ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಮೊಕದ್ದಮೆ ಹೂಡುವ ವಿಷಯದಲ್ಲಿ ಪ್ರಯತ್ನದ ದಿಶೆ !

ಇಂದು ಒಂದೆಡೆ ಹಿಂದೂ ಧರ್ಮದ ವಿಷಯದಲ್ಲಿ ಶ್ರದ್ಧೆ, ಭಕ್ತಿ ಇವು ದಿನಗಳೆದಂತೆ ಹೆಚ್ಚುತ್ತಿರುವುದು ಕಾಣಿಸುತ್ತಿದೆ ಹಾಗೂ ಇನ್ನೊಂದೆಡೆ ಕೆಲವರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮ, ದೇವಿದೇವತೆಗಳು, ಧರ್ಮಾಚರಣೆ ಮತ್ತು ಸಾಧು-ಸಂತರ ತೇಜೋವಧೆ ಮಾಡುತ್ತಿರುವ ಅಥವಾ ಅವರ ಹೆಸರನ್ನು ಕೆಡಿಸುವ ಹೇಳಿಕೆಗಳನ್ನು ನೀಡುತ್ತಾ ಹಿಂದೂಗಳಲ್ಲಿ ಭಿನ್ನಾಭಿಪ್ರಾಯವನ್ನುಂಟು ಮಾಡಲು ಪ್ರಯತ್ನಿಸುವ ದೃಶ್ಯ ಕಾಣಿಸುತ್ತಿದೆ. ಹಿಂದೂವಿರೋಧಿ ಹೇಳಿಕೆ ನೀಡುವ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದು ಕಾಣಿಸುತ್ತಿದೆ. ಆದ್ದರಿಂದ ಅದನ್ನು ತಡೆಗಟ್ಟಲು ಪರಿಹಾರೋಪಾಯವನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ‘ಹೇಟ್‌ ಸ್ಪೀಚ್’ (ದ್ವೇಷಯುಕ್ತ ಭಾಷಣ) ಎಂದರೇನು ?

ಈ ಪದ ತುಂಬಾ ಸಮಯದಿಂದ ಚರ್ಚೆಯಲ್ಲಿದೆ. ಆಕ್ಸ್‌ಫರ್ಡ್ ಶಬ್ದಕೋಶದಲ್ಲಿ ದ್ವೇಷಯುಕ್ತ ಭಾಷಣದ ಅರ್ಥವನ್ನು ನೀಡಲಾಗಿದೆ – ‘ವಂಶ, ಧರ್ಮ, ಲಿಂಗಗಳಂತಹ ಯಾವುದೇ ಭೇದಭಾವದಿಂದ ಯಾವುದೇ ವಿಶಿಷ್ಟ ಸಮೂಹದ ವಿರುದ್ಧ ಪೂರ್ವಗ್ರಹ ವ್ಯಕ್ತಪಡಿಸುವಂತಹ ಯಾವುದೇ ನಿಂದನೀಯ ಅಥವಾ ಆಕ್ಷೇಪಾರ್ಹ ಹೇಳಿಕೆಯೆಂದರೆ, ‘ಹೇಟ್‌ ಸ್ಪೀಚ್’ !’ ಹರಿದ್ವಾರ (ಉತ್ತರಾಖಂಡ) ಹಾಗೂ ರಾಯಪುರ (ಝಾರಖಂಡ)ದಲ್ಲಿ ಇಂತಹ ಘಟನೆಗಳ ಮೂಲಕ ಸಾಮಾಜಿಕ ಶಾಂತಿಯನ್ನು ಕೆಡಿಸುವ ಪ್ರಯತ್ನ ನಡೆದಿತ್ತು, ಅದೇ ರೀತಿ ದೆಹಲಿಯಲ್ಲಿ ೨ ವರ್ಷಗಳ ಹಿಂದೆ ಪೂರ್ವಭಾಗದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ದ್ವೇಷಯುಕ್ತ ಭಾಷಣದ ದೊಡ್ಡ ಪಾತ್ರವಿತ್ತು ಎಂದು ಹೇಳ ಲಾಯಿತು. ಇದರ ಖಟ್ಲೆ ಕೂಡ ನ್ಯಾಯಾಲಯದಲ್ಲಿದೆ. ಈ ವಿಷಯವನ್ನು ಕೆಲವು ಉದಾಹರಣೆ ಸಹಿತ ತಿಳಿದುಕೊಳ್ಳೋಣ.

ಅ. ತಬ್ಲಿಗೀಗಳಿಂದಾಗಿ ಭಾರತದೊಳಗೆ ‘ಕೊರೋನಾ’ದಂತಹ ಭೀಕರ ರೋಗ ಬಂದಿತು ಹಾಗೂ ಆ ವಿಷಯದಲ್ಲಿ ಜಾಗೃತಿ ಮೂಡಿಸಿದಾಗ ಮತಾಂಧರು ಒಂದು ಹೊಸ ಕುತಂತ್ರವನ್ನು ಸೃಷ್ಟಿಸಿ ಕೂಗಲು ಆರಂಭಿಸಿದರು. ಉತ್ತರಪ್ರದೇಶ ಮತ್ತು ಉತ್ತರಾಖಂಡ ದಲ್ಲಿ ಕುಂಭಮೇಳ ನಡೆಯಿತು, ಅದರಿಂದ ಕೊರೋನಾ ಭಾರತ ದಾದ್ಯಂತ ಹರಡಿತು, ಎಂದು ಬೊಬ್ಬೆ ಹೊಡೆಯಲಾರಂಭಿಸಿದರು. ಆದರೆ ವಾಸ್ತವಿಕತೆ ಬೇರೆಯೆ ಇತ್ತು. ಉತ್ತರದಲ್ಲಿ ಅಥವಾ ಉತ್ತರಾಖಂಡದಲ್ಲಿ ಕುಂಭಮೇಳ ಎಲ್ಲೆಲ್ಲಿ ನಡೆಯುತ್ತದೋ, ಅಲ್ಲಿನ ಗಂಗೆಯ ಪರಿಸರದಲ್ಲಿ ಕೊರೊನಾದ ಒಬ್ಬ ರೋಗಿಯೂ ಪತ್ತೆಯಾಗಿಲ್ಲ. ತದ್ವಿರುದ್ಧ ತಬ್ಲಿಗೀಗಳು ಎಲ್ಲೆಲ್ಲಿ ಇದ್ದರೋ ಆ ಎಲ್ಲ ಪರಿಸರದಲ್ಲಿ ಕೊರೊನಾ ದೊಡ್ಡ ಪ್ರಮಾಣದಲ್ಲಿ ಹರಡಿತ್ತು; ಇಲ್ಲಿ ರೋಗ ಮತ್ತು ಕುಂಭಮೇಳ ಇದರ ನಡುವೆ ಯಾವುದೇ ಸಂಬಂಧವಿಲ್ಲ; ಆದರೆ ದೋಷಾರೋಪ ಮಾಡಿ ಹಿಂದೂ ಧರ್ಮದ ತೇಜೋವಧೆ ಮಾಡುವ ಕೃತ್ಯ ನಡೆಯಿತು.

ಆ. ಇನ್ನೊಂದು ಉದಾಹರಣೆಯನ್ನು ನೋಡೋಣ. ತಮಿಳುನಾಡಿನ ದ್ರಮುಖ ಪಕ್ಷದ ಸಚಿವ ಉದಯನಿಧಿ ಸ್ಟಾಲಿನ್‌ ಒಂದು ಕಾರ್ಯಕ್ರಮದಲ್ಲಿ ಸನಾತನ ಹಿಂದೂ ಧರ್ಮವನ್ನು ಅಯೋಗ್ಯವಾಗಿ ಟೀಕಿಸಿದರು. ‘ಸನಾತನ ಧರ್ಮವನ್ನು ಕೇವಲ ವಿರೋಧಿಸಿದರೆ ಸಾಲದು, ಅದನ್ನು ಸೊಳ್ಳೆ, ಮಲೇರಿಯಾ, ಡೇಂಗ್ಯೂ ಈ ರೋಗಗಳನ್ನು ಮುಗಿಸುವ ಹಾಗೆಯೆ ಒಂದು ರೋಗವೆಂದು ತಿಳಿದು ನಾಶಗೊಳಿಸಬೇಕು’, ಎಂದು ದ್ವೇಷಕಾರಿದರು.

ಇವೆರಡೂ ಉದಾಹರಣೆಗಳನ್ನು ನೋಡಿದಾಗ ಇಲ್ಲಿ ಹಿಂದೂ ಧರ್ಮವನ್ನು ಗುರಿಪಡಿಸಿ ಅದನ್ನು ಬಹಿರಂಗವಾಗಿ ಅವಮಾನಿಸುವ ಧೈರ್ಯ ತೋರಿಸಿದರು. ಅದರಲ್ಲಿ ಚಲನಚಿತ್ರ ನಿರ್ಮಾಪಕರು, ಚಲನಚಿತ್ರದ ಕಲಾವಿದರು, ರಾಜಕಾರಣಿಗಳು, ಹಿಂದೂಧರ್ಮದ್ವೇಷಿಗಳ ಮುಂದಾಳತ್ವವಿತ್ತು; ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾಣಿಸುವುದಿಲ್ಲ.

೨. ಹಿಂದೂಗಳು ಜಾಗೃತರಾಗದಂತೆ ತಡೆಯುವ ಪ್ರಯತ್ನ

ನಮ್ಮ ದೇಶದಲ್ಲಿ ಹಿಂದೂಗಳ ವಿರುದ್ಧ ಅನೇಕ ರಾಜಕಾರಣಿಗಳು ಮತ್ತು ಹಿಂದೂವಿರೋಧಿಗಳು ನಿಯಮಿತವಾಗಿ ‘ಹೇಟ್‌ ಸ್ಪೀಚ್’ ಮಾಡುತ್ತಿದ್ದಾರೆ, ಆ ವಿಷಯದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ದಾಖಲಾಗುವುದಿಲ್ಲ; ಆದರೆ ಹಿಂದೂಗಳ ವಿರುದ್ಧ ಅಪರಾಧಗಳನ್ನು ದಾಖಲಿಸಲಾಗುತ್ತದೆ. ‘ಭಾರತ ವಿಭಜನೆಯಾಗಬಾರದೆಂದು ಹಿಂದೂಗಳು ಜನಜಾಗೃತಿ ಮಾಡುವುದು ‘ಹೇಟ್‌ ಸ್ಪೀಚ್‌ ಆಗುತ್ತದೆಯೇ ?’, ಹಿಂದೂಗಳು ‘ತಮ್ಮ ದೇಶ ಮತ್ತು ಧರ್ಮವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದರೆ, ಅದು ‘ಹೇಟ್‌ ಸ್ಪೀಚ್‌ ಆಗುತ್ತದೆಯೇ ?’ ಅಮೇರಿಕಾದಲ್ಲಿ ‘ಇಸ್ಲಾಮೊಫೋಬಿಯಾ’ದ ವಿಷಯದಲ್ಲಿ (ಇಸ್ಲಾಮ್‌ನ ವಿಷಯದಲ್ಲಿ ತಿರಸ್ಕಾರ) ಕಾನೂನು ಮಾಡಲಾಗಿದೆ. ಭಾರತದಲ್ಲಿ ಇಂತಹ ಕಾನೂನು ರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ‘ಅದರ ಮುಂದಿನ ಆವೃತ್ತಿಯೆಂದು ‘ಹೇಟ್‌ ಸ್ಪೀಚ್’ ತರಲಾಗಿದೆ. ಹಿಂದೂಗಳ ವಿವಿಧ ಸಭೆಗಳಲ್ಲಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅದು ಜಿಹಾದಿಗಳಿಗೆ ಇಷ್ಟವಿಲ್ಲ. ಹಿಂದೂಗಳ ಸಭೆಗಳಲ್ಲಿ ಮಾತನಾಡುವ ವಕ್ತಾರರ, ಆಯೋಜಕರ ವಿರುದ್ಧ ದೂರನ್ನು ದಾಖಲಿಸಿ ಅವರಲ್ಲಿ ಭಯಹುಟ್ಟಿಸಲಾಗುತ್ತದೆ. ಮಹಾರಾಷ್ಟ್ರದ ಜಳಗಾವ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯಲ್ಲಿ ಡಾ. ಸುರೇಶ ಚವ್ಹಾಣಕೆಯವರ ಭಾಷಣವನ್ನು ‘ಹೇಟ್‌ ಸ್ಪೀಚ್’ ಎಂದು ಹೇಳುತ್ತಾ ಅವರ ವಿರುದ್ಧ ದೂರು ದಾಖಲಿಸಲಾಯಿತು. ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹ, ರಾಷ್ಟ್ರಪ್ರೇಮಿ ಕಾಜಲ್‌ ಹಿಂದೂಸ್ಥಾನಿ ಇವರನ್ನು ‘ಹೇಟ್‌ ಸ್ಪೀಚ್‌’ನ ಹೆಸರಿನಲ್ಲಿ ಬಂಧಿಸಲಾಗಿತ್ತು. ಇದರಿಂದ ನಾವೆಲ್ಲರೂ ಎಷ್ಟು ಜಾಗರೂಕರಾಗಿರಬೇಕು, ಎಂಬುದನ್ನು ಗಮನದಲ್ಲಿಡಬೇಕು.

