HMPV Virus In India : ದೇಶದಲ್ಲಿ ಒಟ್ಟು 8 ಎಚ್‌.ಎಂ.ಪಿ.ವಿ. ಪ್ರಕರಣಗಳು ಪತ್ತೆ

ನವದೆಹಲಿ – ದೇಶದಲ್ಲಿ ಇದುವರೆಗೆ ‘ಹ್ಯೂಮನ್ ಮೆಟಾಪನ್ಯೂಮೋ ವೈರಸ್’ನ (HMPVಯ) 8 ಪ್ರಕರಣಗಳು ಪತ್ತೆಯಾಗಿವೆ. ನಾಗಪುರದಲ್ಲಿ 2 ರೋಗಿಗಳು ಪತ್ತೆಯಾಗಿದ್ದು, ಇದರಲ್ಲಿ 13 ವರ್ಷದ ಬಾಲಕಿ ಹಾಗೂ 7 ವರ್ಷದ ಬಾಲಕ ಸೇರಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸದೇ ಮನೆಯಲ್ಲಿಯೇ ಚಿಕಿತ್ಸೆನೀಡಲಾಗುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ಬಂಗಾಳದಲ್ಲಿಯೂ 5 ತಿಂಗಳ ಮಗುವಿನಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಚೆನ್ನೈನಲ್ಲಿ 2 ಮಕ್ಕಳಿಗೆ ಸೋಂಕು ತಗುಲಿದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿ 2 ಮತ್ತು ಕರ್ಣಾವತಿಯಲ್ಲಿ (ಗುಜರಾತ್) 1, ಹೀಗೆ 3 ಪ್ರಕರಣಗಳು ಪತ್ತೆಯಾಗಿದ್ದವು.

ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾರವರು ಮಾತನಾಡಿ `ಇದು ಹೊಸ ವೈರಸ್ ಅಲ್ಲವೆಂದು ತಜ್ಞರು ಹೇಳಿದ್ದಾರೆ. ಇದನ್ನು ಮೊದಲು 2001 ರಲ್ಲಿ ಗುರುತಿಸಲಾಗಿತ್ತು. ಅನಂತರ ಅದು ಜಗತ್ತಿನಾದ್ಯಂತ ಹರಡಿತು. ವಿಶ್ವ ಆರೋಗ್ಯ ಸಂಸ್ಥೆಯು ಪರಿಸ್ಥಿತಿಯನ್ನು ಗಮನಿಸುತ್ತಿದೆ’ ಎಂದು ಹೇಳಿದ್ದಾರೆ.