ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಿಂದ ಸ್ಪಷ್ಟನೆ!

ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಲ್ಲಿ ನಡೆಯುತ್ತಿದೆ. ಈ ಸಭೆಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಅವರು, ಬಾಂಗ್ಲಾದೇಶದ ಹಿಂದೂಗಳ ಜವಾಬ್ದಾರಿ ಭಾರತದ್ದಾಗಿದೆ ಮತ್ತು ನಾವು ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ದೌರ್ಜನ್ಯಕ್ಕೊಳಗಾದ ಹಿಂದೂಗಳನ್ನು ಭಾರತವು ಸ್ವೀಕರಿಸಬೇಕೇ?”, ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅರುಣ ಕುಮಾರ ಅವರು ಸ್ಪಷ್ಟಪಡಿಸುತ್ತಾ,
1. ಯಾವ ಭಾರತವನ್ನು ನಾವು ಹೆಮ್ಮೆಯಿಂದ ನಮ್ಮ ದೇಶವೆಂದು ಕರೆಯುತ್ತೇವೆಯೋ, ಆ ಭಾರತವನ್ನು ಭಾರತದ ಹಿಂದೂಗಳು ರೂಪಿಸಿದಷ್ಟೇ, ಬಾಂಗ್ಲಾದೇಶದ ಹಿಂದೂಗಳೂ ರೂಪಿಸಿದ್ದಾರೆ.
2. ಬಾಂಗ್ಲಾದೇಶದ ಹಿಂದೂಗಳು ಶಾಂತಿಯಿಂದ ಮತ್ತು ಆನಂದದಿಂದ ಬದುಕಬೇಕು. ಅವರು ತಮ್ಮ ದೇಶಕ್ಕೆ ಕೊಡುಗೆ ನೀಡಬೇಕು; ಆದರೆ ಭವಿಷ್ಯದಲ್ಲಿ ಯಾವುದೇ ಕಷ್ಟಕರ ಪರಿಸ್ಥಿತಿ ಉಂಟಾದರೆ, ನಾವು (ಭಾರತದ ಹಿಂದೂಗಳು) ಹಿಂದೆ ಸರಿಯಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ಉಂಟಾದರೆ, ನಾವು ಅದನ್ನು ಪರಿಹರಿಸುತ್ತೇವೆ.
3. 1947ರಲ್ಲಿ ವಿಭಜನೆ ನಡೆಯಿತು. ಇದು ದುರದೃಷ್ಟಕರವಾಗಿತ್ತು. ನಾವು ಜನಸಂಖ್ಯೆಯನ್ನು ವಿಭಜಿಸದೆ ಭೂಮಿಯನ್ನು ವಿಭಜಿಸಿದೆವು. ಎರಡೂ ದೇಶಗಳು ಅಲ್ಪಸಂಖ್ಯಾತರ ರಕ್ಷಣೆಗೆ ಒಪ್ಪಿಕೊಂಡಿದ್ದವು. ನೆಹರು-ಲಿಯಾಖತ್ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು. ಬಾಂಗ್ಲಾದೇಶವು ಅದನ್ನು ಗೌರವಿಸದಿರುವುದು ದುರದೃಷ್ಟಕರ. ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿ ಗೌರವದಿಂದ, ಸುರಕ್ಷಿತವಾಗಿ ಮತ್ತು ಧಾರ್ಮಿಕ ಗುರುತಿನೊಂದಿಗೆ ಬದುಕಬೇಕು ಎಂದು ನಾವು ಬಯಸುತ್ತೇವೆ. ಇದನ್ನು ಸಾಧಿಸಲು ನಾವು ಪ್ರಯತ್ನಿಸಬೇಕು.
4. ಇದನ್ನು ರಾಜಕೀಯ ಸೂತ್ರವಾಗಿ ನೋಡಬಾರದು. ಆಡಳಿತ ಬದಲಾಗಿದೆ; ಆದರೆ ಹಿಂಸಾಚಾರಕ್ಕೆ ಇದೊಂದೇ ಕಾರಣವಲ್ಲ. ಅದಕ್ಕೆ ಧಾರ್ಮಿಕ ಅಂಶವೂ ಇದೆ. ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರು (ಅಲ್ಲಿನ ಉಗ್ರಗಾಮಿಗಳ) ಪ್ರಾಥಮಿಕ ಮತ್ತು ನಿರಂತರ ಗುರಿಯಾಗಿದ್ದಾರೆ. ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೊಸದೇನಲ್ಲ.
5. ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಇದು ಅಸ್ತಿತ್ವದ ಬಿಕ್ಕಟ್ಟು ಆಗಿದೆ. ಇತ್ತೀಚಿನ ಹಿಂಸಾಚಾರವು ಬಾಂಗ್ಲಾದೇಶ ಸರಕಾರ ಮತ್ತು ಅದರ ಸಂಸ್ಥೆಗಳು ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಯಲ್ಲಿ ಭಾಗಿಯಾಗಿವೆ, ಇದು ಗಂಭೀರವಾದ ಕಾಳಜಿಯ ವಿಷಯವಾಗಿದೆ ಎಂದು ಹೇಳಿದರು.
6. ಈ ಹಿಂಸಾಚಾರಕ್ಕೆ ಕಾರಣರಾದವರು ಕೇವಲ ಹಿಂದೂ ವಿರೋಧಿಗಳಲ್ಲ, ಭಾರತ ವಿರೋಧಿಗಳಾಗಲೂ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಅನೇಕ ನಾಯಕರು ಹೇಳಿಕೆ ನೀಡಿದ್ದಾರೆ. ನಮ್ಮ ನೆರೆಯ ದೇಶಗಳೊಂದಿಗೆ ನಮಗೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳಿವೆ. ಭಾರತ ಮತ್ತು ಅದರ ನೆರೆಯ ದೇಶಗಳ ನಡುವೆ ಅಪನಂಬಿಕೆ ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದರ ಹಿಂದೆ ಅನೇಕ ಅಂತಾರಾಷ್ಟ್ರೀಯ ಶಕ್ತಿಗಳಿವೆ. ನಾವು ಪಾಕಿಸ್ತಾನ ಮತ್ತು ‘ಅಮೆರಿಕನ್ ಡೀಪ್ ಸ್ಟೇಟ್’ ಪಾತ್ರದ ಬಗ್ಗೆ ಚರ್ಚಿಸಿದ್ದೇವೆ. ಬಾಂಗ್ಲಾದೇಶದ ಹಿಂದೂ ಸಮುದಾಯದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಕರೆ ನೀಡಲಾಗಿದೆ.
ಸ್ಥಿತಿ ಮೊದಲಿನಂತಾಗುವವರೆಗೆ ಪ್ರಯತ್ನಗಳು ಮುಂದುವರಿಯಬೇಕು!
ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯಿಂದ ಆರ್.ಎಸ್.ಎಸ್. ತೃಪ್ತವಾಗಿದೆಯೇ? ಎಂದು ಕೇಳಿದಾಗ, ಇದು ನಿರಂತರ ಪ್ರಕ್ರಿಯೆ, ಈ ಪ್ರಶ್ನೆ ಸಂಪೂರ್ಣವಾಗಿ ಪರಿಹಾರವಾಗಿಲ್ಲ. ಸರಕಾರ ತನ್ನ ಕೆಲಸವನ್ನು ಮಾಡುತ್ತಿದೆ ಮತ್ತು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕರೆ ನೀಡಿದ್ದೇವೆ. ಕೇಂದ್ರ ಸರಕಾರ ಈ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಂಡಿದೆ. ವಿದೇಶಾಂಗ ಸಚಿವರನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ. ವೈಯಕ್ತಿಕ ಚರ್ಚೆ ನಡೆಸಲಾಗಿದೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳನ್ನು ಬಳಸಲಾಗಿದೆ. ಈ ಬಗ್ಗೆ ನಮಗೆ ತೃಪ್ತಿ ಇದೆ. ನಮ್ಮ ಪ್ರಸ್ತಾವನೆಯಲ್ಲಿ ಈ ಕಾಳಜಿಯನ್ನು ಉಲ್ಲೇಖಿಸಿದ್ದೇವೆ. ಸಾಮಾನ್ಯ ಸ್ಥಿತಿ ಸಂಪೂರ್ಣವಾಗಿ ಮೊದಲಿನಂತಾಗುವವರೆಗೆ ಪ್ರಯತ್ನಗಳು ಮುಂದುವರಿಯಬೇಕು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಭಾರತ ಮಧ್ಯಪ್ರವೇಶಿಸಬೇಕೇ? ಎಂದು ಕೇಳಿದಾಗ ಅರುಣ್ ಕುಮಾರ್ ಅವರು, ಶೇಖ್ ಹಸೀನಾ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ನಿರ್ಧಾರವನ್ನು ಬಾಂಗ್ಲಾದೇಶದ ಜನರು ತೆಗೆದುಕೊಳ್ಳುತ್ತಾರೆ. ಅವರಿಗೆ ತಮ್ಮದೇ ಆದ ಸಂವಿಧಾನ ಮತ್ತು ವ್ಯವಸ್ಥೆ ಇದೆ. ಈ ವಿಷಯದಲ್ಲಿ ಬೇರೆ ಯಾವುದೇ ದೇಶ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ, ಎಂದು ಹೇಳಿದರು.