ಬಾಂಗ್ಲಾದೇಶದಲ್ಲಿ ಮಹಮ್ಮದ ಯೂನಸರವರನ್ನು ಪದಚ್ಯುತಗೊಳಿಸಿ ಅಧಿಕಾರ ವಹಿಸಿಕೊಳ್ಳುವ ಸಿದ್ಧತೆಯಲ್ಲಿರುವ ಸೈನ್ಯ !

  • ರಾಜಧಾನಿ ಢಾಕಾದಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ

  • ಸೇನಾ ಮುಖ್ಯಸ್ಥರಿಂದ ತುರ್ತು ಸಭೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ದೊಡ್ಡ ರಾಜಕೀಯ ಬದಲಾವಣೆಯ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಾಜಧಾನಿ ಢಾಕಾ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಹಿರಿಯ ಸೇನಾ ಅಧಿಕಾರಿಗಳು ಸಭೆಯನ್ನೂ ನಡೆಸಿದ್ದಾರೆ. ಇದರಿಂದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾದ ಮಹಮ್ಮದ ಯೂನಸರವರ ಸರಕಾರವನ್ನು ಪದಚ್ಯುತಗೊಳಿಸಿ ಸೈನ್ಯವು ಸ್ವತಃ ಅಧಿಕಾರವನ್ನು ವಹಿಸಿಕೊಳ್ಳುವ ಚರ್ಚೆಗಳು ವೇಗ ಪಡೆದುಕೊಂಡಿವೆ. ಮಹಮ್ಮದ ಯೂನಸರವರು ಚೀನಾ ಪ್ರವಾಸಕ್ಕೆ ಹೋಗಲಿದ್ದಾರೆ. ಅದೇ ಸಮಯದಲ್ಲಿ ಈ ಅಧಿಕಾರ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಹಮ್ಮದ ಯೂನಸ ಮತ್ತು ಬಾಂಗ್ಲಾದೇಶದ ಸೇನಾಮುಖ್ಯಸ್ಥರಾದ ವಕಾರ ಉಝ ಜಮಾನ ರವರು ಇದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

1. ಸೇನಾಮುಖ್ಯಸ್ಥರಾದ ವಕಾರ ಉಝ ಜಮಾನರವರ ನೇತೃತ್ವದಲ್ಲಿ ಸೈನ್ಯವು ಮಾರ್ಚ್ 24 ರಂದು ತುರ್ತು ಸಭೆ ನಡೆಸಿತು. ಈ ಸಭೆಯಲ್ಲಿ 5 ಲೆಫ್ಟಿನೆಂಟ್ ಜನರಲ್, 8 ಮೇಜರ್ ಜನರಲ್ (ಜಿಒಸಿ), ಸ್ವತಂತ್ರ ಬ್ರಿಗೇಡ್ಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಭಯೋತ್ಪಾದಕ ದಾಳಿಯ ಅಪಾಯದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸೇನಾ ಮುಖ್ಯಸ್ಥರು ಭದ್ರತೆಯನ್ನು ಹೆಚ್ಚಿಸಲು ಆದೇಶಿಸಿದ್ದಾರೆ.

2. ಕಳೆದ ಕೆಲವು ದಿನಗಳಲ್ಲಿ ಢಾಕಾವು ಸಂಪೂರ್ಣವಾಗಿ ಸೈನ್ಯದ ನಿಯಂತ್ರಣಕ್ಕೆ ಬಂದಿದೆ. ಢಾಕಾದ ರಸ್ತೆಗಳಲ್ಲಿ ಸೈನಿಕರು ಮತ್ತು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ನ ಸೈನಿಕರು ಗಸ್ತು ಹೊಡೆಯುತ್ತಿರುವುದು ಕಂಡುಬರುತ್ತಿದೆ. ಸೈನಿಕರು ರಸ್ತೆಯ ಬದಿಯಲ್ಲಿ ತಮ್ಮ ಚೌಕಿಗಳನ್ನೂ ನಿರ್ಮಿಸಿದ್ದಾರೆ, ಅಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಲಾಗುತ್ತದೆ. ಇದನ್ನು ಮೊದಲು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ಹೇಳಲಾಗಿದ್ದರೂ, ಜನರಲ್ ಜಮಾನರವರ ಸಭೆಯ ನಂತರ ಅಧಿಕಾರ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿವೆ.

3. ಮಹಮ್ಮದ ಯೂನಸ ಮತ್ತು ಸೈನ್ಯದ ನಡುವಿನ ಸಂಬಂಧ ಹದಗೆಟ್ಟಿದೆ ಎಂಬ ವಾದಗಳು ಬಹಳ ಸಮಯದಿಂದ ಕೇಳಿಬರುತ್ತಿವೆ. ಎರಡೂ ಕಡೆಗಳಿಂದ ಇಂತಹ ಅನೇಕ ಹೇಳಿಕೆಗಳು ಬಂದಿದ್ದು, ಇದರಿಂದ ಒತ್ತಡವು ಹೆಚ್ಚಾಗಿದೆ. ಸರಕಾರ ಮತ್ತು ಸೇನಾ ಮುಖ್ಯಸ್ಥರ ನಡುವಿನ ಭಿನ್ನಾಭಿಪ್ರಾಯಗಳು ಈಗ ಹೆಚ್ಚಾಗಿದೆ ಮತ್ತು ಸೇನೆಯು ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಿದೆ ಎಂದು ರಾಜಕೀಯ ವಿಶ್ಲೇಷಕರಿಗೆ ಅನಿಸುತ್ತದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಅವ್ಯವಸ್ಥೆಯಿಂದ ಭಾರತಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಇರುವುದು ಆವಶ್ಯಕವಾಗಿದೆ !