ಚೆನ್ನೈ (ತಮಿಳುನಾಡು) – ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ. ನ್ಯಾಯಮೂರ್ತಿ ಪಿ.ಡಿ. ಆದಿಕೇಸವಾಲು ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಇವರ ನ್ಯಾಯಪೀಠವು ದೇವಾಲಯದ ಜಮೀನುಗಳ ಕಾರ್ಯದರ್ಶಿ ಹಾಗೂ ಆಡಳಿತಗಾರರಾಗಿರುವ ರಾಜ್ಯ ಸರಕಾರಕ್ಕೆ, ಮಾನವಶಕ್ತಿ ಅಭಿವೃದ್ಧಿ ಇಲಾಖೆ ಮತ್ತು ಆಯುಕ್ತರನ್ನು ಉದ್ದೇಶಿಸಿ ಈ ತೀರ್ಪನ್ನು ನೀಡಿತು.
‘Temple Lands Shall Always Remain With Temples; Public Purpose Theory Shall Not Be Invoked Over Temple Lands’ : Madras High Court https://t.co/e4AQPz5gBm
— Live Law (@LiveLawIndia) June 9, 2021
ಈ ಹಿನ್ನೆಲೆಯಲ್ಲಿ, ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಚೀನ ದೇವಾಲಯಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ೭೫ ಮಾರ್ಗಸೂಚಿಗಳನ್ನು ಜ್ಯಾರಿಗೊಳಿಸಿದೆ. ‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ‘ದ ಸೈಲೆಂಟ್ ಬ್ಯುರಿಯಲ್’ ಎಂಬ ವಾಚಕರ ಪತ್ರದ ಆಧಾರದ ಮೇಲೆ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಅವರು ಸಲ್ಲಿಸಿದ್ದ ಅರ್ಜಿಯ ಆಲಿಕೆಯ ಸಮಯದಲ್ಲಿ ಈ ಆದೇಶವನ್ನು ಜಾರಿಗೊಳಿಸಿದೆ. (ಹಿಂದೂ ಭಕ್ತರು ಅಥವಾ ಹಿಂದೂ ಸಂಘಟನೆಗಳಲ್ಲ, ಆದರೆ ನಿವೃತ್ತ ಮುಖ್ಯ ನ್ಯಾಯಾಧೀಶರು ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಬೇಕಾಗಿ ಬಂತು ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿ ! – ಸಂಪಾದಕರು)
೧. ದೇವಾಲಯದ ಜಮೀನುಗಳಲ್ಲಿನ ಅತಿಕ್ರಮಣಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಅತಿಕ್ರಮಣದಾರರಿಂದ ಮತ್ತು ಭೂಮಿಯ ಬಾಡಿಗೆ ಪಾವತಿಸದವರಿಂದ ದಂಡವನ್ನು ತಕ್ಷಣ ವಸೂಲಿ ಮಾಡುವಂತೆ ಮದ್ರಾಸ್ ಉಚ್ಚನ್ಯಾಯಾಲಯವು ಸರಕಾರಿ ಅಧಿಕಾರಿಗಳಿಗೆ ಆದೇಶ ನೀಡಿತು.
೨. ನ್ಯಾಯಾಲಯವು ಈ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಅದರ ವಿವರಗಳನ್ನು ಜಾಲತಾಣದಲ್ಲಿ ಪ್ರಸಾರ ಮಾಡಲು ಆರು ವಾರಗಳ ಕಾಲಾವಕಾಶವನ್ನು ನೀಡಿದೆ. ಎಂಟು ವಾರಗಳಲ್ಲಿ ಅತಿಕ್ರಮಣವನ್ನು ತೆಗೆದುಹಾಕಲು ವಿಫಲವಾದರೆ ಮಾನವಶಕ್ತಿ ಅಭಿವೃದ್ಧಿ ಇಲಾಖೆ ಮತ್ತು ಅದರ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯವು ಎಚ್ಚರಿಸಿದೆ.
ಪ್ರಾಚೀನ ವಿಗ್ರಹಗಳು ಮತ್ತು ದೇವಾಲಯಗಳನ್ನು ರಕ್ಷಿಸುವಲ್ಲಿ ವಿಫಲವಾದ ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ವಿಭಾಗ ಮತ್ತು ಪುರಾತತ್ವ ವಿಭಾಗವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ !ನ್ಯಾಯಾಲಯವು, ಭವ್ಯವಾದ ಮತ್ತು ಪ್ರಾಚೀನ ದೇವಾಲಯಗಳು ಮತ್ತು ವಾಸ್ತುಗಳನ್ನು ರಕ್ಷಿಸುವವರಿಗೆ ತೊಂದರೆಯಾಗುವ ಪ್ರಮಾಣವು ನಗಣ್ಯವಾಗಿದೆ; ಆದರೂ ಅವರು ರಕ್ಷಿಸುವುದಿಲ್ಲ. ನಮ್ಮ ಅಮೂಲ್ಯವಾದ ಪರಂಪರೆಯ ಸಂರಕ್ಷಣೆಯಾಗದಿರಲು ಯಾವುದೇ ನೈಸರ್ಗಿಕ ವಿಪತ್ತುಗಳಲ್ಲ, ಆದರೆ ಅದರ ನವೀಕರಣದತ್ತ ಆಡಳಿತವು ನಿರ್ಲಕ್ಷಿಸಿರುವುದೇ ಕಾರಣವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಪ್ರಮುಖ ದೇವಾಲಯಗಳಿಗೆ ದೇಣಿಗೆ ಸಿಗುತ್ತಿದ್ದರೂ, ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ಇಲಾಖೆಯಿಂದ ಐತಿಹಾಸಿಕ ದೇವಾಲಯಗಳು ಮತ್ತು ವಿಗ್ರಹಗಳ ರಕ್ಷಣೆಯ ಕಾರ್ಯವಾಗುತ್ತಿಲ್ಲ. ಇವೆಲ್ಲವುಗಳ ಪ್ರಾಚೀನ ಮೌಲ್ಯ ಹೆಚ್ಚಿದೆ. ರಾಜ್ಯದ ಕೆಲವು ದೇವಾಲಯಗಳನ್ನು ‘ಯುನೆಸ್ಕೋ’ ಐತಿಹಾಸಿಕ ಗುರುತು ಎಂದು ಘೋಷಿಸಿದೆ. ರಾಜ್ಯದಲ್ಲಿ ೨೦೦೦ ವರ್ಷಗಳಷ್ಟು ಹಳೆಯದಾದ ದೇವಾಲಯಗಳು ದುಸ್ಥಿತಿಯಲ್ಲಿವೆ. ಪುರಾತತ್ವ ಇಲಾಖೆ ಅಥವಾ ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ಇಲಾಖೆ ಇವುಗಳಲ್ಲಿ ಯಾರೂ ಕೂಡ ಇದಕ್ಕಾಗಿ ಮುಂದಾಳತ್ವ ವಹಿಸಲು ಸಿದ್ಧವಾಗಿಲ್ಲ. |
ದೇವಾಲಯದ ಹಣವನ್ನು ದೇವಾಲಯಗಳಿಗೆ ಮಾತ್ರ ಖರ್ಚು ಮಾಡಬೇಕು !ನ್ಯಾಯಾಲಯವು ನೀಡಿದ ಆದೇಶದಲ್ಲಿ ದೇವಾಲಯದ ಹಣವನ್ನು ದೇವಾಲಯಗಳಿಗೆ ಮಾತ್ರ ಬಳಸಬೇಕು ಬೇರೆ ಬೇರೆ ದೇವಾಲಯಗಳ ನಿಧಿಯನ್ನು ಆಯಾ ದೇವಾಲಯದ ನಿರ್ವಹಣೆ ಮತ್ತು ದುರಸ್ತಿ, ದೇವಾಲಯಗಳಲ್ಲಿ ಉತ್ಸವಗಳ ಆಯೋಜನೆ, ಹಾಗೆಯೇ ಪುರೋಹಿತರು, ಸಂಗೀತಗಾರರು, ನಾಟಕಗಳನ್ನು ಮತ್ತು ಜಾನಪದ ಗೀತೆಗಳನ್ನು ಪ್ರದರ್ಶಿಸುವವರು ಜೊತೆಗೆ ಸಿಬ್ಬಂದಿಯ ಮೇಲೆ ಖರ್ಚು ಮಾಡಬೇಕು. ಅದೇರೀತಿ ದೇವಾಲಯದ ಆಸ್ತಿಯ ಸರಿಯಾದ ಲೆಕ್ಕಪರಿಶೋಧನೆಯನ್ನೂ ಮಾಡಬೇಕು. |
ದೇವಾಲಯಗಳಿಗೆ ನ್ಯಾಯಮಂಡಳಿ ಸ್ಥಾಪಿಸಲು ಆದೇಶ
ನ್ಯಾಯಾಲಯವು ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ಕಾಯ್ದೆಯಡಿಯಲ್ಲಿ ಒಂದು ವಿಶೇಷ ನ್ಯಾಯಮಂಡಳಿ ಸ್ಥಾಪಿಸಲು ಆದೇಶಿಸಿದೆ. ಈ ನ್ಯಾಯಮಂಡಳಿಯು ಧಾರ್ಮಿಕ ವಿಷಯಗಳು ಅಂದರೆ ಧಾರ್ಮಿಕ ಪ್ರಕರಣಗಳು, ಸಂಸ್ಕೃತಿ, ಸಂಪ್ರದಾಯಗಳು, ಪರಂಪರೆ, ಗುರುತು, ಬಾಕಿ ಇರುವ ಬಾಡಿಗೆಗಳು, ಅತಿಕ್ರಮಣಗಳು, ಮತ್ತು ದೇವಾಲಯಗಳ ಹಾಗೂ ಮಠಗಳ ಇತರ ಪ್ರಕರಣಗಳ ಆಲಿಕೆ ಮಾಡುತ್ತದೆ. ಇದರೊಂದಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಆಸ್ತಿ ಕಾಯ್ದೆಯ ಪರಿಶೀಲನೆಗೆ ಒಂದು ಪೀಠವನ್ನು ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ. ೩ ವರ್ಷಗಳಿಗೊಮ್ಮೆ ಈ ಕಾನೂನನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು.
ಪರಂಪರೆ ಆಯೋಗ ಸ್ಥಾಪನೆಗೆ ಆದೇಶ
ನ್ಯಾಯಾಲಯವು ಪರಂಪರೆ ಆಯೋಗವನ್ನು ಸ್ಥಾಪಿಸಲು ಆದೇಶಿಸಿದೆ. ಮುಂದಿನ ಎರಡು ತಿಂಗಳಲ್ಲಿ ೧೭ ಸದಸ್ಯರ ಪರಂಪರೆ ಆಯೋಗವನ್ನು ಸ್ಥಾಪಿಸಲು ತಿಳಿಸಲಾಗಿದೆ. ಕೇಂದ್ರ ಕಾಯ್ದೆ ಅಥವಾ ರಾಜ್ಯ ಕಾಯ್ದೆಯಡಿ ಅಧಿಸೂಚಿಸಲಾಗಿರುವ ಯಾವುದೇ ಸ್ಮಾರಕಗಳು, ದೇವಾಲಯಗಳು, ಪ್ರತಿಮೆಗಳು, ಶಿಲ್ಪಗಳಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಆಯೋಗದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.