|
ನವದೆಹಲಿ – ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಹೋಳಿ ಹಬ್ಬದ ದಿನ ಬೆಂಕಿ ಕಾಣಿಸಿಕೊಂಡಿತ್ತು. ಅಂದು ವರ್ಮಾ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ. ಬೆಂಕಿ ಬಿದ್ದಿರುವ ಬಗ್ಗೆ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಬೆಂಕಿ ನಂದಿಸಿದ ಬಳಿಕ ಅಗ್ನಿಶಾಮಕ ದಳದವರಿಗೆ ಮನೆಯ ಕೆಲವು ಕೋಣೆಗಳಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಮಾಹಿತಿ ಹೊರಬಂದ ಬಳಿಕ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕೋಣೆಗಳಲ್ಲಿ ಹಣ ಪತ್ತೆಯಾದ ಮಾಹಿತಿ ತಿಳಿದ ಬಳಿಕ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಪೀಠದ ಸಭೆ ಕರೆದು ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಲು ನಿರ್ಧರಿಸಿದ್ದಾರೆ. ಅವರು 2021ರ ಅಕ್ಟೋಬರ್ ವರೆಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ, ನ್ಯಾಯಮೂರ್ತಿ ವರ್ಮಾ ಅವರ ತನಿಖೆ ನಡೆಸಿ ಅವರ ವಿರುದ್ಧ ಮಹಾಭಿಯೋಗ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ನ್ಯಾಯಮೂರ್ತಿ ವರ್ಮಾ ರಾಜೀನಾಮೆ ನೀಡುವಂತೆ ಹೇಳಬಹುದು ಎಂದು ತಿಳಿದುಬಂದಿದೆ.