ಸಾತ್ತ್ವಿಕ ಮತ್ತು ಪ್ರಬೋಧನಾತ್ಮಕ ಮೆರವಣಿಗೆಯಿರಲಿ !

ಭಾದ್ರಪದ ಮಾಸದ ಚತುರ್ಥಿಯ ಪವಿತ್ರ ವ್ರತವೆಂದರೆ ಶ್ರೀ ಸಿದ್ಧಿವಿನಾಯಕನ ವ್ರತ ! ‘ಗಣಪತಿ ಬಾಪ್ಪಾ ಮೋರಯಾ’, ‘ಮಂಗಳಮೂರ್ತಿ ಮೋರಯಾ’ ಎಂದು ಹೇಳುತ್ತಾ ಗಣೇಶನನ್ನು ಮನೆಗೆ ಕರೆತರುತ್ತೇವೆ ಮತ್ತು ‘ಮುಂದಿನ ವರ್ಷ ಬೇಗ ಬಾ’ ಎಂದು ಕಣ್ಣೀರಿನಿಂದ ಗಣೇಶನನ್ನು ಬೀಳ್ಕೊಡುತ್ತೇವೆ. ಅತ್ಯಂತ ಶ್ರದ್ಧೆಯಿಂದ ಗಣೇಶನ ಮಂಗಳಮಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಗಣೇಶನ ಆಗಮನ ಮತ್ತು ವಿಸರ್ಜನೆಯ ನಡುವಿನ ಸಮಾನ ಅಂಶವೆಂದರೆ ಮೆರವಣಿಗೆ.

ಪ್ರಾಣಪ್ರತಿಷ್ಠೆ ಮಾಡುವಾಗ, ಗಣೇಶನ ವಿಶ್ವವ್ಯಾಪಿ ತತ್ತ್ವವನ್ನು ಮೂರ್ತಿಯಲ್ಲಿ ಆವಾಹನೆ ಮಾಡಲಾಗಿರುತ್ತದೆ ಎಂಬುದನ್ನು ಮೆರವಣಿಗೆಯ ಸಮಯದಲ್ಲಿ ಮರೆತುಬಿಟ್ಟಂತೆ ಕಾಣಿಸುತ್ತದೆ. ದೊಡ್ಡ ಧ್ವನಿಯಲ್ಲಿ ಹೃದಯದ ಬಡಿತವನ್ನು ಹೆಚ್ಚಿಸುವ ಧ್ವನಿವರ್ಧಕಗಳು, ಅವುಗಳಲ್ಲಿ ಹಾಕುವ ಅಶ್ಲೀಲ ಮತ್ತು ರಜ-ತಮ ಗುಣಗಳನ್ನು ಪ್ರಕ್ಷೇಪಿಸುವ ಚಿತ್ರಗೀತೆಗಳು, ಮಹಿಳೆಯರು ಮತ್ತು ಪುರುಷರು ವಿಚಿತ್ರ ಭಂಗಿಗಳಲ್ಲಿ ಮಾಡುವ ‘ಡಾನ್ಸ್‌’, ಮದ್ಯಪಾನ ಮಾಡುವ ಅಸಭ್ಯ ವರ್ತನೆ, ಮಹಿಳೆಯರನ್ನು ಚುಡಾಯಿಸುವುದು, ಅತಿಯಾದ ವಿದ್ಯುದ್ದೀಪಗಳ ಅಲಂಕಾರ ಈ ರೀತಿ ಮೆರವಣಿಗೆಯ ಸ್ವರೂಪವಿರುತ್ತದೆ. ಸಾಮಾಜಿಕ ಆರೋಗ್ಯದ ಬಗ್ಗೆ ಆಯೋಜಕರು ಮತ್ತು ಭಾಗವಹಿಸುವವರಿಗೆ ಕಿಂಚಿತ್ತೂ ಅರಿವಿರುವುದಿಲ್ಲ. ಇಂತಹ ವರ್ತನೆಯಿಂದ ಗಣೇಶನ ಅವಕೃಪೆಯನ್ನು ಆಹ್ವಾನಿಸಿದಂತಾಗುತ್ತದೆ. ಲೋಕಮಾನ್ಯ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಇಂತಹ ಮೆರವಣಿಗೆಗಳಿಂದ ಎಲ್ಲಿಯೂ ಈಡೇರುವುದಿಲ್ಲ.

ಗಣೇಶನನ್ನು ನಿಸರ್ಗವೂ ಸ್ವಾಗತಿಸುತ್ತದೆ. ಗಾಳಿಯು ಶೆಹನಾಯಿ ಸ್ವರವನ್ನು ನುಡಿಸುತ್ತದೆ, ಮೋಡಗಳು ಮದ್ದಳೆಗಳಂತೆ ಗುಡುಗುತ್ತವೆ, ಮಿಂಚು ತಮಟೆಯ ಸದ್ದಿನಂತೆ ಮಿಂಚುತ್ತದೆ ಮತ್ತು ಗಣೇಶನ ಆಗಮನವಾಗುತ್ತದೆ. ಪಂಚತತ್ತ್ವಗಳು ಗಣೇಶನನ್ನು ಭವ್ಯವಾಗಿ ಸ್ವಾಗತಿಸುತ್ತವೆ, ವಿಸರ್ಜನೆಗೂ ಹಾಜರಾಗುತ್ತವೆ, ಇಂತಹದರಲ್ಲಿ ಮಾನವ ನಡೆಸುವ ಮೆರವಣಿಗೆಗಳ ಬಗ್ಗೆ ಏನು ಹೇಳುವುದು ? ಈ ಗಣೇಶನ ಉತ್ಸವದ ಸಂತೋಷವನ್ನು ಅನುಭವಿಸಲು ಪ್ರತಿಯೊಂದು ಕ್ರಿಯೆಯನ್ನು ಹೆಚ್ಚು ಹೆಚ್ಚು ಸಾತ್ತ್ವಿಕವಾಗಿ ಮಾಡಲು ಗಮನ ಕೊಡುವುದು ಅವಶ್ಯಕವಾಗಿದೆ. ಮಧುರ ಸ್ವರದಲ್ಲಿ ತಾಳ ಮತ್ತು ಮದ್ದಳೆ ಬಾರಿಸುತ್ತಾ, ಬಾಯಿಯಲ್ಲಿ ಗಣೇಶನ ಜಯಘೋಷ, ನಾಮಜಪ ಮಾಡುತ್ತಾ ಅವರನ್ನು ಕರೆತರಬೇಕು ಮತ್ತು ಅದೇ ರೀತಿ ಬೀಳ್ಕೊಡಬೇಕು. ಹೀಗೆ ಮಾಡುವುದರಿಂದ ನಮಗೆ ಒಂದು ವಿಭಿನ್ನ ರೀತಿಯ ಆತ್ಮಿಕ ಶಾಂತಿಯ ಅನುಭವವಾಗುತ್ತದೆ ಮತ್ತು ನಾವು ನಿಜವಾದ ಅರ್ಥದಲ್ಲಿ ಗಣೇಶನ ತತ್ತ್ವವನ್ನು ಅನುಭವಿಸಬಹುದು.
ಸದ್ಯ ರಾಷ್ಟ್ರ ಮತ್ತು ಹಿಂದೂ ಧರ್ಮದ ಮೇಲೆ ಎಲ್ಲಾ ಕಡೆಗಳಿಂದಲೂ ಆಕ್ರಮಣಗಳು ನಡೆಯುತ್ತಿವೆ, ದಾರ್ಶನಿಕ ಸಂತರು ಹೇಳಿದಂತೆ ಕಠಿಣ ಸಮಯವೂ ವೇಗವಾಗಿ ಹತ್ತಿರ ಬರುತ್ತಿದೆ. ಕಾಲಕ್ಕನುಗುಣವಾಗಿ ಸಂಘಟನೆಯ ಅವಶ್ಯಕತೆಯೂ ಇದೆ. ಇಂತಹ ಸಮಯದಲ್ಲಿ ರಾಷ್ಟ್ರ ಮತ್ತು ಧರ್ಮದ ಮೇಲಿನ ಆಕ್ರಮಣಗಳನ್ನು ಸಮಾಜದ ಮುಂದೆ ತರುವುದು, ಆಕ್ರಮಣಗಳು ಮತ್ತು ಆಪತ್ಕಾಲವನ್ನು ಎದುರಿಸಲು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುವ ವಿವಿಧ ತಂಡಗಳನ್ನು ಸೇರಿಸಿಕೊಳ್ಳಬಹುದು. ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮವನ್ನು ಮುಂಚೂಣಿಯಲ್ಲಿಟ್ಟುಕೊಂಡು ನಡೆಸಿದ ಮೆರವಣಿಗೆಗಳಿಂದ ಹಿಂದೂಗಳು ಖಂಡಿತವಾಗಿಯೂ ಶ್ರೀ ಗಣೇಶನ ಕೃಪೆಯನ್ನು ಪಡೆಯಬಹುದು !

– ಸೌ. ಸ್ನೇಹಾ ತಾಮ್ಹನಕರ, ರತ್ನಾಗಿರಿ