ಲೆಬನಾನ್‌ನಲ್ಲಿ ಪೇಜರ್ ಸ್ಫೋಟದಲ್ಲಿ ಇಲ್ಲಿಯವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ, 4 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ

  • ಪೇಜರ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ

  • ಇಸ್ರೇಲ್ ಸ್ಫೋಟ ನಡೆಸಿದೆ ಎಂದು ದಾವೆ !

ಬೆರೂತ (ಲೆಬನಾನ್) – ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 400 ಜನರ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ. ಗಾಯಗೊಂಡವರಲ್ಲಿ ಲೆಬನಾನನಲ್ಲಿ ಇರಾನ್‌ನ ರಾಯಭಾರಿಯೂ ಸೇರಿದ್ದಾರೆ. ಹೆಚ್ಚಿನ ಪೇಜರ್‌ಗಳು ಜನರ ಕೈಯಲ್ಲಿ ಅಥವಾ ಕಿಸೆಯಲ್ಲಿರುವಾಗ ಸ್ಫೋಟಗೊಂಡವು. ಈ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಹಿಜ್ಬುಲ್ಲಾ ಭಯೋತ್ಪಾದಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಈ ಸ್ಫೋಟಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಹಿಜ್ಬುಲ್ಲಾ ಸಂಘಟನೆಯು ಸಂಭಾಷಣೆ ನಡೆಸಲು ಪೇಜರ್‌ಗಳನ್ನು ಅತ್ಯಂತ ಸುರಕ್ಷಿತ ಸಾಧನವಾಗಿ ಉಪಯೋಗಿಸುತ್ತಿತ್ತು. ಹಿಜ್ಬುಲ್ಲಾ ಈ ಪ್ರಕರಣದಲ್ಲಿ ಇಸ್ರೇಲನ್ನು ಆರೋಪಿಸಿದೆ. ಈ ಬಗ್ಗೆ ಇಸ್ರೇಲ್‌ನಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಿಜ್ಬುಲ್ಲಾ ‘ಈ ದಾಳಿಗೆ ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ’, ಬೆದರಿಕೆ ಹಾಕಿದೆ.

ಪೇಜರ್ ಎಂದರೇನು ?

ಪೇಜರ್ ಒಂದು ವಾಯರ್‍ಲೆಸ್ ಉಪಕರಣವಾಗಿದೆ. ಇದನ್ನು ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸಣ್ಣ ಪರದೆ ಮತ್ತು ಸೀಮಿತ ‘ಕೀಪ್ಯಾಡ್’ನೊಂದಿಗೆ ಬರುತ್ತದೆ. ಇದರ ಸಹಾಯದಿಂದ ಸಂದೇಶಗಳನ್ನು ಅಥವಾ ಎಚ್ಚರಿಕೆಗಳನ್ನು ತ್ವರಿತವಾಗಿ ಸ್ವೀಕರಿಸಬಹುದು. ಮೊಬೈಲ್ ಫೋನಗಿಂತಲೂ ಮೊದಲು ಪೇಜರ್ ಗಳ ಬಳಕೆ ಪ್ರಚಲಿತದಲ್ಲಿತ್ತು. ನಂತರ ಅದರ ಬಳಕೆ ಕ್ರಮೇಣ ಕಡಿಮೆಯಾಯಿತು. ಲೆಬನಾನ್‌ನಲ್ಲಿ ಈಗಲೂ ಅವುಗಳನ್ನು ಬಳಸಲಾಗುತ್ತದೆ.