ಕೊರೊನಾಸುರ ಮತ್ತು ಕಾಲ !

ಪ್ರಸ್ತುತ ಭಾರತದಲ್ಲಿ ಎಲ್ಲರ ಬಾಯಿಯಲ್ಲಿ ಅತ್ಯಧಿಕ ಸಲ ಬರುವ ಮತ್ತು ಏಕಮೇವ ಶಬ್ದವೆಂದರೆ `ಕೊರೊನಾ’! ಕೆಲವರು ಕೊರೊನಾ ಸೋಂಕನ್ನು ಗಂಭೀರತೆಯಿಂದ ಪರಿಗಣಿಸುತ್ತಾರೆ, ಇನ್ನೂ ಕೆಲವರು ‘ಕೊರೊನಾ ಇತ್ಯಾದಿಗಳೆಲ್ಲ ಕಟ್ಟುಕಥೆಯಾಗಿದೆ, ಕೊರೊನಾ ಅಸ್ತಿತ್ವದಲ್ಲಿಯೇ ಇಲ್ಲ’, ಎಂದು ಹೇಳುತ್ತಾ, ಯಾವುದೇ ಹೆದರಿಕೆಯಿಲ್ಲದೇ ಇರುತ್ತಾರೆ. ಅರ್ಥಾತ್ ಕೊರೊನಾ ಒಂದು ವೇಳೆ ಕಟ್ಟುಕಥೆಯಾಗಿದ್ದರೆ, ಸಂಪೂರ್ಣ ವಿಶ್ವದಲ್ಲಿ ಮರಣ ಇಷ್ಟು ಭಯಾನಕವಾಗಿ ತಾಂಡವವಾಡುತ್ತಿರಲಿಲ್ಲ. ಆದುದರಿಂದ ಕೊರೊನಾವನ್ನು ಎಷ್ಟು ಗಂಭೀರತೆಯಿಂದ ನೋಡಬೇಕು ಎನ್ನುವುದು ಅವರವರ ವಿವೇಚನೆಗೆ ಬಿಟ್ಟ ಪ್ರಶ್ನೆಯಾಗಿದೆ. ಹೀಗಿದ್ದರೂ, ‘ಪ್ರತಿಯೊಂದು ವಿಷಯಕ್ಕೆ ಕಾಲವೇ ಉತ್ತರವಾಗಿರುತ್ತದೆ’, ಎಂದು ನಾವು ಹೇಳುತ್ತೇವೆ, ಅದರಂತೆ `ಕೊರೊನಾ ವಿಷಯದಲ್ಲಿ ಗಂಭೀರತೆಯನ್ನು ನಿರ್ಮಾಣ ಮಾಡುವುದರಲ್ಲಿಯೂ `ಕಾಲ’ವೇ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿದೆ’, ಎಂದು ಹೇಳಬಹುದಾಗಿದೆ. ಕಾಲ ಯಾರಿಗಾಗಿಯೂ ಕಾಯುವುದಿಲ್ಲ. ಕೊರೊನಾದ ಮೊದಲ ಮತ್ತು ಎರಡನೇಯ ಅಲೆ ಬಂದು ಹೋಗಿದೆ. ಪ್ರತಿಯೊಂದು ಅಲೆಯ ನಂತರದ ಕಾಲವು ಸ್ವಲ್ಪ ವಿಶ್ರಾಂತಿಯ ಮತ್ತು ಬಿಡುಗಡೆಯ ನಿಟ್ಟುಸಿರು ಬಿಡುವಂತೆ ಇದ್ದರೂ, ಅಷ್ಟರಲ್ಲಿಯೇ ಮುಂದಿನ ಅಲೆಯ ಸಂಕಟ ಧುತ್ತೆಂದು ಎದುರಿಗೆ ಬಂದು ನಿಲ್ಲುತ್ತದೆ. ಈಗಲೂ ಅದೇ ಸ್ಥಿತಿ ಉದ್ಭವಿಸಿದೆ. ನಾವಿನ್ನೂ ಎರಡನೇಯ ಅಲೆಯ ಭೀಕರತೆಯ ಹಿಡಿತದಿಂದ ಹೊರಗೆ ಬರುತ್ತಿರುವಾಗಲೇ ಅನೇಕ ತಜ್ಞರು ಮೂರನೇ ಅಲೆಯ ಭವಿಷ್ಯವಾಣಿಯನ್ನು ನುಡಿಯುತ್ತಿದ್ದಾರೆ. ಹೀಗಿರುವಾಗಲೂ ‘ಮೂರನೇ ಅಲೆ ಬರುವುದೇ ಇಲ್ಲ’, ಎಂದು ಬುದ್ಧಿವಾದಿಗಳು ರಾಗವನ್ನು ಎಳೆಯುತ್ತಿದ್ದಾರೆ. ತಜ್ಞರ ತಂಡವು ಸಂಶೋಧನೆ ಮತ್ತು ಅಧ್ಯಯನವನ್ನು ಮಾಡಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಸಂತರು ತ್ರಿಕಾಲಜ್ಞಾನಿಗಳಾಗಿರುವುದರಿಂದ ಅವರೂ ಸಂಕಟದ ವಿಷಯದಲ್ಲಿ ನುಡಿಯುತ್ತಾರೆ. ಇದರಿಂದ ಇಂತಹವರ ಹೇಳಿಕೆಗಳನ್ನು ಅಜಾಗರೂಕತೆಯಿಂದ ನೋಡುವ ತಪ್ಪನ್ನು ಭಾರತೀಯರು ಮಾಡಬಾರದು. ಭಾರತದಲ್ಲಿ ಶಿಸ್ತು, ಗಾಂಭೀರ್ಯ, ಸಾವಧಾನ, ಜಾಗರೂಕತೆ ಇತ್ಯಾದಿ ವಿಷಯಗಳು ಉಳಿಯುವುದಿಲ್ಲ. ನಾಗರಿಕರು ತಮ್ಮ ಮನಸ್ಸಿಗೆ ತೋಚಿದಂತೆ ಮಾಡುತ್ತಾರೆ ಮತ್ತು ವಿನಾಕಾರಣ ಸಂಕಟವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಕೊರೊನಾ ಕಟ್ಟುಕಥೆಯಾಗಿರದೇ ಅದು ಅಸುರವೇ (ಕೊರೊನಾಸುರ) ಆಗಿದೆ.

ವಿದೇಶಗಳಲ್ಲಿ ತಾಂಡವ!

ಎಲ್ಲ ದೇಶಗಳಲ್ಲಿಯೂ ಎರಡನೇಯ ಅಲೆ ಇಳಿಮುಖವಾಗಿ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವುದರಿಂದ ಎಲ್ಲ ತರಹದ ವ್ಯವಹಾರ, ವ್ಯಾಪಾರ, ಸಂಚಾರಗಳೊಂದಿಗೆ ಇತರೆ ವಿಷಯಗಳೂ ಪ್ರಾರಂಭವಾದವು. ‘ಕೊರೊನಾ ಹೋಯಿತು’, ಎನ್ನುವ ಜನರ ಮಾತುಗಳು ಪುನಃ ಪುನಃ ಕೇಳಿಸತೊಡಗಿತು; ಆದರೆ ಕಾಲಕ್ಕೆ ಇದು ಒಪ್ಪಿಗೆಯಿಲ್ಲ. ಆಸ್ಟ್ರೇಲಿಯಾ ಮತ್ತು ಅಮೇರಿಕಾ ದೇಶಗಳಲ್ಲಿ ಕೊರೊನಾ ಪುನಃ ತಲೆಯೆತ್ತಿದೆ. ಬೇಡವಾಗಿರುವ ಕಡೆಯಲ್ಲೆಲ್ಲ ಕೊರೊನಾದ ಪ್ರಕೋಪ ಹೆಚ್ಚಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿರುವ ಸುದ್ದಿಗಳು ಬರುತ್ತಿವೆ. ಕೆಲವು ನಗರಗಳಲ್ಲಿ ಪುನಃ ಸಂಚಾರ ನಿರ್ಬಂಧವನ್ನು ಘೋಷಿಸಲಾಗಿದೆ. ಅಮೇರಿಕಾದಲ್ಲಿ ರೋಗಿಗಳ ಸಂಖ್ಯೆ ಮತ್ತು ಮರಣ ಪ್ರಮಾಣದಲ್ಲಿಯೂ ಪ್ರತಿದಿನ ಹೆಚ್ಚಳವಾಗುತ್ತಿದೆ. ಸ್ವಲ್ಪದರಲ್ಲಿ ಹೇಳುವುದಾದರೆ, ಇಲ್ಲ ಇಲ್ಲವೆನ್ನುತ್ತಲೇ ಕೊರೊನಾದ ಮೂರನೇಯ ಅಲೆ ವಿದೇಶದಲ್ಲಿ ಈಗಾಗಲೇ ಬಂದಾಗಿದೆ ! ಭಾರತದಲ್ಲಿಯೂ ಮೂರನೇ ಅಲೆಯು ಚಿಕ್ಕ ಮಕ್ಕಳಿಗೆ ಅತ್ಯಧಿಕ ಅಪಾಯಕಾರಿ ಯಾಗಿದೆಯೆಂದು ತಜ್ಞರು ಹೇಳುತ್ತಿದ್ದಾರೆ. ಇದರಲ್ಲಿಯೂ ಮೂಗು ತೂರಿಸದೇ ಇರುವವರನ್ನು ಭಾರತೀಯರೆಂದು ಹೇಳಬಹುದೇ ? ಢಂಬಾಚಾರದ ಮಾತನಾಡುವವರ ಬಡಬಡಿಕೆ ಹಾಗೆಯೇ ಮುಂದುವರಿದಿದೆ. ಮೂರನೇ ಅಲೆ ಬರುವುದೇ ಇಲ್ಲ, ಇದು ಅತಿಶಯೋಕ್ತಿಯಾಗಿದೆ ಎಂದು ಹೇಳುತ್ತಿದ್ದಾರೆ. ಈಗಲಾದರೂ ಇಂತಹವರು ಕಣ್ಣು ತೆರೆದು ಜಾಣರಾಗಬೇಕು; ಕಾರಣ ಕಾಲವು ಪುನಃ ತನ್ನ ರೌದ್ರ ರೂಪವನ್ನು ತೋರಿಸಲು ಪ್ರಾರಂಭಿಸಿದೆ. ವಿದೇಶಗಳಲ್ಲಿ ಚಿಕ್ಕ ಮಕ್ಕಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ಭರ್ತಿಯಾಗುವವರ ಪ್ರಮಾಣವೂ ಶೇ. ೫೯ರಷ್ಟು ಹೆಚ್ಚಾಗಿದೆ. ೭ ನವಜಾತ ಶಿಶುಗಳು ತೀವ್ರ ನಿಗಾ ಘಟಕದಲ್ಲಿದ್ದು, ೨ ಶಿಶುಗಳನ್ನು ವೆಂಟಿಲೇಟರ್ ಮೇಲೆ ಇಟ್ಟಿದ್ದಾರೆ. ‘ಯೂನಿವರ್ಸಿಟಿ ಆಫ್ ಬ್ರಿಸ್ಟಲ್’ನ ಶಿಶುರೋಗ ತಜ್ಞರಾದ ಪ್ರಾ. ಆಡಮ್ ಫಿನ್ನ್ ಇವರು `ಈ ರೋಗ ಮೊದಲ ಎರಡು ಅಲೆಗಳ ತುಲನೆಯಲ್ಲಿ ಭಿನ್ನವಾಗಿದೆ’ ಎಂದು ಹೇಳಿದ್ದಾರೆ. ಲಂಡನ್‍ನಲ್ಲಿರುವ ‘ಇಂಪೀರಿಯಲ್ ಕಾಲೇಜ್’ನ ‘ಪೀಡಿಯಾಟ್ರಿಕ್ ಇನ್ಫೆಕ್ಸಿಯಸ್’ (ಮಕ್ಕಳ ಸಾಂಕ್ರಾಮಿಕ) ರೋಗಗಳ ತಜ್ಞರಾದ ಡಾ. ಎಲಿಝಬೆತ್ ವಿಕ್ಟರ್ ಇವರು “ಬಹುತೇಕ ಮಕ್ಕಳಿಗೆ ಲಸಿಕೆ ನೀಡಲಾಗಿಲ್ಲ. ಅದರೆಡೆಗೆ ಗಮನಹರಿಸಬೇಕಾಗಿದೆ’’, ಎಂದಿದ್ದಾರೆ. ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಕ್ಕಳ ಪ್ರಾಣಕ್ಕೂ ಕುತ್ತಾಗಬಹುದು. ಬೆಂಗಳೂರಿನಲ್ಲಿ ೫೪೩ ಮಕ್ಕಳು ಕೊರೊನಾ ಪೀಡಿತರಾಗಿದ್ದಾರೆ. ಸ್ವಲ್ಪದರಲ್ಲಿ ಹೇಳುವುದೆಂದರೆ, ಇಲ್ಲಿಯವರೆಗಿನ ಎರಡೂ ಅಲೆಗಳು ಮತ್ತು ವಿದೇಶದಲ್ಲಿರುವ ಸದ್ಯದ ಸ್ಥಿತಿಯನ್ನು ನೋಡಿದರೆ ಕೊರೊನಾ ಇದು ಹೋಗಲು ಬಂದಿಲ್ಲ ಎನ್ನುವ ಸತ್ಯವನ್ನು ಈಗ ನಿರಾಕರಿಸುವಂತಿಲ್ಲ. ವಿದೇಶ ದಲ್ಲಿರುವ ಜನರು ಮೂರನೇಯ ಅಲೆಯನ್ನು ಸ್ವೀಕರಿಸಿದ್ದಾರೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಇವೆಲ್ಲ ಸ್ಥಿತಿ ಭಾರತಕ್ಕೆ ಚಿಂತಾಜನಕವಾಗಿದೆ. ಅಮೇರಿಕದಂತಹ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸಕ್ಷಮವಾಗಿದ್ದರೂ, ಅಲ್ಲಿ ಕೊರೊನಾ ಸೋಂಕು ಪುನಃ ಹೆಚ್ಚಾಗುತ್ತಿರುವುದು, ಆರೋಗ್ಯ ವ್ಯವಸ್ಥೆಯ ಸೋಲು ಎಂದೇ ಪರಿಗಣಿಸಬಹುದಾಗಿದೆ. ಅಲ್ಲಿಯ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವೇ ಇಲ್ಲದಂತಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ರೋಗಿಗಳು ಅಲ್ಲಿ ಹೆಚ್ಚಾಗುತ್ತಿದ್ದಾರೆ. ಅಲ್ಲಿ ಹತಾಶೆಯಿಂದ ಕೈಚೆಲ್ಲುತ್ತಿರುವ ಪರಿಸ್ಥಿತಿಯು ಪ್ರಾಣಹಿಂಡುತ್ತಿದೆ. ಕೊರೊನಾದ ಮೊದಲ ಮತ್ತು ಎರಡನೇಯ ಅಲೆಯಿಂದ ಭಾರತದ ಆರೋಗ್ಯ ವ್ಯವಸ್ಥೆಯು ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಇದರಿಂದ ಮೂರನೇಯ

ಅಲೆಯ ಪೂರ್ವಸಿದ್ಧತೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ ನಿಯೋಜನೆಯೊಂದಿಗೆ ಮತ್ತು ಪೂರ್ಣ ಕಾರ್ಯಕ್ಷಮತೆಯೊಂದಿಗೆ ಮಾಡುವುದು ಅತ್ಯಾವಶ್ಯಕವಾಗಿದೆ. ಅದಕ್ಕಿಂತ ಮೊದಲು ಲಸಿಕೀಕರಣವು ವೇಗವನ್ನು ಪಡೆಯಬೇಕಾಗಿದೆ. ಅಮೇರಿಕದಲ್ಲಿ ಮೂರನೇಯ ಅಲೆಯ ತೊಂದರೆ ಮಕ್ಕಳಿಗೆ ತಗಲುತ್ತಿದೆ. ಇದರಿಂದ ಭಾರತವು ಪಾಠವನ್ನು ಕಲಿಯಬೇಕಾಗಿದೆ. ಲಸಿಕೀಕರಣವೇ ಆಗದಿರುವ ಮಕ್ಕಳ ಶಾಲೆ ಪ್ರಾರಂಭಿಸಲು ಏಕಿಷ್ಟು ಹಠ ಮತ್ತು ಆಗ್ರಹ ? ಈ ಆಗ್ರಹವೆಂದರೆ ಮಕ್ಕಳಿಗೆ ಅಪಾಯಕಾರಿಯಾಗಿರುವ ಮೂರನೇಯ ಅಲೆಯ ಬಾಯಿಗೆ ಮಕ್ಕಳನ್ನು ತಿಳಿದೂ ದೂಡುವಂತಹದ್ದಾಗಿದೆ. ‘ಎಲ್ಲಿಯವರೆಗೆ ಮಕ್ಕಳ ಲಸಿಕೀಕರಣವಾಗುವುದಿಲ್ಲವೋ, ಅಲ್ಲಿಯವರೆಗೆ ಮಕ್ಕಳ ಶಾಲೆಯನ್ನು ಪ್ರಾರಂಭಿಸುವುದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಲಿದೆ’, ಎಂದು ಅನೇಕ ಪೋಷಕರ ಹೇಳಿಕೆಯಾಗಿದೆ. ಸರಕಾರ ಮತ್ತು ಆಡಳಿತ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕಾಗಿದೆ. ಸಂಪೂರ್ಣ ವಿಶ್ವವು ಸದ್ಯಕ್ಕೆ ಒಂದರ ಹಿಂದೆ ಒಂದು ಬರುವ ಸಂಕಟಗಳನ್ನು ಎದುರಿಸುತ್ತಿದೆ. ಕೊರೊನಾದೊಂದಿಗೆ ಚಂಡಮಾರುತ, ನೆರೆಹಾವಳಿ, ಭೂಕಂಪ ಮುಂತಾದ ಸಂಕಟಗಳೂ ಇವೆ. ಜನರಿಗೆ ಇಂದಿಗೂ ಈ ಸಂಕಟಗಳು ಗಂಭೀರವೆನಿಸುತ್ತಿಲ್ಲ. ಇದರಿಂದ ಸ್ವಲ್ಪ ಪರಿಸ್ಥಿತಿ ಸುಧಾರಿಸಿದ ತಕ್ಷಣ ಜನರು ಅಜಾಗರೂಕತೆಯಿಂದ ವರ್ತಿಸುತ್ತಾರೆ; ಆದರೆ ಈಗ ಈ ರೀತಿ ನಡೆಯುವುದಿಲ್ಲ. ಕಾಲದ ಹೆಜ್ಜೆಗಳು ವೇಗವಾಗಿ ಮೂಡುತ್ತಿರುವುದರಿಂದ ಸಂಕಟಗಳ ಮಾಲಿಕೆಗಳು ಸದ್ಯಕ್ಕಂತೂ ನಿಲ್ಲುವುದಿಲ್ಲ. ಬದಲಾಗಿ ಸಂಕಟಗಳನ್ನು ಎದುರಿಸಲು ಕ್ರಿಯಮಾಣವನ್ನು ಉಪಯೋಗಿಸಿಕೊಂಡು ಈಶ್ವರನನ್ನು ಆರಾಧಿಸುವುದೇ ಕಾಲಾನುಸಾರ ಯೋಗ್ಯವಾಗಲಿದೆ.