ಜಿಹಾದಿ ‘ಜಮಾತ್-ಎ-ಇಸ್ಲಾಮಿ’ ಪಕ್ಷದ ಮೇಲಿನ ನಿರ್ಬಂಧ ತೆಗೆದುಹಾಕಿದ ಬಾಂಗ್ಲಾದೇಶ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ‘ಜಮಾತ್-ಎ-ಇಸ್ಲಾಮಿ’ ಪಕ್ಷದ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಆಗಿನ ಪ್ರಧಾನಿ ಶೇಖ್ ಹಸೀನಾ ಅವರು ಆಗಸ್ಟ್ 1 ರಂದು ಈ ಪಕ್ಷದ ಮೇಲೆ ನಿರ್ಬಂಧವನ್ನು ಹೇರಿದ್ದರು. ವಿದ್ಯಾರ್ಥಿಗಳ ಚಳುವಳಿಯಲ್ಲಿ ಗಲಭೆಯನ್ನು ನಡೆಸಿರುವ ಆರೋಪ `ಜಮಾತ್’ ಮೇಲಿತ್ತು.

ಬಾಂಗ್ಲಾದೇಶದ ಗೃಹಸಚಿವಾಲಯವು ಈ ಬಗ್ಗೆ ನೊಟೀಸ್ ಪ್ರಸಾರ ಮಾಡಿದ್ದು, ಜಮಾತ್ -ಎ -ಇಸ್ಲಾಮಿ ಪಕ್ಷ ಮತ್ತು ಅದರ ಉಪ ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ಪುರಾವೆಗಳು ಕಂಡು ಬಂದಿಲ್ಲ. ಆದುದರಿಂದ ನಿರ್ಬಂಧವನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

2013 ರಿಂದಲೇ ಜಮಾತ್-ಎ-ಇಸ್ಲಾಮಿ ಪಕ್ಷದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆ

2013ರ ಮಧ್ಯದಲ್ಲಿ, ಉಚ್ಚ ನ್ಯಾಯಾಲಯವು ಜಮಾತ್-ಎ-ಇಸ್ಲಾಮಿ ಪಕ್ಷದ ಪ್ರಣಾಳಿಕೆಯು ಸಂವಿಧಾನವನ್ನು ಉಲ್ಲಂಘಿಸುವಂತಿದೆ’, ಎಂದು ಹೇಳಿ ಈ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿಸಿತ್ತು. 2018ರ ಮಧ್ಯದ ವೇಳೆಗೆ, ಚುನಾವಣಾ ಆಯೋಗವು ಜಮಾತ್ ನ ನೊಂದಣಿಯನ್ನು ಕೂಡ ರದ್ದು ಪಡಿಸಿತ್ತು. ಈಗಿನ ಮಧ್ಯಂತರ ಸರಕಾರವು ಈ ನಿಷೇಧವನ್ನು ತೆಗೆದುಹಾಕಿದ್ದರೂ ಸಹ ಈ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧ ಹಾಗೇ ಉಳಿದಿದೆ. ಜಮಾತ್-ಎ-ಇಸ್ಲಾಮಿ ಪಕ್ಷದ ನ್ಯಾಯವಾದಿ ಶಿಶಿರ ಮೊನೀರ ಅವರು ಈ ಬಗ್ಗೆ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಲು ಇರುವ ನಿಷೇಧವನ್ನು ತೆಗೆದುಹಾಕಲು ಪಕ್ಷವು ಮುಂದಿನ ವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಕಟ್ಟರವಾದಿ ಸಂಘಟನೆಯ ನಾಯಕರ ಪರೋಲ್ ಮೇಲೆ ಬಿಡುಗಡೆ

ಮಧ್ಯಂತರ ಸರಕಾರವು ಅನ್ಸಾರುಲ್ಲಾ ಬಾಂಗ್ಲಾ ಟೀಮ್ (ಎಬಿಟಿ) ಎಂಬ ಕಟ್ಟರವಾದಿ ಸಂಘಟನೆಯ ಮುಖಂಡ ಜಶಿಮುದ್ದೀನ್ ರಹಮಾನಿಯನ್ನು ಪರೋಲ್ ಮೇಲೆ( ಒಳ್ಳೆಯ ನಡತೆಯ ಕಾರಣ ಕೈದಿಗಳನ್ನು ಕೆಲವು ಷರತ್ತುಗಳ ಮೇಲೆ ಕೆಲವು ದಿನಗಳಿಗಾಗಿ ಹೊರಗೆ ಬಿಡುವುದು) ಬಿಡಲಾಗಿದೆ. ಈ ಗುಂಪು ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದೊಂದಿಗೆ ಸಂಬಂಧ ಹೊಂದಿದೆ. ಶೇಖ್ ಹಸೀನಾ ಸರಕಾರವು 2015ರಲ್ಲಿ `ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಮೇಲೆ ನಿರ್ಬಂಧ ಹೇರಿತ್ತು. ಭಾರತದಲ್ಲಿಯೂ ಕೂಡ ಭಯೋತ್ಪಾದನೆ ಹರಡಿಸಿರುವ ಆರೋಪ ಈ ಸಂಘಟನೆಯ ಮೇಲಿದೆ. ಸಂಘಟನೆಯ ಅನೇಕ ಕಾರ್ಯಕರ್ತರನ್ನು ಭಾರತದಲ್ಲಿ ಬಂಧಿಸಲಾಗಿದೆ. ಜಶೀಮುದ್ದೀನ್ ನಿಗೆ ಹತ್ಯೆ ಯತ್ನ ಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ವರ್ಷ ಜನೇವರಿಯಲ್ಲಿ ಅವನ ಬಿಡುಗಡೆಯಾಗಿತ್ತು; ಆದರೆ ಮತ್ತೊಂದು ಪ್ರಕರಣದಲ್ಲಿ ಅವನನ್ನು ಪುನಃ ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ಜಿಹಾದಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕುವುದರ ಅರ್ಥ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮಾಡುವವರನ್ನು ರಕ್ಷಿಸುತ್ತಿರುವುದರ ಸಂಕೇತವಾಗಿದೆ. ಭವಿಷ್ಯದಲ್ಲಿ ಬಾಂಗ್ಲಾದೇಶದ ಹಿಂದೂಗಳ ಸರ್ವನಾಶವಾದರೂ ಆಶ್ಚರ್ಯವೇನಿಲ್ಲ.