ಅಪಾಯಕಾರಿ ಫೇಸ್‍ಬುಕ್ !

ಸಂಪಾದಕೀಯ

ಫೇಸ್‍ಬುಕ್ ತನಗೆ ಅಪಾಯಕಾರಿ ಎಂದೆನಿಸಿದ ಜಗತ್ತಿನಾದ್ಯಂತದ ೪ ಸಾವಿರ ಸಂಘಟನೆಗಳ ಪಟ್ಟಿಯನ್ನು ತಯಾರಿಸಿದೆ. ಈ ಗೌಪ್ಯ ಪಟ್ಟಿಯನ್ನು ‘ದಿ ಇಂಟರಸೆಪ್ಟ್’ ಈ ವಾರ್ತಾಸಂಸ್ಥೆಯು ಬಹಿರಂಗಪಡಿಸಿದೆ. ಅದರಲ್ಲಿ ಭಾರತದಲ್ಲಿ ನಿಷೇಧಿಸಲಾದ ಕೆಲವು ಸಂಘಟನೆಗಳ ಹೆಸರುಗಳೊಂದಿಗೆ ಸನಾತನ ಸಂಸ್ಥೆಯ ಹೆಸರು ಸಹ ಸೇರ್ಪಡೆಗೊಂಡಿದೆ. ಇದು ಕೇವಲ ಸನಾತನ ಸಂಸ್ಥೆಗಷ್ಟೇ ಅಲ್ಲದೇ, ಸಂಸ್ಥೆಯ ಕಾರ್ಯದ ಬಗ್ಗೆ ಪರಿಚಯವಿರುವ ಭಾರತದ ಅನೇಕ ಜನರಿಗೆ ಆಕ್ರೋಶವನ್ನುಂಟು ಮಾಡಿದೆ. ಸನಾತನ ಸಂಸ್ಥೆಯ ವಿಚಾರ ಮಾಡಿದರೆ, ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪರಿಚಯ ಮಾಡಿಕೊಡುವುದು, ಅವರ ಸಂದೇಹಗಳ ನಿವಾರಣೆ ಮಾಡುವುದು ಮತ್ತು ಸಾಧಕರಿಗೆ ಮುಂದಿನ ಅಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಇವು ಸಂಸ್ಥೆಯ ಉದ್ದೇಶವಾಗಿದೆ. ಸನಾತನ ಸಂಸ್ಥೆಯು ಆಧ್ಯಾತ್ಮಿಕ ಕಾರ್ಯದೊಂದಿಗೆ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಹಿಂದೂ ಧರ್ಮದಲ್ಲಿನ ಹಬ್ಬಗಳು, ಉತ್ಸವಗಳಲ್ಲಿನ ತಪ್ಪು ಆಚರಣೆಗಳನ್ನು ದೂರ ಮಾಡಿ ಅವುಗಳನ್ನು ಧರ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಆಚರಿಸಿ ಭಕ್ತರಿಗೆ ಆನಂದ ಪಡೆಯಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಸಂಸ್ಥೆಯ ಎಲ್ಲ ಉಪಕ್ರಮಗಳನ್ನು ನಡೆಸಲಾಗುತ್ತದೆ. ಹಬ್ಬ-ಉತ್ಸವಗಳಲ್ಲಿನ ತಪ್ಪು ಆಚರಣೆಗಳು ದೂರವಾಗುವುದರಿಂದ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭವಾಯಿತು. ಸಮಾಜದ ಸಾತ್ತ್ವಿಕತೆ ಹೆಚ್ಚಾದರೆ, ಅದರಿಂದ ಅಪರಾಧ, ಅನೈತಿಕತೆಯು ತಾನಾಗಿಯೇ ಕಡಿಮೆಯಾಗುತ್ತಾ ಹೋಗುವುದು. ಆ ನಿಟ್ಟಿನಲ್ಲಿ ವ್ಯಕ್ತಿ, ಸಮಾಜ ಮತ್ತು ದೇಶವನ್ನು ಸಾತ್ತ್ವಿಕ ಮಾಡಲು ಒಂದು ಚಿಕ್ಕ ಸಂಘಟನೆಯು ಶಿಸ್ತುಬದ್ಧ ಕಾರ್ಯವನ್ನು ಮಾಡಿ ಆ ದಿಶೆಯತ್ತ ವೇಗದಿಂದ ಮಾರ್ಗಕ್ರಮಣ ಮಾಡುತ್ತಿರುವಾಗ, ಅದು ಅಪಾಯಕಾರಿಯಾಗಲು ಹೇಗೆ ಸಾಧ್ಯ ? ಇದು ಸರ್ವಸಾಮಾನ್ಯರಿಗೆ ಮೂಡುವಂತಹ ಪ್ರಶ್ನೆಯಾಗಿದೆ.

ಫೇಸ್‍ಬುಕ್ ಕಳೆದ ೨ ವರ್ಷಗಳಲ್ಲಿ ಸನಾತನದ ಅನೇಕ ಫೇಸ್‍ಬುಕ್ ಖಾತೆಗಳನ್ನು ನಿಷೇಧಿಸಿದೆ. ಇದರಿಂದ ಈ ಮಾಧ್ಯಮದಿಂದಾಗುವ ಧರ್ಮಪ್ರಸಾರದಿಂದ ಜಿಜ್ಞಾಸುಗಳು ವಂಚಿತರಾಗಿದ್ದಾರೆ. ಫೇಸ್‍ಬುಕ್ ಈ ನಿಷೇಧವನ್ನು ಅಘೋಷಿತ ಮತ್ತು ಸಂಸ್ಥೆಗೆ ಯಾವುದೇ ಸ್ಪಷ್ಟೀಕರಣ ನೀಡುವ ಅವಕಾಶ ನೀಡದೆ ಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೊಡ್ಡದಾಗಿ ಡಂಗುರ ಸಾರುವ ಈ ದೇಶದಲ್ಲಿ ಈ ನಿಷೇಧದ ಬಗ್ಗೆ ಮಾತನಾಡಲು ಯಾರು ಸಿದ್ಧರಿಲ್ಲ. ಈ ಬಗ್ಗೆ ಸಂಸ್ಥೆಯು ಕಾನೂನುಬದ್ಧ ಮಾರ್ಗದಿಂದ ಹೋರಾಡುತ್ತಲೇ ಇದೆ. ಒಂದೆಡೆ ಹಿಂದೂಗಳ ದೇವತೆಗಳು, ಶ್ರದ್ಧಾಸ್ಥಾನಗಳನ್ನು ಅವಮಾನಿಸಿದಾಗ ಹಿಂದುತ್ವನಿಷ್ಠರು ಧ್ವನಿ ಎತ್ತುತ್ತಾರೆ, ಆಗ ವಿರೋಧಕರು ‘ನಮಗೆ ನಮ್ಮ ಅಭಿಪ್ರಾಯವನ್ನು ಮಂಡಿಸಲು ಸ್ವಾತಂತ್ರ್ಯ ನೀಡುವುದಿಲ್ಲ. ಈ ಹಿಂದೂಗಳು ತಾಲಿಬಾನಿಗಳಾಗಿದ್ದಾರೆ’, ಎಂದು ಟೀಕಿಸುತ್ತಾರೆ. ಹಾಗಿದ್ದರೆ ಫೇಸ್‍ಬುಕ್ ಸರ್ವಾಧಿಕಾರಿಯಂತೆ ವರ್ತಿಸಿ ಹಿಂದೂಗಳಲ್ಲಿ ಜನಪ್ರಿಯವಾಗಿರುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪುಟಗಳನ್ನು ನಿಷೇಧಿಸುವಾಗ ಎಲ್ಲರೂ ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ ?

ಫೇಸ್‍ಬುಕ್‍ನ ಕರಾಳ ಮುಖ !

ಆರಂಭದಲ್ಲಿ ಮನೋರಂಜನೆ, ಸರ್ವಸಾಮಾನ್ಯರನ್ನು ಒಟ್ಟಿಗೆ ತರುವ ವೇದಿಕೆಯೆಂದು ಗುರುತಿಸಲ್ಪಡುವ ಫೇಸ್‍ಬುಕ್ ಕಳೆದ ಕೆಲವು ವರ್ಷಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಫೇಸ್‍ಬುಕ್ ನಲ್ಲಿ ಅಶ್ಲೀಲ ವಿಡಿಯೋಗಳು ತುಂಬಿರುತ್ತವೆ ಮತ್ತು ಅವು ತೀರಾ ಸಹಜವಾಗಿ ಸಿಗುತ್ತವೆ. ಕೆಲವು ವಿಡಿಯೋಗಳು ಅತ್ಯಂತ ಅಶ್ಲೀಲ (ಪಾರ್ನ್ ಸ್ವರೂಪದ್ದು) ಇರುತ್ತವೆ. ಅವುಗಳನ್ನು ನೋಡಿ ನೀತಿಭ್ರಷ್ಟರಾಗುವ ಅಪಾಯವಿದೆ. `ಫೇಸ್‍ಬುಕ್ ಲೈವ್’ ಮಾಡಿ ಜನರು ಆತ್ಯಹತ್ಯೆಯನ್ನು ಮಾಡಿಕೊಳ್ಳುತ್ತಾರೆ. `ಯಾವ ವಿಡಿಯೋ ಮತ್ತು ಯಾವ ಬರವಣಿಗೆಯನ್ನು ವಾಹಿನಿಗಳಲ್ಲಿ ತೋರಿಸುವುದು ಅಪಾಯಕಾರಿಯಾಗಿದೆಯೋ, ಅಂತಹ ವಿಡಿಯೋಗಳು `ಫೇಸ್‍ಬುಕ್‍’ನಲ್ಲಿ ಸಿಗುತ್ತವೆ. `ಫೇಸ್‍ಬುಕ್‍ನ ಮಾಜಿ ಸಿಬ್ಬಂದಿಯೊಬ್ಬರು,`ಫೇಸ್‍ಬುಕ್ ಪ್ರಜಾಪ್ರಭುತ್ವ ಮತ್ತು ಮಕ್ಕಳಿಗಾಗಿ ಅಪಾಯಕಾರಿಯಾಗಿದೆ’, ಎಂದು ಹೇಳಿದ್ದಾರೆ. ಇದರಿಂದ `ಫೇಸ್‍ಬುಕ್’ ಸಮಾಜದೆದುರು ಏನು ಮಂಡಿಸುತ್ತಿರಬಹುದು ?, ಎಂಬ ಕಲ್ಪನೆ ಬರುತ್ತದೆ.

ಫೇಸ್‍ಬುಕ್‍ನಲ್ಲಿ ಕೋಟಿಗಟ್ಟಲೆ ಜನರ ಖಾತೆಗಳಿವೆ. ಈ ಖಾತೆಗಳನ್ನು ತೆರೆಯುವಾಗ ವೈಯಕ್ತಿಕ ಸ್ವರೂಪದ ಬಹಳಷ್ಟು ಮಾಹಿತಿಯನ್ನು ಫೇಸ್‍ಬುಕ್ `ಆನ್‍ಲೈನ್’ ಅರ್ಜಿಯಲ್ಲಿ ಜನರಿಂದ ತುಂಬಿಸಿಕೊಳ್ಳುತ್ತದೆ. ಜನರ ಇಷ್ಟಾನಿಷ್ಟ, ಅವರ ಕೌಶಲ್ಯಗಳು, ಆಸಕ್ತಿ ಇಂತಹ ಬಹಳಷ್ಟು ಮಾಹಿತಿಗಳು ಫೇಸ್‍ಬುಕ್‍ಗೆ ಸಿಗುತ್ತದೆ. ಜಾಹೀರಾತುಗಳ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಬಹಳ ಹಣ ಸಿಗುತ್ತದೆ; ಆದರೆ ಗ್ರಾಹಕರ ಮಾಹಿತಿಯನ್ನು ಮಾರಾಟ ಮಾಡಿಯೂ ಬಹಳಷ್ಟು ಹಣವನ್ನು ಗಳಿಸಲು ಬರುತ್ತದೆ. ಈ ಮಾಹಿತಿಯನ್ನು ಸಂಬಂಧಿತ ಕಂಪನಿಗಳು ಅನೇಕ ರೀತಿಯ ಕಾರಣಗಳಿಗಾಗಿ ಉಪಯೋಗಿಸುತ್ತವೆ. ಕೆಲವು ವರ್ಷಗಳ ಹಿಂದೆ ಬಹಿರಂಗಗೊಂಡ `ಕೆಂಬ್ರಿಜ್ ಅ್ಯನಾಲಿಟಿಕಾ’ ಪ್ರಕರಣವು ಅದರ ಉದಾಹರಣೆಯಾಗಿದೆ. ಕೆಲವು ದೇಶಗಳಲ್ಲಿ ಚುನಾವಣೆಗಳ ತೀರ್ಪು ತಮಗೆ ಬೇಕಾದಂತೆ ಬರಬೇಕೆಂದು ಮಾಹಿತಿಯ ವಿಶ್ಲೇಷಣೆಯನ್ನು ಮಾಡುವ ಕಂಪನಿಗಳು ಫೇಸ್‍ಬುಕ್‍ನಿಂದ ಜನರ ಮಾಹಿತಿಯನ್ನು ಪಡೆದಿದ್ದವು. ಇದಕ್ಕನುಸಾರ ಚುನಾವಣೆಗಳಲ್ಲಿ ಯಾವ ಅಂಶಗಳಿಗೆ ಒತ್ತು ನೀಡಬೇಕು. ಎಷ್ಟು ಮತಗಳು ದೊರಕುವವು ?, ಎಂಬುದರ ತರ್ಕ ಕಟ್ಟಬಹುದು. ಫೇಸ್‍ಬುಕ್ ಕೆಲವು ಕೋಟಿ ಗ್ರಾಹಕರ ಮಾಹಿತಿಯನ್ನು (ಡೆಟಾ) ಮಾರಿದ ಬಗ್ಗೆ ಅದರ ಮೇಲೆ ಆರೋಪವಿದೆ. ಬಳಕೆದಾರರ ಮಾಹಿತಿಯನ್ನು ಇತರ ಕಂಪನಿಗಳಿಗೆ ನೀಡುವುದು ತಪ್ಪೇ ಆಗಿದೆ ಮತ್ತು ಗ್ರಾಹಕರ ಅನುಮತಿ ಇಲ್ಲದೇ ಅದನ್ನು ಮಾಡುವುದು ಅದಕ್ಕಿಂತಲೂ ದೊಡ್ಡ ತಪ್ಪಾಗಿದೆ.

೨ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಹಿಂದೂಗಳು ಥಳಿತಕ್ಕೊಳಗಾದಾಗ ಅವರನ್ನು ರಕ್ಷಿಸಲು ಹೋದ ಭಾಜಪದ ಮುಖಂಡ ಕಪಿಲ ಮಿಶ್ರಾ ಇವರನ್ನೇ ಫೇಸ್‍ಬುಕ್ ಖಳನಾಯಕನೆಂಬಂತೆ ಬಿಂಬಿಸಿತು. ಜಗತ್ತಿನಲ್ಲಿ ಅವರ ಬಹಳಷ್ಟು ತೇಜೋವಧೆಯಾಯಿತು. ಕೊಲ್ಲಿ ದೇಶಗಳಿಂದ ಮಿಶ್ರಾ ಇವರಿಗೆ ಬೆದರಿಕೆಯ ಕರೆಗಳು ಬಂದವು. ಇದು ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಅಪಾಯಕಾರಿ ಮತ್ತು ಗುಂಪುಗಾರಿಕೆಗೆ ಪ್ರೋತ್ಸಾಹ ನೀಡುವಂತಹದ್ದಾಗಿವೆ. ತೆಲಂಗಾಣದ ಭಾಜಪದ ಶಾಸಕರಾದ ಟಿ. ರಾಜಾಸಿಂಹ ಇವರು ಪ್ರಖರ ಹಿಂದುತ್ವನಿಷ್ಠರಾಗಿದ್ದಾರೆ. ಅವರ ಕಾರ್ಯಗಳಿಂದ ಭಾಗ್ಯನಗರ (ಹೈದರಾಬಾದ), ತೆಲಂಗಾಣಾದ ಕೆಲವು ಭಾಗಗಳಲ್ಲಿ ಮುಸಲ್ಮಾನ ಬಹುಸಂಖ್ಯಾತರಾಗಿದ್ದರೂ ಹಿಂದೂಗಳು ಅಲ್ಲಿ ಸುರಕ್ಷಿತರಾಗಿದ್ದಾರೆ. ರಾಜಾಸಿಂಹ ಇವರನ್ನೂ ಖಳನಾಯಕನೆಂದು ಬಿಂಬಿಸಿ ಫೇಸ್‍ಬುಕ್ ಅವರ ಖಾತೆಯನ್ನು ಬಂದ್ ಮಾಡಿತು. ಇನ್ನೊಂದೆಡೆ ಮುಸಲ್ಮಾನ ಯುವಕರಿಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಭಯೋತ್ಪಾದಕ ಡಾ. ಝಾಕೀರ ನಾಯಿಕನ ಫೇಸ್‍ಬುಕ್ ಖಾತೆಯು ಚಾಲನೆಯಲ್ಲಿದೆ. ಕೇರಳದ ಅನೇಕ ಹಿಂದುತ್ವನಿಷ್ಠರ ಹತ್ಯೆಗಳಲ್ಲಿ ಕೈವಾಡವಿರುವ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯ ಖಾತೆಯು ಚಾಲನೆಯಲ್ಲಿದೆ. ದೆಹಲಿ ಗಲಭೆಯಲ್ಲಿ ಇದೇ ಸಂಘಟನೆಯ ಮುಖ್ಯ ಪಾತ್ರ ಇರುವುದಾಗಿ ಬೆಳಕಿಗೆ ಬಂದಿದೆ.

‘ಭಾರತದಲ್ಲಿ ಹಿಂದುತ್ವನಿಷ್ಠರನ್ನು ಗುರಿ ಮಾಡುವುದು, ಇದು ಫೇಸ್‍ಬುಕ್‍ನ ನಿಲುವಾಗಿದೆ’, ಎಂದು ಗಮನಕ್ಕೆ ಬರುತ್ತದೆ. ಸಿಂಗಾಪುರ ಸ್ವೇಚ್ಛಾಚಾರಿ ವೃತ್ತಿಯ ಆಚರಣೆಯನ್ನು ಮಾಡುವ ಫೇಸ್‍ಬುಕ್‍ಗೆ ನಿಯಮಗಳನ್ನು ಪಾಲಿಸುವಂತೆ ಅರಿವು ಮಾಡಿಕೊಟ್ಟ ನಂತರ ಫೇಸ್‍ಬುಕ್ ವಿರೋಧಿಸಿತು; ಆದರೆ `ಸಿಂಗಾಪುರದಲ್ಲಿ ಕಾರ್ಯವನ್ನು ನಡೆಸಬೇಕಿದ್ದರೆ, ಇಲ್ಲಿನ ಕಾನೂನು-ನಿಯಮಗಳನ್ನು ಪಾಲಿಸಬೇಕು; ಇಲ್ಲದಿದ್ದರೆ ಕ್ರಮಕ್ಕೆ ಎದುರಿಸಬೇಕಾಗಬಹುದು’, ಎಂದು ಅಲ್ಲಿನ ಅಧಿಕಾರಿ ಭಾರತೀಯ ಮೂಲದ ಕೆ. ಷಣ್ಮುಗನ್ ಇವರು ಫೇಸ್‍ಬುಕ್‍ಗೆ ಎಚ್ಚರಿಕೆಯನ್ನು ನೀಡಿದರು. ಭಾರತ ಸರಕಾರಕ್ಕೆ ಮನವಿ ಮಾಡುವುದೆಂದರೆ, ಅದು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಸಂಘಟನೆಗಳ ಮೇಲಿನ ಈ ಅನ್ಯಾಯವನ್ನು ದೂರ ಮಾಡಲು ಫೇಸ್‍ಬುಕ್‍ಗೆ ಕಠೋರವಾಗಿ ತಿಳುವಳಿಕೆ ನೀಡಬೇಕು. ಇದರಿಂದ ಇನ್ನು ಮುಂದೆ ಇತರ ಯಾವುದೇ ಸಂಸ್ಥೆ, ಸಂಘಟನೆ ಅಥವಾ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯ ಆಧಾರದಲ್ಲಿ ಅಥವಾ ಸಂಶಯದಿಂದ ಕಾರ್ಯಾಚರಣೆಯನ್ನು ಮಾಡುವ ಧೈರ್ಯವನ್ನು ಫೇಸ್‍ಬುಕ್ ಮಾಡಲಾರದು.