೩. ಹಿಂದೂವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳಲು ಉಪಾಯ

ಹಿಂದೂ ಧರ್ಮದ ವಿರುದ್ಧ ದ್ವೇಷಯುಕ್ತ ಹೇಳಿಕೆಗಳನ್ನು ನೀಡಿದರೆ, ನಾವು ನ್ಯಾಯ ಕೇಳಲು ಸಾಧ್ಯವಿಲ್ಲವೆ ಅಥವಾ ಅದಕ್ಕೆ ಯಾವುದೇ ಪರಿಹಾರ ಇಲ್ಲವೆ ? ಖಂಡಿತ ಇದೆ. ನಾವು ದ್ವೇಷಯುಕ್ತ ಹೇಳಿಕೆಗಳ ವಿರುದ್ಧ ಈ ಮುಂದಿನಂತೆ ಕ್ರಮ ತೆಗೆದುಕೊಳ್ಳಬಹುದು.

೩ ಅ. ದ್ವೇಷಯುಕ್ತ ಹೇಳಿಕೆಗಳಿಂದ ಧಾರ್ಮಿಕ, ಕೋಮುಭಾವನೆಯನ್ನು ನೋಯಿಸಲಾಗುತ್ತದೆ. ಅದು ಭಾರತೀಯ ದಂಡಸಂಹಿತೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನಿಗನುಸಾರ ಅಪರಾಧವೆನಿಸುತ್ತದೆ. ಆದ್ದರಿಂದ ನಾವು ಪೊಲೀಸರಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ದೂರನ್ನು ದಾಖಲಿಸಬಹುದು. ಅದಕ್ಕಾಗಿ ಯಾರು ದ್ವೇಷಯುಕ್ತ ಹೇಳಿಕೆಗಳನ್ನು ನೀಡಿದರು ? ಯಾವ ಪದ್ಧತಿಯಲ್ಲಿ ನೀಡಿದರು ? (ಉದಾಹರಣೆಗೆ ಲೇಖನ, ಹೇಳಿಕೆ, ಛಾಯಾಚಿತ್ರ (ಕಾರ್ಟೂನ್) ಅಥವಾ ಸಾಮಾಜಿಕ ಮಾಧ್ಯಮ, ಇಲೆಕ್ಟ್ರಾನಿಕ್‌ ಮಿಡಿಯಾ) ಇವುಗಳನ್ನು ನೋಡಬೇಕು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಅದರ ಮೂಲವನ್ನು ಹುಡುಕಬೇಕು. ಅದನ್ನು ಪುರಾವೆಯೆಂದು ನಾವು ಸಂಗ್ರಹಿಸಬೇಕು. ಪೆನ್‌ ಡ್ರೈವ್, ಇಂಟರ್‌ನೆಟ್‌ ಕೆಫೆಯಲ್ಲಿನ ಪಾವತಿ ಇತ್ಯಾದಿ ಹಾಗೂ ಸಂಚಾರಿವಾಣಿಯ ಮೂಲಕ ಭಾಷಣವನ್ನು ಕೇಳಿದೆ ಅಥವಾ ಭಾಷಣದ ವಿಡಿಯೋ ನೋಡಿದ್ದರೆ ಅದನ್ನು ‘ಡೌನ್‌ಲೋಡ್’ ಮಾಡಿ ‘ಸಿಡಿ’ಯಲ್ಲಿ ಜೋಪಾನ ಮಾಡಬೇಕು.

೩ ಆ. ಎಲ್ಲಕ್ಕಿಂತ ಮಹತ್ವದ್ದೆಂದರೆ, ಇಂತಹ ಯಾವುದೇ ಘಟನೆ ಘಟಿಸಿರುವುದು ಅರಿವಾದ ತಕ್ಷಣ ಅದರ ಪುರಾವೆಯನ್ನು ಸಂಗ್ರಹಿಸಿ ಜೋಪಾನ ಮಾಡಿಡಬೇಕು. ಆ ವಿಷಯದಲ್ಲಿ ಹಿಂದೂಗಳಲ್ಲಿ ಜಾಗೃತಿಮೂಡಿಸುವ ಹಾಗೂ ಕಾನೂನು ಪ್ರಕಾರ ಕ್ರಮತೆಗೆದುಕೊಳ್ಳುವ ಗುಂಪನ್ನು ಸಿದ್ಧಪಡಿಸಬೇಕು. ಈ ಗುಂಪಿನಲ್ಲಿ ಪತ್ರಕರ್ತರು, ಇನ್ನಿತರ ಹಿಂದೂ ಸಂಘಟನೆಗಳ ಕೆಲವು ಬೆರಳೆಣಿಕೆಯಷ್ಟು ಆವಶ್ಯಕ ಪದಾಧಿಕಾರಿಗಳು, ವಕೀಲರು, ಸಮಾಜಮಾಧ್ಯಮಗಳಲ್ಲಿ ಕೆಲಸ ಮಾಡುವವರು ಮುಂತಾದವರು ಇರಬೇಕು. ಹಿಂದೂ ಧರ್ಮವಿರೋಧಿಗಳು ಯಾವುದೇ ‘ಹೇಟ್‌ ಸ್ಪೀಚ್’ ಮಾಡಿರುವುದು ಗಮನಕ್ಕೆ ಬಂದ ತಕ್ಷಣ ಅದರ ಬಗ್ಗೆ ಪೊಲೀಸ್‌ ಠಾಣೆಯಿಂದ ಸಮಾಜಮಾಧ್ಯಮದ ವರೆಗೆ ಈ ವಿಷಯವನ್ನು ತಲುಪಿಸಿ ಅದರ ವಿರುದ್ಧ ಕೃತಿ ಮಾಡಲು ಉತ್ತೇಜಿಸಬೇಕು. ಮೊದಲು ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು, ‘ಸ್ಪೀಚ್’ ವಿರುದ್ಧ ಕಾನೂನುಪ್ರಕಾರ ದೂರಿನ ವಿಷಯದಲ್ಲಿ ಮಾರ್ಗದರ್ಶನ ಪಡೆದು ದೂರನ್ನು ದಾಖಲಿಸುವುದು, ಹಿಂದೂವಿರೋಧಿ ಹೇಳಿಕೆ ನೀಡುವವರ ವಿಷಯದಲ್ಲಿ ಪತ್ರಕರ್ತರ ಮತ್ತು ಸಮಾಜಮಾಧ್ಯಮಗಳ ಮೂಲಕ ‘ಪೋಸ್ಟ್‌’ ಕಳುಹಿಸಿ ಜಾಗೃತಿ ಮೂಡಿಸುವುದು, ಪತ್ರಕರ್ತರ ಮೂಲಕ ದೂರು ದಾಖಲಾಗಿ ಕ್ರಮತೆಗೆದುಕೊಳ್ಳುವವರೆಗೆ ಎಲ್ಲ ಸ್ತರಗಳಲ್ಲಿ ಪ್ರಯತ್ನಿಸುವುದು ಹಾಗೂ ವಿವಿಧ ಸ್ಥಳಗಳಲ್ಲಿ ಸ್ಪೀಚ್‌ ಮಾಡುವ ವ್ಯಕ್ತಿಯ ವಿರುದ್ಧ, ಅದನ್ನು ಪ್ರಸಿದ್ಧಪಡಿಸುವ ವರ್ತಮಾನಪತ್ರಿಕೆ, ವಾಹಿನಿ ಅಥವಾ ಸಮಾಜಮಾಧ್ಯಮಗಳ ಅಧಿಕೃತ ವ್ಯಕ್ತಿ ಇವರೆಲ್ಲರ ವಿರುದ್ಧ ಕ್ರಮತೆಗೆದುಕೊಳ್ಳುವ ಹಾಗೆ ಪ್ರಯತ್ನಿಸಬೇಕು.

೩ ಇ. ದೂರು ನೀಡುವಾಗ ಲಿಖಿತ ದೂರನ್ನು ನೀಡಬೇಕು. ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಅಪರಾಧಗಳನ್ನು ದಾಖಲಿಸಲು ಆಗ್ರಹಿಸಬೇಕು. ‘ಮಾಹಿತಿ ಹಾಗೂ ತಂತ್ರಜ್ಞಾನ ಕಾನೂನು’, ‘ಭಾರತೀಯ ದಂಡಸಂಹಿತೆ’ಯ ವಿವಿಧ ಕಲಮ್‌ಗನ್ವಯ ಅಪರಾಧ ದಾಖಲಾಗಬಹುದು.

೩ ಈ. ಹೇಳಿಕೆಗಳನ್ನು ಆಡಳಿತದವರು ನೀಡಿದ್ದರೆ, ಅವರ ವಿರುದ್ಧ ‘ರಿಪ್ರೆಸೆಂಟೇಶನ್‌ ಆಫ್‌ ದ ಪೀಪಲ್‌ ಏಕ್ಟ್‌’ (ಜನಪ್ರತಿಧಿತ್ವ ಮಸೂದೆ) ೧೯೫೧, ಕಲಮ್‌ ೮ ಕ್ಕನುಸಾರ ಅಪರಾಧವನ್ನು ದಾಖಲಿಸಲು ನಾವು ಆಗ್ರಹಿಸಬಹುದು. ಒಂದು ವೇಳೆ ಈ ಅಪರಾಧ ೧೫೩ ಅ, ೧೫೩ ಬ, ೧೫೩ (೨) ಸಹಿತ ೫೦೫ (೧) (೨) ಭಾರತೀಯ ದಂಡ ಸಂಹಿತೆಗನುಸಾರ ಹಾಗೂ ‘ಧಾರ್ಮಿಕ ಸಂಸ್ಥೆ (ದುರುಪಯೋಗಕ್ಕೆ ನಿರ್ಬಂಧ) ಕಾನೂನು’ ಕಲಮ್‌ ೩ ರಿಂದ ೬ ಕ್ಕನುಸಾರ ಸಿದ್ಧವಾದರೆ, ಶಿಕ್ಷೆಯಾದರೆ ಆ ರಾಜಕಾರಣಿ ೬ ವರ್ಷಗಳ ವರೆಗೆ ಚುನಾವಣೆಯನ್ನು ಎದುರಿಸುವಂತಿಲ್ಲ.

೩ ಉ. ಅಪರಾಧಿ ವ್ಯಕ್ತಿಯ ವಿರುದ್ಧ ನಾವು ವರ್ತಮಾನಪತ್ರಿಕೆಗಳಲ್ಲಿ ಲೇಖನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯವನ್ನು ಖಂಡಿಸಿ ಹಿಂದೂಗಳನ್ನು ಜಾಗೃತಗೊಳಿಸಬಹುದು. ಅದರ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಹಾಗೂ ವಿರೋಧಿಸಲು ಇಂತಹ ರಾಜಕೀಯ ಮುಖಂಡರ / ‘ಹೇಟ್‌ ಸ್ಪೀಚ್’ ನೀಡುವ ವ್ಯಕ್ತಿಯ ಸಭೆ ಅಥವಾ ಇನ್ನೇನಾದರೂ ಕಾರ್ಯಕ್ರಮವಿದ್ದರೆ, ಅಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ವಿರೋಧಿಸಲು ಕೂಡ ಪ್ರಯತ್ನಿಸಬಹುದು. ಕಾರ್ಯಕ್ರಮವನ್ನು ರದ್ದುಪಡಿಸಲು ಪ್ರಯತ್ನಿಸುವಾಗ ‘ಹೇಟ್‌ ಸ್ಪೀಚ್’ ಮಾಡಿರುವ ವಿಷಯದ ಹಳೆಯ ಉದಾಹರಣೆಯನ್ನು ಪ್ರಸ್ತುತಪಡಿಸಿ ಕಾರ್ಯಕ್ರಮ ರದ್ದಾಗುವವರೆಗೆ ಕಾನೂನು ಮಾರ್ಗದಲ್ಲಿ ಪ್ರಯತ್ನಿಸುತ್ತಾ ಇರಬೇಕು. ಈ ರೀತಿ ಪ್ರಯತ್ನವಾದರೆ ಕಾನೂನಿನ ಭಯ ನಿರ್ಮಾಣವಾಗಿ ಇಂತಹ ಹೇಳಿಕೆ ನೀಡುವವರನ್ನು ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತದೆ.

೪. ಸಕ್ರಿಯ ಗುಂಪಿನ ಮೂಲಕ ಪ್ರಯತ್ನ ಮಾಡಿದಾಗ ಆಗಿರುವ ಲಾಭ

ಕೆಲವು ವರ್ಷಗಳ ಹಿಂದೆ ಹಿಂದೂ ಧರ್ಮದ್ವೇಷಿ ಚಿತ್ರಕರ್ತ ಎಮ್‌.ಎಫ್‌.ಹುಸೇನ ಇವನು ಹಿಂದೂ ದೇವತೆಗಳು ಹಾಗೂ ಭಾರತಮಾತೆಯ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿದ್ದನು. ಅವನ ವಿರುದ್ಧ ಭಾರತದಾದ್ಯಂತ ೧೨೦೦ ಕ್ಕಿಂತಲೂ ಹೆಚ್ಚು ದೂರು ದಾಖಲಾದವು. ಆದ್ದರಿಂದ ಅವನು ಭಾರತದಿಂದ ಪಲಾಯನ ಮಾಡಬೇಕಾಯಿತು. ಅವನು ಜೀವಂತವಿರುವಾಗ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ ಹಾಗೂ ಮರಣದ ನಂತರವೂ ಅವನನ್ನು ಭಾರತದ ಭೂಮಿಯಲ್ಲಿ ಹೂಳಲು ಸಾಧ್ಯವಾಗಲಿಲ್ಲ, ಹಾಗೂ ಅವನು ಚಿತ್ರಿಸಿದ ಹಿಂದೂದೇ ವತೆಗಳ ನಗ್ನಚಿತ್ರಗಳ ಪ್ರದರ್ಶನ ಎಲ್ಲಿಯೂ ಏರ್ಪಾಡು ಆಗಲಿಲ್ಲ ಅಥವಾ ಅದನ್ನು ವಿರೋಧಿಸಿ ಪ್ರದರ್ಶನವನ್ನು ರದ್ದುಪಡಿಸುವಂತೆ ಆಯೋಜಕರಿಗೆ ಕಾನೂನು ಮಾರ್ಗದಲ್ಲಿ ಒತ್ತಡ ಹೇರಲಾಯಿತು. ‘ಇಸ್ಲಾಮಿಕ್‌ ರಿಸರ್ಚ್ ಫೌಂಡೇಶನ್‌’ನ ಡಾ. ಝಾಕೀರ ನಾಯಿಕನ ವಿರುದ್ಧವೂ ಅನೇಕ ಮನವಿಗಳು ಹಾಗೂ ದೂರನ್ನು ದಾಖಲಿಸಲಾಯಿತು. ಅನೇಕ ಕ್ರಿಮಿನಲ್‌ ಅರ್ಜಿಗಳನ್ನು ಮಾಡಲಾಯಿತು. ಇವೆಲ್ಲದರ ಪರಿಣಾಮದಿಂದ ಅವನ ಸಂಘಟನೆಯನ್ನೂ ಸರಕಾರ ನಿಷೇಧಿಸಿತು ಇವು ಸಣ್ಣ ಯಶಸ್ಸಾಗಿವೆ.

ಹಿಂದೂಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವಾಗ ಪೊಲೀಸರು ನಿಮ್ಮ ಕ್ರಿಮಿನಲ್‌ ದೂರಿಗೆ ಮುಂದಿನ ಕ್ರಮಕೈಗೊಳ್ಳದಿದ್ದರೆ, ನಾವು ತಾಲೂಕು ಮಟ್ಟದ ವಕೀಲರ ಮೂಲಕ ‘ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ’ಯ ಕಲಮ್‌ ೧೫೬ (೩) ಕ್ಕನ್ವಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಬಹುದು, ಅಪರಾಧವನ್ನು ದಾಖಲಿಸಬಹುದು ಹಾಗೂ ಅವರ ವಿರುದ್ಧ ಕಾರ್ಯಾಚರಣೆಯಾಗುವ ಸಾಧ್ಯತೆಯಿದೆ. ನಾವು ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದಲ್ಲಿ ದ್ವೇಷಯುಕ್ತ ಹೇಳಿಕೆ ಹಾಗೂ ಅದಕ್ಕನುಸಾರ ಆಗಿರುವ ಕೃತಿಯ ವಿರುದ್ಧ ಸಂತ್ರಸ್ತರಿಗಾಗಿ ನ್ಯಾಯ ಕೇಳಬಹುದು, ಅದೇ ರೀತಿ ಪರಿಹಾರವನ್ನೂ ಕೇಳಬಹುದು. ಇದರ ಜೊತೆಗೆ ಸಂತ್ರಸ್ತರಿಗೆ ಸಂರಕ್ಷಣೆ ಸಿಗಬೇಕೆಂದು ಆಗ್ರಹಿಸಲೂಬಹುದು, ‘ಸಂಘೇ ಶಕ್ತಿಃ ಕಲೌ ಯುಗೆ’, (ಕಲಿಯುಗದಲ್ಲಿ ಸಂಘಟನೆಯಲ್ಲಿಯೆ ಸಾಮರ್ಥ್ಯವಿರುತ್ತದೆ) ಎಂಬ ವಚನವನ್ನು ಗಮನದಲ್ಲಿಟ್ಟು ಎಲ್ಲರೂ ಒಗ್ಗಟ್ಟಾಗಿ ಹಿಂದೂವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಮಾರ್ಗದಲ್ಲಿ ಪ್ರಯತ್ನಿಸೋಣ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ.