ಭಾರತದ ಒಳಗಿನ ಮತ್ತು ಹೊರಗಿನ ಖಲಿಸ್ತಾನಿ ಭಯೋತ್ಪಾದಕ ಬೆಂಬಲಿಗರ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಂಡು ಹಿಂಸಾತ್ಮಕ ಚಳುವಳಿಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಸದ್ಯ ಕೆನಡಾದ ಜೊತೆಗಿನ ಭಾರತದ ಸಂಬಂಧವು ಹಳಸಿದೆ. ಕೆನಡಾದ ಖಲಿಸ್ತಾನಿ ಬೆಂಬಲಿಗರು, ಖಲಿಸ್ತಾನಿ ಭಯೋತ್ಪಾದಕರು ಅಲ್ಲಿನ ಸರಕಾರವನ್ನು ಭಾರತದ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಇವೆಲ್ಲವುಗಳಿಗೆ ಭಾರತದಿಂದ ಖಲಿಸ್ತಾನವೆಂಬ ಪ್ರತ್ಯೇಕ ದೇಶ ಬೇಕೆಂಬ ಬೇಡಿಕೆಯೇ ಚಳುವಳಿಯ ಕೇಂದ್ರಬಿಂದುವಾಗಿದೆ. ಖಲಿಸ್ತಾನ ಎಂದರೆ ಸಿಕ್ಖರಿಗಾಗಿ ಪ್ರತ್ಯೇಕ ಭೂಮಿ (ದೇಶದ) ನೀಡಬೇಕೆಂಬ ಬೇಡಿಕೆ. ಇದು ಈ ಖಲಿಸ್ತಾನದ ಬಗ್ಗೆ ಅರಿವು ಮೂಡಿಸಲು ಈ ಲೇಖನದಿಂದ ಪ್ರಯತ್ನ ಮಾಡಲಾಗಿದೆ !
೧. ಸಿಕ್ಖ್ ಸಾಮ್ರಾಜ್ಯದ ಇತಿಹಾಸ
೧೮೨೩ ರಲ್ಲಿ ಮಹಾರಾಜಾ ರಣಜಿತಸಿಂಹ ಇವರು ಸಿಖ್ಖ ಸಾಮ್ರಾಜ್ಯವನ್ನು ಆಳುತ್ತಿದ್ದರು. ಈ ಸಾಮ್ರಾಜ್ಯವು ಭಾರತದ ಜಮ್ಮು ಮತ್ತು ಕಾಶ್ಮೀರದ ಭಾಗ, ಇಂದಿನ ಪಂಜಾಬ, ಪಾಕಿಸ್ತಾನದ ಪಂಜಾಬ ಮತ್ತು ಪಾಕಿಸ್ತಾನದ ಕೆಲವು ಪ್ರದೇಶಗಳನ್ನು ಒಳಗೊಂಡಿತ್ತು. ಮಹಾರಾಜಾ ರಣಜಿತಸಿಂಹ ಇವರ ಮರಣದ ನಂತರ, ಬ್ರಿಟಿಷರು ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಂಡರು ಮತ್ತು ರಾಜಾ ರಣಜಿತಸಿಂಗರವರ ಮಕ್ಕಳನ್ನು ಇಂಗ್ಲೆಂಡಿಗೆ ಶಿಕ್ಷಣದ ನೆಪದಲ್ಲಿ ಕಳುಹಿಸಿದರು ಮತ್ತು ಆ ಪ್ರದೇಶಗಳ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.
ಈ ರಾಜ್ಯದಲ್ಲಿ ಆಂಗ್ಲರು ಸಿಕ್ಖ್‌ರ ಅನೇಕ ಗುರುದ್ವಾರಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಆ ಸ್ಥಾನಗಳಲ್ಲಿ, ಸ್ಥಳೀಯ ಅರ್ಚಕರಿಗೆ ಅಂದರೆ ಮಹಂತರಿಗೆ ಗುರುದ್ವಾರದ ಜವಾಬ್ದಾರಿಯನ್ನು ಕೊಟ್ಟಿದ್ದರು. ಅರ್ಚಕರು ಗುರುದ್ವಾರದ ನಿಯಂತ್ರಣ ವಹಿಸಿರುವುದು. ಸಿಖ್ಖರಿಗೆ ಇಷ್ಟವಾಗಲಿಲ್ಲ ಮತ್ತು ಅವರಲ್ಲಿನ ಕೆಲವು ಮುಖ್ಯಸ್ಥರು ೧೯೨೦ ರಲ್ಲಿ ಅಕಾಲಿ ಚಳುವಳಿಯನ್ನು ಪ್ರಾರಂಭಿಸಿದರು ಮತ್ತು ಒಗ್ಗೂಡಿ ‘ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ’ (‘ಎಸ್.ಜಿ.ಪಿ.ಸಿ.’) ಸ್ಥಾಪಿಸಿದರು. ಅವರು ಗುರುದ್ವಾರದಿಂದ ಅರ್ಚಕರನ್ನು ವಜಾಗೊಳಿಸಿ, ಅಲ್ಲಿ ತಮ್ಮ ಜನರನ್ನು ನೇಮಿಸಿದರು. ಈ ರೀತಿ ಸಿಕ್ಖ್‌ರು ಗುರುದ್ವಾರಗಳನ್ನು ಪುನಃ ತಮ್ಮ ವಶಕ್ಕೆ ಪಡೆದರು.
೨. ಸ್ವತಂತ್ರ ಸಿಕ್ಖ್ ರಾಜ್ಯದ ಬೇಡಿಕೆ !
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ, ಪಂಜಾಬ ನಮಗೆ ಮೊದಲಿನಂತೆ ಸ್ವತಂತ್ರವಾಗಿ ಸಿಗುತ್ತದೆ ಎಂದು ಸಿಕ್ಖ್‌ರಿಗೆ ಅನಿಸುತ್ತಿತ್ತು. ಆ ಸಮಯದಲ್ಲಿ, ಅಂದರೆ ೧೯೪೬ ರ ಸುಮಾರಿಗೆ, ಭಾರತದ ವಿಭಜನೆಯ ಬೇಡಿಕೆ ಪ್ರಬಲಗೊಳ್ಳಲು ಪ್ರಾರಂಭವಾಗಿತ್ತು. ಆಂಗ್ಲರು ಭಾರತವನ್ನು ಬಿಡುತ್ತಿರುವಾಗ ಭಾರತದ ವಿಭಜನೆಯಾಯಿತು. ಹಾಗೂ ಸಿಕ್ಖ್‌ರು ‘ಸಿಖಿಸ್ತಾನ’ದ ಬೇಡಿಕೆ ಮಾಡಿದರು; ಇಲ್ಲವಾದರೆ ಅವರಿಗೆ ಭಾರತದೊಂದಿಗೆ ಇರಲು ಯಾವುದೇ ತೊಂದರೆಯಿರಲಿಲ್ಲ. ಮುಸಲ್ಮಾನರು ಬ್ರಿಟಿಷರಲ್ಲಿ ವಿಭಜನೆಯ ಬೇಡಿಕೆ ಸಲ್ಲಿಸಿದ್ದರು. ‘ಮುಸಲ್ಮಾನರಿಗೆ ಪಾಕಿಸ್ತಾನ, ಹಿಂದೂಗಳಿಗೆ ಹಿಂದೂಸ್ಥಾನ ಹೀಗಿರುವಾಗ ಸಿಕ್ಖ್‌ರಿಗೆ ಏನು ?’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ‘ಸಿಖಿಸ್ಥಾನ’ದ ಬೇಡಿಕೆ ಮಾಡಿದ್ದರು. ಭಾರತದ ವಿಭಜನೆಯಾಯಿತು ಮತ್ತು ಆಗ ಎಲ್ಲರಿಗಿಂತ ಹೆಚ್ಚು ಹಾನಿ ಸಿಕ್ಖ್‌ರಿಗಾಯಿತು; ಏಕೆಂದರೆ ಪಂಜಾಬಿನ ಶೇ. ೬೨ ರಷ್ಟು ಭಾಗ ಪಾಕಿಸ್ತಾನಕ್ಕೆ ಹೋಯಿತು. ಅಲ್ಲಿನ ಸಿಕ್ಖ್‌ರಿಗೆ ಅವರ ಅನೇಕ ಗುರುದ್ವಾರ, ಆಸ್ತಿ-ಸಂಪತ್ತು, ಮನೆಗಳನ್ನು ತೊರೆದು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಭಾರತಕ್ಕೆ ಬರಬೇಕಾಯಿತು. ೧೯೪೧ ರಲ್ಲಿ ಜನಗಣತಿ ನಡೆದಿತ್ತು. ಅದರಲ್ಲಿ ಪಂಜಾಬ ಪ್ರದೇಶದಲ್ಲಿ ಮುಸಲ್ಮಾನರು ಶೇ. ೫೯, ಹಿಂದೂಗಳು ಶೇ. ೩೦ ರಷ್ಟು ಮತ್ತು ಸಿಕ್ಖ್‌ರು ಕೇವಲ ಶೇ. ೧೫ ರಷ್ಟು ಇದ್ದರು.
ವಿಭಜನೆಯ ಬಳಿಕ ಭಾರತದಲ್ಲಿ ಉಳಿದಿದ್ದ ಪಂಜಾಬ ಪ್ರದೇಶದಲ್ಲಿ ನಿರಾಶ್ರಿತ ಸಿಕ್ಖ್‌ರು ಮತ್ತು ಸ್ಥಳೀಯ ಸಿಖ್ಖರು ಒಟ್ಟುಗೂಡಿದಾಗ ಅವರ ಸಂಖ್ಯೆ ಹೆಚ್ಚಾಯಿತು ಮತ್ತು ಅವರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮಾಡಿದರು. ಆಂಗ್ಲರು ಸಿಕ್ಖ್‌ರಿಗೆ ಮೋಸ ಮಾಡಿ ಪಂಜಾಬ ತೆಗೆದುಕೊಂಡಿದ್ದರು ಮತ್ತು ತದನಂತರ ಹೋಗುವಾಗ ಪಂಜಾಬನ್ನು ಸಿಕ್ಖ್‌ರಿಗೆ ನೀಡಬೇಕು ಎನ್ನುವ ಅಪೇಕ್ಷೆಯಿತ್ತು. ಅದು ಪೂರ್ಣವಾಗಲಿಲ್ಲ. ವಿಭಜನೆಯ ಬಳಿಕ ಸಿಕ್ಖ್‌ರಿಗೆ ಪಂಜಾಬನಲ್ಲಿ ತಮಗೆ ರಾಜ್ಯ ಸಿಗುವುದು ಎಂದು ಅನಿಸುತ್ತಿತ್ತು; ಆದರೆ ಅದು ಪೂರ್ಣವಾಗುವಂತೆ ಕಾಣಿಸುತ್ತಿರಲಿಲ್ಲ.
ಸಿಕ್ಖ್‌ರು ಇನ್ನಿತರ ಕಾರಣಗಳಿಂದಲೂ ಅಸಂತುಷ್ಟರಾಗಿದ್ದರು. ಏಕೆಂದರೆ ಭಾರೀ ಸರಕು ವಾಹನ ಸಾಗಾಟದ ಮೇಲೆ ಸಿಕ್ಖ್‌ರ ಏಕಸ್ವಾಮ್ಯವಿತ್ತು, ಅದು ಸರಕಾರಿ ನಿಯಮಗಳಿಂದಾಗಿ ದೂರವಾಯಿತು. ದೇಶದ ಕೆಲವು ಪ್ರದೇಶಗಳಲ್ಲಿ ಸರಕು ವಾಹನದ ಮೇಲಿನ ಸಿಕ್ಖ್‌ರ ಪ್ರಾಬಲ್ಯ ಕಡಿಮೆಯಾಯಿತು; ಆ ಸ್ಥಳಗಳಲ್ಲಿ ಇತರರಿಗೆ ಅವಕಾಶ ದೊರಕಿತು. ಸೇನೆಯಲ್ಲಿ ಸಿಕ್ಖ್‌ರಿಗೆ ಆದ್ಯತೆ ನೀಡಲಾಗುತ್ತಿತ್ತು. ಅದೂ ಕೂಡ ನಿಧಾನವಾಗಿ ಕಡಿಮೆಯಾಗಿ, ಇತರರಿಗೆ ಅವಕಾಶ ಸಿಗಲಾರಂಭಿಸಿತು. ಆಗ ಸಿಕ್ಖ್ ಸಮುದಾಯದ ಮುಖಂಡರಿಗೆ ತಮ್ಮ ಸಮಾಜದ ಮೇಲೆ ಅನ್ಯಾಯ ಆಗುತ್ತಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ದೇಶ ಬೇಕು ಎಂಬ ಭಾವನೆ ಮೂಡತೊಡಗಿತು.
೩. ಹಿಂಸಾತ್ಮಕ ಘರ್ಷಣೆ !
ಕೇಂದ್ರ ಸರಕಾರವು ಸ್ವಲ್ಪ ಕಾಲಾವಧಿಯ ಬಳಿಕ ಸಿಕ್ಖ್ ಬಹುಸಂಖ್ಯಾತರಾಗಿರುವ ಪ್ರದೇಶಕ್ಕೆ ‘ಪಟಿಯಾಲ ಎಂಡ ಈಸ್ಟ ಪಂಜಾಬ ಸ್ಟೇಟ್ಸ್ ಯೂನಿಯನ’ ಎಂದು ಮನ್ನಣೆ ನೀಡಿತು. ಆದರೆ ಅಕಾಲಿದಳದ ಹೆಚ್ಚುತ್ತಿರುವ ಶಕ್ತಿಯನ್ನು ನೋಡಿ ಕಾಂಗ್ರೆಸ್ ಅದನ್ನು ರದ್ದುಪಡಿಸಿತು. ೧೯೫೬ ರಲ್ಲಿ ಸರಕಾರವು ‘ಸ್ಟೇಟ್ ರಿಆರ್ಗನೈಸೇಶನ’ ಕಾಯಿದೆಯನ್ನು ಜಾರಿಗೆ ತಂದಿತು. ಅದಕ್ಕನುಸಾರ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ಪುನಾರಚನೆ ಮಾಡಲಾಯಿತು. ಅಂದರೆ ಯಾವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಭಾಷೆಯನ್ನು ಮಾತನಾಡುವ ಜನರು ಇದ್ದಾರೆಯೋ ಆ ಪ್ರದೇಶಗಳಿಗೆ ಸಂಬಂಧಿಸಿದ ರಾಜ್ಯದ ಹೆಸರನ್ನು ನೀಡಲಾಯಿತು. ಮರಾಠಿ ಜನರಿಗಾಗಿ ಮಹಾರಾಷ್ಟ್ರ, ತಮಿಳರಿಗಾಗಿ ತಮಿಳುನಾಡು ಇತ್ಯಾದಿ. ಆಗ ಪಂಜಾಬದಿಂದ ಹಿಂದಿ ಭಾಷಿಕರ ಹರಿಯಾಣಾವನ್ನು ಹೊರತುಪಡಿಸಿ ಪಂಜಾಬಿ ಜನರಿಗೆ ಪಂಜಾಬ್ ರಚಿಸಿಕೊಡಬೇಕೆಂದು ಬೇಡಿಕೆ ಬಂದಿತು; ಆದರೆ ಈ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಇದರಿಂದ ವಾತಾವರಣ ಪುನಃ ಹದಗೆಡತೊಡಗಿತು. ಅಕಾಲಿ ದಳದ ಮಾಸ್ಟರ ತಾರಾಸಿಂಗ ಅವರು, ‘ಈಗ ಬಹಳವಾಯಿತು, ನಮಗೆ ಪ್ರತ್ಯೇಕ ಪ್ರಾಂತ್ಯ ಸಿಕ್ಕರೆ ಮಾತ್ರ ಪಂಜಾಬಿ ಸಂಸ್ಕ್ರತಿ ಉಳಿಯುವುದು’ ಎಂದು ಹೇಳಿದರು. ತದನಂತರ ಸ್ವಲ್ಪ ಮಟ್ಟಿಗೆ ಸಿಕ್ಖ್‌ರು ಮತ್ತು ಹಿಂದೂಗಳ ನಡುವೆ ಗಲಭೆ ಪ್ರಾರಂಭವಾಯಿತು. ಇದರಿಂದ ‘ಪಂಜಾಬಿ ಸುಬಾ ಚಳುವಳಿ’ಯು ಜನ್ಮತಾಳಿತು.
೧೯೫೫ ರಿಂದ ೧೯೬೫ ರವರೆಗೆ ಇಂತಹ ಸಣ್ಣಪುಟ್ಟ ಚಳುವಳಿಗಳು ನಡೆದಿದ್ದವು. ೧೯೬೫ ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾದಾಗ, ಈ ಎಲ್ಲಾ ಚಳುವಳಿಗಳನ್ನು ಸ್ಥಗಿತಗೊಳಿಸಲಾಯಿತು. ೧೯೬೫ ರಲ್ಲಿ ಪಂಜಾಬಿ ಸೈನಿಕರು ಯುದ್ಧದಲ್ಲಿ ಶೌರ್ಯವನ್ನು ತೋರಿಸಿದರು. ತದ ನಂತರ ಸಿಕ್ಖ್‌ರ ಮಹತ್ವ ಗಮನಕ್ಕೆ ಬಂದಿತು ಮತ್ತು ಅವರ ಪಂಜಾಬ ಪ್ರಾಂತ್ಯವನ್ನು ವಿಭಜಿಸುವ ಅವರ ಬೇಡಿಕೆಯನ್ನು ಅಂಗೀಕರಿಸಿ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಎಂದು ೩ ರಾಜ್ಯಗಳಾಗಿ ವಿಂಗಡಿಸಲಾಯಿತು. ಚಂದೀಗಡದಲ್ಲಿ ಮತ್ತೆ ಅಡಚಣೆಯಿತ್ತು. ಶೇ. ೫೫ ರಷ್ಟು ಹಿಂದಿ ಮಾತನಾಡುವ ಜನಸಂಖ್ಯೆಯಿದ್ದ ಕಾರಣದಿಂದ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಇಡಲಾಯಿತು.
ತದನಂತರ ನಡೆದ ಚುನಾವಣೆಯಲ್ಲಿ ಅಕಾಲಿ ದಳ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು; ಆದರೆ ಅದಕ್ಕೆ ಯಾವತ್ತೂ ೫ ವರ್ಷಗಳ ಕಾಲಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಸ್ಥಿತಿ ೧೯೯೭ ರವರೆಗೂ ಹಾಗೆಯೇ ಇತ್ತು. ಅದರ ಹಿಂದೆ ಕಾಂಗ್ರೆಸ್ಸಿನ ಕೈವಾಡವಿತ್ತು. ಅದರಿಂದಾಗಿ ಸರಕಾರ ಪತನವಾಗುತ್ತಿದೆ ಎಂದು ಕಾಂಗ್ರೆಸ್ಸಿನ ಮೇಲೆ ಆರೋಪವಿತ್ತು. ೧೯೭೨ ರಲ್ಲಿ ಅಕಾಲಿ ದಳ ಚುನಾವಣೆಯಲ್ಲಿ ಸೋತಿತು. ಇದೇ ಕಾಲಾವಧಿಯಲ್ಲಿ ಅಕಾಲಿ ದಳವು ‘ಅನಂತಪುರ ಸಾಹಿಬ ರೆಸಲ್ಯೂಶನ’ ಮಸೂದೆಯನ್ನು ಸಿದ್ಧ ಪಡಿಸಿತ್ತು. ಇದರಲ್ಲಿಯೂ ಪ್ರತ್ಯೇಕ ದೇಶದ ಬೇಡಿಕೆಯಿರಲಿಲ್ಲ. ಬದಲಾಗಿ ಪ್ರತ್ಯೇಕ ರಾಜ್ಯ ಬೇಕಾಗಿತ್ತು. ಪಂಜಾಬಿನಲ್ಲಿ ಹೆಚ್ಚಾಗಿ ಧರ್ಮದ ಆಧಾರದಲ್ಲಿ ರಾಜಕೀಯ ನಡೆಯುತ್ತದೆ. ಇದರ ಅರಿವು ಅಕಾಲಿ ಸೇರಿದಂತೆ ಕಾಂಗ್ರೆಸ್ಸಿಗೂ ಇತ್ತು ಮತ್ತು ಆ ದೃಷ್ಟಿಯಿಂದ ಅದು ಲಾಭವನ್ನು ಮಾಡಿಕೊಂಡಿತು.
೪. ಭಿಂದ್ರನವಾಲೆಯ ಉದಯ !
ಪಂಜಾಬಿನ ಜನರ ಮೇಲೆ ಹೆಚ್ಚುತ್ತಿರುವ ಅಕಾಲಿಯ ಪ್ರಾಬಲ್ಯವನ್ನು ತೆಗೆದುಹಾಕಲು ಕಾಂಗ್ರೆಸ್ ಅವಕಾಶವನ್ನು ಹುಡುಕುತ್ತಿತ್ತು. ಇಂತಹ ಸಮಯದಲ್ಲಿ ಅದಕ್ಕೆ ಅಕಾಲಿ ದಳಕ್ಕಿಂತ ಅಧಿಕ ಮೂಲಭೂತವಾದಿ ಧಾರ್ಮಿಕ ವ್ಯಕ್ತಿ ಬೇಕಾಗಿತ್ತು ಮತ್ತು ಇಲ್ಲಿ ಅವರಿಗೆ ಜರ್ನೇಲ ಸಿಂಗ ಭಿಂದ್ರನವಾಲೆ ಈ ಮೂಲಭೂತವಾದಿ ಧಾರ್ಮಿಕ ವ್ಯಕ್ತಿ ಸಿಕ್ಕನು. ಪಂಜಾಬಿನಲ್ಲಿ ಧಾರ್ಮಿಕ ಮತ್ತು ಇತರ ಶಿಕ್ಷಣವನ್ನು ನೀಡುವ ಕೆಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಅವರಲ್ಲಿ ‘ದಮ ದಮಿ ತಸ್ಕಾಲ’ ಇದು ಭಿಂಡರ ಉರಲ್ಲಿನದ್ದಾಗಿತ್ತು. ಆದುದರಿಂದ ಅಲ್ಲಿ ವಾಸಿಸುವವರನ್ನು ‘ಭಿಂಡರವಾಲೆ’ ಎಂದು ಸಂಬೋಧಿಸಲಾಗುತ್ತಿತ್ತು. ಅವರನ್ನು ಜನರು ‘ಸಂತ ಜರ್ನೇಲಸಿಂಗ ಭಿಂದ್ರನವಾಲೆ’ ಎಂದು ಗೌರವದಿಂದ ಕರೆಯುತ್ತಿದ್ದರು. ಅವರು ಮೂಲಭೂತವಾದಿ ಧಾರ್ಮಿಕರಾಗಿದ್ದರು. ಸಿಖ್ಖರು ಮತ್ತು ನಿರಂಕಾರಿ ಸಿಕ್ಖ್‌ರ ನಡುವೆ ಸೈದ್ಧಾಂತಿಕ ಅಭಿಪ್ರಾಯ ವ್ಯತ್ಯಾಸಗಳಿವೆ. ಸಿಕ್ಖ್‌ರು ತಮ್ಮ ೧೦ ಗುರುಗಳನ್ನು ಹೊರತುಪಡಿಸಿ ಇತರರನ್ನು ತಮ್ಮ ಗುರು ಎಂದು ಪರಿಗಣಿಸದೇ, ಗ್ರಂಥದಲ್ಲಿನ ಉಪದೇಶವನ್ನು ಗುರುವೆಂದು ತಿಳಿಯುತ್ತಾರೆ. ಆದರೆ ನಿರಂಕಾರಿ ಸಿಕ್ಖ್‌ರು ಸದ್ಯಕ್ಕೆ ಕಾರ್ಯನಿರತರಾಗಿರುವವರನ್ನು ಗುರುವೆಂದು ತಿಳಿಯುತ್ತಾರೆ.
೧೯೭೮ ರಲ್ಲಿ ನಿರಂಕಾರಿ ಸಿಕ್ಖ್‌ರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಭಿಂದ್ರನ್‌ವಾಲೆಯು ‘ಈ ಕಾರ್ಯಕ್ರಮಕ್ಕೆ ಸಿಖ್ಖರು ಹೋಗಬಾರದು’ ಎಂದಿದ್ದನು. ಆಗ ಎರಡೂ ಸಮುದಾಯಗಳಲ್ಲಿ ಹೊಡೆದಾಟವಾಗಿ ೧೭ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದರ ನಂತರ, ಮತ್ತೆ ೨ ವರ್ಷಗಳ ಬಳಿಕ ನಿರಂಕಾರಿ ಸಿಕ್ಖ್‌ರ ಪ್ರಮುಖ ಬಾಬಾ ಗುರುಬಚ್ಚನ ಸಿಂಗ ಅವರನ್ನು ಅವರ ಭದ್ರತಾ ಸಿಬ್ಬಂದಿ ಸಹಿತ ಹತ್ಯೆ ಮಾಡಲಾಯಿತು. ಈ ಎರಡೂ ಘಟನೆಗಳಲ್ಲಿ ಭಿಂದ್ರನವಾಲೆಯ ಹೆಸರು ಕೇಳಿ ಬಂದ ನಂತರವೂ ಅವರ ವಿರುದ್ಧ ಯಾವುದೇ ಕ್ರಮ ನಡೆಸಲಿಲ್ಲ. ೧೯೯೧ ರಲ್ಲಿ ಜನಗಣತಿ ನಡೆಸಲಾಗಿತ್ತು. ಈ ವಿಷಯದಲ್ಲಿ ಬಿಂಡರವಾಲೆ ಇವರು ಪಂಜಾಬಿನ ಜನರಿಗೆ ‘ನಿಮ್ಮ ಮಾತೃಭಾಷೆಯನ್ನು ಕೇಳಿದರೆ ಪಂಜಾಬಿ ಎಂದು ಹೇಳಿರಿ’ ಎಂದು ಕರೆ ನೀಡಿದ್ದರು. ಇದರಿಂದ ಹಿಂದೂಗಳಲ್ಲಿ ಭಯದ ವಾತಾವರಣವಿತ್ತು. ಆಗ ‘ಪಂಜಾಬ ಕೇಸರಿ’ ಈ ದಿನಪತ್ರಿಕೆಯ ಸಂಪಾದಕರರಾದ ಲಾಲಾಜಗತ ನಾರಾಯಣ ಇವರು ಹಿಂದೂಗಳಿಗೆ ‘ಹೆದರುವ ಆವಶ್ಯಕತೆಯಿಲ್ಲ. ಅವರು ಕೇಳಿದರೆ ‘ಹಿಂದಿ ಭಾಷೆ’ ಎಂದೂ ಹೇಳಬಹುದು’ ಎಂದು ಹೇಳಿದ್ದರು. (೧೭.೧೦.೨೪)
ಇದಕ್ಕಾಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈ ವಿಷಯದ ಕಾರಣದಿಂದ ಈಗ ಭಿಂದ್ರನವಾಲೆಯ ಮೇಲೆ ಕ್ರಮ ಕೈಕೊಳ್ಳಬೇಕು ಎಂದು ಸರಕಾರದ ಮೇಲೆ ಒತ್ತಡ ನಿರ್ಮಾಣವಾಯಿತು. ಇದರಿಂದ ಭಿಂದ್ರನವಾಲೆಯನ್ನು ಬಂಧಿಸಲಾಯಿತು. ಈ ಬಂಧನದ ಬಳಿಕ ಪಂಜಾಬಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಅನೇಕ ಜನರು ಮರಣ ಹೊಂದಿದರು. ಇದರ ಪರಿಣಾಮವಾಗಿ ಭಿಂಡರವಾಲೆಯನ್ನು ಬಿಡುಗಡೆಗೊಳಿಸಬೇಕಾಯಿತು. ಕಾಂಗ್ರೆಸ ಮತ್ತು ಭಿಂಡರವಾಲೆಯವರಲ್ಲಿ ನಡುವೆ ಇಲ್ಲಿಂದ ವೈಮನಸ್ಸು ಮೂಡಿತು. ಜನರ ಬಹುದೊಡ್ಡ ಬೆಂಬಲ ಭಿಂಡರವಾಲೆಗೆ ಸಿಕ್ಕಿತು ಮತ್ತು ಅಕಾಲಿ ದಳಕ್ಕೂ ಇದರಿಂದಾಗಿ ಭಿಂದ್ರನವಾಲೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಕಾಂಗ್ರೆಸ್ಸಿನಿಂದ ದೂರವಾಗಬೇಕಾಯಿತು. ಇಬ್ಬರೂ ಸೇರಿ ‘ಧರ್ಮಯುದ್ಧ ಚಳುವಳಿ’ಯನ್ನು ಪ್ರಾರಂಭಿಸಿದರು ಮತ್ತು ‘ಅನಂತಪೂರ ಸಾಹಿಬ ರೆಸಲ್ಯೂಶನ’ ಬೇಡಿಕೆ ಮಂಡಿಸಿದರು. ಅದಕ್ಕಾಗಿ ಚಳುವಳಿಯೊಂದಿಗೆ ಕೆಲವು ಸ್ಥಳಗಳಲ್ಲಿ ಹಿಂಸಾಚಾರವೂ ಪ್ರಾರಂಭವಾಯಿತು.
೧೯೮೨ ರಲ್ಲಿ ಪಂಜಾಬ್ ಮುಖ್ಯಮಂತ್ರಿ ದರ್ಬಾರ್ ಸಿಂಗ್‌ರ ಮೇಲೆ ದಾಳಿ ನಡೆಯಿತು. ದೆಹಲಿಯ ‘ಏಶಿಯನ ಗೇಮ್ಸ’ ಸಮಯದಲ್ಲಿಯೂ ಭಿಂಡರವಾಲೆಯ ಘರ್ಷಣೆ ನಡೆಯಿತು. ಅನೇಕ ಸ್ಥಳಗಳಲ್ಲಿ ಬ್ಯಾಂಕುಗಳ ಮೇಲೆ ದರೋಡೆ ಆಗುತ್ತಿತ್ತು. ವಿಮಾನವನ್ನು ಅಪಹರಣ ಮಾಡಿ ಅದನ್ನು ಪಾಕಿಸ್ತಾನಕ್ಕೆ ಒಯ್ಯಲಾಯಿತು. ೧೯೮೩ ರಲ್ಲಿ ಅಮೃತಸರದಿಂದ ದೆಹಲಿಗೆ ಹೋಗುವ ಒಂದು ಬಸ್ ಅಪಹರಿಸಿ ಅದರಲ್ಲಿದ್ದ ಹಿಂದೂ ಪ್ರವಾಸಿಗರನ್ನು ಕೆಳಗಿಳಿಸಿ ಗುಂಡು ಹಾರಿಸಲಾಯಿತು. ಇಂತಹ ಅನೇಕ ಘಟನೆಗಳು ನಡೆದಿದ್ದರಿಂದ ಪಂಜಾಬದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು. ಇದೇ ಸಮಯದಲ್ಲಿ ಅಂದರೆ ಡಿಸೆಂಬರ ೧೫, ೧೯೮೩ ರಲ್ಲಿ ಭಿಂಡರವಾಲೆಯು ತನ್ನ ಕೆಲಸ ಮಾಡುವ ಸ್ಥಳವನ್ನು ಸುವರ್ಣಮಂದಿರದ ಅಕಾಲ ತಖ್ತಗೆ ಸ್ಥಳಾಂತರಿಸಿದನು. ಇಲ್ಲಿ ಯಾರೂ ರಾಜಕೀಯ ನಾಯಕರು ಬರುವ ಧೈರ್ಯ ತೋರಿಸುವುದಿಲ್ಲ ಎಂದು ಭಿಂಡರವಾಲೆಗೆ ಅನಿಸುತ್ತಿತ್ತು. ಅವನು ಅಲ್ಲಿ ಭದ್ರತೆಗಾಗಿ ಬಹಳಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದನು. ಭಾರತೀಯ ಸೇನೆಯ ನಿವೃತ್ತ ಮೇಜರ ಜನರಲ ಶಹಾಬೇಗ ಸಿಂಗ, ನಿವೃತ್ತ ಮೇಜರ ಜನರಲ ಜಸವಂತ ಸಿಂಗ ಭುಲ್ಲರ ಇವರು ಭಿಂದ್ರನವಾಲೆಯ ಕಾರ್ಯಕರ್ತರಿಗೆ ಹೋರಾಡುವ ತರಬೇತಿಯನ್ನು ನೀಡಿದ್ದರು.
೫. ‘ಆಪರೇಶನ ಬ್ಲೂ ಸ್ಟಾರ’
‘ಅನಂತಪೂರ ಸಾಹಿಬ ರೆಜಲ್ಯೂಶನ’ ಕೆಲವು ಷರತ್ತುಗಳೊಂದಿಗೆ ಜಾರಿಗೊಳಿಸೋಣ ಎನ್ನುವ ದೃಷ್ಟಿಯಿಂದ ಮತ್ತೊಮ್ಮೆ ಇಂದಿರಾ ಗಾಂಧಿಯವರು ಭಿಂದ್ರನವಾಲೆಯ ಬಳಿಗೆ ವ್ಯಕ್ತಿಯನ್ನು ಕಳುಹಿಸಿದ್ದರು. ಅಕಾಲ ತಖ್ತ ಅದನ್ನು ಒಪ್ಪಿಕೊಂಡಿತು. ಆದರೆ ಭಿಂದ್ರನವಾಲೆ ತಿರಸ್ಕರಿಸಿದನು. ಇದರಿಂದ ಅವನ ಮೇಲೆ ಕ್ರಮ ಕೈಕೊಳ್ಳಲು ‘ಆಪರೇಶನ ಬ್ಲೂಸ್ಟಾರ’ ಈ ಸೇನಾಕಾರ್ಯಾಚರಣೆ ನಡೆಸಲಾಯಿತು. ಮೇಜರ ಜನರಲ ಕುಲದೀಪ ಸಿಂಗ ಬ್ರಾರ ಇವರಿಗೆ ಉಸ್ತುವಾರಿ ವಹಿಸಲಾಗಿತ್ತು. ಜೂನ ೧ ರಂದು ಪಂಜಾಬಿನಲ್ಲಿ ಸಂಪರ್ಕ ಕಡಿತಗೊಳಿಸಿ, ಎಲ್ಲಾ ಸ್ಥಳೀಯ ಮತ್ತು ವಿದೇಶಿ ಪತ್ರಕರ್ತರನ್ನು ಒಂದು ಸ್ಥಾನದಲ್ಲಿ ಸೀಮಿತಗೊಳಿಸಲಾಯಿತು. ಸ್ವರ್ಣಮಂದಿರವನ್ನು ನಾಲ್ಕೂ ದಿಕ್ಕಿನಿಂದ ಸುತ್ತುವರಿಯಲಾಯಿತು. ಸೇನಾ ವಾಹನಗಳು ಬಾಂಬ್‌ಗಳ ಮಳೆಗರೆದವು; ಆದರೆ ಭಿಂದ್ರನವಾಲಾನ ಬಳಿ ಎಲ್ಲ ಶಸ್ತ್ರಾಸ್ತ್ರಗಳಿದ್ದವು ಮತ್ತು ಅವನು ಭಾರತೀಯ ಸೇನೆಗೆ ಊಹಿಸಲಾಗದಷ್ಟು ವಿರೋಧಿಸುವ ಮೂಲಕ ಭಾರಿ ನಷ್ಟವನ್ನುಂಟು ಮಾಡಿದನು. ಆಗ ಹೆಲಿಕಾಪ್ಟರನಿಂದ ನೋಡಿದಾಗ, ಶಸ್ತ್ರಸಜ್ಜಿತ ಸಿಖ್ಖರು ಪಂಜಾಬನ ವಿವಿಧ ಪ್ರದೇಶಗಳಿಂದ ಬೃಹತ್ ಸಂಖ್ಯೆಯಲ್ಲಿ ಸುವರ್ಣ ಮಂದಿರದೆಡೆಗೆ ತೆರಳುತ್ತಿದ್ದುದರಿಂದ ಆದಷ್ಟು ಬೇಗನೆ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಒತ್ತಡ ಹೆಚ್ಚಾಯಿತು. ಕೊನೆಗೆ ಸೇನೆಯು ಭಿಂದ್ರನವಾಲೆ ಸೇರಿದಂತೆ ನೂರಾರು ಸಿಕ್ಖ್‌ರನ್ನು ಹತ್ಯೆ ಮಾಡಿತು; ಆದರೆ ಇದರಲ್ಲಿ ಸುವರ್ಣಮಂದಿರಕ್ಕೆ ಸಾಕಷ್ಟು ಹಾನಿಯಾಯಿತು ಮತ್ತು ಇದರ ಸೇಡು ತೀರಿಸಿಕೊಳ್ಳಬೇಕು ಎನ್ನುವ ಭಾವನೆ ಸಿಕ್ಖ್‌ರಲ್ಲಿ ಬಲವಾಯಿತು. ಸೇನೆಯ ಸಿಕ್ಖ್ ರೆಜಿಮೆಂಟ ದಂಗೆಯೆದ್ದು ಅಧಿಕಾರಿಗಳ ಹತ್ಯೆ ಮಾಡಿತು ಮತ್ತು ಅಮೃತಸರದತ್ತ ಸಾಗಿತು. ಈ ಕಾರಣದಿಂದಾಗಿ, ಸೇನೆಯು ‘ಆಪರೇಷನ್ ವುಡ್ರೋಸ್’ ಅನ್ನು ಪ್ರಾರಂಭಿಸಿ ಶಸ್ತ್ರಸಜ್ಜಿತ ಸಿಕ್ಖ್‌ರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿತು.
ಇದರ ನಂತರ, ೩೧ ಅಕ್ಟೋಬರ್ ೧೯೮೪ ರಂದು, ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದರು. ಆಗ ದೆಹಲಿಯಲ್ಲಿ ಸಿಕ್ಖ್ ವಿರೋಧಿ ದಂಗೆಗಳು ಭುಗಿಲೆದ್ದವು. ಇದರಲ್ಲಿ ಸಾವಿರಾರು ಸಿಕ್ಖ್‌ರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹತ್ಯೆ ಮಾಡಿದರು. ಬೆಂಕಿ ಹಚ್ಚಿದರು, ಇದರಲ್ಲಿ ದೋಷಿಗಳಾಗಿದ್ದ ಸಜ್ಜನಕುಮಾರ, ಜಗದೀಶ ಟೈಟ್ಲರ ಇವರನ್ನು ಕಾಂಗ್ರೆಸ್ ಚುನಾವಣೆಗೆ ನಿಲ್ಲಿಸಿತ್ತು. ಇಂದಿರಾಗಾಂಧಿಯವರ ಬಳಿಕ ರಾಜೀವ ಗಾಂಧಿಯವರು ಸಿಕ್ಖ್‌ರೊಂದಿಗೆ ಸಂಬಂಧ ಸುಧಾರಿಸಲು ‘ರಾಜೀವ ಲೊಂಗೆವಾಲ ಮಸೂದೆ’ ಜಾರಿಗೊಳಿಸಿದರು. ಆದರೆ ಸಿಕ್ಖ್‌ರಿಗೆ ಇದರಲ್ಲಿನ ನಿಬಂಧನೆಗಳು ಒಪ್ಪಿಗೆಯಿಲ್ಲದ ಕಾರಣ ಪುನಃ ಹಿಂಸಾಚಾರ ಭುಗಿಲೆದ್ದಿತು. ಪುನಃ ಖಲಿಸ್ತಾನ ಬೆಂಬಲಿಗ ಸಿಕ್ಖ್‌ರು ಸುವರ್ಣಮಂದಿರದಲ್ಲಿ ಸೇರಿದ್ದರಿಂದ ‘ಆಪರೇಷನ ಬ್ಲಾಕ ಥಂಡರ’ ೧೯೮೬ ಮತ್ತು ೧೯೮೮ ರಲ್ಲಿ ನಡೆಸಬೇಕಾಯಿತು. ತದನಂತರ ಸ್ವಲ್ಪ ಸಮಯದ ಬಳಿಕ ಮಧ್ಯೆ ಮಧ್ಯೆ ಖಲಿಸ್ತಾನದ ಬೇಡಿಕೆ ಆಗುತ್ತಿತ್ತು.
೬. ಹಿಂಸಾತ್ಮಕ ಚಳುವಳಿಗೆ ಶಾಶ್ವತ ಕಡಿವಾಣ ಹಾಕಬೇಕು !
೨೦೧೫ ರಲ್ಲಿ, ಫರೀದಕೋಟದ ಒಂದು ಗ್ರಾಮದ ಗುರುದ್ವಾರದಿಂದ ‘ಗುರುಗ್ರಂಥಸಾಹಿಬ’ ಕಳ್ಳತನವಾಯಿತು. ತದನಂತರ ಪುನಃ ಸಿಕ್ಖ್‌ರಿಗಾಗಿ ಭಾರತವು ಅಸುರಕ್ಷಿತವಾಗಿದೆ’, ಎನ್ನುವ ಕೂಗೆದ್ದಿತು. ೨೦೨೨ ರಲ್ಲಿ, ಅಲ್ಲಿನ ಓರ್ವ ಗಾಯಕ ದೀಪ್ ಸಿದ್ಧು ‘ವಾರಿಸ್ ಪಂಜಾಬ್ ದೇ’ ಈ ಸಂಘಟನೆಯನ್ನು ಪ್ರಾರಂಭಿಸಿದನು. ದೀಪ್ ಸಿದ್ಧು ನರೇಂದ್ರ ಮೋದಿಯವರನ್ನು ತುಂಬಾ ಟೀಕಿಸಿದ್ದನು. ಅಪಘಾತದಲ್ಲಿ ಅವನು ಮರಣ ಹೊಂದಿದ ನಂತರ, ದುಬೈನಿಂದ ಬಂದ ಅಮೃತಪಾಲ್ ಸಿಂಗ್, ಇವನು ‘ವಾರಿಸ್ ಪಂಜಾಬ್ ದೆ’ ನ ಜವಾಬ್ದಾರಿಯನ್ನು ವಹಿಸಿಕೊಂಡನು. ಅವನು ಭಿಂದ್ರನ್‌ವಾಲೆ ಇವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದನು ಮತ್ತು ಅದೇ ರೀತಿ ಜನರಿಗೆ ಹೇಳಲು ಪ್ರಾರಂಭಿಸಿದನು. ಅಮೃತಪಾಲ್ ಸಿಂಗ್‌ನ ಸಹಚರರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದರು, ಆಗ ಸ್ವತಃ ಅಮೃತಪಾಲ್ ಸಾವಿರಾರು ಸಿಕ್ಖ್‌ರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತನ್ನ ಸಹಚರನನ್ನು ಬಿಡುಗಡೆಗೊಳಿಸಿ ಕರೆತಂದನು. ಪೊಲೀಸರು ಆ ಸಮಯದಲ್ಲಿ ತಮ್ಮ ದಕ್ಷತೆಯನ್ನು ಸಾಬೀತುಪಡಿಸುವಲ್ಲಿ ವಿಫಲರಾದರು.
ಅಮೃತಪಾಲ್ ಈಗ ಖಲಿಸ್ತಾನದ ಬೇಡಿಕೆಯನ್ನು ಇಡಲು ಪ್ರಾರಂಭಿಸಿದ್ದಾನೆ ಮತ್ತು ಅವನಿಗೆ ಜನರಿಂದ ಬಹುದೊಡ್ಡ ಬೆಂಬಲ ಸಿಗುತ್ತಿರುವುದು ಭಾರತಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆನಡಾದ ಖಲಿಸ್ತಾನ ಬೆಂಬಲಿಗರಿಂದ ಇಂಗ್ಲೆಂಡಿನ ಭಾರತೀಯ ಹೈಕಮೀಷನರ ಕಾರ್ಯಾಲಯ, ಕೆನಡಾದ ಕಾರ್ಯಾಲಯದ ಮುಂದೆ ಕೊಳ್ಳಿ ಇಡುವುದು (ಬೆಂಕಿ ಹಚ್ಚುವುದು) ಇತ್ಯಾದಿ ಕೃತ್ಯಗಳನ್ನು ನಡೆಸಿದ್ದಾನೆ. ಅಮೇರಿಕಾ ಮತ್ತು ಕೆನಡಾದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ದಿನ ಬಿಟ್ಟು ದಿನಕ್ಕೆ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾನೆ. ಕೆನಡಾ ಖಲಿಸ್ತಾನವನ್ನು ಬೆಂಬಲಿಸುತ್ತಾ ಭಾರತದೊಂದಿಗೆ ಶತ್ರುತ್ವವನ್ನು ಹೊಂದುತ್ತಿದೆ. ಅಮೇರಿಕಾ ಕೆನಡಾವನ್ನು ಬೆಂಬಲಿಸುತ್ತಿದೆ. ಭಾರತವು ಈಗ ಆಕ್ರಮಣಕಾರಿ ಧೋರಣೆಯನ್ನು ತೋರಿಸಿ ಖಲಿಸ್ತಾನಿ ಭಯೋತ್ಪಾದಕರು ಮತ್ತು ಭಾರತದ ಹೊರಗಿನ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹಿಂಸಾತ್ಮಕ ಚಳುವಳಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಇಲ್ಲವಾದಲ್ಲಿ ಮತ್ತೆ ಹೊಸ ಭಿಂದ್ರನವಾಲೆಗಳು ಹುಟ್ಟಿಕೊಂಡು ಭಾರತದ ಭದ್ರತೆಗೆ ಸವಾಲನ್ನು ನಿರ್ಮಾಣ ಮಾಡಬಹುದು.
– ಶ್ರೀ ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ (೧೭.೧೦.೨೦೨೪)