ದೇಶದಲ್ಲಿ 3 HMPV ವೈರಸ್ ಸೋಂಕಿನ ರೋಗಿಗಳು ಪತ್ತೆ; ಕರ್ನಾಟಕದಲ್ಲೂ ಕಾಲಿಟ್ಟ ವೈರಸ್

ಬೆಂಗಳೂರು – ‘ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್’ (ಎಚ್‌ಎಂಪಿವಿ) ಎಂಬ ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಭಾರತದಲ್ಲಿ ಈ ವೈರಸ್ ಸೋಂಕಿತ 3 ರೋಗಿಗಳು ವರದಿಯಾಗಿದೆ. ಬೆಂಗಳೂರಿನಲ್ಲಿ 3 ಮತ್ತು 8 ತಿಂಗಳ ವಯಸ್ಸಿನ ಶಿಶುಗಳಿಗೆ ಸೋಂಕು ಕಂಡುಬಂದಿದ್ದು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಗು ಪ್ರಯಾಣ ಮಾಡಿಲ್ಲ. ಅಲ್ಲದೆ, ಗುಜರಾತ್‌ನ ಕರ್ಣಾವತಿಯಲ್ಲಿ 2 ತಿಂಗಳ ಮಗುವೂ ಸೋಂಕಿಗೆ ಒಳಗಾಗಿದೆ. ಅದೂ ಸಹ ಚಿಕಿತ್ಸೆ ಪಡೆಯುತ್ತಿದೆ.

ಚೀನಾದಲ್ಲಿ ಈ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಕೆಲವು ದಿನಗಳ ಹಿಂದೆ ‘ಈ ರೀತಿಯ ವೈರಸ್ ಅನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಹೇಳಿತ್ತು. ಹಾಗೆಯೇ ಆರೋಗ್ಯ ಸಚಿವಾಲಯದಿಂದಲೂ ಸಭೆ ಕರೆಯಲಾಗಿತ್ತು.

ಎಚ್‌.ಎಂ.ಪಿ.ವಿ.ಯ ಲಕ್ಷಣಗಳೇನು?

ಹ್ಯೂಮನ್ ಮೆಟಾಪನ್ಯ್ಮೂಮೋ ವೈರಸ್’ ಸಾಮಾನ್ಯ ಶೀತ ಮತ್ತು ಕರೋನಾ ವೈರಸ್‌ಗೆ ಹೋಲುವ ಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಕೆಮ್ಮು ಮತ್ತು ಜ್ವರವೂ ಬರುತ್ತದೆ. ಚೀನಾದ ಹಲವು ಭಾಗಗಳಲ್ಲಿ ಈ ವೈರಸ್ ಸೋಂಕು ಹೆಚ್ಚುತ್ತಿದೆ. ಪರಿಣಾಮವಾಗಿ, ಸರಕಾರಿ ಅಧಿಕಾರಿಗಳು ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಕೈ ತೊಳೆಯುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೆ.

‘ಎಚ್‌.ಎಂ.ಪಿ.ವಿ.’ ಎಂದರೇನು ?

‘ಎಚ್‌.ಎಂ.ಪಿ.ವಿ.’ ಅನ್ನು ಮೊದಲು 2001 ರಲ್ಲಿ ಡಚ್ ಸಂಶೋಧಕರು ಕಂಡುಹಿಡಿದಿದ್ದರು. ಈ ವೈರಸ್ ಉಸಿರಾಟದ ಸೋಂಕುಗಳನ್ನು ಉಂಟುಮಾಡುತ್ತದೆ. ವೈರಸ್ ಕನಿಷ್ಠ 60 ವರ್ಷಗಳಿಂದ ಪರಿಚಲನೆಯಲ್ಲಿದೆ ಮತ್ತು ಈಗ ವಿಶ್ವಮಟ್ಟದಲ್ಲಿ ಪ್ರಚಲಿತದಲ್ಲಿರುವ ಉಸಿರಾಟದ ರೋಗಕಾರಕ ಎಂದು ಗುರುತಿಸಲ್ಪಟ್ಟಿದೆ. ‘ಎಚ್‌.ಎಂ.ಪಿ.ವಿ.’ ಮುಖ್ಯವಾಗಿ ಕೆಮ್ಮುವಾಗ ಮತ್ತು ಸೀನುವಿಕೆಯಿಂದ ಬರುವ ಹನಿಗಳಿಂದ ಹರಡುತ್ತದೆ. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಪರಿಸರಕ್ಕೆ ಒಡ್ಡಿಕೊಳ್ಳುವುದರ ಮೂಲಕವೂ ವೈರಸ್ ಹರಡಬಹುದು. ಈ ಸೋಂಕಿನ ಅವಧಿಯು 3 ರಿಂದ 5 ದಿನಗಳು ಆಗಿರುತ್ತದೆ. ಈ ವೈರಸ್ ಚಳಿಗಾಲ ಮತ್ತು ವಸಂತ ಋತುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

‘ಎಚ್‌.ಎಂ.ಪಿ.ವಿ.’ ಅಪಾಯಕಾರಿ ಅಲ್ಲ ! – ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಮಹಾರಾಷ್ಟ್ರ) ಮಾಜಿ ಅಧ್ಯಕ್ಷ ಡಾ. ಅವಿನಾಶ ಭೋಂಡವೆ

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಮಹಾರಾಷ್ಟ್ರ) ಮಾಜಿ ಅಧ್ಯಕ್ಷ ಡಾ. ಅವಿನಾಶ್ ಭೋಂಡವೆ ಅವರು ಮಾತನಾಡಿ, 2025 ರಲ್ಲಿ, ‘ಎಚ್‌.ಎಂ.ಪಿ.ವಿ.’ ವೈರಸ್ ಚೀನಾದಲ್ಲಿ ಹರಡಿತು; ಆದರೆ ಇದು ತೀರಾ ಹೊಸದೇನಲ್ಲ. ಇದು ಕೆಲವು ಸಮಯದ ಹಿಂದೆ ಅಥವಾ ಕೆಲವು ವರ್ಷಗಳ ಹಿಂದೆ ಅಮೇರಿಕ, ಕೆನಡಾ ಮತ್ತು ಇತರ ದೇಶಗಳಲ್ಲಿಯೂ ಕಂಡುಬಂದಿದೆ. ಈ ವೈರಸ್ ಕೊರೊನಾವನ್ನು ಹೋಲುತ್ತಿದ್ದರೂ, ಇದು ಕರೋನಾ ಗುಂಪಿಗೆ ಸೇರಿಲ್ಲ. ಈ ಕಾಯಿಲೆಯಿಂದ ಆಗುವ ತೊಂದರೆ ಕರೋನಾಕ್ಕಿಂತ ಕಡಿಮೆಯಿದೆ. ಅಲ್ಲದೆ, ಈ ವೈರಸ್‌ನಿಂದ ಆಗುವ ಸಾವಿನ ಪ್ರಮಾಣವು ತುಂಬಾ ಕಡಿಮೆಯಿದೆ. ಇದರ ಸೋಂಕಿನ ಬಾಧೆಯಿಂದ ಬಳಲುವ ವ್ಯಕ್ತಿಗೆ ಮೂಗಿನಿಂದ ನೀರು ಸುರಿಯುವುದು, ಸೀನುವಿಕೆ, ಕೆಮ್ಮು, ಗಂಟಲು ನೋವು, ಜ್ವರ ಬರುವುದು ಮತ್ತು ರೋಗವು ಮುಂದುವರೆದರೆ, ನ್ಯುಮೋನಿಯಾದಂತಹ ರೋಗಲಕ್ಷಣಗಳನ್ನು ತೋರಿಸುತ್ತದೆ. ಆಮ್ಲಜನಕದ ಮಟ್ಟಗಳು ಸಹ ಕಡಿಮೆಯಾಗಬಹುದು; ಆದರೆ ಇದು ಅಪಾಯಕಾರಿ ಅಲ್ಲ. ಸಾಮಾನ್ಯವಾಗಿ ರೋಗವು 5 ರಿಂದ 10 ದಿನಗಳಲ್ಲಿ ಸಂಪೂರ್ಣವಾಗಿ ಗುಣವಾಗುತ್ತದೆ. ವಿಶ್ರಾಂತಿ ಮತ್ತು ಇತರ ಕೆಲವು ಜ್ವರ ಔಷಧಿಗಳನ್ನು ಸೇವಿಸುವುದರಿಂದ ರೋಗವು ವಾಸಿಯಾಗುತ್ತದೆ ಎಂದು ಹೇಳಿದರು.