ಬ್ರಿಟನ್‌: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !

ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಹಿಂದೂಗಳು

​ಲಂಡನ್ – ಲಂಡನ್‌ ನಿಂದ 120 ಕಿ.ಮೀ ದೂರದಲ್ಲಿರುವ ಪೀಟರ್ ಬರೋದಲ್ಲಿನ 40 ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಮತ್ತು ‘ಸಮುದಾಯ ಕೇಂದ್ರ’ ಹೊಂದಿರುವ ‘ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್’ ಜಾಗದ ಮಾರಾಟದ ಕುರಿತು ವಿವಾದ ಉಂಟಾಗಿದೆ. ‘ಪೀಟರ್‌ ಬರೋ ಸಿಟಿ ಕೌನ್ಸಿಲ್’ ಸಂಸ್ಥೆಯು ಹರಾಜಿನ ನಂತರ ಈ ಜಾಗವನ್ನು ‘ಯುನೈಟೆಡ್ ಕಿಂಗ್‌ ಡಮ್ ಇಸ್ಲಾಮಿಕ್ ಮಿಷನ್’ ಎಂಬ ಸಂಸ್ಥೆಗೆ ಮಾರಾಟ ಮಾಡಲು ನಿರ್ಧರಿಸಿದೆ.

​ಇದೇ ಪರಿಸರದಲ್ಲಿ ‘ಭಾರತ ಹಿಂದೂ ಸಮಾಜ’ದ ದೇವಸ್ಥಾನವಿದೆ. ಇದು ನಗರ ಮತ್ತು ಸುತ್ತ-ಮುತ್ತಲಿನ ಸಾವಿರಾರು ಹಿಂದೂಗಳ ಪ್ರಮುಖ ಪೂಜಾ ಸ್ಥಳವಾಗಿದೆ. ಈ ನಿರ್ಧಾರದಿಂದ ಆಕ್ರೋಶಗೊಂಡ ‘ಭಾರತ ಹಿಂದೂ ಸಮಾಜ’ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಮಾರಾಟದ ಪ್ರಕ್ರಿಯೆಯನ್ನು ಪ್ರಶ್ನಿಸಿದೆ. ‘ಪೀಟರ್‌ ಬರೋ ಸಿಟಿ ಕೌನ್ಸಿಲ್’ ದೇವಸ್ಥಾನದ 40 ವರ್ಷಗಳ ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ‘ಭಾರತ ಹಿಂದೂ ಸಮಾಜ’ ಸಂಘಟನೆ ಆರೋಪಿಸಿದೆ. ಹರಾಜಿನ ಮೌಲ್ಯಮಾಪನದಲ್ಲೂ ಗಂಭೀರ ಲೋಪದೋಷಗಳಿದ್ದವು. ಫೆಬ್ರವರಿ 2026 ರಲ್ಲಿ ಉಚ್ಚ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿ, ‘ಪೀಟರ್‌ ಬರೋ ಸಿಟಿ ಕೌನ್ಸಿಲ್’ಗೆ ಈ ಜಾಗವನ್ನು ಮಾರಾಟ ಮಾಡದಂತೆ ತಡೆಹಿಡಿದಿತ್ತು.

ಮಾರಾಟದ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿದೆಯೇ ಅಥವಾ ಇಲ್ಲವೇ?, ಎಂಬುದನ್ನು ಪರಿಶೀಲಿಸಲಾಗುವುದು !

​ಈಗ ನ್ಯಾಯಾಂಗ ಮರುಪರಿಶೀಲನೆಯಲ್ಲಿ ‘ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಕಾನೂನುಬದ್ಧವಾಗಿತ್ತೇ ಅಥವಾ ಇಲ್ಲವೇ?’ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ತಮ್ಮ ವಿರೋಧವು ‘ಯುನೈಟೆಡ್ ಕಿಂಗ್‌ ಡಮ್ ಇಸ್ಲಾಮಿಕ್ ಮಿಷನ್’ ಸಂಸ್ಥೆಯ ವಿರುದ್ಧವಲ್ಲ, ‘ಪೀಟರ್‌ ಬರೋ ಸಿಟಿ ಕೌನ್ಸಿಲ್’ ತೆಗೆದುಕೊಂಡ ನಿರ್ಧಾರ ಮತ್ತು ಅನುಸರಿಸಿದ ಪ್ರಕ್ರಿಯೆಯ ವಿರುದ್ಧವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ. ​ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಸರಕಾರಿ ಧನಸಹಾಯದ ಕಡಿತದಿಂದಾಗಿ ಬ್ರಿಟನ್‌ ನ ಹಲವು ಸ್ಥಳೀಯ ‘ಕೌನ್ಸಿಲ್‌’ಗಳು ತಮ್ಮ ಸಾಮಾಜಿಕ ಕಟ್ಟಡಗಳು, ಕ್ರೀಡಾ ಕೇಂದ್ರಗಳು ಮುಂತಾದವುಗಳನ್ನು ಮಾರಾಟ ಮಾಡಿ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಿವೆ.

ದೇವಸ್ಥಾನ ಮುಚ್ಚಿದರೆ ಹಿಂದೂಗಳು 64 ಕಿ.ಮೀ. ದೂರ ಹೋಗಬೇಕಾಗುತ್ತದೆ !

​’ಭಾರತ ಹಿಂದೂ ಸಮಾಜ’ದ ಪ್ರಕಾರ, ಈ ದೇವಸ್ಥಾನವು ಈ ಭಾಗದ ಸುಮಾರು 4,500 ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ದೇವಸ್ಥಾನ ಮುಚ್ಚಿದರೆ, ಭಕ್ತರು ಪೂಜೆ ಮಾಡಲು ಕೇಂಬ್ರಿಡ್ಜ್ (56 ಕಿ.ಮೀ.) ಅಥವಾ ಲೆಸ್ಟರ್ (64 ಕಿ.ಮೀ.) ದೂರ ಹೋಗಬೇಕಾಗುತ್ತದೆ.

ಸಂಪಾದಕೀಯ ನಿಲುವು

ಮುಸ್ಲಿಂ ಬಹುಸಂಖ್ಯಾತ ದೇಶವಿರಲಿ ಅಥವಾ ಕ್ರಿಶ್ಚಿಯನ್ ಬಹುಸಂಖ್ಯಾತ ದೇಶವಿರಲಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಯಾವಾಗಲೂ ಅನ್ಯಾಯವೇ ನಡೆಯುತ್ತದೆ; ಆದರೆ ಹಿಂದೂಗಳ ಮತಗಳಿಂದ ಗೆದ್ದು ಅಧಿಕಾರಕ್ಕೆ ಬರುವ ಭಾರತದ ಯಾವುದೇ ಸರಕಾರವು ಅವರ ಹಿತಾಸಕ್ತಿಗಾಗಿ ಎಂದಿಗೂ ದೃಢವಾದ ಕ್ರಮ ತೆಗೆದುಕೊಳ್ಳುವುದಿಲ್ಲ. 100 ಕೋಟಿ ಹಿಂದೂಗಳಿಗೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿ !