ಪ್ರಧಾನಿ ಹುದ್ದೆ ಚರ್ಚೆಯಲ್ಲಿ ಭಾರತೀಯ ಮೂಲದ ಅನಿತಾ ಆನಂದ ಮತ್ತು ಜಾರ್ಜ್ ಚಹಲ್ ಹೆಸರು !

ಕೆನಡಾದ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಟ್ರುಡೊ

ಒಟಾವಾ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಲಿಬರಲ್ ಪಕ್ಷದ ಅಧ್ಯಕ್ಷರು ಹೊಸ ನಾಯಕ ಮತ್ತು ಪ್ರಧಾನಿಯನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಸದ್ಯ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಲಿಬರಲ್ ಪಕ್ಷವು ವಿದೇಶಾಂಗ ಸಚಿವೆ ಮೆಲಾನಿ ಜೋಲೀ, ಡೊಮಿನಿಕ್ ಲೆಬ್ಲಾಂಕ್, ಮಾರ್ಕ್ ಕಾನಿ ಹೀಗೆ ಅನೇಕರನ್ನು ಟ್ರುಡೊಗೆ ಸಂಭಾವ್ಯ ಬದಲಿಯಾಗಿ ಹೆಸರಿಸಿದೆ. ಲಿಬರಲ್ ಪಕ್ಷದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಲು ವಿಶೇಷ ಅಧಿವೇಶನವನ್ನು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ಅನಿತಾ ಆನಂದ್ ಮತ್ತು ಜಾರ್ಜ್ ಚಹಲ್ ಹೆಸರು ಚರ್ಚೆಯಾಗುತ್ತಿದೆ.

1. ಅನಿತಾ ಆನಂದ ಮಾಜಿ ಸಚಿವೆಯಾಗಿದ್ದಾರೆ. ಅನಿತಾ ಅವರ ಪೋಷಕರು ಭಾರತದ ತಮಿಳುನಾಡು ಮತ್ತು ಪಂಜಾಬ್‌ ರಾಜ್ಯದವರಾಗಿದ್ದಾರೆ. ಆನಂದ ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇದು ಅವರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಭಾರತೀಯ ಮೂಲದ ಜನರಲ್ಲಿ ಅವರು ಹೆಸರುವಾಸಿಯಾಗಿದ್ದಾರೆಂದು ನಂಬಲಾಗಿದೆ.

2. ಲಿಬರಲ್ ಸಂಸದ ಜಾರ್ಜ್ ಚಹಲ್ ಕೂಡ ಕೆನಡಾದ ಪ್ರಧಾನಿಯಾಗಬಹುದು. ಚಹಲ್ ವಕೀಲರಾಗಿ ಪ್ರಸಿದ್ಧರಾಗಿದ್ದಾರೆ. ಅವರು ನೈಸರ್ಗಿಕ ಸಂಪನ್ಮೂಲಗಳ ನಿರ್ಧಾರ ಕೈಗೊಳ್ಳುವ ಸ್ಥಾಯಿ ಸಮಿತಿ ಮತ್ತು ಸಿಖ್ ಕಾಕಸ್ (ಗುಂಪಿನ) ಅಧ್ಯಕ್ಷರೂ ಆಗಿದ್ದಾರೆ. ಚಹಲ್ ಇತ್ತೀಚಿನ ದಿನಗಳಲ್ಲಿ ಟ್ರುಡೊ ಅವರನ್ನು ಟೀಕಿಸುತ್ತಿದ್ದರು.