ಇಂಫಾಲ (ಮಣಿಪುರ)- ಕಳೆದ ವಾರ ಜಿರಿಬಾಮ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಚಿಕ್ಕ ಮಕ್ಕಳು ಸಾವನ್ನಪ್ಪಿದ್ದು ಅವರ ಮೃತ ದೇಹಗಳು ಸಿಕ್ಕಿದ್ದವು. ನವೆಂಬರ್ ೧೫ ರಂದು ಮೃತರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಾ ಆಕ್ರೋಶಗೊಂಡ ಪ್ರತಿಭಟನಾಕಾರರು ೩ ಸಚಿವರು ಮತ್ತು ೬ ಶಾಸಕರ ಮನೆಗಳ ಮೇಲೆ ದಾಳಿ ಮಾಡಿದರು. ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರ ಈ ಗುಂಪು ಸಚಿವ ಸಪನ ರಂಜನ, ಮುಖ್ಯಮಂತ್ರಿ ಬೀರೇನ ಸಿಂಹ ಅವರ ಅಳಿಯ ಮತ್ತು ಭಾಜಪ ಶಾಸಕ ಆರ್.ಕೆ.ಇಮೋಸಿಂಗ್ ಅವರ ಮನೆಯ ಮೇಲೆ ಕೂಡ ದಾಳಿ ನಡೆಸಿತು. ಅಲ್ಲದೇ ತಡರಾತ್ರಿ ಈ ಗುಂಪು ಮುಖ್ಯಮಂತ್ರಿ ಬೀರೇನ ಸಿಂಹ ಅವರ ಮನೆ ತಲುಪಿತು. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಭದ್ರತಾ ಪಡೆಯು ಆಶ್ರುವಾಯು ಉಪಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸಿತು. ಇಂಫಾಲದಲ್ಲಿ ಹದಗೆಟ್ಟಿರುವ ಪರಿಸ್ಥಿತಿಯನ್ನು ಗಮನಿಸಿ ೫ ಜಿಲ್ಲೆಗಳಲ್ಲಿ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ೭ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ.
ಕೆಲವು ಸಚಿವರು ಮತ್ತು ಭಾಜಪದ ೧೯ ಶಾಸಕರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಮುಖ್ಯಮಂತ್ರಿಯ ಬಿರೇನ ಸಿಂಹ ಅವರನ್ನು ಪದಚ್ಯುತಗೊಳಿಸಲು ಆಗ್ರಹಿಸಿದ್ದಾರೆ. ಮೂಲಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ, ಬರುವ ೨-೩ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬಹುದು.