ಮಹಾ ಕುಂಭಮೇಳ : ಶೌಚಾಲಯ, ವಿದ್ಯುತ್, ಮರಳು ಸಮತಟ್ಟು ಮಾಡುವುದು ಇನ್ನೂ ಅಪೂರ್ಣ!

  • ವಿದ್ಯುತ್ ಕಂಬಗಳ ಅಳವಡಿಸುತ್ತಿರುವ ಸರಕಾರಿ ನೌಕರರು

  • ಸರಕಾರಿ ನೌಕರರಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ

  • ಆಡಳಿತದ ಮುಂದೆ ದೊಡ್ಡ ಸವಾಲು!

ತಾತ್ಕಾಲಿಕ ಪ್ಲಾಸ್ಟಿಕ್ ಶೌಚಾಲಯಗಳು

ಪ್ರಯಾಗರಾಜ, ಜನವರಿ 6 (ಸುದ್ದಿ) – ಮಹಾಕುಂಭಸ್ಥಳಕ್ಕೆ ಸಾಧುಗಳು ಮತ್ತು ಲಕ್ಷಾಂತರ ಭಕ್ತರು ಬಂದಿದ್ದಾರೆ; ಆದರೆ, ಶೌಚಾಲಯ, ನೀರು ಪೂರೈಕೆ, ವಿದ್ಯುತ್, ಮರಳು ಸಮತಟ್ಟು ಮುಂತಾದ ಮಹತ್ವದ ಕಾಮಗಾರಿಗಳು ಬಾಕಿ ಉಳಿದಿವೆ. ಜನವರಿ 13ರಿಂದ ಮಹಾಕುಂಭ ಆರಂಭವಾಗಲಿದೆ. ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದ್ದು, ಈ ಅವಧಿಯಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

1. ಶೌಚಾಲಯ ಸ್ಥಿತಿ !

ಕುಂಭಮೇಳದ ಪ್ರದೇಶದಲ್ಲಿ ಲಕ್ಷಾಂತರ ತಾತ್ಕಾಲಿಕ ಪ್ಲಾಸ್ಟಿಕ್ ಶೌಚಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ವಿವಿಧ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯ ಶೌಚಾಲಯಗಳ ಗುತ್ತಿಗೆಗಳನ್ನು ನೀಡಲಾಗಿದೆ; ಆದರೆ, ಶೌಚಾಲಯ ನಿರ್ಮಾಣ ಬಹುತೇಕ ಬಾಕಿ ಇದೆ. ಶೌಚಾಲಯಗಳ ಮಲವಿಸರ್ಜನೆಗೆ ಮರಳಿನಲ್ಲಿ ಹೊಂಡ ತೋಡಿ 3 ಸಾವಿರ ಲೀಟರ್ ಟ್ಯಾಂಕ್ ಅಳವಡಿಸಲಾಗುತ್ತಿದೆ. ಸಂಬಂಧಪಟ್ಟ ಸಂಸ್ಥೆಗಳಿಂದ ನಿಯಮಿತವಾಗಿ ಟ್ಯಾಂಕ್‌ಗಳಿಂದ ಮಲ ತೆಗೆಯಲು ವ್ಯವಸ್ಥೆ ಮಾಡಲಾಗಿದೆ.

2. ಹಲವು ಅಖಾಡಾಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವೇ ಇಲ್ಲ !

ವಿದ್ಯುತ್ ಕಂಬಗಳನ್ನು ನಿರ್ಮಿಸುವ ಕೆಲಸ

ಇನ್ನೂ ಹಲವು ಅಖಾಡಾಗಳಿಗೆ ವಿದ್ಯುತ್ ಲಭ್ಯವಾಗಿಲ್ಲ. ವಿದ್ಯುತ್ ಕಂಬಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ಮರಳಿನಲ್ಲಿ ಹೊಂಡ ತೋಡಲು ಹಾಗೂ ವಿದ್ಯುತ್ ಕಂಬಗಳನ್ನು ಹಾಕಲು ಯಂತ್ರಗಳನ್ನು ಬಳಸಲಾಗುತ್ತಿದೆ. ಪ್ರತಿ ಯಂತ್ರದಿಂದ ದಿನಕ್ಕೆ 150 ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತಿದೆ; ಆದರೆ ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಕಂಬ ನಿರ್ಮಾಣವಾಗಬೇಕಿದೆ. ಕೆಲವು ಅಖಾಡಾಗಳಲ್ಲಿ ನೀರು ಸಿಗುತ್ತಿಲ್ಲ. ಇವರಿಗೆ ಮರಳಿನಲ್ಲಿ ಕಬ್ಬಿಣದ ಪೈಪ್ ಹಾಕಿ ನೀರು ಪೂರೈಸುವ ಕೆಲಸವೂ ನಡೆಯುತ್ತಿದೆ.

3. ಇತರ ಅಪೂರ್ಣ ಕೆಲಸಗಳು!

ಗಂಗಾನದಿಯ ದಡದಲ್ಲಿ ಇನ್ನೂ ಹಲವೆಡೆ ಮರಳು ಸಮತಟ್ಟು ಮಾಡುವ ಕೆಲಸಗಳು ನಡೆಯುತ್ತಿವೆ. ಈ ಸಮತಟ್ಟ ಪೂರ್ಣಗೊಂಡ ನಂತರವೇ ಹೆಚ್ಚಿನ ವ್ಯವಸ್ಥೆಗಳನ್ನು ಮಾಡಬಹುದು. ಕುಂಭಮೇಳ ಪ್ರವೇಶಕ್ಕೆ ಮಹಾದ್ವಾರ ನಿರ್ಮಾಣ, ತಾತ್ಕಾಲಿಕ ಪೊಲೀಸ್ ಠಾಣೆಗಳ ನಿರ್ಮಾಣ, ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ಇನ್ನೂ ನಡೆಯುತ್ತಿದೆ. ಮುಂದಿನ ವಾರದಲ್ಲಿ ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಆಡಳಿತದ ಮುಂದೆ ದೊಡ್ಡ ಸವಾಲಾಗಿದೆ.