‘ಶೇಖ್ ಹಸೀನಾ ಭಾರತದಲ್ಲಿ ಕುಳಿತು ಬಾಂಗ್ಲಾದೇಶದ ಬಗ್ಗೆ ಹೇಳಿಕೆಗಳನ್ನು ನೀಡಬಾರದಂತೆ !’ – ಮಹಮ್ಮದ ಯೂನಸ್

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ ಯೂನಸ್ ಅವರ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಎಲ್ಲಿಯವರೆಗೆ ಶೇಖ್ ಹಸೀನಾ ಅವರ ಹಸ್ತಾಂತರದ ಬಗ್ಗೆ ಭಾರತದೊಂದಿಗೆ ಚರ್ಚಿಸುವುದಿಲ್ಲವೋ, ಅಲ್ಲಿಯವರೆಗೆ ಅವರು ಬಾಯಿ ಮುಚ್ಚಿಕೊಂಡಿರಬೇಕು. ಇದರಿಂದ ಉಭಯ ದೇಶಗಳ ನಡುವಿನ ಸಂಬಂಧವು ಮೊದಲಿನಂತೆಯೇ ಉಳಿಯುತ್ತದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಇವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ಇದರೊಂದಿಗೆ ಅವರು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ಮತ್ತು ಸಂಬಂಧಗಳನ್ನು ಇನ್ನಷ್ಟು ಸುಧಾರಿಸಲು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆಯೆಂದು ಹೇಳಿದ್ದಾರೆ. ಆಗಸ್ಟ್ 13 ರಂದು ಶೇಖ್ ಹಸೀನಾ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಯೂನಸ್ ಇವರು ಹೇಳಿಕೆ ನೀಡಿದರು. ಶೇಖ್ ಹಸೀನಾ ಅವರು ನ್ಯಾಯವನ್ನು ಕೋರಿದ್ದರು ಮತ್ತು ಬಾಂಗ್ಲಾದೇಶದಲ್ಲಿನ ಇತ್ತೀಚಿನ ಭಯೋತ್ಪಾದಕ ಕೃತ್ಯಗಳು, ಕೊಲೆಗಳಲ್ಲಿ ಭಾಗಿಯಾಗಿರುವ ಜನರ ತನಿಖೆ ನಡೆಸಬೇಕು. ಅವರಿಗೆ ಶಿಕ್ಷೆಯಾಗಬೇಕು’ ಎಂದು ಹೇಳಿದ್ದರು.

1. ಶೇಖ್ ಹಸೀನಾ ಅವರಿಗೆ ಸಲಹೆ ನೀಡುವಾಗ ಯೂನಸ್ ಇವರು, ಭಾರತದಲ್ಲಿ ಯಾರೂ ಶೇಖ್ ಹಸೀನಾ ಅವರ ನಿಲುವನ್ನು ಒಪ್ಪುವುದಿಲ್ಲ. ಅವರು ಭಾರತದಲ್ಲಿದ್ದಾರೆ. ಅವರ ಹೇಳಿಕೆಗಳಿಂದ ಸಮಸ್ಯೆ ನಿರ್ಮಾಣವಾಗುತ್ತದೆ. ಭಾರತದಲ್ಲಿದ್ದು ಮಾತನಾಡುತ್ತಿದ್ದಾರೆ, ಸೂಚನೆ ನೀಡುತ್ತಿದ್ದಾರೆ, ಇದು ಯಾರಿಗೂ ಇಷ್ಟವಾಗುವುದಿಲ್ಲ. ಬಾಂಗ್ಲಾದೇಶ ಸರಕಾರ ಅವರನ್ನು ಎಲ್ಲಿಯವರೆಗೆ ಮರಳಿ ಕರೆತರಲು ಇಚ್ಛಿಸುವುದಿಲ್ಲವೋ, ಅಲ್ಲಿಯ ವರೆಗೆ ಅವರು ಸುಮ್ಮನಿರಬೇಕಾಗುವುದು.

2. ಯೂನಸ್ ಮಾತು ಮುಂದುವರಿಸಿ, ಬಾಂಗ್ಲಾದೇಶ ಭಾರತದೊಂದಿಗೆ ಸುದೃಢ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ; ಆದರೆ ‘ಶೇಖ್ ಹಸೀನಾ ಇಲ್ಲದೇ ಹೋದರೆ ಬಾಂಗ್ಲಾದೇಶದ ಪರಿಸ್ಥಿತಿ ಅಫ್ಘಾನಿಸ್ತಾನದಂತಾಗುತ್ತದೆ’ ಎನ್ನುವ ವಿಚಾರದಿಂದ ಭಾರತ ಹೊರಗೆ ಬರಬೇಕಾಗುವುದು. ಆವಾಮಿ ಲೀಗ ಹೊರತುಪಡಿಸಿದರೆ ಇತರ ರಾಜಕೀಯ ಪಕ್ಷಗಳಿಗೆ ‘ಇಸ್ಲಾಮಿ’ ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು. ‘ಹಸೀನಾ ಅವರ ನಾಯಕತ್ವದಿಂದಲೇ ದೇಶಕ್ಕೆ ಸ್ಥೈರ್ಯ ಸಿಗುತ್ತದೆ’ ಎಂದು ಹೇಳುವುದನ್ನು ಭಾರತ ನಿಲ್ಲಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಹೇಳಿಕೆಯಿಂದ ಬಾಂಗ್ಲಾದೇಶವು ಶೇಖ ಹಸೀನಾರೊಂದಿಗೆ ಯಾವ ರೀತಿ ನಡೆದುಕೊಳ್ಳಲಿದೆಯೆನ್ನುವುದು ಗಮನಕ್ಕೆ ಬರುತ್ತದೆ ! ಈ ಸ್ಥಿತಿ ಬರಲು ಶೇಖ ಹಸೀನಾ ಅವರೇ ಜವಾಬ್ದಾರರಾಗಿದ್ದಾರೆ. ಅವರು ಕಠಿಣ ನಿರ್ಣಯವನ್ನು ತೆಗೆದುಕೊಂಡಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ !