ನನ್ನ ಸರಕಾರದ ಪತನಕ್ಕೆ ಅಮೇರಿಕಾ ಹೊಣೆ ! – ಶೇಖ್ ಹಸೀನಾ ಆರೋಪ

ಬಾಂಗ್ಲಾದೇಶದ ಒಂದು ದ್ವೀಪ ನೀಡದಿದ್ದಕ್ಕೆ ಅಮೇರಿಕಾದಿಂದ ಸಂಚು !

ನವದೆಹಲಿ – ತಮ್ಮ ಸರಕಾರದ ಪತನದ ಹಿಂದೆ ಅಮೇರಿಕಾದ ಕೈವಾಡವಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಶೇಖ್ ಹಸೀನಾ ಅವರ ಆಪ್ತರು ಆಂಗ್ಲ ಪತ್ರಿಕೆಯೊಂದಕ್ಕೆ ಕಳುಹಿಸಿದ ಸಂದೇಶದಲ್ಲಿ ಈ ಆರೋಪ ಮಾಡಲಾಗಿದೆ. ಬಾಂಗ್ಲಾದೇಶದಿಂದ ಸೇಂಟ್ ಮಾರ್ಟಿನ್ ದ್ವೀಪವನ್ನು ಪಡೆದು ಅಲ್ಲಿ ತನ್ನ ನೌಕಾ ಮತ್ತು ಸೇನಾ ನೆಲೆಯನ್ನು ಸ್ಥಾಪಿಸುವ ಯೋಜನೆಯನ್ನು ಅಮೇರಿಕಾ ಹೊಂದಿತ್ತು. ಈ ನೆಲೆಯನ್ನು ಸ್ಥಾಪಿಸುವ ಮೂಲಕ, ಬಂಗಾಳ ಕೊಲ್ಲಿಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಅಮೇರಿಕಾಗೆ ಸಾಧ್ಯವಾಗುತ್ತಿತ್ತು; ಆದರೆ ಶೇಖ್ ಹಸೀನಾ ಈ ದ್ವೀಪವನ್ನು ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಶೇಖ್ ಹಸೀನಾ ‘ನನ್ನ ಬಳಿಗೆ ಓರ್ವ ಬಿಳಿ ವ್ಯಕ್ತಿ ಬಂದಿದ್ದ’ ಎಂದು ಹೇಳಿಕೆ ನೀಡಿದ್ದರು. ಆ ‘ಬಿಳಿ ವ್ಯಕ್ತಿ’ ಅಂದರೆ ಅಮೇರಿಕಾ ಎಂಬುದು ಈಗ ತಿಳಿದುಬಂದಿದೆ.

ಕಟ್ಟರವಾದಿಗಳ ರಾಜಕೀಯಕ್ಕೆ ಬಲಿಯಾಗಬೇಡಿ ! – ನಾಗರಿಕರಿಗೆ ಶೇಖ್ ಹಸೀನಾ ಮನವಿ

ಶೇಖ್ ಹಸೀನಾ ಅವರು ಬಾಂಗ್ಲಾದೇಶದ ನಾಗರಿಕರಿಗೆ ಮನವಿ ಮಾಡುತ್ತಾ, ಬಾಂಗ್ಲಾದೇಶದಲ್ಲಿ ಮೃತ ದೇಹಗಳನ್ನು ನೋಡಲು ನನಗೆ ಇಷ್ಟವಿರಲಿಲ್ಲ; ಹಾಗಾಗಿ ನಾನು ರಾಜೀನಾಮೆ ನೀಡಿದೆ. ಕೆಲವರು ವಿದ್ಯಾರ್ಥಿಗಳ ಮೃತ ದೇಹಗಳ ಮೇಲೆ ಕಾಲನ್ನಿಟ್ಟಾದರೂ ಅಧಿಕಾರಕ್ಕೆ ಬರಲು ಬಯಸಿದ್ದರು; ಆದರೆ ನಾನು ಹಾಗೆ ಆಗಲು ಬಿಡಲಿಲ್ಲ. ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಸೇಂಟ್ ಮಾರ್ಟಿನ್ ದ್ವೀಪವನ್ನು ಪಡೆಯಲು ಅಮೇರಿಕಾ ಪ್ರಯತ್ನಿಸುತ್ತಿದೆ. ನಾನು ಆ ದ್ವೀಪದ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರೆ, ಅಮೇರಿಕಾ ಬಂಗಾಳಕೊಲ್ಲಿಯಲ್ಲಿ ತನ್ನ ಅಧಿಪತ್ಯವನ್ನು ಸುಲಭವಾಗಿ ಸ್ಥಾಪಿಸಬಹುದಿತ್ತು; ಆದರೆ ನಾನು ಹಾಗೆ ಆಗಲು ಬಿಡಲಿಲ್ಲ. ಕೆಲವು ಕಟ್ಟರವಾದಿಗಳು ನಿಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಅವರ ಈ ಕುತಂತ್ರಕ್ಕೆ ಬಲಿಯಾಗಬೇಡಿ, ಎಂದು ನಾನು ನನ್ನ ದೇಶದ ಜನರನ್ನು ವಿನಂತಿಸುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಸರಕಾರವನ್ನು ಅಮೇರಿಕಾ ಪತನಗೊಳಿಸಿದ್ದರಿಂದ ಭಾರತಕ್ಕೆ ಭಾರೀ ನಷ್ಟವನ್ನು ಅನುಭವಿಸಬೇಕಾಗಿದೆ. ಹಾಗಾಗಿ ಭಾರತಕ್ಕೂ ಕೂಡ ಅಮೇರಿಕಾ ಶತ್ರು ರಾಷ್ಟ್ರವಾಗಿ ಪರಿಣಮಿಸಿದೆ. ಭಾರತವು ಇಂತಹ ಅಮೇರಿಕಾದ ವಿರುದ್ಧ ಕಠಿಣ ನೀತಿ ಅನುಸರಿಸುವುದು ಅಗತ್ಯವಾಗಿದೆ !