ಅಮೆರಿಕಾದಲ್ಲಿ ನೂತನವಾಗಿ ಆಯ್ಕೆಯಾದ ಭಾರತೀಯ ಮೂಲದ 6 ಸಂಸದರಿಂದ ಪ್ರಮಾಣ ವಚನ !

ಸಂಸದ ಸುಹಾಸ್ ಸುಬ್ರಹ್ಮಣ್ಯಂ ಇವರು ಶ್ರೀಮದ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕಾರ

ವಾಷಿಂಗ್ಟನ್ (ಅಮೇರಿಕಾ) – ಇತ್ತೀಚೆಗೆ ಅಮೇರಿಕಾದಲ್ಲಿ ಹೊಸದಾಗಿ ಚುನಾಯಿತರಾದ ಭಾರತೀಯ ಮೂಲದ ಸಂಸದರಾದ ಸುಹಾಸ್ ಸುಬ್ರಹ್ಮಣ್ಯಂ, ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀ ಠಾಣೆದಾರ್ ಅವರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.  ಅಮೆರಿಕಾದ ಸಂಸತ್ತಿನ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌’ನ ಕೆಳ ಸಭಾಗೃಹದಲ್ಲಿ ಭಾರತೀಯ ಮೂಲದ 6 ಸಂಸದರು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಿದ್ದು ಇದೇ ಮೊದಲಸಲವಾಗಿದೆ. ಈ ಸಂದರ್ಭದಲ್ಲಿ ಸಂಸದ ಸುಹಾಸ್ ಸುಬ್ರಹ್ಮಣ್ಯಂ ಅವರು ಶ್ರೀಮದ್ ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ, ಸುಹಾಸ್ ಸುಬ್ರಹ್ಮಣ್ಯಂ ಮಾತನಾಡಿ, “ನನ್ನ ಪೋಷಕರು ನನ್ನನ್ನು ವರ್ಜೀನಿಯಾದಿಂದ ಮೊದಲ ಭಾರತೀಯ ಅಮೆರಿಕನ್ ಮತ್ತು ದಕ್ಷಿಣ ಏಷ್ಯಾದ ಸಂಸದನಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದ್ದಾರೆ. “ಭಾರತದಿಂದ ಡಲ್ಲಾಸ್ ವಿಮಾನ ನಿಲ್ದಾಣದಲ್ಲಿ ಮೊದಲಸಲ ಬಂದಿಳಿದಾಗ, ನೀವೇನಾದರೂ ನನ್ನ ತಾಯಿಗೆ, ನಿಮ್ಮ ಮಗ ಭವಿಷ್ಯದಲ್ಲಿ ವರ್ಜೀನಿಯಾವನ್ನು ಪ್ರತಿನಿಧಿಸುತ್ತಾನೆ ಎಂದು ಹೇಳಿದ್ದರೆ, ಖಂಡಿತವಾಗಿಯಾ ಅವರು ಅದನ್ನು ನಂಬುತ್ತಿರಲಿಲ್ಲ.” ಎಂದು ಹೇಳಿದರು.