹುದು. ಇದರಲ್ಲಿ ಮನಸ್ಸಿನ ಪಾತ್ರವೂ ಮಹತ್ವದ್ದಾಗಿದೆ. ಮನಸ್ಸಿನ ದೃಢನಿರ್ಧಾರವಾಗಿದ್ದರೆ, ತಪ್ಪು ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದು ಸುಲಭವಾಗುತ್ತದೆ.

೨. ಮೈ ನಡುಗುವುದು ಅಥವಾ ಹೊಟ್ಟೆಯಲ್ಲಿ ಉರಿಯುವುದು ಇವುಗಳ ಹಿಂದಿನ ಕಾರಣ

ಆಧುನಿಕ ಶಾಸ್ತ್ರಕ್ಕನುಸಾರ ಊಟದ ಸಮಯದಲ್ಲಿ ಜಠರದಲ್ಲಿ (ಹೊಟ್ಟೆಯಲ್ಲಿ) ಆಮ್ಲ (ಹೈಡ್ರೋಕ್ಲೋರಿಕ್ ಎಸಿಡ್) ಮತ್ತು ಕರುಳಿನ ಮೊದಲನೇ ಭಾಗದಲ್ಲಿ (‘ಡಿಯೋಡಿನಮ್’ನಲ್ಲಿ) ಪಿತ್ತ (ಬೈಲ್) ಮತ್ತು ಮೇಧೋಜ್ಜೀರಕ ಗ್ರಂಥಿಯ ಸ್ರಾವ (ಪ್ಯಾನಕ್ರೀಯಾಟಿಕ್ ಜ್ಯೂಸ್) ಸ್ರವಿಸುತ್ತದೆ. ಯಾವಾಗ ನಾವು ಆಹಾರವನ್ನು ಸೇವಿಸುತ್ತೇವೆಯೋ, ಆಗ ಸೇವಿಸಿದ ಆಹಾರವು ಈ ಸ್ರಾವಗಳಲ್ಲಿ ಕೂಡಿಕೊಳ್ಳುತ್ತದೆ (ಮಿಶ್ರಣವಾಗುತ್ತದೆ) ಮತ್ತು ಈ ಸ್ರಾವಗಳ ತೀವ್ರತೆ ತಾನಾಗಿಯೇ ಕಡಿಮೆಯಾಗುತ್ತದೆ. ಆಹಾರವನ್ನು ಸೇವಿಸದಿದ್ದರೆ ಸ್ರಾವದ ತೀವ್ರತೆ ಕಡಿಮೆಯಾಗುವುದಿಲ್ಲ. ಕೆಲವರಿಗೆ ಈ ತೀವ್ರತೆ ಸಹನೆಯಾಗುವುದಿಲ್ಲ. ಆದುದರಿಂದ ಮೈ ನಡುಗುವುದು ಅಥವಾ ಹೊಟ್ಟೆ ಉರಿಯುವುದು ಹೀಗೆ ಆಗುತ್ತದೆ .

೩. ೪ ಸಲ ತಿನ್ನುವ ತಪ್ಪು ಅಭ್ಯಾಸವನ್ನು ಬಿಡಲು ತುಪ್ಪದ ಸಹಾಯದಿಂದ ಸಹಜ ಸಾಧ್ಯವಿದೆ !

ಒಳ್ಳೆಯ ಆರೋಗ್ಯವನ್ನು ಪಡೆಯಬೇಕಾಗಿದ್ದರೆ, ೪ ಸಲ ತಿನ್ನುವ ತಪ್ಪು ಅಭ್ಯಾಸವನ್ನು ಬಿಟ್ಟು ೨ ಬಾರಿ ಆಹಾರವನ್ನು ಸೇವಿಸುವ ಒಳ್ಳೆಯ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವುದು ಆವಶ್ಯಕವಾಗಿದೆ. ಇದಕ್ಕಾಗಿ ಹೆಚ್ಚಾಗಿರುವ ಪಿತ್ತದ ಮೇಲೆ ನಿಯಂತ್ರಣವನ್ನು ಸಾಧಿಸುವುದೂ ಆವಶ್ಯಕವಾಗಿದೆ. ‘ಪಿತ್ತಸ್ಯ ಸರ್ಪಿಷಃ ಪಾನಮ್ |’ ಅಂದರೆ ‘ಪಿತ್ತವಾದಾಗ ‘ತುಪ್ಪವನ್ನು ಕುಡಿಯುವುದು’ ಎಲ್ಲಕ್ಕಿಂತ ಸರ್ವಶ್ರೇಷ್ಠ ಔಷಧಿಯಾಗಿದೆ’, ಎಂದು ಆಯುರ್ವೇದದಲ್ಲಿ (ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೧೩, ಶ್ಲೋಕ ೪ ರಲ್ಲಿ) ಹೇಳಲಾಗಿದೆ. ತುಪ್ಪದ ಉಪಯೋಗವನ್ನು ಮಾಡಿ ಆಹಾರದ ೪ ಸಮಯಗಳಿಂದ ೨ ಸಮಯದ ವರೆಗೆ ಬರುವುದು ಬಹಳ ಸುಲಭವಾಗಿದೆ.

೪. ಇದನ್ನು ಮಾಡಿ !

ಅ. ಮೊದಲು ನಿಮ್ಮ ಮನಸ್ಸಿಗೆ ‘೨ ಸಲ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಿದರೆ ಒಳ್ಳೆಯ ಆರೋಗ್ಯ ಲಭಿಸುವುದಿದೆ ಮತ್ತು ತುಪ್ಪವನ್ನು ಬಳಸಿದರೆ ಹೆಚ್ಚಿದ ಪಿತ್ತ ಕಡಿಮೆಯಾಗಲಿದೆ ಹಾಗೂ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ’, ಎಂದು ತಿಳಿಸಿ ಹೇಳಿರಿ. ಹೀಗೆ ಮಾಡಿದರೆ ನಿಮ್ಮ ಮನಸ್ಸು ಈ ಅಭಿಯಾನದಲ್ಲಿ ಆನಂದದಿಂದ ಪಾಲ್ಗೊಳ್ಳುವುದು.

ಆ. ಈಗ ದಿನದಲ್ಲಿ ೨ ಬಾರಿಯೇ ಆಹಾರ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿರಿ.

ಇ. ಆಹಾರದ ಮೇಲೆ ಯಾವುದೇ ನಿರ್ಬಂಧವನ್ನು ಹಾಕಬೇಡಿರಿ. ಯಾವುದು ಪಚನವಾಗುತ್ತದೆಯೋ, ಅದನ್ನು ತಿನ್ನಿರಿ. ಇಷ್ಟವಾಗುವ ಯಾವುದೇ ಪದಾರ್ಥ ಪಚನವಾಗುತ್ತಿದ್ದರೆ ಮಾತ್ರ ತಿನ್ನಬಹುದು; ಆದರೆ ಇಂತಹ ಪದಾರ್ಥಗಳನ್ನು ಕೇವಲ ಊಟದ ಸಮಯದಲ್ಲಿಯೇ ತಿನ್ನಬೇಕು.

. ಊಟದ ೨ ಸಮಯಗಳನ್ನು ಬಿಟ್ಟು ಯಾವಾಗಲಾದರು ಅಯೋಗ್ಯ ಸಮಯದಲ್ಲಿ ಹಸಿವಾದರೆ, ಆಗ ಒಂದು ಚಮಚದಷ್ಟು ತುಪ್ಪವನ್ನು ಜಗಿದು ತಿನ್ನಿರಿ. ಜಗಿಯುವುದರಿಂದ ಶರೀರದ ಉಷ್ಣತೆಯಿಂದ ತುಪ್ಪ ತೆಳುವಾಗುವುದು. ಕೇವಲ ತುಪ್ಪವನ್ನು ತಿನ್ನಲು ಕಷ್ಟವೆನಿಸಿದರೆ, ತುಪ್ಪದಲ್ಲಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬಹುದು. (ತುಪ್ಪದ ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಿರಿ. ತೆಳು ತುಪ್ಪವನ್ನು ೧ ಚಮಚದಷ್ಟು ತೆಗೆದುಕೊಳ್ಳುವುದು ಅಪೇಕ್ಷಿತವಿದೆ. ಆದುದರಿಂದ ತುಪ್ಪ ಗಟ್ಟಿಯಾಗಿದ್ದರೆ ಅದನ್ನು ಆ ಅಂದಾಜಿನಿಂದ ತೆಗೆದುಕೊಳ್ಳಬೇಕು.)

ಉ. ತುಪ್ಪವನ್ನು ಸೇವಿಸಿದನಂತರ ಸುಮಾರು ೧೫ ನಿಮಿಷಗಳ ನಂತರ ಹಸಿವು ಶಮನವಾಗುವುದು. ಹಸಿವು ಶಮನವಾಗದಿದ್ದರೆ, ಪುನಃ ೧ ಚಮಚ ತುಪ್ಪವನ್ನು ಸೇವಿಸಿರಿ. ಈ ರೀತಿ ಹಸಿವು ಶಮನವಾಗಲು ಎಷ್ಟು ತುಪ್ಪವನ್ನು ತಿನ್ನಬೇಕಾಗುತ್ತದೆ, ಎಂಬುದರ ಅಂದಾಜು ತೆಗೆದುಕೊಂಡು ಮುಂದಿನ ಸಲ ನೇರವಾಗಿ ಅಷ್ಟು ತುಪ್ಪವನ್ನು ಒಂದೇ ಸಲ ತಿನ್ನಬಹುದು. ಹೆಚ್ಚೆಂದರೆ ೪ ಚಮಚೆಗಳಷ್ಟು ತುಪ್ಪದಿಂದ ಹಸಿವು ಶಮನವಾಗುತ್ತದೆ. ಪ್ರಕೃತಿಗನುಸಾರ ಈ ಪ್ರಮಾಣ ಹೆಚ್ಚುಕಡಿಮೆಯಾಗಬಹುದು.

ಊ. ತಪ್ಪಿ ತುಪ್ಪದ ಪ್ರಮಾಣ ಹೆಚ್ಚಾದರೆ, ಅಪಚನವಾಗಬಹುದು ಎಂಬ ಸಂದೇಹವಿದ್ದಲ್ಲಿ, ಅರ್ಧ ಬಟ್ಟಲು ಬಿಸಿ ನೀರು ಕುಡಿಯಿರಿ.

ಎ. ಔಷಧಿಗಳನ್ನು ತೆಗೆದುಕೊಳ್ಳಲು ಏನಾದರೂ ತಿನ್ನಬೇಕಾಗಿದ್ದರೆ, ನಿಮ್ಮ ಊಟದ ಸಮಯಗಳನ್ನು ಹೇಳಿ ‘ಔಷಧಿಗಳನ್ನು ಆ ಸಮಯದಲ್ಲಿ ತೆಗೆದುಕೊಳ್ಳಬಹುದೇನು ಎಂದು ನಿಮ್ಮ ವೈದ್ಯರಲ್ಲಿ (ಡಾಕ್ಟರರಿಗೆ) ಕೇಳಿಕೊಳ್ಳಿರಿ.

ಐ. ಸೇವಿಸಿದ ತುಪ್ಪ ಪಚನವಾಗಲು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿ.

೪. ತುಪ್ಪದ ಲಾಭ

ಅಯೋಗ್ಯ ಸಮಯದಲ್ಲಿ ಹಸಿವಾದಾಗ ತುಪ್ಪವನ್ನು ತಿಂದರೆ ಹಸಿವು ಕಡಿಮೆ ಆಗುತ್ತದೆ. ಮೈ ನಡುಗುವುದಿಲ್ಲ. ಹೊಟ್ಟೆಯಲ್ಲಿ ಉರಿಯುತ್ತಿದ್ದರೆ, ಅದೂ ಕೂಡ ತಕ್ಷಣ ಕಡಿಮೆಯಾಗುತ್ತದೆ. ಹೆಚ್ಚಾಗಿರುವ ಪಿತ್ತವು ಯೋಗ್ಯ ರೀತಿಯಲ್ಲಿ ಶಮನವಾಗುತ್ತದೆ. (‘ಶಮನವಾಗುವುದು’ ಅಂದರೆ ‘ಶಾಂತವಾಗುವುದು’) ತುಪ್ಪ ಉತ್ತಮ ಶಕ್ತಿವರ್ಧಕವಾಗಿದೆ. ಅದರಿಂದ ಆಯಾಸವೂ ದೂರವಾಗುತ್ತದೆ. ಕೆಲವು ದಿನಗಳ ನಂತರ ದೇಹಕ್ಕೆ ೨ ಬಾರಿ ಆಹಾರ ತೆಗೆದುಕೊಳ್ಳುವ ಅಭ್ಯಾಸವಾಗುತ್ತದೆ. ಆಗ ಅಯೋಗ್ಯ ಸಮಯದಲ್ಲಿ ಹಸಿವಾಗುವುದು ಕಡಿಮೆಯಾಗುತ್ತದೆ. ಆಗ ತುಪ್ಪವನ್ನು ತಿನ್ನುವ ಅಗತ್ಯವಿರುವುದಿಲ್ಲ. ಆಗ ಊಟದಲ್ಲಿಯೇ ೨ ಚಮಚಗಳಷ್ಟು ತುಪ್ಪವನ್ನು ತೆಗೆದುಕೊಳ್ಳಬೇಕು. ಈ ರೀತಿ ನಿಯಮಿತವಾಗಿ ಮಾಡಿದರೆ ಊಟದ ೨ ಸಮಯಗಳಲ್ಲಿ ಶರೀರಕ್ಕೆ ಅಗತ್ಯವಿದ್ದಷ್ಟು ಹಸಿವಾಗುತ್ತದೆ ಮತ್ತು ಅಗತ್ಯವಿದ್ದಷ್ಟೇ ಆಹಾರವನ್ನು ತೆಗೆದುಕೊಳ್ಳಲಾಗುತ್ತದೆ. ಆದುದರಿಂದ ತೆಳ್ಳಗಿರುವ ವ್ಯಕ್ತಿಗಳು ೨ ಬಾರಿ ಆಹಾರವನ್ನು ತೆಗೆದುಕೊಂಡರೆ ಅವರ ತೂಕ ಕಡಿಮೆಯಾಗುವುದು, ಎಂದು ಭಯಪಡಬಾರದು. ಸ್ಥೂಲಕಾಯದ ವ್ಯಕ್ತಿಗಳು ಆಹಾರದ ಮೇಲೆ ಹಿಡಿತವನ್ನಿಟ್ಟರೆ ಅವರ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ.

೪. ಸಾರಾಂಶ

ಇದರ ಸಾರಾಂಶವನ್ನು ವ್ಯಾವಹಾರಿಕ ಭಾಷೆಯಲ್ಲಿ ಹೀಗೆ ತಿಳಿದುಕೊಳ್ಳಬಹುದು, ‘ಪಿತ್ತ’ವೆಂದರೆ ಓರ್ವ ಕಾರ್ಮಿಕ. ಅವನಿಗೆ ಅವನ ಜಾಗದಲ್ಲಿ, ಅಂದರೆ ಹೊಟ್ಟೆಯಲ್ಲಿ ಕೆಲಸ ಸಿಗದಿದ್ದರೆ, ಅವನು ಬೇರೆ ಜಾಗಗಳಲ್ಲಿ, ಅಂದರೆ ರಕ್ತ ಇತ್ಯಾದಿ ಸ್ಥಳಗಳಲ್ಲಿ ಹೋಗಿ ಉಪದ್ರವವನ್ನು ನಿರ್ಮಾಣ ಮಾಡಬಹುದು. ಈ ಉಪದ್ರವವೆಂದರೆ ಮೈ ನಡುಗುವುದು ಅಥವಾ ಹೊಟ್ಟೆಯಲ್ಲಿ ಉರಿಯುವುದು. ಆ ಪಿತ್ತರೂಪಿ ಕಾರ್ಮಿಕನಿಗೆ ತುಪ್ಪವನ್ನು ಪಚನ ಮಾಡುವ ಕೆಲಸವನ್ನು ಕೊಟ್ಟರೆ, ಅವನು ಕೆಲಸದಲ್ಲಿ ಮಗ್ನನಾಗಿರುವನು ಮತ್ತು ಬೇರೆಕಡೆಗೆ ಹೋಗಿ ತೊಂದರೆಗಳನ್ನು ಕೊಡುವುದಿಲ್ಲ.

೫. ತಮ್ಮ ಕ್ಷಮತೆಗನುಸಾರ ಲೇಖನದಲ್ಲಿನ ಅಂಶಗಳನ್ನು ಆಚರಿಸಿರಿ !

ಮನಸ್ಸಿನ ನಿರ್ಧಾರವಾಗಿದ್ದರೆ ಮತ್ತು ೪ ದಿನ ತೊಂದರೆಗಳನ್ನು ಸಹಿಸಿಕೊಳ್ಳುವ ಸಿದ್ಧತೆಯಿದ್ದರೆ, ಈ ಲೇಖನದಲ್ಲಿ ನೀಡಿದಂತೆ ಆಹಾರದ ಸಮಯಗಳನ್ನು ೪ ರಿಂದ ೨ ರವರೆಗೆ ತರುವುದು ಸಹಜ ಸಾಧ್ಯವಿದೆ; ಆದರೆ ಬಹಳಷ್ಟು ಜನರಲ್ಲಿ ಈ ರೀತಿಯ ಮನಸ್ಸಿನ ಸಿದ್ಧತೆ ಇರುವುದಿಲ್ಲ. ಜನರು ಈ ಪ್ರಯತ್ನಗಳನ್ನು ಮಾಡುವುದಿಲ್ಲ. ಇಂತಹವರ ಮನಸ್ಸಿನಲ್ಲಿ ಎರಡು ಸಲ ಊಟವನ್ನು ಆರಂಭಿಸುವ ಮೊದಲೇ ಅನೇಕ ಸಂದೇಹಗಳು ಬರುತ್ತಿರುತ್ತವೆ. ಇಂತಹವರು ಈ ಲೇಖನದಲ್ಲಿ ನೀಡಿದ ಕೃತಿಗಳನ್ನು ಗಡಿಬಿಡಿಯಿಂದ ಪ್ರಾರಂಭ ಮಾಡಬಾರದು ಮತ್ತು ಇತರರೂ ಅವರಿಗೆ ಒತ್ತಾಯಿಸಬಾರದು. ಸಂದೇಹಪಡುವ ಸಾಧಕರು ನಿತ್ಯದಂತೆ ಆಚರಣೆಯನ್ನು ಮಾಡಬೇಕು. ಅವರು ಸಾಧನೆಗಾಗಿ ಆರೋಗ್ಯದಿಂದಿರುವುದರ ಮಹತ್ವವನ್ನು ಸ್ವಯಂಸೂಚನೆಗಳ ಮೂಲಕ ಮನಸ್ಸಿನ ಮೇಲೆ ಬಿಂಬಿಸಬೇಕು, ಹಾಗೆಯೇ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುವ ಚೌಕಟ್ಟುಗಳನ್ನು ಓದಿ ಮನಸ್ಸಿನ ನಿರ್ಧಾರವನ್ನು ಮಾಡಬೇಕು. ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲದೇ, ದೃಢನಿರ್ಧಾರ ಮಾಡಿ ಕೇವಲ ಎರಡು ಸಲ ಭೋಜನ ಮಾಡುವ ಸಾಧಕರಿಗೆ ಖಚಿತವಾಗಿ ಅದರ ಉತ್ತಮ ಫಲ ಸಿಗುವುದು. ಅವರ ಒಳ್ಳೆಯ ಅನುಭವಗಳನ್ನು ಕೇಳಿ ಸಂದೇಹಗಳಿರುವ ಸಾಧಕರ ಆತ್ಮವಿಶ್ವಾಸ ಹೆಚ್ಚಾಗುವುದು. ಮನಸ್ಸಿನ ನಿಶ್ಚಯವೂ ಆಗುವುದು. ಹೀಗಾದರೆ ಇದು ಎಲ್ಲರಿಗೂ ಸಹಜ ಸಾಧ್ಯವಾಗುವುದು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ರಾಮನಾಥಿ, ಗೋವಾ. (೨೫.೯.೨೦೨೨)