ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ವಿನಂತಿ !
ಸದ್ಯ ಸಮಾಜದಲ್ಲಿ ಬಹಳಷ್ಟು ಜನರಿಗೆ ಸಂಚಾರಿವಾಣಿಯಲ್ಲಿ ಅಪರಾಧಿಗಳಿಂದ ‘ಗಡಿಶುಲ್ಕ (ಕಸ್ಟಮ್) ಅಧಿಕಾರಿ ಮಾತನಾಡು ತ್ತಿದ್ದೇನೆ’, ಎಂದು ಹೇಳಿ ಸಂಚಾರಿವಾಣಿ ಕರೆ ಬರುತ್ತದೆ ಹಾಗೂ ವಿಚಾರಣೆಯ ನೆಪದಲ್ಲಿ ಹೆದರಿಸಿ ಬೆದರಿಸಿ ಮಾನಸಿಕ ಒತ್ತಡ ಹೇರಿ ಲಕ್ಷಗಟ್ಟಲೆ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದಾರೆ, ಎಂಬುದು ಬೆಳಕಿಗೆ ಬಂದಿದೆ. ನಾವು ಮೋಸ ಹೋಗದಂತೆ ಹಾಗೂ ಈ ವಿಷಯದಲ್ಲಿ ಯಾವ ರೀತಿಯಲ್ಲಿ ಜಾಗರೂಕರಾಗಿರಬೇಕು, ಎಂಬುದನ್ನು ಇಲ್ಲಿ ಹೇಳುತ್ತಿದ್ದೇವೆ.
೧. ಮೋಸಗೊಳಿಸಲು ಉಪಯೋಗಿಸುವ ಪದ್ಧತಿ
೧ ಅ. ಮೊದಲ ಸಂಪರ್ಕ ಮಾಡುವುದು
ನಮಗೆ ರೆಕಾರ್ಡ್ ಮಾಡಿದ ಒಂದು ಸಂದೇಶ ನಮ್ಮ ಸಂಚಾರಿವಾಣಿಗೆ ಬರುತ್ತದೆ. ಇದರಲ್ಲಿ ನಮಗೆ ಹೆಚ್ಚಿನ ಮಾಹಿತಿಗಾಗಿ ಸಂಚಾರಿವಾಣಿಯ ಯಾವುದಾದರೊಂದು ಸಂಖ್ಯೆಯನ್ನು ಒತ್ತಲು ಹೇಳಲಾಗುತ್ತದೆ.
೧ ಆ. ವೈಯಕ್ತಿಕ ಸಂಪರ್ಕ
‘ನಾನು ಗಡಿಶುಲ್ಕ (ಕಸ್ಟಮ್) ಅಧಿಕಾರಿ ಆಗಿದ್ದೇನೆ’, ಎಂದು ಹೇಳುವ ವ್ಯಕ್ತಿ ನಿಮಗೆ ಕರೆ ಮಾಡುತ್ತಾನೆ. ‘ನಿಮ್ಮ ಹೆಸರಿನಲ್ಲಿ ಸಂಶಯಾತ್ಮಕ ಪಾರ್ಸೆಲ್ ಬಂದಿದೆ ಹಾಗೂ ಅದರಲ್ಲಿ ಕಾನೂನುಬಾಹಿರ ವಸ್ತು ಇರುವುದರಿಂದ ಅದನ್ನು ವಶಪಡಿಸಿಕೊಳ್ಳಲಾಗಿದೆ’, ಎಂದು ಆ ವ್ಯಕ್ತಿ ಹೇಳುತ್ತಾನೆ. ಇದೇ ರೀತಿ ಬೇರೆ ಬೇರೆ ಸರಕಾರಿ ವಿಭಾಗದ ಅಧಿಕಾರಿ ಆಗಿದ್ದೇನೆ ಎಂದು ಹೇಳುತ್ತಾ ‘ನಿಮ್ಮ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ತಯಾರಿಸಲಾಗಿದೆ ಅಥವಾ ನಿಮ್ಮ ಸಂಪರ್ಕ ಕ್ರಮಾಂಕದ ಮೇಲೆ ಅಪರಾಧ ದಾಖಲಾಗಿದೆ’, ಇತ್ಯಾದಿ ಮಾಹಿತಿಯನ್ನು ಆ ವ್ಯಕ್ತಿ ನೀಡುತ್ತಾನೆ.
೧ ಇ. ಮಾಹಿತಿಯನ್ನು ಒಟ್ಟು ಮಾಡುವುದು
‘ಅಧಿಕಾರಿ’ಯ ಸೋಗಿನಲ್ಲಿರುವ ವ್ಯಕ್ತಿ ಆವಶ್ಯಕತೆಗನುಸಾರ ಮೃದುವಾಗಿ ಮಾತನಾಡಿ ಅಥವಾ ಬೆದರಿಸಿ ನಿಮ್ಮಿಂದ ಬ್ಯಾಂಕ್ ವ್ಯವಹಾರದ ಬಗ್ಗೆ ವಿಚಾರಿಸುತ್ತಾನೆ ಮತ್ತು ಪಾಸ್‌ವರ್ಡ್ ಕೂಡ ಕೇಳುತ್ತಾನೆ.
೧ ಈ. ಬೆದರಿಸುವುದು
ಅವರು ನಿಮ್ಮ ವೈಯಕ್ತಿಕ ಮಾಹಿತಿಯ ಬಗ್ಗೆ ಹಾಗೂ ‘ನಿಮ್ಮ ವಿಚಾರಣೆಗಾಗಿ ನೀವು ಇನ್ನೊಂದು ರಾಜ್ಯಕ್ಕೆ ಬರಬೇಕಾಗುವುದು’, ಎಂದು ಹೇಳಿ ನಿಮ್ಮನ್ನು ಬೆದರಿಸುತ್ತಾರೆ.
೨. ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ?
೨ ಅ. ಶಾಂತ ಇರಬೇಕು
ಇಂತಹ ಮಾಹಿತಿ ಯಾರಾದರೂ ಕೇಳುತ್ತಿದ್ದರೆ ಶಾಂತ ಇರಬೇಕು ಹಾಗೂ ತಮ್ಮ ಯಾವುದೇ ಮಾಹಿತಿಯನ್ನು ಅವರಿಗೆ ಕೊಡಬಾರದು.
೨ ಆ. ಸಾಕ್ಷಿ (ಪುರಾವೆ) ನೀಡಲು ವಿನಂತಿಸಬೇಕು
ನಿಮ್ಮ ಹೆಸರಿನಲ್ಲಿ ಬಂದಿರುವ ಆ ಪಾರ್ಸಲ್‌ನ ಛಾಯಾಚಿತ್ರವನ್ನು ನೀಡಲು ವಿನಂತಿಸಬೇಕು.
೨ ಇ. ಇಂತಹ ಮೋಸಗಾರಿಕೆಯ ಕರೆ ಬಂದಾಗ ಅದನ್ನು ತಕ್ಷಣ ರಿಜೆಕ್ಟ್ ಮಾಡಿರಿ !
೨ ಈ. ದೂರು ದಾಖಲಿಸಿ
ಈ ವಿಷಯದಲ್ಲಿ ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ.
೩. ಮಹತ್ವದ ಅಂಶಗಳು
೩ ಅ. ನಮ್ಮ ವೈಯಕ್ತಿಕ ಮಾಹಿತಿಯನ್ನು ದೂರವಾಣಿ ಅಥವಾ ಸಂಚಾರಿ ಗಣಕಯಂತ್ರದ ಮೂಲಕ ಅಧಿಕಾರಿಗಳಿಗೆ ನೀಡುವುದು ಕಾನೂನಿಗನುಸಾರ ಕಡ್ಡಾಯವಲ್ಲ. ವ್ಯಕ್ತಿಯು ಸಂಚಾರಿವಾಣಿಯಲ್ಲಿ ಮಾಹಿತಿ ನೀಡಲು ನಿರಾಕರಿಸಬಹುದು.
೩ ಆ. ತನಿಖೆಗಾಗಿ ನಾವು ಇನ್ನೊಂದು ರಾಜ್ಯದ ಪೊಲೀಸ್ ಠಾಣೆಗೆ ಹೋಗಬೇಕೆಂಬ ಬಾಧ್ಯತೆಯಿಲ್ಲ.
೪. ಗಮನದಲ್ಲಿಡಿ ….
೪ ಅ. ಯಾವುದೇ ಸರಕಾರಿ ಅಧಿಕಾರಿ ಸಂಚಾರಿವಾಣಿಯಿಂದ ನಿಮ್ಮ ಮಾಹಿತಿಯನ್ನು ಕೇಳುವುದಿಲ್ಲ. ಸಂಬಂಧಪಟ್ಟ ವಿಚಾರಣೆಯನ್ನು ಲಿಖಿತ ಸೂಚನೆಯೊಂದಿಗೆ ವ್ಯಕ್ತಿಯ ಮನೆಯಲ್ಲಿ, ಕಾರ್ಯಾಲಯ ದಲ್ಲಿ ಅಥವಾ ಪೊಲೀಸ್ ಠಾಣೆಯಲ್ಲಿ ಮಾಡಬಹುದು.
೪ ಆ. ಯಾವುದೇ ಅಪರಾಧವನ್ನು ತಾನು ಖಾತ್ರಿಪಡಿಸಿಕೊಳ್ಳದೆ ತಕ್ಷಣ ಆನ್‌ಲೈನ್ ದಂಡ ತುಂಬಿಸಲು ಮುಂದಾಗಬಾರದು.
೪ ಇ. ಇಂತಹ ಪ್ರಸಂಗದಲ್ಲಿ ನಕಲಿ ಅಧಿಕಾರಿ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡಲು ಒತ್ತಾಯಿಸುತ್ತಾನೆ. ಯಾವುದೇ ಪರಿಸ್ಥಿತಿಯಲ್ಲಿ ಈ ಒತ್ತಡಕ್ಕೆ ಮಣಿಯಬಾರದು. ಯಾವುದೇ ಕಾನೂನಿನಲ್ಲಿ ‘ಆನ್‌ಲೈನ್’ ಅಥವಾ ವಿಡಿಯೋ ಕಾಲ್‌ನ ಮೂಲಕ ತನಿಖೆ ನಡೆಸುವ ಪದ್ಧತಿಯಿಲ್ಲ.
ಜಾಗರೂಕರಾಗಿರಿ ಹಾಗೂ ಮೋಸ ಹೋಗದಿರಿ !
ಆಡಳಿತ, ಪ್ರಸಾರಮಾಧ್ಯಮಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಲಾಗುತ್ತಿದ್ದರೂ, ಇಂತಹ ಮೋಸಗಾರಿಕೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿವೆ. ಆದ್ದರಿಂದ ಈ ವಿಷಯದಲ್ಲಿ ಸತರ್ಕರಾಗಿರಬೇಕು. ‘ಸನಾತನ ಪ್ರಭಾತ’ದ ೨೫/ ೫೦ ರ ಸಂಚಿಕೆಯಲ್ಲಿ ‘ಫೆಡೆಕ್ಸ್ ಹಗರಣ’ ಹೇಗೆ ನಡೆಯುತ್ತದೆ ಹಾಗೂ ಅದರ ಮೂಲಕ ಸಮಾಜದಲ್ಲಿ ಜನರನ್ನು ಹೇಗೆ ಮೋಸ ಗೊಳಿಸಲಾಗುತ್ತದೆ’, ಎಂದು https://sanatanprabhat.org/kannada/124502.html ಈ ಲಿಂಕ್‌ನಲ್ಲಿ ಮಾಹಿತಿಯನ್ನು ವಿಸ್ತಾರವಾಗಿ ಪ್ರಕಟಿಸಲಾಗಿತ್ತು.