ಆದೇಶದಿಂದಾಗಿ, ಗಣೇಶೋತ್ಸವ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ, ಈ ಉತ್ಸವಗಳನ್ನು ಆಚರಿಸಲು ಸಾಧ್ಯವಾಗುವುದಿಲ್ಲ
ಮಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಮಂಗಳೂರಿನ ಶಾಲಾ ಮೈದಾನ ಮತ್ತು ಕಟ್ಟಡಗಳನ್ನು ಖಾಸಗಿ ಉದ್ದೇಶಗಳಿಗೆ ಬಳಸುವುದರ ವಿರುದ್ಧ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ನಿರ್ದೇಶಕರು ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಹೊರಡಿಸಿದ್ದಾರೆ. ಇದರೊಂದಿಗೆ ಶಿಕ್ಷಣ ಇಲಾಖೆಗೆ ಈ ಸಂದರ್ಭದಲ್ಲಿ ಯಾವುದೇ ಪ್ರಸ್ತಾವನೆಯನ್ನು ಅನುಮೋದನೆಗೆ ಕಳುಹಿಸಬಾರದು ಎಂದು ಹೇಳಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಲಾಗಿದೆ. ಶಿಕ್ಷಣ ಇಲಾಖೆಯ ಈ ಆದೇಶದ ಬಳಿಕ ಶಾಲಾ ಆಡಳಿತ ಮಂಡಳಿಗಳು ಗಣೇಶೋತ್ಸವ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಗಳಿಗಾಗಿ ಶಾಲಾ ಮೈದಾನ ಒದಗಿಸುವುದಕ್ಕೆ ಅನುಮತಿ ನಿರಾಕರಿಸಿವೆ.
ಭಾಜಪ ಮತ್ತು ಹಿಂದೂ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸರಕಾರಿ ಶಾಲೆಗಳ ಮೈದಾನದಲ್ಲಿ ಅನೇಕ ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆಯೆಂದು ಹೇಳುತ್ತಿವೆ. ಆದರೆ ಈ ವರ್ಷ ಶಿಕ್ಷಣ ಇಲಾಖೆಯು ಹೊಸ ಆದೇಶವನ್ನು ಜಾರಿಗೊಳಿಸಿ ಗಣೇಶೋತ್ಸವ ಬಂದ್ ಮಾಡಲು ನಿರ್ಧರಿಸಿದೆ. ಆದ್ದರಿಂದ `ಸರಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಬೆಳ್ತಂಗಡಿ ಭಾಜಪ ಶಾಸಕ ಹರೀಶ ಪೂಂಜ ಆಗ್ರಹಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಆದೇಶಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಯ ಸಂದರ್ಭದಲ್ಲಿ ತಮ್ಮ ಸಭೆಗಳಿಗೆ ಇದೇ ಮೈದಾನಗಳನ್ನು ಉಪಯೋಗಿಸಿದ್ದರು ಎಂದೂ ಜನರು ಹೇಳುತ್ತಿದ್ದಾರೆ.