‘ವಾಸ್ತುಶಾಸ್ತ್ರ’ದ ಮಾಹಿತಿ ನೀಡುವ ಲೇಖನಮಾಲೆ !
ಸದ್ಯ ಅನೇಕ ಕಟ್ಟಡ ನಿರ್ಮಾಣ ವೃತ್ತಿಪರರು ‘ನಮ್ಮ ನಿವಾಸಗಳು ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಲ್ಪಟ್ಟಿವೆ’, ಎಂದು ಸಾರಾಸಗಟಾಗಿ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತದೆ; ಆದರೆ ನಿಜವಾಗಿಯೂ ಆ ವಾಸ್ತುವು ವಾಸ್ತುಶಾಸ್ತ್ರದ ಮಾನದಂಡಕ್ಕೆ ಒಪ್ಪುತ್ತದೆಯೇ ?, ಇದರ ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ಆದ್ದರಿಂದ ವಾಸ್ತುಶಾಸ್ತ್ರದ ಕುರಿತು ಎಲ್ಲರಿಗೂ ಪ್ರಾಥಮಿಕ ಮಾಹಿತಿ ದೊರೆಯಲಿ, ಎಂಬ ಉದ್ದೇಶದಿಂದ ಈ ಲೇಖನಗಳ ಮೂಲಕ ಮಾಹಿತಿ ಮಂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ನಾವು ‘ವಾಸ್ತುಶಾಸ್ತ್ರದ ಉಪಯುಕ್ತತೆ’ಯನ್ನು ಓದಿದೆವು. ಈ ವಾರ ಈ ಲೇಖನಮಾಲೆಯ ಮುಂದಿನ ಭಾಗವನ್ನು ನೀಡುತ್ತಿದ್ದೇವೆ. (ಲೇಖನಾಂಕ ೨)

೧. ವಿವಿಧ ವೇದ-ಪುರಾಣಗಳಲ್ಲಿ ವಾಸ್ತುಶಾಸ್ತ್ರದ ಉಲ್ಲೇಖವಿದೆ
ವಾಸ್ತುಶಾಸ್ತ್ರವು ಅತ್ಯಂತ ಪ್ರಾಚೀನ ಶಾಸ್ತ್ರವಾಗಿದೆ. ವಿಶ್ವದಲ್ಲಿನ ಎಲ್ಲಕ್ಕಿಂತ ಪ್ರಾಚೀನ ಗ್ರಂಥವಾದ ‘ಋಗ್ವೇದ’ದಲ್ಲಿಯೂ ವಾಸ್ತುಶಾಸ್ತ್ರದ ಉಲ್ಲೇಖವಿದೆ. ಋಗ್ವೇದದಲ್ಲಿ ಮನೆಗೆ ‘ವೇಶ್ಮ’ ಎಂದು ಹೇಳಲಾಗಿದೆ. ಅಥರ್ವವೇದದಲ್ಲಿಯೂ ಗ್ರಾಮವನ್ನು ನೆಲೆಗೊಳಿಸುವ ಕುರಿತು ಮಾರ್ಗದರ್ಶನ ನೀಡಲಾಗಿದೆ. ಎಲ್ಲ ಪುರಾಣಗಳಲ್ಲಿಯೂ ವಾಸ್ತುಶಾಸ್ತ್ರದ ಉಲ್ಲೇಖವಿದೆ. ‘ಅಗ್ನಿಪುರಾಣ’, ‘ಮತ್ಸ್ಯಪುರಾಣ’, ‘ನಾರದಪುರಾಣ’ ಇತ್ಯಾದಿಗಳಲ್ಲಿ ಕಟ್ಟಡ ನಿರ್ಮಾಣದ ಕುರಿತು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿದೆ. ‘ಅಗ್ನಿಪುರಾಣ’ದಲ್ಲಿ ಅರಮನೆಯ ನಿರ್ಮಾಣಕ್ಕಾಗಿ ಮೊದಲು ಭೂಮಿ ಪರೀಕ್ಷೆ ಮಾಡಲು ಹೇಳಲಾಗಿದೆ. ವರ್ಣಾನುಸಾರ ಯಾವ ಭೂಮಿಯು ಲಾಭದಾಯಕವಾಗಿದೆ, ಎಂಬುದರ ಮಾರ್ಗದರ್ಶನವನ್ನು ‘ಅಗ್ನಿ ಪುರಾಣ’ದಲ್ಲಿ ನೀಡಲಾಗಿದೆ. ‘ಭಾಗವತ ಮಹಾಪುರಾಣ’ದಲ್ಲಿ ಭಗವಾನ್ ಶ್ರೀಕೃಷ್ಣನ ಆಜ್ಞೆಯಿಂದ ವಿಶ್ವಕರ್ಮನು ಸಮುದ್ರದಲ್ಲಿ ನಿರ್ಮಿಸಿದ ದ್ವಾರಕಾನಗರಿಯ ವರ್ಣನೆಯೂ ಬಂದಿದೆ. ಭಾರತದಲ್ಲಿ ವಾಸ್ತುಶಾಸ್ತ್ರದ ಅತ್ಯಂತ ಆಳವಾದ ಅಧ್ಯಯನ ಮಾಡಲಾಗಿದೆ. ಭಾರತಕ್ಕೆ ವಾಸ್ತುಶಾಸ್ತ್ರಜ್ಞರ ದೊಡ್ಡ ಪರಂಪರೆಯು ಲಭಿಸಿದೆ. ‘ಮತ್ಸ್ಯಪುರಾಣ’ದಲ್ಲಿ ೧೮ ಜನ ವಾಸ್ತುಶಾಸ್ತ್ರದ ಆಚಾರ್ಯರ ಉಲ್ಲೇಖ ಬಂದಿದೆ.

೨. ವಾಸ್ತುಶಾಸ್ತ್ರದ ೧೮ ಜನ ಮಾರ್ಗದರ್ಶಕರು
ಭೃಗುರತ್ರಿರ್ವಸಿಷ್ಠಶ್ಚ ವಿಶ್ವಕರ್ಮಾ ಮಯಸ್ತಥಾ |
ನಾರದೋ ನಗ್ನಜಿಚ್ಚೈವ ವಿಶಾಲಾಕ್ಷಃ ಪುರಂದರಃ ||
ಬ್ರಹ್ಮಾ ಕುಮಾರೋ ನಂದೀಶಃ ಶೌನಕೋ ಗರ್ಗ ಏವ ಚ |
ವಾಸುದೇವೋನಿರುದ್ಧಶ್ಚ ತಥಾ ಶುಕ್ರ ಬೃಹಸ್ಪತಿಃ ||
ಅಷ್ಟಾದಶೈತೇ ವಿಖ್ಯಾತಾ ವಾಸ್ತುಶಾಸ್ತ್ರೋಪದೇಶಕಾಃ |
ಸಂಕ್ಷೇಪೇಣ ಉಪದಿಷ್ಟಂ ಯನ್ಮನವೇ ಮತ್ಸ್ಯರೂಪಿಣಾ ||
– ಮತ್ಸ್ಯಪುರಾಣ, ಅಧ್ಯಾಯ ೨೫೨, ಶ್ಲೋಕ ೨ ರಿಂದ ೪
ಅರ್ಥ : ಭೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಮಯ, ನಾರದ, ನಗ್ನಜಿತ್, ವಿಶಾಲಾಕ್ಷ, ಇಂದ್ರ, ಬ್ರಹ್ಮ, ಕಾರ್ತಿಕೇಯ, ನಂದೀಶ್ವರ, ಶೌನಕ, ಗರ್ಗ, ವಾಸುದೇವ, ಅನಿರುದ್ಧ, ಶುಕ್ರಾಚಾರ್ಯ, ಬೃಹಸ್ಪತಿ ಇವರು ವಾಸ್ತುಶಾಸ್ತ್ರದ ೧೮ ಮಾರ್ಗದರ್ಶಕರು ಪ್ರಸಿದ್ಧರಾಗಿದ್ದಾರೆ. ಅದರಲ್ಲಿ ವೈವಸ್ವತ ಮನುಗಳಿಗೆ ಪ್ರಳಯ ಕಾಲದಲ್ಲಿ ಸಂಕ್ಷಿಪ್ತವಾಗಿ ಮತ್ಸ್ಯರೂಪದಲ್ಲಿ ಭಗವಂತನು ವಾಸ್ತುಶಾಸ್ತ್ರವನ್ನು ಉಪದೇಶಿಸಿದ್ದನು.
೩. ಕಶ್ಯಪ ಋಷಿಗಳ ‘ಶಿಲ್ಪ ಸಂಹಿತೆ’ ಗ್ರಂಥದಲ್ಲಿನ ಲೇಖನ !
ಕಶ್ಯಪ ಋಷಿಗಳು ಬರೆದ ‘ಶಿಲ್ಪ ಸಂಹಿತೆ’ ಈ ಗ್ರಂಥದಲ್ಲಿ ‘ಸಂಪೂರ್ಣ ಪ್ರಕೃತಿ ಸೃಷ್ಟಿ, ಅಂದರೆ ವಾಸ್ತು ಮತ್ತು ಅದರಲ್ಲಿನ ಸಾಧನಗಳನ್ನು ಉಪಯೋಗಿಸಿ ಸಿದ್ಧಪಡಿಸಿದ ಪ್ರತಿಯೊಂದು ವಸ್ತು ಅಂದರೆ ವಾಸ್ತು’, ಎಂಬ ಉಲ್ಲೇಖ ಬಂದಿದೆ. ಅದರಿಂದ ಅದರಲ್ಲಿ ಕೇವಲ ಮನುಷ್ಯನ ವಾಸಸ್ಥಳದ ಕುರಿತು ಉಲ್ಲೇಖವಿಲ್ಲ, ದೊಡ್ಡ ಕೋಟೆಗಳು, ದೊಡ್ಡ ದೇವಸ್ಥಾನಗಳು, ವಿಜಯಸ್ತಂಭ, ನಾಟ್ಯಮಂಟಪ, ಸ್ಪರ್ಧಾಕೇಂದ್ರ, ಪ್ರಾಣಿಗಳು ವಾಸಿಸುವ ಜಾಗ, ಶಸ್ತ್ರಾಸ್ತ್ರಗಳ ನಿರ್ಮಾಣ ಕೇಂದ್ರ, ಮೂರ್ತಿ ನಿರ್ಮಾಣ ಕೇಂದ್ರ, ಬಾವಿಗಳು ಇವೆಲ್ಲವುಗಳ ವಿವಿಧ ರಚನೆಗಳು, ಅಂದರೆ ವಸ್ತುಗಳ ಕುರಿತಾದ ವರ್ಣನೆ ಮಾಡಲಾಗಿದೆ. ‘ರಾಮಾಯಣ’ ಮತ್ತು ‘ಮಹಾಭಾರತ’ದಂತಹ ಗ್ರಂಥಗಳಲ್ಲಿಯೂ ವಾಸ್ತು ನಿರ್ಮಾಣದ ಕುರಿತು ಉಲ್ಲೇಖಗಳು ಕಂಡುಬರುತ್ತವೆ. ಕೌಟಿಲ್ಯರ ‘ಅರ್ಥಶಾಸ್ತ್ರ’, ಭರತನ ‘ನಾಟ್ಯಶಾಸ್ತ್ರ’ಗಳಲ್ಲಿಯೂ ವಾಸ್ತು ನಿರ್ಮಾಣದ ಕುರಿತು ಮಾಹಿತಿ ಕಂಡುಬರುತ್ತದೆ.
೪. ವಿವಿಧ ಪ್ರಾಚೀನ ಗ್ರಂಥಗಳಲ್ಲಿ ಬಂದಿರುವ ವಾಸ್ತುಶಾಸ್ತ್ರದ ಉಲ್ಲೇಖ
೪ ಅ. ಋಗ್ವೇದ : ವಿಶ್ವದಲ್ಲಿನ ಪ್ರಾಚೀನ ಗ್ರಂಥವಾಗಿರುವ ಋಗ್ವೇದದಲ್ಲಿ ಮನೆಗೆ ‘ವೇಶ್ಮ’ ಎಂದು ಹೇಳಲಾಗಿದೆ.
ಭೋಜಸ್ಯೇದಂ ಪುಷ್ಕರಿಣೀವ ವೇಶ್ಮ ಪರಿಷ್ಕೃತಂ ದೇವಮಾನೇವ ಚಿತ್ರಮ್ | – ಋಗ್ವೇದ, ಮಂಡಲ ೧೦, ಸೂಕ್ತ ೧೦೭, ಋಚಾ ೧೦
ಅರ್ಥ : ಕಮಲಗಳಿಂದ ತುಂಬಿದ ಸರೋವರದಂತೆ ಉದಾರ ಗೃಹಸ್ಥನ ಸುಶೋಭಿತ ಗೃಹವು ದೇವತೆಗಳಿಗೆ ಯೋಗ್ಯವಾಗಿ ಇರುವಂತಿದೆ. ಈ ವಾಕ್ಯದಲ್ಲಿ ವಾಸ್ತುವಿನ ಸುಶೋಭಿಕರಣದ ಕುರಿತು ಉಲ್ಲೇಖವಿದೆ.
ವಾಸ್ತೋಷ್ಪತೇ ಪ್ರತಿ ಜಾನೀಹ್ಯಸ್ಮಾನ್ ತ್ಸ್ವಾವೇಶೋ ಅನಮೀವೋ ಭವಾ ನಃ |
ಯತ್ತ್ವೇಮಹೇ ಪ್ರತಿ ತನ್ನೋ ಜುಷಸ್ವ ಶಂ ನೋ ಭವ ದ್ವಿಪದೇ ಚತುಷ್ಪದೇ || – ಋಗ್ವೇದ, ಮಂಡಲ ೭, ಸೂಕ್ತ ೫೪, ಋಚಾ ೧
ಅರ್ಥ : ಹೇ ವಾಸ್ತುವಿನ ಸ್ವಾಮಿಯೇ, ನೀವು ನಮ್ಮನ್ನು ಪರಿಪೂರ್ಣವಾಗಿ ತಿಳಿದುಕೊಂಡಿದ್ದೀರಿ. ಈ ವಾಸ್ತುವಿನಲ್ಲಿ ಯಾವಾಗಲೂ ನಿಮ್ಮ ವಾಸವಿರಲಿ. ನಮ್ಮನ್ನು ಆಶೀರ್ವದಿಸಿ ಸುಖ-ಸಮೃದ್ಧಿ ನೀಡಿರಿ. ನಾವು ರೋಗಮುಕ್ತರಾಗುವಂತೆ ಮಾಡಿರಿ, ಹಾಗೆಯೇ ದ್ವಿಪದ (ಮನುಷ್ಯ) ಮತ್ತು ಚತುಷ್ಪದಗಳಿಗೆ (ಹಸುಗಳು, ಸಾಕುಪ್ರಾಣಿಗಳು) ಶಾಂತಿಯನ್ನು ನೀಡಿರಿ.
ಮೇಲಿನ ಋಚೆಯಲ್ಲಿ ವಾಸ್ತೋಷ್ಪತಿಯನ್ನು ಆರೋಗ್ಯಕರ ಮತ್ತು ಉನ್ನತಿಶೀಲ ಮನೆಗಾಗಿ ಪ್ರಾರ್ಥಿಸಲಾಗಿದೆ, ಹಾಗೆಯೇ ಋಗ್ವೇದದ ನಾಲ್ಕನೆಯ ಮಂಡಲದಲ್ಲಿ ‘ಕ್ಷೇತ್ರಪತಿ’ ಈ ದೇವತೆಯನ್ನು ಮನೆಯಲ್ಲಿ ಧನಧಾನ್ಯಗಳಿಂದ ತುಂಬಿರುವಂತೆ ಮಾಡಲು ಪ್ರಾರ್ಥಿಸಲಾಗಿದೆ.
ಕ್ಷೇತ್ರಸ್ಯ ಪತಿನಾ ವಯಂ ಹಿತೇನೇವ ಜಯಾಮಸಿ |
ಗಾಮಶ್ವಂ ಪೋಷಯಿತ್ನ್ವಾ ಸ ನೋ ಮೃಳಾತೀದೃಶೇ ||
– ಋಗ್ವೇದ, ಮಂಡಲ ೪, ಸೂಕ್ತ ೫೭, ಋಚಾ ೧
ಅರ್ಥ : ನಾವು ಕ್ಷೇತ್ರಪತಿಯ ಕೃಪೆಯಿಂದ ಕಲ್ಯಾಣಕಾರಿ ಮಾರ್ಗದಿಂದ ವಿಜಯವನ್ನು ಪಡೆಯುತ್ತೇವೆ. ಆ ಕ್ಷೇತ್ರ (ಭೂಮಿ) ನಮ್ಮ ಹಸು-ಕುದುರೆಗಳಿಗೆ (ಸಂಪತ್ತಿಗೆ) ಪೋಷಣೆ ನೀಡುತ್ತಿರಲಿ.
೪ ಆ. ಅಥರ್ವವೇದ : ಇದರಲ್ಲಿ ವಾಸ್ತುವಿನಲ್ಲಿ ವಾಸಿಸುವ ಅಗ್ನಿ ಮತ್ತು ವಿಷ್ಣು ಇವರಿಗೆ ಮನೆಯು ರತ್ನ ಮತ್ತು ಧನದಿಂದ ತುಂಬಿರುವಂತೆ ಮಾಡಲು ಪ್ರಾರ್ಥಿಸಲಾಗಿದೆ.
ಅಗ್ನಾವಿಷ್ಣು ಮಹಿ ತದ್ವಾಂ ಮಹಿತ್ವಂ ಪಾಥೋ ಘೃತಸ್ಯ ಗುಹ್ಯಸ್ಯ ನಾಮ |
ದಮೇದಮೇ ಸಪ್ತ ರತ್ನಾ ದಧಾನೌ ಪ್ರತಿ ವಾಂ ಜಿವ್ಹಾ ಘೃತಮಾ ಚರಣ್ಯಾತ್ || – ಅಥರ್ವವೇದ, ಕಾಂಡ ೭, ಸೂಕ್ತ ೨೯, ಋಚಾ ೧
ಅರ್ಥ : ಹೇ ಅಗ್ನಿ ಮತ್ತು ವಿಷ್ಣು ನಿಮ್ಮಿಬ್ಬರ ಮಹತ್ವ ಬಹಳ ದೊಡ್ಡದಿದೆ. ನೀವು ಗುಹ್ಯವಾದ ತುಪ್ಪವನ್ನು ಸೇವಿಸಿ ಮನೆಮನೆಗಳಲ್ಲಿ ಸಪ್ತ ರತ್ನಗಳನ್ನು ನೀಡಿರಿ. ಅದರಿಂದ ಪ್ರತಿಯೊಂದು ಯಜ್ಞದಲ್ಲಿ ನಿಮ್ಮ ನಾಲಿಗೆ ಆ ‘ಘೃತ’ (ತುಪ್ಪ) ರಸವನ್ನು ಪಡೆದುಕೊಳ್ಳುತ್ತದೆ.
ಈ ಮಂತ್ರದಲ್ಲಿ ಮನೆಗೆ ‘ದಮ’ ಈ ಶಬ್ದವನ್ನು ಬಳಸಲಾಗಿದೆ. ಮಂತ್ರದಲ್ಲಿನ ‘ದಮೆ-ದಮೆ’, ಅಂದರೆ ಮನೆಮನೆಗಳಲ್ಲಿ ಎಂದಾಗುತ್ತದೆ. ಇಂಗ್ಲಿಷ್‌ನ ‘`Domestic’ ಈ ಶಬ್ದದ ಮೂಲ ಸಂಸ್ಕೃತ ಶಬ್ದ ‘ದಮ’ ಆಗಿದೆ.
೪ ಇ. ರಾಮಾಯಣ : ರಾಜಾ ದಶರಥನ ಸಮಯ ದಲ್ಲಿ ನಮ್ಮ ರಾಷ್ಟ್ರದಲ್ಲಿ ವಾಸ್ತುಶಾಸ್ತ್ರವು ಉನ್ನತ ಶಿಖರದಲ್ಲಿತ್ತು. ಅಯೋಧ್ಯಾ ನಗರವನ್ನು ಸಂಪೂರ್ಣ ವಾಸ್ತುಶಾಸ್ತ್ರಾನುಸಾರ ರಚಿಸಲಾಗಿತ್ತು. ಅದರ ಪ್ರಮಾಣವು ಮುಂದಿನಂತಿದೆ.
ಆಯತಾ ದಶ ದ್ವೇ ಚ ಯೋಜನಾನಿ ಮಹಾಪುರೀ |
ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತ ಮಹಾಪಥಾ ||
ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ |
ಮುಕ್ತಪುಷ್ಪಾವಕೀರ್ಣೇಣ ಜಲಸಿಕ್ತೇನ ನಿತ್ಯಶಃ ||
ತಾಂ ತು ರಾಜಾ ದಶರಥೋ ಮಹಾರಾಷ್ಟ್ರ್ರ ವಿವರ್ಧನಃ |
ಪುರೀಮಾವಾಸಯಾಮಾಸ ದಿವಿ ದೇವಪತಿರ್ಯಥಾ ||
ಕಪಾಟಕೋರಣವತೀಂ ಸುವಿಭಕ್ತಾಂತರಾಪಣಾಮ್ |
ಸರ್ವಯಂತ್ರಾಯುಧವತೀಮುಷಿತಾಂ ಸರ್ವಶಿಲ್ಪಿಭಿಃ ||
– ರಾಮಾಯಣ, ಬಾಲಕಾಂಡ, ಅಧ್ಯಾಯ ೫, ಶ್ಲೋಕ ೭ ರಿಂದ ೧೦
ಅರ್ಥ : ಈ ಮಹಾಪುರಿ (ಅಯೋಧ್ಯೆ) ೧೨ ಯೋಜನ (೬೪ ಮೈಲಿ, ಅಂದರೆ ಸುಮಾರು ೯೬ ಕಿ.ಮೀ.) ಉದ್ದ ಮತ್ತು ೩ ಯೋಜನ (೧೬ ಮೈಲಿ, ಅಂದರೆ ಸುಮಾರು ೨೪ ಕಿ.ಮೀ.) ಅಗಲವಿತ್ತು. ಇದರಲ್ಲಿ ಸರಿಯಾದ ಪದ್ಧತಿಯಿಂದ ವಿಭಜಿಸಿದ ಮಹಾಪಥ ಇರುವ ರಾಜಮಾರ್ಗಗಳಿದ್ದವು. ಅದರ ಮೇಲೆ ಪ್ರತಿದಿನ ನೀರಿನ ಪ್ರೋಕ್ಷಣೆ ಮತ್ತು ಪುಷ್ಪವೃಷ್ಟಿ ಆಗುತ್ತಿತ್ತು. ಆ ಪುರಿಯಲ್ಲಿ ರಾಜಾ ದಶರಥನು ಇಂದ್ರನಂತೆ ವಾಸಿಸುತ್ತಿದ್ದನು. ಆ ಪುರಿಯಲ್ಲಿ ಕವಾಟ, ತೋರಣ, ಸುವಿಭಕ್ತ ಮಾರುಕಟ್ಟೆ (ಬೇರೆ ಬೇರೆ ವಸ್ತುಗಳಿಗನುಸಾರ ವಿಭಜಿಸಿದ ಉದಾ. ಬಟ್ಟೆ, ಮಸಾಲೆ, ಧಾನ್ಯ ಇವುಗಳ ವರ್ಗೀಕೃತ ಮಾರುಕಟ್ಟೆ) ಇದ್ದವು, ಹಾಗೆಯೇ ಅಲ್ಲಿ ಎಲ್ಲ ಪ್ರಕಾರದ ಯಂತ್ರ ಮತ್ತು ಆಯುಧಗಳಿದ್ದವು. ರಾಜಾ ದಶರಥನಿಂದ ಮಾಡಲಾಗುತ್ತಿದ್ದ ಯಜ್ಞಗಳಲ್ಲಿ ಯಜ್ಞೀಯ ವಾಸ್ತುಶಾಸ್ತ್ರ (ಶುಲ್ಬಶಾಸ್ತ್ರ) ಪ್ರಕಾರ ಯಜ್ಞಶಾಲೆಗಳನ್ನು ನಿರ್ಮಿಸಿದ ಚರ್ಚೆಯು ಕಂಡುಬರುತ್ತದೆ. ಅದರಲ್ಲಿ ೨೧ ಕಂಬಗಳು, ಇಟ್ಟಿಗೆಗಳು ಮತ್ತು ೨೧ ರತ್ನಗಳನ್ನು ಉಪಯೋಗಿಸಲಾಗಿತ್ತು. ಯಜ್ಞಮಂಟಪದ ಶೋಭೆಯನ್ನು ಹೆಚ್ಚಿಸಲು ಸುವರ್ಣದಿಂದ ಅಲಂಕರಿಸಲಾಗಿತ್ತು.
ಕಾರಿತಾ ಸರ್ವ ಏವೈತೇ ಶಾಸ್ತ್ರಜ್ಞೈರ್ಯಜ್ಞಕೋವಿದೈಃ |
ಶೋಭಾರ್ಥಂ ತಸ್ಯ ಯಜ್ಞಸ್ಯ ಕಾಂಚನಾಲಂಕೃತಾ ಭವನ್ ||
ಏಕವಿಂಶತಿ ಯೂಪಾಸ್ತ ಏಕವಿಂಶತ್ಯರತ್ನಯಃ |
ವಾಸೋಭಿರೇಕವಿಂಶದ್ಭಿರೇಕೈಕಂ ಸಮಲಂಕೃತಾಃ ||
– ರಾಮಾಯಣ, ಬಾಲಕಾಂಡ, ಅಧ್ಯಾಯ ೧೪, ಶ್ಲೋಕ ೨೪, ೨೫
ಅರ್ಥ : ದಶರಥ ರಾಜನು ಯಾವ ಯಜ್ಞಮಂಟಪಗಳನ್ನು ನಿರ್ಮಿಸಿದನೋ, ಅವೆಲ್ಲ ಯಜ್ಞಶಾಸ್ತ್ರ ತಿಳಿದ ಪಂಡಿತರು (ಶಾಸ್ತ್ರಜ್ಞರು) ನಿಯಮಾನುಸಾರ ಕಟ್ಟಿದರು. ಆ ಯಜ್ಞದ ಶೋಭೆಗಾಗಿ ಎಲ್ಲ ಭವನಗಳನ್ನು (ಮಂದಿರಗಳು, ಮಂಟಪ ಇತ್ಯಾದಿ) ಚಿನ್ನದ ಅಲಂಕಾರಗಳಿಂದ ಸಜ್ಜುಗೊಳಿಸಲಾಗಿತ್ತು. ಅಲ್ಲಿ ೨೧ ಯೂಪ (ಯಜ್ಞಸ್ತಂಭ)ಗಳನ್ನು ನಿರ್ಮಿಸಲಾಗಿತ್ತು, ಅವು ೨೧ ಪ್ರಕಾರದ ಅಮೂಲ್ಯ ರತ್ನಗಳಿಂದ ಅಲಂಕೃತವಾಗಿದ್ದವು ಮತ್ತು ಸುಂದರ ವಸ್ತ್ರಗಳಿಂದ ಅವುಗಳನ್ನು ಸುಶೋಭಿತಗೊಳಿಸಲಾಗಿತ್ತು.
೪ ಈ. ಮಹಾಭಾರತ : ಮಹಾಭಾರತದಲ್ಲಿ ಅನೇಕ ಕಡೆಗಳಲ್ಲಿ ವಾಸ್ತುಶಾಸ್ತ್ರವನ್ನು ಉಪಯೋಗಿಸುತ್ತಿದ್ದ ಉಲ್ಲೇಖಗಳು ದೊರೆಯುತ್ತವೆ. ತನ್ನ ಶಿಷ್ಯರಿಗೆ ಶಸ್ತ್ರಾಸ್ತ್ರಗಳ ಪ್ರದರ್ಶನ ಮಾಡಲು ದ್ರೋಣಾಚಾರ್ಯರು ರಂಗಮಂಟಪವನ್ನು ಸಿದ್ಧಪಡಿಸಿಕೊಂಡಿದ್ದರು. ಅದನ್ನು ಸಿದ್ಧಪಡಿಸುವಾಗ ಅವರು ವಾಸ್ತುಶಾಸ್ತ್ರವನ್ನು ಸಂಪೂರ್ಣ ಉಪಯೋಗಿಸಿದ್ದರು.
ಭಾರದ್ವಾಜೋ ಮಹಾಪ್ರಾಜ್ಞೋ ಮಾಪಯಾಮಾಸ ಮೇದಿನೀಮ್ |
ಸಮಾಮವೃಕ್ಷಾಂ ನಿರ್ಗುಲ್ಮಾಮುದಕ್ಪ್ರಸ್ರವಣಾನ್ವಿತಮ್ ||
ತಸ್ಯಾಂ ಭೂಮೌ ಬಲಿಂ ಚಕ್ರೇ ತಿಥೌ ನಕ್ಷತ್ರಪೂಜಿತೇ |
ಅವಘೃಷ್ಟೇ ಸಮಾಜೇ ಚ ತದರ್ಥಂ ವದತಾಂ ವರಃ ||
ರಂಗಭೂಮೌ ಸುವಿಪುಲಂ ಶಾಸ್ತ್ರದೃಷ್ಟಂ ಯಥಾವಿಧೀ |
ಪ್ರೇಕ್ಷಾಗಾರಂ ಸುವಿಹೀತಂ ಚಕ್ರುಸ್ತೇ ತಸ್ಯ ಶಿಲ್ಪಿನಃ ||
– ಮಹಾಭಾರತ, ಆದಿಪರ್ವ, ಅಧ್ಯಾಯ ೧೩೩, ಶ್ಲೋಕ ೮ ರಿಂದ ೧೧
ಅರ್ಥ : ಭಾರದ್ವಾಜ ಋಷಿಗಳು ಭೂಮಿಯನ್ನು ಪರೀಕ್ಷಿಸಿ ಅದರ ಮಾಪನ ಮಾಡಿದರು. ಆ ಭೂಮಿಯಲ್ಲಿ ಮರಗಿಡಗಳು ಇರಲಿಲ್ಲ. ಅದರ ಇಳಿಜಾರು ಉತ್ತರ ದಿಕ್ಕಿನ ಕಡೆಗಿತ್ತು. ದ್ರೋಣಾಚಾರ್ಯರು ವಾಸ್ತುಪೂಜೆಗೆ ಡಂಗುರ ಸಾರಿಸಿ ಅನೇಕ ವೀರರನ್ನು ಆಮಂತ್ರಿಸಿದರು ಮತ್ತು ಉತ್ತಮ ನಕ್ಷತ್ರ ಇರುವ ತಿಥಿಯಂದು ವಾಸ್ತುಪೂಜೆ ಮಾಡಿದರು. ಅದರ ನಂತರ ಅವರ ಶಿಲ್ಪಿಗಳು ಆ ರಂಗಭೂಮಿಯಲ್ಲಿ (ಯಾವ ಸ್ಥಳದಲ್ಲಿ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಲಾಗುತ್ತದೆಯೋ) ವಾಸ್ತುಶಾಸ್ತ್ರಾನುಸಾರ ಒಂದು ವಿಶಾಲ ಪ್ರೇಕ್ಷಕಗೃಹದ ಅಡಿಪಾಯ ರಚಿಸಿದರು. ಮಹಾಭಾರತ ಕಾಲದಲ್ಲಿ ವಾಸ್ತುಶಾಸ್ತ್ರವು ಬಹಳಷ್ಟು ಸಮೃದ್ಧವಾಗಿತ್ತು.
ಲಾಕ್ಷಾಗೃಹ ಪ್ರಕರಣದಿಂದ ನಮಗೆ ಇದು ಗಮನಕ್ಕೆ ಬರುತ್ತದೆ. ದುರ್ಯೋಧನನು ಪುರೋಚನನಿಗೆ ಚತುಃಶಾಲಾ ಭವನ ನಿರ್ಮಿಸಲು ಆಜ್ಞೆಯನ್ನು ನೀಡಿದ್ದನು. ಅದರಲ್ಲಿ ತುಪ್ಪ, ಎಣ್ಣೆ, ಹಾಗೆಯೇ ಅರಗಿನ ಪ್ರಯೋಗ ಮಾಡಲು ಹೇಳಲಾಗಿತ್ತು.
ತತ್ರ ಗತ್ವಾ ಚತುಃಶಾಲಂ ಗೃಹಂ ಪರಮಸಂವೃತಮ್ |
ನಗರೋಪಾಂತಮಾಶ್ರಿತ್ಯ ಕಾರಯೇಥಾ ಮಹಾಧನಮ್ ||
ಶಣಸರ್ಜರಸಾದೀನಿ ಯಾನಿ ದ್ರವ್ಯಾಣಿ ಕಾನಿಚಿತ್ |
ಆಗ್ನೇಯಾನ್ಯುತ ಸಂತೀಹ ತಾನಿ ತತ್ರ ಪ್ರದಾಪಯ ||
ಸರ್ಪಿಸ್ತೈಲವಸಾಭಿಶ್ಚ ಲಾಕ್ಷಯಾ ಚಾಪ್ಯನಲ್ಪಯಾ |
ಮೃತ್ತಿಕಾಂ ಮಿಶ್ರಯಿತ್ವಾ ತ್ವಂ ಲೇಪಂ ಕುಡ್ಯೇಷು ದಾಪಯ ||
– ಮಹಾಭಾರತ, ಆದಿಪರ್ವ, ಅಧ್ಯಾಯ ೧೩೨, ಶ್ಲೋಕ ೮ ರಿಂದ ೧೦
ಅರ್ಥ : ಅಲ್ಲಿ ನಗರದ ಗಡಿಯಲ್ಲಿ ಒಂದು ಭವ್ಯವಾದ ಚತುಃಶಾಲಾ ಭವನವನ್ನು (೪ ದಿಕ್ಕುಗಳಲ್ಲಿರುವ ದೊಡ್ಡ ಭವನ) ಬಹಳಷ್ಟು ಧನವನ್ನು ಉಪಯೋಗಿಸಿ ಸಿದ್ಧಪಡಿಸಿದ್ದರು. ಅಲ್ಲಿ ಸಾಲ, ಧೂಪ ಇತ್ಯಾದಿ ಜ್ವಲನಶೀಲ ದ್ರವ್ಯಗಳನ್ನೆಲ್ಲ ಅಲ್ಲಿ ತಂದು ಉಪಯೋಗಿಸಲಾಗಿತ್ತು. ತುಪ್ಪ, ಎಣ್ಣೆ ಮತ್ತು ಅರಗನ್ನು ಉಪಯೋಗಿಸಿ ಮಣ್ಣನ್ನು ಮಿಶ್ರಣ ಮಾಡಿ ಲೇಪ ಸಿದ್ಧಪಡಿಸಿದ್ದರು ಮತ್ತು ಅದನ್ನು ಗೋಡೆಗಳಿಗೆ ಲೇಪಿಸಿದ್ದರು.
೪ ಉ. ಅನೇಕ ಪುರಾಣಗಳು ಮತ್ತು ಸ್ಮೃತಿಗ್ರಂಥಗಳಲ್ಲಿ ವಾಸ್ತುಶಾಸ್ತ್ರದ ಉಲ್ಲೇಖವಿದೆ. ಹಿಂದೂ ಧರ್ಮದ ಇತರ ಪಂಥಗಳಲ್ಲಿಯೂ ವಾಸ್ತುಶಾಸ್ತ್ರದ ಉಲ್ಲೇಖವಿದೆ. ಜೈನ ಸಂಪ್ರದಾಯದಲ್ಲಿ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ಪ್ರಾಕೃತ ಭಾಷೆಗಳಲ್ಲಿ ವಾಸ್ತು ಗ್ರಂಥಗಳನ್ನು ನಿರ್ಮಿಸಲಾಯಿತು. ಪ್ರಾಕೃತ ಭಾಷೆಯಲ್ಲಿ ವಾಸ್ತುತಜ್ಞನಿಗೆ ‘ಥವಯಿ’ ಎಂದು ಹೇಳಲಾಗಿದೆ.
ಈಜಿಪ್ಟ್‌ನ ಪಿರಾಮಿಡ್‌ಗಳಲ್ಲಿ ಕೆಲವು ಕಡೆ ವೈಷ್ಣವ ತಿಲಕ ಹಚ್ಚಿರುವ ಕುಶಲಕರ್ಮಿಗಳ ಚಿತ್ರಗಳು ಕಂಡುಬಂದಿವೆ, ಅಂದರೆ ‘ಆ ಪಿರಾಮಿಡ್‌ಗಳ ರಚನೆ ಮಾಡಿದವರು ಭಾರತೀಯರಾಗಿದ್ದರು’, ಎಂದು ಇದರಿಂದ ಗಮನಕ್ಕೆ ಬರುತ್ತದೆ. ಅದೇ ರೀತಿ ಇಟಲಿಯ ವ್ಯಾಟಿಕನ್ ಸಿಟಿಯಲ್ಲಿ ನಿಂತಿರುವ ದೊಡ್ಡ ದೊಡ್ಡ ಶಿವಲಿಂಗಗಳನ್ನು ಇಂದಿಗೂ ನಾವು ನೋಡಬಹುದು. ಅಮೆರಿಕದ ಪುರಾತತ್ವ ಉತ್ಖನನದಲ್ಲಿ ಶ್ರೀ ಗಣೇಶನ ಮೂರ್ತಿ ಸಿಕ್ಕಿದೆ. ವಾಸ್ತುಶಾಸ್ತ್ರದ ಕುರಿತಾದ ಅನೇಕ ಗ್ರಂಥಸಂಪತ್ತು, ಸಂಸ್ಕೃತ, ಹಾಗೆಯೇ ಪ್ರಾಕೃತ ಭಾಷೆಯಲ್ಲಿನ ಗ್ರಂಥಗಳನ್ನು ಮುಸಲ್ಮಾನ ಆಕ್ರಮಣಕಾರರು ಸುಟ್ಟು ನಾಶಪಡಿಸಿದ್ದರಿಂದ ಸಂಪೂರ್ಣ ವಿಶ್ವಕ್ಕೆ ಉಪಯುಕ್ತವಾಗಿದ್ದ ಜ್ಞಾನವು ನಾಶವಾಯಿತು, ಹಾಗೆಯೇ ಅನೇಕ ಮಂದಿರಗಳನ್ನು ನಾಶಪಡಿಸಿದ್ದರಿಂದ ವಾಸ್ತುಕಲೆಯ ಉತ್ತಮ ಉದಾಹರಣೆಯಾಗಿರುವ ಅನೇಕ ಮಂದಿರಗಳು ನಾಶವಾದವು.
೫. ವಾಸ್ತುಶಾಸ್ತ್ರದ ಶಾಖೆಗಳು
ವಾಸ್ತುಶಾಸ್ತ್ರ ಎಂದರೆ ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿದೆ; ಆದರೆ ಅದು ವಿಶಾಲ ವಿಷಯವಾಗಿದೆ. ಆದ್ದರಿಂದ ಅದರ ಅನೇಕ ಶಾಖೆಗಳಿವೆ. ಯಜ್ಞೀಯ ವಾಸ್ತುಶಾಸ್ತ್ರ (ಶುಲ್ಬಶಾಸ್ತ್ರ), ಗೃಹವಾಸ್ತುಶಾಸ್ತ್ರ, ನಗರ (ಗ್ರಾಮ) ವಾಸ್ತುಶಾಸ್ತ್ರ, ಪ್ರಾಸಾದ (ದೇವಸ್ಥಾನ) ವಾಸ್ತುಶಾಸ್ತ್ರ, ಉದ್ಯಾನ ವಾಸ್ತುಶಾಸ್ತ್ರ, ಜಲಾಶಯ ವಾಸ್ತುಶಾಸ್ತ್ರ, ಹಾಗೆಯೇ ಇದನ್ನು ಹೊರತುಪಡಿಸಿ ವಿಮಾನಶಾಸ್ತ್ರ, ಯಂತ್ರ ವಾಸ್ತುಶಾಸ್ತ್ರ ಈ ಎರಡೂ ವಾಸ್ತುಶಾಸ್ತ್ರದ ಶಾಖೆಗಳಾಗಿವೆ.
(ಉಲ್ಲೇಖ ಗ್ರಂಥಗಳು : ವಿಶ್ವಕರ್ಮಪ್ರಕಾಶ, ಮಯಮತಮ್, ಸಮರಾಂಗಣಸೂತ್ರಧಾರ, ಅಪರಾಜಿತಪೃಚ್ಛಾ, ಮಾನಸಾರ, ವಾಲ್ಮೀಕಿ ರಾಮಾಯಣ, ಮಹಾಭಾರತ)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !