ಭಾದ್ರಪದ ಹುಣ್ಣಿಮೆಯಂದು (೭.೯.೨೦೨೫) ಇರುವ ಖಗ್ರಾಸ ಚಂದ್ರಗ್ರಹಣದ ಮಾಹಿತಿ !

‘ರವಿವಾರ, ೭.೯.೨೦೨೫ (ಭಾದ್ರಪದ ಹುಣ್ಣಿಮೆ) ಈ ದಿನ ಖಗ್ರಾಸ ಚಂದ್ರಗ್ರಹಣವಿದ್ದು ಅದು ಭಾರತದಲ್ಲಿ ಎಲ್ಲೆಡೆ ಕಾಣಿಸಲಿದೆ. ಖಗ್ರಾಸ ಚಂದ್ರಗ್ರಹಣಕ್ಕೆ ಆಂಗ್ಲ ಭಾಷೆಯಲ್ಲಿ Total lunar eclipse ಎಂದು ಕರೆಯುತ್ತಾರೆ. ಖಗ್ರಾಸ್‌ ಚಂದ್ರಗಹಣವೆಂದರೆ ಯಾವಾಗ ಪೃಥ್ವಿ, ಚಂದ್ರ ಮತ್ತು ಸೂರ್ಯ ಒಂದೇ ನೇರ ರೇಖೆಯಲ್ಲಿ ಬರುತ್ತವೆ ಮತ್ತು ಪೃಥ್ವಿಯ ನೆರಳು ಚಂದ್ರನ ಮೇಲೆ ಪೂರ್ಣ ಬೀಳುತ್ತದೆ. ಅದರಿಂದ ಚಂದ್ರನು ಪೂರ್ಣ ಮುಚ್ಚಲ್ಪಟ್ಟಂತೆ ಕಾಣಿಸುತ್ತಾನೆ. ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯಂದೇ ಬರುತ್ತದೆ.

೧. ಗ್ರಹಣ ಕಾಣಿಸುವ ಪ್ರದೇಶಗಳು

‘ಈ ಚಂದ್ರಗ್ರಹಣ ಭಾರತ ಸಹಿತ ಸಂಪೂರ್ಣ ಏಷ್ಯಾಖಂಡ, ಆಫ್ರಿಕಾಖಂಡ, ಸಂಪೂರ್ಣ ಯುರೋಪ್, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ನಾರ್ವೆ ಮತ್ತು ಅಂಟಾಕ್ಟ್ರಿಕಾ ಈ ಪ್ರದೇಶಗಳಲ್ಲಿ ಕಾಣಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಎಲ್ಲೆಡೆ ಕಾಣಿಸಲಿದೆ.

೨. ಗ್ರಹಣದ ವೇಧ ಆರಂಭ

೨ ಅ. ಅರ್ಥ : ಚಂದ್ರಗ್ರಹಣದ ಮೊದಲು, ಚಂದ್ರನು ಪೃಥ್ವಿಯ ನೆರಳಿನೊಳಗೆ ಪ್ರವೇಶಿಸಲು ಪ್ರಾರಂಭಿಸುತ್ತಾನೆ. ಇದರಿಂದ ಅವನ ಬೆಳಕು ನಿಧಾನವಾಗಿ ಕಡಿಮೆಯಾಗಲು ಆರಂಭವಾಗುತ್ತದೆ. ಇದನ್ನೇ ‘ಗ್ರಹಣದ ವೇಧ ಆರಂಭ’ವಾಯಿತು ಎಂದು ಹೇಳುತ್ತಾರೆ.

೨ ಆ. ಗ್ರಹಣದ ವೇಧಾರಂಭ : ಈ ಗ್ರಹಣವು ರಾತ್ರಿಯ ಎರಡನೇ ಪ್ರಹರದಲ್ಲಿ ಪ್ರಾರಂಭವಾಗುವುದರಿಂದ, ಮೂರು ಪ್ರಹರಗಳ ಮೊದಲು, ಅಂದರೆ ಮಧ್ಯಾಹ್ನ ೧೨.೩೭ ರಿಂದ ಗ್ರಹಣದ ಮೋಕ್ಷದವರೆಗೆ ಗ್ರಹಣದ ವೇಧಗಳನ್ನು ಪಾಲಿಸಬೇಕು. ವೇಧಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯಕರ್ಮಗಳು, ಜಪ-ತಪ, ಶ್ರಾದ್ಧ ಇತ್ಯಾದಿಗಳನ್ನು ಮಾಡಬಹುದು. ವೇಧ ಕಾಲದಲ್ಲಿ ಊಟ ಮಾಡುವುದು ನಿಷಿದ್ಧವಾಗಿದೆ. ಆದ್ದರಿಂದ ವೇಧ ಕಾಲದಲ್ಲಿ ಯಾವುದೇ ಆಹಾರವನ್ನು ಸೇವಿಸಬಾರದು; ಆದರೆ ಈ ಸಮಯ ದಲ್ಲಿ ಆವಶ್ಯಕ ಕೃತಿಗಳನ್ನು, ಉದಾ. ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ, ನಿದ್ರೆ ಮುಂತಾದವುಗಳನ್ನು ಮಾಡ ಬಹುದು. ಮಕ್ಕಳು, ವೃದ್ಧರು, ರೋಗಿಗಳು, ದುರ್ಬಲರು ಮತ್ತು ಗರ್ಭಿಣಿಯರು ರವಿವಾರ ಸಂಜೆ ೫.೧೫ ರಿಂದ ಗ್ರಹಣದ ವೇಧ ಪಾಲಿಸಬೇಕು. ಗ್ರಹಣದ ಪರ್ವ ಕಾಲದಲ್ಲಿ, ಅಂದರೆ ರಾತ್ರಿ ೯.೫೭ ರಿಂದ ೧.೨೭ ರವರೆಗೆ ‘ನೀರು ಕುಡಿಯುವುದು, ಮಲಗುವುದು, ಮಲ-ಮೂತ್ರ ವಿಸರ್ಜನೆ’ಯಂತಹ ಕೃತಿಗಳನ್ನು ಮಾಡಬಾರದು.

೩. ಚಂದ್ರಗ್ರಹಣದ ಸಮಯಗಳು

(ಭಾರತೀಯ ಪ್ರಮಾಣಿತ ಸಮಯದ ಪ್ರಕಾರ)

೩ ಅ. ಸ್ಪರ್ಶ (ಆರಂಭ) : ರಾತ್ರಿ ೯.೫೭

೩ ಆ. ಸಮ್ಮಿಲನ ( conjunction) : ರಾತ್ರಿ ೧೧

೩ ಇ. ಮಧ್ಯ : ರಾತ್ರಿ ೧೧.೪೨

೩ ಈ. ಉನ್ಮೀಲನ ( opposition) : ರಾತ್ರಿ ೧೨.೨೩

೩ ಉ. ಮೋಕ್ಷ (ಮುಕ್ತಾಯ) : ರಾತ್ರಿ ೧.೨೭ (೭.೯.೨೦೨೫ರ ಉತ್ತರರಾತ್ರಿ ೧.೨೭)

೩ ಊ. ಗ್ರಹಣ ಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಮುಕ್ತಾಯದವರೆಗಿನ ಒಟ್ಟು ಅವಧಿ) : ೩ ಗಂಟೆ ೩೦ ನಿಮಿಷಗಳು

ಟಿಪ್ಪಣಿ ೧ – ಪರ್ವ ಎಂದರೆ ಶುಭಕಾಲ ಅಥವಾ ಪುಣ್ಯಕಾಲ. ಗ್ರಹಣದ ಸ್ಪರ್ಶದಿಂದ ಗ್ರಹಣದ ಮೋಕ್ಷದ ವರೆಗಿನ ಕಾಲವು ಪುಣ್ಯಕಾಲವಾಗಿದೆ. ‘ಈ ವೇಳೆ ದೇವರ ಚಿಂತನೆಯಲ್ಲಿ ತೊಡಗಿದರೆ ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
(ಮೇಲಿನ ಎಲ್ಲಾ ಸಮಯಗಳು ಇಡೀ ಭಾರತಕ್ಕೆ ಅನ್ವಯಿಸುತ್ತವೆ.)

೪. ಗ್ರಹಣದ ಸಮಯದಲ್ಲಿ ಯಾವ ಕರ್ಮ ಮಾಡಬೇಕು ?

ಅ. ಗ್ರಹಣ ಸ್ಪರ್ಶವಾದ ತಕ್ಷಣ ಸ್ನಾನ ಮಾಡಬೇಕು.

ಆ. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರಾದ್ಧ, ಜಪ, ಹೋಮ ಮತ್ತು ದಾನ ಮಾಡಬೇಕು.

ಇ. ಹಿಂದೆ ಯಾವುದೇ ಕಾರಣದಿಂದ ಸ್ಥಗಿತಗೊಂಡ ಮಂತ್ರದ ಪುರಶ್ಚರಣೆಯನ್ನು ಈ ಸಮಯದಲ್ಲಿ ಪುನರಾರಂಭಿಸಿದರೆ ಅದರಿಂದ ಅನಂತ ಪಟ್ಟು ಫಲ ಸಿಗುತ್ತದೆ.

ಈ. ಗ್ರಹಣದ ಮೋಕ್ಷದ ನಂತರ (ಗ್ರಹಣ ಮುಗಿದ ಮೇಲೆ) ಸ್ನಾನ ಮಾಡಬೇಕು.

ಉ. ಗ್ರಹಣದ ಸಮಯದಲ್ಲಿ (ಪರ್ವಕಾಲದಲ್ಲಿ) ಮಲಗುವುದು, ಮಲ-ಮೂತ್ರ ವಿಸರ್ಜನೆ, ಅಭ್ಯಂಗ, ಊಟ ಮತ್ತು ಕಾಮವಿಷಯದ ಭೋಗಗಳಂತಹ ಕೃತಿಗಳನ್ನು ಮಾಡಬಾರದು.

ಊ. ಯಾವುದೇ ವ್ಯಕ್ತಿಗೆ ಅಶೌಚವಿದ್ದರೆ, ಗ್ರಹಣದ ಸಮಯದಲ್ಲಿ ಗ್ರಹಣಕ್ಕೆ ಸಂಬಂಧಿಸಿದಂತೆ ಸ್ನಾನ ಮತ್ತು ದಾನ ಮಾಡುವ ಮಟ್ಟಿಗೆ ಅವರಿಗೆ ಶುದ್ಧಿ ಇರುತ್ತದೆ.

೫. ಗ್ರಹಣದ ರಾಶಿಗಳಿಗನುಸಾರ ಫಲ

೫ ಅ. ಶುಭ ಫಲ : ಮೇಷ, ವೃಷಭ, ಕನ್ಯಾ ಮತ್ತು ಧನು

೫ ಆ. ಅಶುಭ ಫಲ : ಕರ್ಕ, ವೃಶ್ಚಿಕ, ಕುಂಭ ಮತ್ತು ಮೀನ

೫ ಇ. ಮಿಶ್ರ ಫಲ : ಮಿಥುನ, ಸಿಂಹ, ತುಲಾ ಮತ್ತು ಮಕರ
ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಅಂತಹ ವ್ಯಕ್ತಿಗಳು ಮತ್ತು ಗರ್ಭಿಣಿ ಮಹಿಳೆಯರು ಈ ಗ್ರಹಣವನ್ನು ನೋಡಬಾರದು.
(ಆಧಾರ : ದಾತೆ ಪಂಚಾಂಗ)

೬. ಗ್ರಹಣದ ಸಮಯದಲ್ಲಿ ಏನನ್ನು ತ್ಯಜಿಸಬೇಕು ?

ಅ. ಗ್ರಹಣ ಕಾಲದಲ್ಲಿ ಊಟ ನಿಷಿದ್ಧವಾಗಿದೆ; ಆದ್ದರಿಂದ ಆಹಾರಪದಾರ್ಥಗಳನ್ನು ಸೇವಿಸಬಾರದು. ಗ್ರಹಣಕ್ಕೆ ಮೊದಲು ಬೇಯಿಸಿದ ಆಹಾರವನ್ನು ನಂತರ ಸೇವಿಸಬಾರದು. ಏಕೆಂದರೆ ಆ ಆಹಾರವು ಹಾನಿಕರÀ ವಿಕಿರಣಗಳನ್ನು ಹೀರಿಕೊಂಡಿರಬಹುದು.

ಆ. ಗ್ರಹಣಕಾಲವು ಸಾಧನೆಗೆ ಉತ್ತಮವಾದುದರಿಂದ, ನಿದ್ದೆ ಮಾಡಿ ತಮೋಗುಣವನ್ನು ಹೆಚ್ಚಿಸಿಕೊಳ್ಳುವ ಬದಲು ಸಾಧನೆ ಮಾಡಿ ಈ ಸಮಯದ ಲಾಭ ಪಡೆಯಬೇಕು.

ಇ. ಸಾಧಕರು ಗ್ರಹಣದ ಸಮಯದಲ್ಲಿ ಮನೋರಂಜನೆ ಮತ್ತು ಸುಖವಿಲಾಸಗಳಲ್ಲಿ ಸಮಯ ವ್ಯರ್ಥ ಕಳೆಯಬಾರದು; ಏಕೆಂದರೆ ಸಾಧಕರಿಗೆ ಇದು ಅಮೂಲ್ಯ ಅವಕಾಶವಾಗಿದೆ. ಈ ಸಮಯದಲ್ಲಿ ಮಾಡಿದ ಸಾಧನೆಯ (ಜಪ, ಧ್ಯಾನ ಮತ್ತು ಪ್ರಾರ್ಥನೆ) ಫಲವು ಅನಂತ ಪಟ್ಟುಗಳಲ್ಲಿ ದೊರೆಯುತ್ತದೆ. ಆದ್ದರಿಂದ, ಈ ಸಮಯದಲ್ಲಿ ತಮ್ಮ ಇಷ್ಟದೇವರನ್ನು ಅಥವಾ ಗುರುಗಳ ಚರಣಗಳನ್ನು ಮನಃಪೂರ್ವಕವಾಗಿ ಸ್ಮರಿಸಿ ಏಕಾಗ್ರತೆಯಿಂದ ನಾಮಜಪ ಮಾಡಬೇಕು.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಕುಡಾಳ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ (೯.೮.೨೦೨೫)