ಒಟಾವಾ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮುಂದಿನ ಕೆಲವು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು, ಎಂದು ಕೆನಡಾದ ಪತ್ರಿಕೆ “ಗ್ಲೋಬ್ ಎಂಡ್ ಮೇಲ್” ವರದಿ ಮಾಡಿದೆ. ಟ್ರೂಡೊ ಅವರ ಮೇಲೆ ಅವರ ಲಿಬರಲ್ ಪಕ್ಷದ ಸಂಸದರಿಂದ ಅನೇಕ ತಿಂಗಳಿನಿಂದ ರಾಜೀನಾಮೆ ನೀಡುವಂತೆ ಒತ್ತಡ ಇದೆ. ಕೆನಡಾದಲ್ಲಿ ಅಕ್ಟೋಬರ್ ಮೊದಲು ಸಂಸತ್ತಿನ ಚುನಾವಣೆಗಳು ನಡೆಯಲಿವೆ; ಆದರೆ ಟ್ರುಡೊ ರಾಜೀನಾಮೆ ನೀಡಿದ ನಂತರ, ಈ ಚುನಾವಣೆಗಳು ಅದಕ್ಕೂ ಮುನ್ನ ನಡೆಯಬಹುದು. ದೇಶದಲ್ಲಿ ನಡೆಸಿದ ಹಲವಾರು ಸಮೀಕ್ಷೆಗಳ ಪ್ರಕಾರ, ಕೆನಡಾದಲ್ಲಿ ಚುನಾವಣೆಗಳು ನಡೆದರೆ, ಕನ್ಸರ್ವೇಟಿವ್ ಪಕ್ಷಕ್ಕೆ ಬಹುಮತ ಸಿಗಬಹುದು; ಏಕೆಂದರೆ ಹಣದುಬ್ಬರ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆಸಲಾದ ‘ಇಪ್ಸಾಸ್’ ಸಮೀಕ್ಷೆಯಲ್ಲಿ, ಕೇವಲ ಶೇ. 28 ರಷ್ಟು ನಾಗರಿಕರು ಟ್ರೂಡೊ ಮರುಚುನಾವಣೆ ಪಡೆಯಬೇಕೆಂದು ಹೇಳಿದ್ದಾರೆ. ಟ್ರುಡೊರವರನ್ನು ಒಪ್ಪದವರ ಸಂಖ್ಯೆ ಶೇ. 65 ರಷ್ಟಕ್ಕೆ ಏರಿದೆ.
ಟ್ರುಡೊ ಅವರ ಪಕ್ಷದ ಬಳಿ ಬಹುಮತವಿಲ್ಲ
ಕೆನಡಾದ ಸಂಸತ್ತಿನಲ್ಲಿ 338 ಸ್ಥಾನಗಳಿವೆ. ಇದರಲ್ಲಿ ಬಹುಮತದ ಸಂಖ್ಯೆ 170 ಆಗಿದೆ. ಟ್ರುಡೊ ಅವರ ಲಿಬರಲ್ ಪಕ್ಷದ 153 ಸಂಸದರಿದ್ದಾರೆ. ಕಳೆದ ವರ್ಷ, ಟ್ರುಡೊ ಸರಕಾರದ ಮಿತ್ರಪಕ್ಷವಾದ ಖಲಿಸ್ತಾನ್ ಬೆಂಬಲಿಗ ಡೆಮಾಕ್ರಟಿಕ್ ಪಾರ್ಟಿಯು ತನ್ನ 25 ಸಂಸದರ ಬೆಂಬಲವನ್ನು ಹಿಂಪಡೆದಿತ್ತು. ಇದರಿಂದ ಟ್ರುಡೊ ಸರಕಾರ ಅಲ್ಪಮತಕ್ಕೆ ಬಂದಿತು. ಬಹುಮತದ ಪರೀಕ್ಷೆಯಲ್ಲಿ ಟ್ರುಡೊ ಅವರ ಲಿಬರಲ್ ಪಕ್ಷಕ್ಕೆ ಮತ್ತೊಂದು ಪಕ್ಷದ ಬೆಂಬಲ ಸಿಕ್ಕಿತು. ಇದರಿಂದಾಗಿ ಟ್ರುಡೊ ಅವರ ಸರಕಾರ ಉಳಿಯಿತು.