ಬ್ರಾಹ್ಮಣ್ಯವು ಸದ್ವರ್ತನೆಯನ್ನು ಅವಲಂಬಿಸಿರುವುದರಿಂದ ಬ್ರಾಹ್ಮಣನು ಸದ್ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು !

ಧರ್ಮದ ಬಗ್ಗೆ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

ಪ್ರಶ್ನೆ

ರಾಜನ್‌ ಕುಲೇನ ವೃತ್ತೇನ ಸ್ವಾಧ್ಯಾಯೇನ ಶ್ರುತೇನ ವಾ |

ಬ್ರಾಹ್ಮಣ್ಯಂ ಕೇನ ಭವತಿ ಪ್ರಬ್ರೂಹ್ಯೋತತ್‌ ಸುನಿಶ್ಚಿತಮ್‌ || – ಯಕ್ಷಪ್ರಶ್ನೆ, ಶ್ಲೋಕ ೧೦೭

ಅರ್ಥ : ಯಕ್ಷನು ಕೇಳುತ್ತಾನೆ, ”ರಾಜಾ ಯುಧಿಷ್ಠಿರಾ, ಬ್ರಾಹ್ಮಣ್ಯ ಕುಲ, ವರ್ತನೆ, ಶಾಸ್ತ್ರಾಭ್ಯಾಸ ಮತ್ತು ವಿದ್ವತ್ತು ಇವುಗಳಲ್ಲಿ ಯಾವುದನ್ನು ಅವಲಂಬಿಸಿದೆ, ಎಂಬುದನ್ನು ಖಚಿತವಾಗಿ ಹೇಳು.

ಉತ್ತರ

ಶೃಣು ಯಕ್ಷ ಕುಲಂ ನೈವ ನ ಸ್ವಾಧ್ಯಾಯೋ ನ ಚ ಶೃತಮ್‌ |

ಕಾರಣಂ ಹಿ ದ್ವಿಜತ್ವೆ ತು ವೃತ್ತಮೇವ ನ ಸಂಶಯಃ ||

– ಯಕ್ಷಪ್ರಶ್ನೆ, ಶ್ಲೋಕ ೧೦೮

ವೃತ್ತಂ ಯತ್ರೇನ ಸಂರಕ್ಷ್ಯಂ ಬ್ರಾಹ್ಮಣೇನ ವಿಶೇಷತಃ ||

ಅಕ್ಷಿಣವೃತ್ತೋ ನ ಕ್ಷೀಣೋ ವೃತ್ತತಸ್ತು ಹತೋ ಹತಃ ||

– ಯಕ್ಷಪ್ರಶ್ನೆ, ಶ್ಲೋಕ ೧೦೯

ಚತುರ್ವೇದೋಪಿ ದುರ್ವೃತ್ತಃ ಸ ಶೂದ್ರಾದತಿರಿಚ್ಯತೆ ||

– ಯಕ್ಷಪ್ರಶ್ನೆ, ಶ್ಲೋಕ ೧೧೦

ಅರ್ಥ : ಯುಧಿಷ್ಠಿರನು ಹೇಳುತ್ತಾನೆ, “ಯಕ್ಷ, ಕೇಳು. ಬ್ರಾಹ್ಮಣ್ಯಕುಲದಿಂದ, ಶಾಸ್ತ್ರಾಭ್ಯಾಸದಿಂದ ಅಥವಾ ವಿದ್ವತ್ತಿನಿಂದಲ್ಲ ಬ್ರಾಹ್ಮಣ್ಯವು ಸದ್ವರ್ತನೆಯನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ವರ್ಣದ ಪುರುಷನು ಸದ್ವರ್ತನೆಯಿಂದಲೇ ಇರಬೇಕು. ಬ್ರಾಹ್ಮಣನು ಸದ್ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರಲ್ಲಿ ಸದ್ವರ್ತನೆಯ ಕೊರತೆ ಇಲ್ಲವೋ, ಅವನು ದುರ್ಬಲ ಅಥವಾ ಬಡವನಲ್ಲ; ಸದ್ವರ್ತನೆಯನ್ನು ಕಳೆದುಕೊಂಡ ವ್ಯಕ್ತಿಯು ಸತ್ತಂತೆಯೇ ಆಗಿದೆ. ನಾಲ್ಕೂ ವೇದಗಳಲ್ಲಿ ಪಾರಂಗತರಾಗಿದ್ದರು ಸಹ ದುರ್ವರ್ತನೆಯವರಾಗಿದ್ದರೆ, ಅವರನ್ನು ಶೂದ್ರರಿಗಿಂತಲೂ ಕನಿಷ್ಠರೆಂದು ತಿಳಿಯಬೇಕು.’’

ಸಾಮಾಜಿಕ ದುಃಸ್ಥಿತಿಗೆ ಬ್ರಾಹ್ಮಣರ ದೂಷಣೆ ತಪ್ಪು !

ಸುಧಾರಕರು ಮತ್ತು ಜಾತಿಯ ಸಂಘರ್ಷಗಳನ್ನು ಪ್ರಾರಂಭಿಸುವುದರಲ್ಲಿ ವೈಯಕ್ತಿಕ ಸ್ವಾರ್ಥವಿರುವ ಮುಖಂಡರು, ಬ್ರಾಹ್ಮಣರಿಗೆ ಬಹಳಷ್ಟು ಶಾಪಗಳನ್ನು ನೀಡಿದ್ದಾರೆ. ಎಲ್ಲಾ ಸಾಮಾಜಿಕ ದುಃಸ್ಥಿತಿಯ ಹೊಣೆಯನ್ನು ಬ್ರಾಹ್ಮಣರ ಮೇಲೆ ಅನುಕೂಲಕರವಾಗಿ ಹೊರಿಸಿದ್ದಾರೆ. ಏಕೆಂದರೆ ಇದು ಅತಿಶಯೋಕ್ತಿಯಾಗಿದೆ. ಇತರರನ್ನು ದೂಷಿಸುವ ಮೊದಲು, ಬ್ರಾಹ್ಮಣವರ್ಗವು ಅಂತರಾತ್ಮವನ್ನು ಅವಲೋಕಿಸಿ ತಮ್ಮ ನಡೆಯ ಬಗ್ಗೆ ಯೋಚಿಸಬೇಕು. ಯಾವ ವ್ಯಕ್ತಿಯಲ್ಲಿ ಬ್ರಾಹ್ಮಣತ್ವ ಇಲ್ಲವೋ, ಅವನು ಕೇವಲ ಬ್ರಾಹ್ಮಣ ಕುಲದಲ್ಲಿ ಜನಿಸಿದ ಮಾತ್ರಕ್ಕೆ ಅವನನ್ನು ಆರಾಧ್ಯ ಅಥವಾ ಗೌರವಾನ್ವಿತ ಎಂದು ಪರಿಗಣಿಸಬೇಕಿಲ್ಲ. ಚಾರಿತ್ರ್ಯಹೀನ ಬ್ರಾಹ್ಮಣನಿಗಿಂತ ಚಾಂಡಾಲನೂ ಉತ್ತಮ.

(‘ಶ್ವಪಚಂ ವರಿಷ್ಠಮ್’ |

– ಶ್ರೀಮದ್ಭಾಗವತ, ಸ್ಕಂಧ ೭, ಅಧ್ಯಾಯ ೯, ಶ್ಲೋಕ ೧೦)

ಅಂದರೆ : ‘ಚಾಂಡಾಲನು ಶ್ರೇಷ್ಠ’); ಆದರೆ ಈ ವಿಷಯವನ್ನು ಬ್ರಾಹ್ಮಣರು ಗಮನದಲ್ಲಿಡಲಿಲ್ಲ. ವಿಶೇಷವಾಗಿ ಪೇಶ್ವೆಗಳ ಆಳ್ವಿಕೆಯ ಉತ್ತರಾರ್ಧದಲ್ಲಿ ಬ್ರಾಹ್ಮಣರ ಪತನವಾಯಿತು. ಅವರು ಬ್ರಾಹ್ಮಣತ್ವದಿಂದ ಸಂಪೂರ್ಣ ದೂರವಾದರು. ಆ ಸಮಯದಲ್ಲಿ ಪ್ರಜೆಗೆ ‘ಬ್ರಾಹ್ಮಣ ಅಧಿಕಾರಿಗಳಿಗಿಂತ ಮೊಘಲರೇ ಮೇಲು’ ಎಂದು ಅನಿಸಲು ಪ್ರಾರಂಭಿಸಿತ್ತು. ಆದ್ದರಿಂದಲೇ, ವಿದೇಶಿ ಇಂಗ್ಲಿಷರ ಕುಟಿಲ ಆಡಳಿತಕ್ಕೂ ಆರಂಭದಲ್ಲಿ ಒಂದಿಷ್ಟು ಸ್ವಾಗತ ಸಿಕ್ಕಿತು. ಚಾರಿತ್ರ್ಯಸಂಪನ್ನನಾದ ಬ್ರಾಹ್ಮಣನ ಸ್ಥಾನವು ಸಮಾಜದಲ್ಲಿ ಇಂದಿಗೂ ಗೌರವಾನ್ವಿತವಾಗಿದೆ. ಒಂದು ವೇಳೆ ಬ್ರಾಹ್ಮಣೇತರನು ಚಾರಿತ್ರ್ಯಸಂಪನ್ನನಾಗಿದ್ದರೆ, ಆಗ ಅವನನ್ನು ಸತ್ಪುರುಷನೆಂದು ವಂದಿಸಬೇಕು ಎಂಬುದು ನಮ್ಮ ಪರಂಪರಾಗತ ನಂಬಿಕೆಯಾಗಿದೆ. ರಾಮೇಶ್ವರ ಭಟ್ಟರಂತಹ ಅಹಂಕಾರಿ ವಿದ್ವಾಂಸ ಬ್ರಾಹ್ಮಣನು ಸಹ ಜಗದ್ಗುರು ಸಂತ ಶ್ರೀ ತುಕಾರಾಮ ಮಹಾರಾಜರ ಕಾಲು ಗಳಿಗೆ ತಲೆಬಾಗಿದನು ಮತ್ತು ಶ್ರೀ ತುಕಾರಾಮರನ್ನು ಸಾಕ್ಷಾತ್‌ ಬ್ರಹ್ಮಸ್ವರೂಪರೆಂದು ಪರಿಗಣಿಸಲು ಪ್ರಾರಂಭಿಸಿದನು. ಈ ವಿಷಯವನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು.

ಇಂದಿನ ಕಾಲದಲ್ಲಿ ಬ್ರಾಹ್ಮಣರನ್ನು ರಕ್ಷಿಸುವುದು ಅಗತ್ಯ !

ಇಂದು ಕಾಲ ಬದಲಾಗಿದೆ, ಪರಿಸ್ಥಿತಿ ಬಿಕ್ಕಟ್ಟಾಗಿದೆ. ಹಾಗಾದರೆ, ಬ್ರಾಹ್ಮಣನು ತನ್ನ ಚಾರಿತ್ರ್ಯ ಕಾಪಾಡಿಕೊಳ್ಳುವುದು ಹೇಗೆ ? ಈ ಪ್ರಶ್ನೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದೆ ಎಂಬುದನ್ನು ನನಗೆ ಹೇಳಲು ಸಾಧ್ಯವಿಲ್ಲ. ಸಂಸಾರದ ನಿರ್ವಹಣೆಗೆ ಬೇಕಾದ ಸಂಪತ್ತನ್ನು ಗಳಿಸಲು ಬ್ರಾಹ್ಮಣನು ಯಾವ ಉದ್ಯೋಗವನ್ನು ಆರಿಸಬೇಕು ಎಂಬುದರ ಕುರಿತು ಶಾಸ್ತ್ರಗಳು ಹೇಳಿರುವ ನಿಯಮಗಳನ್ನು ಯಥಾವತ್ತಾಗಿ ಪಾಲಿಸುವುದು ಇಂದು ಕಷ್ಟಕರವಾಗಿದೆ. ಬ್ರಾಹ್ಮಣ್ಯವು ಅವನ ಉದ್ಯೋಗವನ್ನಲ್ಲ, ಬದಲಿಗೆ ಅವನ ನಡತೆಯನ್ನು ಅವಲಂಬಿಸಿರುತ್ತದೆ. ಗೀತೆಯಲ್ಲಿ ಬ್ರಾಹ್ಮಣನ ಕರ್ಮಗಳನ್ನು ಹೇಳುವಾಗ, ಸ್ವಭಾವ ಮತ್ತು ನಡತೆಗೆ ಸಂಬಂಧಿತ ಗುಣಗಳನ್ನು ಉಲ್ಲೇಖಿಸಲಾಗಿದೆ. ಅಲ್ಲಿ ಉದ್ಯೋಗದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ, ಆಪದ್ಧರ್ಮ (ಕಷ್ಟದ ಪರಿಸ್ಥಿತಿಯಲ್ಲಿನ ಧರ್ಮ) ಎಂಬಂತೆ ಬ್ರಾಹ್ಮಣನು ಯಾವುದೇ ವ್ಯವಸಾಯವನ್ನು ಮಾಡಬಹುದು. ಆದರೆ, ಯಾವುದೇ ಪರಿಸ್ಥಿತಿಯಲ್ಲಿ ಕೋಳಿ ಸಾಕಾಣಿಕೆ, ಮದ್ಯ ತಯಾರಿಕೆ ಅಥವಾ ಮಾರಾಟ ಮತ್ತು ಕಟುಕರ ವೃತ್ತಿಯನ್ನು (ಮಾಂಸ ವ್ಯಾಪಾರ) ಕನಿಷ್ಠ ಪಕ್ಷ ಬ್ರಾಹ್ಮಣನಾದರೂ ಮಾಡಬಾರದು. ಶಾಸ್ತ್ರಗಳು ನಿಷಿದ್ಧವೆಂದು ಹೇಳಿದ ಅನೇಕ ವ್ಯವಹಾರಗಳಿವೆ. ಉದಾಹರಣೆಗೆ ಹಾಲು-ತುಪ್ಪವನ್ನು ಮಾರಬಾರದು. ‘ರಾಜನ ಸೇವೆ (ಅಂದರೆ ಸರಕಾರಿ ನೌಕರಿ) ಮಾಡಬಾರದು’ ಎಂದೂ ಉಲ್ಲೇಖವಿದೆ. ಆದರೆ, ಇಂದು ಇದು ಸಾಧ್ಯವಾಗುತ್ತಿಲ್ಲ. ಸರಕಾರಿ ನೌಕರಿ ಪಡೆಯಲು ಪ್ರಯತ್ನಿಸುವುದೇ ಇಂದು ಬ್ರಾಹ್ಮಣರ ಮುಖ್ಯ ಉದ್ಯೋಗವಾದಂತೆ ಕಾಣುತ್ತದೆ. ಹಾಲು ಮಾರುವವರು, ದಿನಸಿ ಅಂಗಡಿ ನಡೆಸುವ ಬ್ರಾಹ್ಮಣರೂ ಬಹಳಷ್ಟಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದನ್ನು ಒಪ್ಪಿಕೊಳ್ಳಬೇಕು. ‘ಇದು ಬ್ರಾಹ್ಮಣನದ್ದಾಗಿದೆ, ಆತ ಭ್ರಷ್ಟನಲ್ಲ, ಲಂಚ ತೆಗೆದುಕೊಳ್ಳುವುದಿಲ್ಲ ಮತ್ತು ಅನ್ಯಾಯದ ಕೆಲಸಗಳನ್ನು ಮಾಡುವುದಿಲ್ಲ’ ಎಂಬ ವಿಶ್ವಾಸ ಸಮಾಜಕ್ಕೆ ಮೂಡಬೇಕು, ಅಲ್ಲವೇ ? ‘ಈ ಹಾಲನ್ನು ಬ್ರಾಹ್ಮಣರಿಂದ ತಂದಿದ್ದೇವೆ, ಇದರಲ್ಲಿ ನೀರು ಬೆರೆಸಿಲ್ಲ, ಕೆನೆಯನ್ನು ತೆಗೆದಿಲ್ಲ’, ‘ಈ ದಿನಸಿ ಸಾಮಾನು ಬ್ರಾಹ್ಮಣ ವ್ಯಾಪಾರಿಗಳಿಂದ ತಂದಿದ್ದೇವೆ, ಇದರಲ್ಲಿ ಕಲಬೆರಕೆ ಇರುವುದಿಲ್ಲ ಮತ್ತು ಅಳತೆಯಲ್ಲಿ ಮೋಸವಿರುವುದಿಲ್ಲ’ ಎಂಬ ಖಚಿತ ಭರವಸೆಯನ್ನು ಸಮಾಜಕ್ಕೆ ನೀಡಲು ಸಾಧ್ಯವಾಗಬೇಕು. ಹೀಗೆ ಮಾಡುವುದು ಒಂದು ರೀತಿಯಲ್ಲಿ ಬ್ರಾಹ್ಮಣತ್ವವನ್ನು ಸಂರಕ್ಷಿಸುವುದೇ ಆಗಿದೆ.

ವಿವಾಹ ಸಂಬಂಧದಲ್ಲಿ ಕುಲದ ವಿಚಾರ ಆಗಲೇಬೇಕು !

ಮಾನ-ಸನ್ಮಾನ, ಸಾಮಾಜಿಕ ಪ್ರತಿಷ್ಠೆಗಳು ಜನ್ಮದಿಂದ ಬ್ರಾಹ್ಮಣರಾಗಿರುವಿಕೆಯ ಮೇಲೆ ಅವಲಂಬಿತವಾಗಿರಬಾರದು, ಇದು ಸರಿಯಾದ ವಿಷಯ. ಗೌರವ, ಸನ್ಮಾನ ಮತ್ತು ಆದರವನ್ನು ಚಾರಿತ್ರ್ಯ ಮತ್ತು ಸದಾಚಾರ ನೋಡಿಯೇ ನೀಡಬೇಕು. ಆದರೆ, ವಿವಾಹ ಸಂಬಂಧಗಳ ವಿಚಾರದಲ್ಲಿ ಮಾತ್ರ ಕುಲದ (ವಂಶದ) ವಿಚಾರವನ್ನು ಖಂಡಿತ ಮಾಡಲೇಬೇಕು. ಅನುವಂಶಕ್ಕೆ ವಿಶಿಷ್ಟವಾದ ಮಹತ್ವವಿದೆ. ಅನೇಕ ಗುಣಗಳು ತಲೆಮಾರುಗಳಿಂದ ಬರುವ ಬೀಜದ ಮೇಲೆ (ವಂಶವಾಹಿಯ ಮೇಲೆ) ಅವಲಂಬಿಸಿರುತ್ತವೆ. ಓಟದ ಸ್ಪರ್ಧೆಯಲ್ಲಿ ಓಡುವ ಕುದುರೆಗಳು ಮತ್ತು ವಾಸನೆ ಗುರುತಿಸುವ ನಾಯಿಗಳ ವಿಷಯದಲ್ಲಿ ನಾವು ಇಂದಿಗೂ ಅನುವಂಶದ ಮಹತ್ವವನ್ನು ಕಟ್ಟುನಿಟ್ಟಾಗಿ ಪರಿಗಣಿಸುತ್ತೇವೆ. ಮನುಷ್ಯರ ವಿಷಯದಲ್ಲಿ ಇದು ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿದೆ. ಆದರೆ, ಇಲ್ಲಿ ನಾವು ಬುದ್ಧಿವಾದದ ಹೆಸರಿನಲ್ಲಿ ಅದನ್ನು ದುರ್ಲಕ್ಷಿಸುತ್ತೇವೆ. ಇದಕ್ಕೆ ವಿರುದ್ಧವಾಗಿ, ಅಂತರಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದು ಸರಿಯಲ್ಲ.

ಶೀಲ ಮತ್ತು ಚಾರಿತ್ರ್ಯವನ್ನು ಪರಿಗಣಿಸಬೇಕು !

ನಮ್ಮಲ್ಲಿನ ಕೆಲವು ಸುಧಾರಕ ಬುದ್ಧಿವಾದಿಗಳು, ‘ನಮ್ಮ ವಿರೋಧವು ಬ್ರಾಹ್ಮಣರೊಂದಿಗೆ ಅಲ್ಲ, ಬ್ರಾಹ್ಮಣ್ಯದೊಂದಿಗಿದೆ’ ಎಂದು ಹೇಳುತ್ತಾರೆ. ಆದರೆ, ‘ಬ್ರಾಹ್ಮಣ’ ಎಂಬ ಶಬ್ದವು ಶುದ್ಧ ಚಾರಿತ್ರ್ಯ ಮತ್ತು ಸದಾಚಾರದ ಪರ್ಯಾಯ ಪದವಾಗಿದೆ. ಅದರೊಂದಿಗೆ ವಿರೋಧ ಮಾಡಿ ಹೇಗೆ ತಾನೆ ಸಾಧ್ಯ ?

ವರ್ಣವ್ಯವಸ್ಥೆಯು ಜನನದ ಮೇಲೆಯೇ ಅವಲಂಬಿತವಾಗಿದೆ ಮತ್ತು ಅದು ಹಾಗೆಯೇ ಇರಬೇಕು. ಆದರೆ, ಮಾನಸನ್ಮಾನ ಮತ್ತು ಪ್ರತಿಷ್ಠೆಗಳಂತಹ ವಿಷಯಗಳು ಮಾತ್ರ ಜನನದ ಮೇಲೆ ಅವಲಂಬಿತವಾಗಿರಬಾರದು. ಅದಕ್ಕಾಗಿ ಶೀಲ ಮತ್ತು ಚಾರಿತ್ರ್ಯದ ಆಚರಣೆಯನ್ನೇ ಗಣನೆಗೆ ತೆಗೆದುಕೊಳ್ಳಬೇಕು.

– ಪ.ಪೂ. ಸ್ವಾಮಿ ವರದಾನಂದ ಭಾರತಿ (ಪೂರ್ವಾಶ್ರಮದ ಪ್ರಾ. ಅನಂತರಾವ ಆಠವಲೆ)

(ಸೌಜನ್ಯ : ಗ್ರಂಥ ‘ಯಕ್ಷಪ್ರಶ್ನೆ’)