IPS Ilma Afroz : ಮುಸ್ಲಿಂ ಮಹಿಳಾ ಪೊಲೀಸ್ ಅಧೀಕ್ಷಕಿಗೆ ಕಡ್ಡಾಯ ದೀರ್ಘಾವಧಿ ರಜೆ ನೀಡಿದ ಕಾಂಗ್ರೆಸ್ ಸರಕಾರ

ಬದ್ಧಿ(ಹಿಮಾಚಲ ಪ್ರದೇಶ): ಕಾಂಗ್ರೆಸ್ ಶಾಸಕರ ಪತ್ನಿಯನ್ನು ದಂಡಿಸಿದ್ದಕ್ಕಾಗಿ ಶಿಕ್ಷೆ

ಬದ್ದಿಯ ಪೊಲೀಸ್ ಅಧೀಕ್ಷಕಿ ಇಲ್ಮಾ ಅಫ್ರೋಜ್ ಮತ್ತು ಕಾಂಗ್ರೆಸ್ ಶಾಸಕ ರಾಮಕುಮಾರ ಚೌಧರಿ

ಬದ್ಧಿ(ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದ ಬದ್ದಿ ಕ್ಷೇತ್ರದ ಪೊಲೀಸ್ ಅಧೀಕ್ಷಕಿಯಾದ ಇಲ್ಮಾ ಅಫ್ರೋಜ್ ಅವರು ಸದ್ಯ ಚರ್ಚೆಯ ವಿಷಯವಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಅವರ ಮೇಲೆ ಸಿಟ್ಟಾಗಿರುವುದರಿಂದ ಅವರನ್ನು ಕಡ್ಡಾಯ ದೀರ್ಘಾವಧಿಯ ರಜೆಗೆ ಕಳುಹಿಸಿದೆ. ಸದ್ಯ ಅಫ್ರೋಜ್ ಅವರು ತಮ್ಮ ತಾಯಿಯೊಂದಿಗೆ ಉತ್ತರಪ್ರದೇಶದ ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ. ಕಾಂಗ್ರೆಸ್ ಶಾಸಕ ರಾಮಕುಮಾರ ಚೌಧರಿಯವರ ಪತ್ನಿಯ ಕಾರು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಅಫ್ರೋಜ್ ಅವರು ದಂಡ ವಿಧಿಸಿದ್ದರು. ಇದರಿಂದ ಶಾಸಕರು ಅಸಮಾಧಾನಗೊಂಡಿದ್ದರು.

ಈ ಘಟನೆಯಿಂದ ಅಲ್ಲಿನ ರಾಜಕೀಯ ವಾತಾವರಣ ಬಿಸಿಯಾಗಿದೆ. ಕಾಂಗ್ರೆಸ್ಸಿಗೆ ಕೇವಲ ಮುಸ್ಲಿಮರ ಮತಗಳು ಮಾತ್ರ ಬೇಕಾಗುತ್ತವೆ. ಆದರೆ ಪ್ರತ್ಯಕ್ಷವಾಗಿ ಮುಸ್ಲಿಮರ ಕಲ್ಯಾಣಕ್ಕಾಗಿ ಅವರು ಏನನ್ನೂ ಮಾಡುವುದಿಲ್ಲ ಎಂದು ಭಾಜಪ ನಾಯಕ ಕೌಸರ್ ಜಹಾನ್ ಆರೋಪಿಸಿದ್ದಾರೆ.

ಏನಿದು ಪ್ರಕರಣ?

ಬದ್ದಿಯ ಪೊಲೀಸ್ ಅಧೀಕ್ಷಕಿ ಇಲ್ಮಾ ಅಫ್ರೋಜ್ ಮತ್ತು ಕಾಂಗ್ರೆಸ್ ಶಾಸಕ ರಾಮಕುಮಾರ ಚೌಧರಿ ಅವರ ನಡುವೆ ವಾಗ್ವಾದ ನಡೆದಿತ್ತು. ಇತ್ತೀಚೆಗೆ ಅಫ್ರೋಜ್ ಅವರು ಚೌಧರಿಯವರ ಪತ್ನಿ ಕುಲದೀಪ್ ಕೌರ್ ಅವರ ವಾಹನಕ್ಕೆ ದಂಡ ವಿಧಿಸಿದ್ದರು, ಅಲ್ಲದೇ ಅಫ್ರೋಜ್ ಓರ್ವ ಗುಜರಿ ವ್ಯಾಪಾರಿಯನ್ನು ಸಹ ಬಂಧಿಸಿದ್ದರು. ಆ ವ್ಯಾಪಾರಿಯು ಕಾಂಗ್ರೆಸ್ ಶಾಸಕರ ಆಪ್ತನಾಗಿದ್ದವನು ಎಂದು ಹೇಳಲಾಗುತ್ತದೆ. ಅಫ್ರೋಜ್ ಮುಸ್ಲಿಮರಿಗೆ ದೊಡ್ಡ ಪ್ರಮಾಣದಲ್ಲಿ ಬಂದೂಕು ಪರವಾನಗಿಗಳನ್ನು ನೀಡಿದ್ದರು ಎಂದು ಕಾಂಗ್ರೆಸ್ಸಿನ ಅನೇಕ ಕಾರ್ಯಕರ್ತರು ಆರೋಪಿಸಿದ್ದರು. ಆದರೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅವರ 9 ತಿಂಗಳ ಕಾಲಾವಧಿಯಲ್ಲಿ ಅಫ್ರೋಜ್ ಒಟ್ಟು 50 ಬಂದೂಕುಗಳ ಪರವಾನಿಗೆಗಳನ್ನು ನೀಡಿದ್ದರು. ಅದರಲ್ಲಿ 48 ಹಿಂದೂಗಳಿಗೆ ಮತ್ತು ಇಬ್ಬರು ಮುಸಲ್ಮಾನರಿಗೆ ನೀಡಿದ್ದರು. ಕಾಂಗ್ರೆಸ್ ನ ಈ ಸುಳ್ಳು ಆರೋಪ ಈ ಮೂಲಕ ಬಹಿರಂಗವಾಯಿತು. ಇನ್ನೂ ಕೆಲವು ಇಂತಹುದೇ ಘಟನೆಗಳು ನಡೆದಿದ್ದು ಅದರಲ್ಲಿ ಅಫ್ರೋಜ್ ಅವರು ಕಾನೂನು ಬದ್ಧವಾಗಿ ನಡೆದುಕೊಂಡಿದ್ದರು ಎಂಬುದು ತಿಳಿದುಬಂದಿದೆ. ಅಫ್ರೋಜ್ ಅವರ ಮೇಲೆ ಕಾಂಗ್ರೆಸ್ ಸರಕಾರ ಅನೇಕ ಬಾರಿ ಒತ್ತಡ ಹೇರಿದ್ದರೂ ಅವರು ಮಣಿದಿರಲಿಲ್ಲ.

ಸಂಪಾದಕೀಯ ನಿಲುವು

  • ಕಾನೂನು ಕ್ರಮ ಕೈಗೊಂಡ ಮಹಿಳಾ ಪೊಲೀಸ್ ಅಧೀಕ್ಷಕಿಯ ವಿರುದ್ಧ ಕಾಂಗ್ರೆಸ್ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇವನ್ನು ಗಮನಿಸಿದರೆ ಹಿಮಾಚಲ ಪ್ರದೇಶ ಕಾನೂನಿನ ರಾಜ್ಯವಲ್ಲ, ಕಾನೂನು ಬಾಹಿರ ರಾಜ್ಯವಾಗಿದೆಯೆಂದು ಸ್ಪಷ್ಟವಾಗುತ್ತದೆ.
  • ಕಾಂಗ್ರೆಸ್ ಯಾವ ಮುಸಲ್ಮಾನರನ್ನು ಓಲೈಕೆ ಮಾಡುತ್ತದೆಯೋ ಅವರಿಗೆ ಇಂತಹ ಘಟನೆಯು ಒಪ್ಪಿಗೆಯೇ?
  • ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಿದ್ದರೂ ಸರ್ಕಾರ ತಮ್ಮ ವಿರುದ್ಧವೇ ಕ್ರಮ ಕೈಗೊಂಡಾಗ ಹಿಂಜರಿಯದ ಮಹಿಳಾ ಪೊಲೀಸ್ ಅಧೀಕ್ಷಕಿಗೆ ಅಭಿನಂದನೆಗಳು! ಇಂತಹ ಅಧಿಕಾರಿಗಳೇ ಸಮಾಜಕ್ಕೆ ಬೇಕಾಗಿದ್ದಾರೆ!