ಬೇಸಿಗೆಯು ಸ್ವಭಾವತಃ ಶುಷ್ಕ ಋತುವಾಗಿದೆ. ಇದರಲ್ಲಿ ಶರೀರದ ಶುಷ್ಕತೆ ಹೆಚ್ಚಾಗಲು ಆರಂಭವಾಗುತ್ತದೆ, ಹಾಗೆಯೇ ವಾತ ದೋಷವು ಸಂಗ್ರಹವಾಗಲು ಆರಂಭವಾಗುತ್ತದೆ. ಹಾಗಾಗಿ ನೈಸರ್ಗಿಕವಾಗಿ ಬೇಸಿಗೆಯಲ್ಲಿ ರಸಭರಿತ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಅದಕ್ಕನುಗುಣವಾಗಿ ಬೇಸಿಗೆಯಲ್ಲಿ ಪಾಲಿಸಬೇಕಾದ ಕೆಲವು ಪಥ್ಯಗಳು :
೧. ಆಹಾರವು ತೆಳು, ಮಧುರ ರಸದ, ಸ್ನಿಗ್ಧ, ಉಗುರುಬೆಚ್ಚಗಿನ, ಕಡಿಮೆ ಮಸಾಲೆಯ ಮತ್ತು ಹಗುರ ಇರಬೇಕು. ಇದರಲ್ಲಿ ಮುಂದಿನ ಕೆಲವು ಪದಾರ್ಥಗಳು ಬರುತ್ತವೆ – ಅನ್ನ, ಹೆಸರು, ಚನ್ನಂಗಿ, ದೋಸೆ, ರೊಟ್ಟಿ (ಜೋಳ, ಅಕ್ಕಿ, ಮತ್ತು ರಾಗಿ), ರಾಗಿ/(ಶಿಂಗಾಡಾ)ನೀರಿನಲ್ಲಿ ಬೆಳೆಯುವ ಒಂದು ಸಸ್ಯದ ಹಣ್ಣಿನ ಗಂಜಿ, ಹಣ್ಣುತರಕಾರಿಗಳು, ಕೊಬ್ಬರಿ, ಪಾಯಸ, ಶಿರಾ, ತುಪ್ಪ, ಬೆಣ್ಣೆ, ಹಾಲು, ಕಲ್ಲುಸಕ್ಕರೆ ಇತ್ಯಾದಿ.
೨. ದೇಶಿ ಹಸುವಿನ ತುಪ್ಪವನ್ನು ಊಟದಲ್ಲಿ ಅವಶ್ಯ ಬಳಸಬೇಕು. ನೀರಡಿಕೆ ಮತ್ತು ಹಸಿವನ್ನು ತಡೆಗಟ್ಟಬಾರದು. ಒಟ್ಟಿಗೆ ಹೆಚ್ಚು ಆಹಾರ ತೆಗೆದುಕೊಳ್ಳುವುದಕ್ಕಿಂತ ಮಧ್ಯಮ ಪ್ರಮಾಣದಲ್ಲಿ ಮತ್ತು ಸ್ವಲ್ಪ ಸ್ವಲ್ಪ ಸಮಯದ ಅಂತರವಿಟ್ಟು ಆಹಾರ ತೆಗೆದುಕೊಳ್ಳಬೇಕು. ಒಣದ್ರಾಕ್ಷಿಗಳ ನೀರು, ಅರಳುಗಳ ನೀರು, ಶರಬತ್ತು ಮತ್ತು ಹಣ್ಣುಗಳ ರಸವನ್ನು ಕುಡಿಯಬೇಕು.
೩. ಪಲ್ಯಕ್ಕಾಗಿ ಮಸಾಲೆಯನ್ನು ಬಳಸುವುದಿದ್ದರೆ ಗರಂ ಮಸಾಲಾ ಅಥವಾ ಹಸಿರು ಮೆಣಿಸಿನಕಾಯಿಯ ಬದಲು ಜೀರಿಗೆ, ಕೊತ್ತಂಬರಿ ಬೀಜ, ಎಳ್ಳಿನ ಪುಡಿಯನ್ನು ಬಳಸಬಹುದು. ಹಸಿಶುಂಠಿ, ಕರಿಮೆಣಸು, ನಿಂಬೆ, ಕೊತ್ತಂಬರಿ ಇವೆಲ್ಲ ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತವೆ.
೪. ಹುಳಿ, ಉಪ್ಪು, ಖಾರದ ಪದಾರ್ಥಗಳನ್ನು ತಿನ್ನಬಾರದು. ಇದರಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಹುಣಸೆಹಣ್ಣು, ಚಾಟ್ ಪದಾರ್ಥಗಳು, ಬ್ರೆಡ್, ಹಸಿರು ಮೆಣಸಿನಕಾಯಿ, ಮಸಾಲೆಗಳ ಮತ್ತು ಬೇಕರಿ ಪದಾರ್ಥಗಳು ಸೇರಿವೆ. ಬೇಯಿಸದ ತರಕಾರಿ (ಹಸಿ ತರಕಾರಿ), ನೆನೆಸಿ ಮೊಳಕೆ ತರಿಸಿದ ದ್ವಿದಳ ಧಾನ್ಯಗಳನ್ನು ಹಸಿ ತಿನ್ನಬಾರದು.
೫. ಮಜ್ಜಿಗೆಯನ್ನು ಹೆಚ್ಚು ಕುಡಿಯಬಾರದು. ಭೋಜನದಲ್ಲಿ ಒಂದು ಬಟ್ಟಲು ಮಜ್ಜಿಗೆಯಲ್ಲಿ ಸೈಂಧವ ಲವಣ ಮತ್ತು ಜೀರಿಗೆಯನ್ನು ಹಾಕಿ ಸೇವಿಸಬಹುದು. ಎದೆ ಉರಿ, ಹುಳಿ ತೇಗು ಇಂತಹ ತೊಂದರೆಗಳಾಗುತ್ತಿದ್ದರೆ ಮಜ್ಜಿಗೆ ಸೇವನೆ ಪೂರ್ತಿ ನಿಲ್ಲಿಸಬೇಕು.
೬. ಮದ್ಯಪಾನ, ಸಿಗರೇಟ್ ಸೇದಬಾರದು ಉಷ್ಣ ಋತುವಿನಲ್ಲಿ ಇದರಿಂದ ಎದೆಯಲ್ಲಿ ಉರಿಯುವುದು, ದಾಹ, ಆಮ್ಲಪಿತ್ತ, ತಲೆ ಸುತ್ತುವುದು, ಮೈಗೆ ಬಾವು ಬರುವುದು ಮುಂತಾದ ತೊಂದರೆಗಳಾಗುತ್ತವೆ.
೭. ಹಗಲಿನಲ್ಲಿ ಸ್ವಲ್ಪ ಹೊತ್ತು ಮಲಗಬಹುದು. ರಾತ್ರಿ ಜಾಗರಣೆ ಮಾಡಬಾರದು.
೮. ವ್ಯಾಯಾಮ ಮಾಡುತ್ತಿದ್ದರೆ ಅನಗತ್ಯ ಹೆಚ್ಚು ವ್ಯಾಯಾಮ ಮಾಡಬಾರದು ಮತ್ತು ಆದಷ್ಟು ಆಯಾಸವನ್ನು ತಪ್ಪಿಸಬೇಕು. ಎಂದಿಗಿಂತಲೂ ಸ್ವಲ್ಪ ಕಡಿಮೆ ವ್ಯಾಯಾಮ ಮಾಡಬೇಕು.
೯. ಬೇಸಿಗೆಯಲ್ಲಿ ಚರ್ಮದ ಒಣಗುವಿಕೆಯನ್ನು ತಡೆಗಟ್ಟಲು ಕಾಲಿಗೆ (ಪಾದಗಳಿಗೆ) ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ಬಿಸಿಲಿನಲ್ಲಿ ವಾಹನದಲ್ಲಿ ಹೋಗುವುದು-ಬರುವುದು ಆಗುತ್ತಿದ್ದರೆ ಕಣ್ಣುಗಳು ಕೆಂಪಾಗುತ್ತಿದ್ದರೆ ಮತ್ತು ಕಣ್ಣುಗಳು ಉರಿಯುತ್ತಿದ್ದರೆ ಶತಧೌತ ಘೃತ(ತುಪ್ಪ)ವನ್ನು ಕಾಲಿಗೆ ಹಚ್ಚಿಕೊಳ್ಳಬೇಕು ಮತ್ತು ಕಣ್ಣುಗಳಿಗೆ ಔಷಧಿಗಳನ್ನು ವೈದ್ಯಕೀಯ ಸಲಹೆಯಂತೆ ತೆಗೆದುಕೊಳ್ಳಬೇಕು.
೧೦. ಉರಿ ಬಿಸಿಲಿನಲ್ಲಿ (ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೪ ರವರೆಗೆ) ದ್ವಿಚಕ್ರವಾಹನದಲ್ಲಿ ತಿರುಗಾಡುವುದನ್ನು ತಪ್ಪಿಸಬೇಕು. ಬಿಸಿಲಿನಲ್ಲಿ ಹೋಗುವುದು ಅವಶ್ಯವಿದ್ದರೆ ಟೊಪ್ಪಿ ಅಥವಾ ‘ಸ್ಕಾರ್ಫ್’ (ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳಲು ಬಳಸ ಲಾಗುವ ದೊಡ್ಡ ರುಮಾಲು) ಅವಶ್ಯ ಇರಬೇಕು.
೧೧. ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.
೧೨. ಮೂಗಿನ ಹೊಳ್ಳೆಯಿಂದ ರಕ್ತ ಸ್ರವಿಸುವ ತೊಂದರೆಯಾಗುತ್ತಿದ್ದರೆ, ಸಕ್ಕರೆ ನೀರು, ಬೆಣ್ಣೆ, ಜೇನುತುಪ್ಪ ಕಲ್ಲುಸಕ್ಕರೆ, ದುರ್ವಾಕಲ್ಪ ಇವುಗಳನ್ನು ವೈದ್ಯರ ಸಲಹೆಯಂತೆ ಬಳಸಬೇಕು. ಉಷ್ಣತೆಯಾದರೆ (ಮೂತ್ರ ಉರಿಯುವುದು, ಮೇಲಿಂದ ಮೇಲೆ ಆಗುವುದು; ಆದರೆ ಅರ್ಧಮರ್ಧ ಮೂತ್ರವಿಸರ್ಜನೆಯಾಗುವುದು) ಈ ತೊಂದರೆ ಇರುವಾಗ ಕೊತ್ತಂಬರಿ ಬೀಜ-ಜೀರಿಗೆಯ ನೀರು ಉಪಯುಕ್ತವಾಗಿದೆ.
ಪ್ರತಿಯೊಬ್ಬರೂ ಈ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ,ಬೇಸಿಗೆಯು ಲಾಭದಾಯಕವಾಗುತ್ತದೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೭.೫.೨೦೨೪)