‘ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಇದೆ. ಜಾಗತಿಕ ವ್ಯವಸ್ಥೆಯು (world order) ಬದಲಾಗುತ್ತಿದೆ. ಜಾಗತಿಕ ವ್ಯವಸ್ಥೆಯ ಈ ಬದಲಾವಣೆಯು ಕೇವಲ ಕಾಕತಾಳೀಯವಲ್ಲ, ಬದಲಾಗಿ ಇದು ಸಮಾಜದ ಚೇತನದಲ್ಲಿ (ಜಾಗೃತಿಯಲ್ಲಿ) ಉಂಟಾಗುತ್ತಿರುವ ಬದಲಾವಣೆಗಳ ದೃಶ್ಯ ಪರಿಣಾಮವಾಗಿದೆ. ಸಮಾಜದ ಚೇತನದಲ್ಲಿ ಆಗುತ್ತಿರುವ ಪರಿವರ್ತನೆ ಮತ್ತು ಮುಂಬರುವ ಕಾಲದಲ್ಲಿ ಅದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಜ್ಯೋತಿಷ್ಯಶಾಸ್ತ್ರದ ದೃಷ್ಟಿಕೋನದಿಂದ ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. (ಪೂರ್ವಾರ್ಧ)
೧. ಸಮಾಜದ ಚೇತನದ ತಾತ್ತ್ವ್ವಿಕ ವಿಶ್ಲೇಷಣೆ
೧ ಅ. ಸಮಾಜದ ಚೇತನದ ಎರಡು ಅಂಗಗಳು : ಒಬ್ಬ ವ್ಯಕ್ತಿಯ ಅಸ್ತಿತ್ವವು ವೈಯಕ್ತಿಕ ಚೇತನದ ಮೇಲಾಧಾರಿತವಾಗಿದೆ, ಹಾಗೆಯೇ ಸಮಾಜದ ಅಸ್ತಿತ್ವವು ಸಾಮೂಹಿಕ ಚೇತನದ ಮೇಲಾಧಾರಿತ ಆಗಿರುತ್ತದೆ. ಸಾಮೂಹಿಕ ಚೇತನದ ಎರಡು ಅಂಗಗಳಿವೆ – ಆಂತರಿಕ ಮತ್ತು ಬಾಹ್ಯ.
೧ ಅ ೧. ಆಂತರಿಕ ಅಂಗ : ಸಮಾಜದ ಆಂತರಿಕ ಅಂಗಗಳಲ್ಲಿ ಜನರ ಪ್ರವೃತ್ತಿ, ಸಂಸ್ಕಾರಗಳು, ವಿಚಾರಧಾರೆ, ಜೀವನದತ್ತ ನೋಡುವ ದೃಷ್ಟಿಕೋನ, ಶ್ರದ್ಧೆ, ನೈತಿಕತೆಯ ಕಲ್ಪನೆಗಳು, ಸತ್ಯದ ಬಗೆಗಿನ ಬೋಧನೆ ಮುಂತಾದ ಅಂಶಗಳು ಒಳಗೊಂಡಿರುತ್ತವೆ. ಈ ಅಂಶಗಳು ಸಮಾಜದ ಮನಸ್ಸಿನಲ್ಲಿ ಬೇರೂರಿರುತ್ತವೆ. ಅವು ಗುಪ್ತ ಮತ್ತು ಅದೃಶ್ಯವಾಗಿರುತ್ತವೆ.
೧ ಅ ೨. ಬಾಹ್ಯ ಅಂಗ : ಸಮಾಜದ ಬಾಹ್ಯ ಅಂಗದಲ್ಲಿ ವಿವಿಧ ರೀತಿಯ ವ್ಯವಸ್ಥೆಗಳು ಒಳಗೊಂಡಿರುತ್ತವೆ, ಉದಾ. ರಾಜಕೀಯ, ಧಾರ್ಮಿಕ, ಆರ್ಥಿಕ, ನ್ಯಾಯಾಂಗ, ಶೈಕ್ಷಣಿಕ ಇತ್ಯಾದಿ. ಈ ವ್ಯವಸ್ಥೆಗಳು ಕಣ್ಣಿಗೆ ಕಾಣುವಂತಿರುತ್ತವೆ. ಅವುಗಳ ಬಗ್ಗೆ ವಸ್ತುನಿಷ್ಠ ಅಧ್ಯಯನ ಮಾಡಬಹುದು. ಅವುಗಳ ರಚನೆ ಅಥವಾ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಬಹುದು.
೧ ಆ. ಸಮಾಜದ ಚೇತನದ ಕಾರ್ಯವಿಧಾನ

೧ ಆ ೧. ಸಮಷ್ಟಿಯ ಚೇತನವು ವಿಕಸನಗೊಳ್ಳಲು ಪ್ರಯತ್ನಶೀಲರಾಗಿರುವುದು ಅವಶ್ಯಕ ! : ಚೇತನವು ವೈಯಕ್ತಿಕವಾಗಿರಲಿ ಅಥವಾ ಸಾಮೂಹಿಕವಾಗಿರಲಿ, ಅದು ನಿರಂತರವಾಗಿ ವಿಕಸನಗೊಳ್ಳಲು ಹಂಬಲಿಸುತ್ತಿರುತ್ತದೆ. ಅದು ಅದರ ನೈಸರ್ಗಿಕ ಸ್ವಭಾವವೇ ಆಗಿದೆ. ಅದರ ಉನ್ನತಿಯ ದಿಕ್ಕು ಅಜ್ಞಾನದಿಂದ ಜ್ಞಾನದ ಕಡೆಗೆ, ಸಂಕುಚಿತ ಮನೋಭಾವದಿಂದ ವ್ಯಾಪಕತೆಯ ಕಡೆಗೆ, ಸಂಘರ್ಷದಿಂದ ಸಂವಾದದೆಡೆಗೆ, ದ್ವೇಷದಿಂದ ಪ್ರೀತಿಯೆಡೆಗೆ, ಪರತಂತ್ರದಿಂದ ಸ್ವಾತಂತ್ರ್ಯದೆಡೆಗೆ, ಭೇದದಿಂದ ಅಭೇದದೆಡೆಗೆ ಮತ್ತು ಜಡತ್ವದಿಂದ ಚೈತನ್ಯದೆಡೆಗೆ, ಹೀಗೆ ಇರುತ್ತದೆ; ಆದರೆ ಚೇತನದ ಈ ಪ್ರಯಾಣವು ಸರಳ ರೇಖೆಯಲ್ಲಿರದೇ ಅದು ವರ್ತುಲಾಕಾರದ (spiral) ಮೆಟ್ಟಿಲುಗಳಂತೆ ಇರುತ್ತದೆ. ಅಂದರೆ ‘ಚೇತನವು ಯಾವಾಗಲೂ ಉನ್ನತಿಯನ್ನೇ ಹೊಂದುತ್ತದೆ’ ಎಂದಲ್ಲ, ನಡುನಡುವೆ ಅದರ ಅವನತಿಯೂ ಆಗುತ್ತಿರುತ್ತದೆ; ಆದರೆ ಆ ಅವನತಿಯಿಂದಲೇ ಉನ್ನತಿಯ ಮುಂದಿನ ಮಾರ್ಗವು ಗೋಚರಿಸುತ್ತದೆ. ಎಲ್ಲಿಯವರೆಗೆ ಚೇತನವು ಮುಂದಿನ ಹಂತಕ್ಕೆ ಹೋಗಲು ಸಮರ್ಥವಾಗುವುದಿಲ್ಲವೋ, ಅಲ್ಲಿಯವರೆಗೆ, ಅದು ಇದ್ದಲ್ಲಿಯೇ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತದೆ.
೧ ಆ ೨. ಸಮಾಜದ ಆಂತರಿಕ ಚೇತನವು ಬಾಹ್ಯ ವ್ಯವಸ್ಥೆಗಳಿಂದ ದಮನಕ್ಕೊಳಗಾದರೆ, ಕಾಲ ಕ್ರಮೇಣ ಆ ವ್ಯವಸ್ಥೆಗಳು ಕುಸಿದು ಬೀಳುವುದು : ಸಮಾಜದ ಆಂತರಿಕ ಸ್ಥಿತಿ ಮತ್ತು ಬಾಹ್ಯ ವ್ಯವಸ್ಥೆ ಗಳು ಒಂದಕ್ಕೊಂದು ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಸಮಾಜದ ಆಂತರಿಕ ಸ್ಥಿತಿಗೆ ಅನುಗುಣವಾಗಿ ಬಾಹ್ಯ ವ್ಯವಸ್ಥೆಗಳು ರೂಪು ಗೊಳ್ಳುತ್ತವೆ. ಸಮಾಜದ ಆಂತರಿಕ ಚೇತನವನ್ನು ಬಾಹ್ಯವ್ಯವಸ್ಥೆಗಳು ಹತ್ತಿಕ್ಕಿದರೆ ಅಥವಾ ಸಮಾಜದ ಬದಲಾಗುತ್ತಿರುವ ಮೌಲ್ಯಗಳು, ವಿಚಾರಧಾರೆಗಳು ಮತ್ತು ಧಾರಣಾಶಕ್ತಿ ಮುಂತಾದವುಗಳಿಗೆ ಬಾಹ್ಯವ್ಯವಸ್ಥೆಗಳಿಂದ ಅಡೆತಡೆಗಳು ಉಂಟಾದರೆ, ಕಾಲದ ಪ್ರವಾಹದಲ್ಲಿ ಆ ವ್ಯವಸ್ಥೆಗಳು ಶಿಥಿಲಗೊಂಡು ಕುಸಿಯುತ್ತವೆ. ಸಮಾಜದ ಆಂತರಿಕ ಸ್ಥಿತಿ ಮತ್ತು ಬಾಹ್ಯ ವ್ಯವಸ್ಥೆಗಳ ನಡುವಿನ ಈ ಉದ್ವಿಗ್ನತೆಯ ಸಂಘರ್ಷ, ಕ್ರಾಂತಿ ಮತ್ತು ಪರಿವರ್ತನೆಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ಇತಿಹಾಸದಲ್ಲಿ ಯಾವಾಗಲೂ ಹೀಗೆ ಆಗುವುದನ್ನು ಗಮನಿಸಬಹುದು. ಉದಾ. ಭಾರತೀಯರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ನಡೆಸಿದರು; ಏಕೆಂದರೆ ಬ್ರಿಟಿಷರು ಭಾರತೀಯ ಚೇತನವನ್ನು ದಮನಿಸಿ ಅದನ್ನು ಪರತಂತ್ರ, ಸಂಕುಚಿತ, ವಿಭಜಿತ, ಅಶಕ್ತ ಮತ್ತು ಅವಮಾನಿಸಿದ್ದರು. ಭಾರತೀಯರು ಸ್ವಾತಂತ್ರ್ಯ ಪಡೆದರು ಅಂದರೆ, ಭಾರತದ ಹತ್ತಿಕ್ಕಲ್ಪಟ್ಟಿದ್ದ ಚೇತನವನ್ನು ಮುಕ್ತಗೊಳಿಸಿದರು.
೧ ಇ. ಪ್ರಸ್ತುತ ಸಮಾಜದ ಚೇತನದ ಅವಲೋಕನ

೧ ಇ ೧. ಯುರೋಪ್‌ನಲ್ಲಿ ವೈಜ್ಞಾನಿಕ ಕ್ರಾಂತಿಯಾಗಿ ಆಧುನಿಕ ಯುಗದ ಆರಂಭ : ‘ಪ್ರಸ್ತುತ ಜಾಗತಿಕ ಚೇತನದ ಸ್ಥಿತಿಗತಿ ಏನಿದೆ ?’ ಎಂಬುದನ್ನು ಅವಲೋಕಿಸೋಣ. ೧೬ ನೆಯ ಶತಮಾನದಲ್ಲಿ ಯುರೋಪ್‌ನಲ್ಲಿ ವೈಜ್ಞಾನಿಕ ಕ್ರಾಂತಿಯಾಗಿ ಆಧುನಿಕ ಯುಗವು ಆರಂಭವಾಯಿತು. ಯುರೋಪ್‌ನ ವೈಜ್ಞಾನಿಕ ಕ್ರಾಂತಿಯು ಕೇವಲ ಕಾಕತಾಳೀಯಲ್ಲ, ಅದಕ್ಕೆ ಮಧ್ಯಯುಗದ ಸಾಮಾಜಿಕ ಹಿನ್ನೆಲೆಯು ಕಾರಣವಾಗಿತ್ತು. ಮಧ್ಯಯುಗದ ಸಮಾಜವು ಸಂಪ್ರದಾಯಕೇಂದ್ರಿತವಾಗಿತ್ತು. ಧರ್ಮ, ಶಾಸ್ತ್ರ, ಸಂಪ್ರದಾಯ ಮತ್ತು ರೂಢಿ ಮುಂತಾದವುಗಳನ್ನು ಪಾಲಿಸುವುದಕ್ಕೆ ಜೀವನದಲ್ಲಿ ಅತ್ಯಧಿಕ ಮಹತ್ವ ವಿತ್ತು. ಧರ್ಮಸತ್ತೆ ಮತ್ತು ಸಾಮಂತಶಾಹಿ ಪ್ರಚಲಿತವಿತ್ತು. ಮಧ್ಯಯುಗವು ೧೫-೧೬ ನೆಯ ಶತಮಾನದ ವರೆಗೆ ಮುಂದುವರೆಯಿತು. ಮಧ್ಯಯುಗದ ಕೊನೆಯ ಕೆಲವು ಶತಮಾನ ಗಳಲ್ಲಿ ಜಗತ್ತಿನಾದ್ಯಂತ ಧಾರ್ಮಿಕ ಆಡಂಬರಗಳು ಹೆಚ್ಚಾದವು. ಧರ್ಮವು ಸತ್ವಹೀನವಾಗಿ ಕೆಟ್ಟ ಪದ್ಧತಿಗಳು ಮತ್ತು ಮೂಢನಂಬಿಕೆಗಳು ಹೆಚ್ಚಾದವು. ಅಧಿಕಾರ ಮತ್ತು ಧರ್ಮವಿಸ್ತರಣೆಯ ಪ್ರಯತ್ನದಿಂದ ಪದೇಪದೇ ಯುದ್ಧ, ದೌರ್ಜನ್ಯ, ನರಮೇಧ ಮುಂತಾದವುಗಳು ಸಂಭವಿಸುತ್ತಿದ್ದವು. ಹೊಸ ಸಂಶೋಧನೆ, ತತ್ವಜ್ಞಾನ ಮತ್ತು ಸತ್ಯದರ್ಶನ ಮುಂತಾದವುಗಳಿಗೆ ಅವಕಾಶವಿಲ್ಲದಂತಾಯಿತು. ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನವು ಕನಿಷ್ಠಮಟ್ಟದ್ದಾಗಿ ಹತ್ತಿಕ್ಕಲ್ಪಟ್ಟಿದ್ದ ಜಾಗತಿಕ ಚೈತನ್ಯಕ್ಕೆ ವೈಜ್ಞಾನಿಕ ಕ್ರಾಂತಿಯ ರೂಪದಲ್ಲಿ ಉನ್ನತಿಯ ಮಾರ್ಗವು ದೊರೆಯಿತು.
೧ ಇ ೨. ವೈಜ್ಞಾನಿಕ ಕ್ರಾಂತಿಯಿಂದ ಮಾನವಕುಲಕ್ಕಾದ ಲಾಭಗಳು : ವೈಜ್ಞಾನಿಕ ಕ್ರಾಂತಿಯಿಂದ ಸೃಷ್ಟಿಯ ಭೌತಿಕ ಸತ್ಯಗಳು ಮಾನವನಿಗೆ ವಸ್ತುನಿಷ್ಠವಾಗಿ ತಿಳಿದವು. ಅದರಿಂದ ಸಮಾಜವು ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಯಿತು. ದೈವವಾದವು ಹಿನ್ನೆಡೆಯಾಗಿ ಬುದ್ಧಿವಾದವು ಮುಂದೆ ಬಂದಿತು. ಹಲವಾರು ಮೂಢನಂಬಿಕೆಗಳು ದೂರವಾದವು. ಮಹಿಳೆಯರ ಸಾಮಾಜಿಕ ಸ್ಥಿತಿ ಸುಧಾರಿಸಿತು. ಸ್ವಾತಂತ್ರ್ಯ, ಸಮಾನತೆ, ಸಹಭಾಗಿತ್ವ ಮತ್ತು ಮಾನವಹಕ್ಕು ಗಳಂತಹ ಮೌಲ್ಯಗಳು ಪ್ರಧಾನವಾದವು. ಈ ಮೌಲ್ಯಗಳಿಗೆ ಆಶ್ರಯ ನೀಡುವ ‘ಪ್ರಜಾಪ್ರಭುತ್ವ’ ಎಂಬ ರಾಜ್ಯವ್ಯವಸ್ಥೆಯು ಉದಯಿಸಿತು. ಭೌತಿಕ ವಿಜ್ಞಾನದ ಪ್ರಗತಿಯಿಂದ ತಂತ್ರಜ್ಞಾನ ವಿಕಸನ ಗೊಂಡಿತು. ಅದರಿಂದ ಕೈಗಾರಿಕರಣ ಜನ್ಮ ತಾಳಿತು. ಜಗತ್ತಿನಾದ್ಯಂತ ಸಾರಿಗೆ ಮತ್ತು ಸಂವಹನ ಸಾಧನಗಳಿಂದ ಜಾಗತಿಕೀಕರಣವಾಯಿತು
ಮಧ್ಯಯುಗದಲ್ಲಿನ ಸಾಮಾಜಿಕ ಸಮಸ್ಯೆಗಳು ಆಧುನಿಕ ಯುಗದಲ್ಲಿ ಬಗೆಹರಿದವು; ಆದರೆ ಯಾವುದೇ ಹೊಸ ಚೇತನವು ಜನ್ಮ ತಾಳುವಾಗ ತನ್ನ ಮಿತಿಗಳೊಂದಿಗೇ ಜನ್ಮ ತಾಳುತ್ತದೆ. ಆಧುನಿಕ ಯುಗವು ತನ್ನ ಮಿತಿಗಳೊಂದಿಗೇ ಜನ್ಮತಾಳಿತು. ಅದರಿಂದ ಮಾನವಕುಲಕ್ಕೆ ಎಷ್ಟು ದೊಡ್ಡ ಲಾಭಗಳಾದವೋ, ಅಷ್ಟೇ ದೊಡ್ಡ ದುಷ್ಪರಿಣಾಮಗಳೂ ಉಂಟಾದವು.
೧ ಇ ೩. ಆಧುನಿಕಯುಗದಲ್ಲಿ ಮಾನವಕುಲಕ್ಕೆ ಉಂಟಾದ ಹಾನಿ : ಆಧುನಿಕ ಯುಗದಲ್ಲಿ ಬುದ್ಧಿವಾದದ ಅತಿರೇಕವಾಯಿತು. ಈಶ್ವರ, ಆತ್ಮಾ, ಧರ್ಮ, ಅಧ್ಯಾತ್ಮ ಮತ್ತು ಸಾಧನೆ ಮುಂತಾದವುಗಳನ್ನು ಸಂಪೂರ್ಣವಾಗಿ ಮೂಢನಂಬಿಕೆಯೆಂದು ಪರಿಗಣಿಸಲಾಯಿತು. ‘ಸಂಪೂರ್ಣ ಸೃಷ್ಟಿಯ ಮೂಲದಲ್ಲಿ ಜಡ ಪದಾರ್ಥ ಇದೆ ಮತ್ತು ಚೈತನ್ಯ ಎಂಬುದು ಒಂದು ಭ್ರಮೆ’ ಎಂಬ ಧಾರಣೆ ಮೂಡಿತು. ಅದರಿಂದ ಜೀವನದ ಉದ್ದೇಶವೇ ಇಲ್ಲವಾಯಿತು. ಏತಕ್ಕಾಗಿ ಬದುಕಬೇಕು ? ಯಾವ ಗುರಿಯತ್ತ ಸಾಗಬೇಕು ?’ ಎಂಬುದು ತಿಳಿಯದೆ ದಿಕ್ಕುತಪ್ಪಿದಂತಾಯಿತು. ಅದರಿಂದಾಗಿ ಮನುಷ್ಯನ ಪ್ರವೃತ್ತಿಯು ಸಂಕುಚಿತ, ಸ್ವಾರ್ಥಿ, ಸುಖಾಸಕ್ತ ಮತ್ತು ಆತ್ಮಕೇಂದ್ರಿತವಾಯಿತು. ‘ಹಣ’ ಮತ್ತು ‘ಅಧಿಕಾರ’ ಇವೇ ಜಗತ್ತಿನ ಕೇಂದ್ರಬಿಂದು ಗಳಾದವು. ಪ್ರೀತಿ, ಸದ್ಭಾವನೆ, ಸಾಮಾಜಿಕಬದ್ಧತೆ, ವಿಶಾಲ ಮನೋಭಾವ, ಪಾವಿತ್ರ್ಯ ಮತ್ತು ನೈತಿಕತೆ ಮುಂತಾದ ಮೌಲ್ಯಗಳು ನಾಶವಾಗಿ ಕುಟುಂಬ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿತು. ಮನುಷ್ಯನು ಸಮಾಜದಿಂದ ದೂರವಾಗಿ ಏಕಾಂಗಿಯಾದನು. ಹೆಚ್ಚುತ್ತಿರುವ ಕೈಗಾರಿಕರಣದಿಂದಾಗಿ ಪ್ರಕೃತಿಗೆ ಅಪಾರ ಹಾನಿಯುಂಟಾಯಿತು. ಮಾಲಿನ್ಯವು ಹೆಚ್ಚಿದ್ದರಿಂದ ಜಾಗತಿಕ ಹವಾಮಾನ ಬದಲಾಯಿತು. ಎಷ್ಟೋ ಸಸ್ಯಗಳು ಮತ್ತು ಪಶು-ಪಕ್ಷಿಗಳ ತಳಿಗಳು ನಾಮಾವಶೇಷವಾದವು. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾದವು.
ಸಾಮಾಜಿಕ ಚೇತನದ ಮಧ್ಯಯುಗದಿಂದ ಆಧುನಿಕ ಯುಗದಲ್ಲಿ ಬದಲಾದ ಸ್ಥಿತ್ಯಂತರವು, ಚೇತನದ ವಿಕಾಸಕ್ಕೆ ಒಂದು ಆವಶ್ಯಕ ಹಂತವಾಗಿತ್ತು; ಆದರೆ ಈಗ ಆಧುನಿಕ ಯುಗದ ಮಿತಿಗಳು ಸ್ಪಷ್ಟವಾಗಿ ಕಾಣುತ್ತಿವೆ. ಇಂದಿನ ಕಾಲದಲ್ಲಿ ಭೌತಿಕ, ತಾಂತ್ರಿಕ, ಆರ್ಥಿಕ ಮತ್ತು ಬೌದ್ಧಿಕ ವಿಕಾಸವು ಬಹಳಷ್ಟು ಆಗಿದೆ; ಆದರೆ ನೈತಿಕ, ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸವು ಹಿಂದೆ ಬಿದ್ದು ಅಸಮತೋಲನ ಉಂಟಾಗಿದೆ. ಆದ್ದರಿಂದ ಸಾಮಾಜಿಕ ಚೇತನವು ಇನ್ನೂ ಮುಂದಿನ ಹಂತಕ್ಕೆ ಪರಿವರ್ತನೆ ಯಾಗುವ ಪ್ರಯತ್ನದಲ್ಲಿದೆ.’
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಶರೀರದ ‘ಪರಿವರ್ತನೆ’ಯ ನಿಯಮ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !