Firecracker Bomb Teacher: ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ರಿಮೋಟ್ ಮೂಲಕ ಪಟಾಕಿಯಂತಹ ಬಾಂಬ್ ಸ್ಫೋಟಿಸಿದ ವಿದ್ಯಾರ್ಥಿಗಳು

  • ಶಿಕ್ಷಕಿಗೆ ಸಣ್ಣ ಪುಟ್ಟ ಗಾಯ

  • 13 ವಿದ್ಯಾರ್ಥಿಗಳು ಅಮಾನತು

ಭಿವಾನಿ (ಹರಿಯಾಣ) – ಬೋಪಾರಾ ಗ್ರಾಮದ ಒಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮಹಿಳಾ ಶಿಕ್ಷಕಿಯ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಇಟ್ಟು ಅದನ್ನು ರಿಮೋಟ್ ಮೂಲಕ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಶಿಕ್ಷಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣದಲ್ಲಿ 13 ಆರೋಪಿ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದೆ.

ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮಹತಾ ಅವರು ಈ ಬಗ್ಗೆ ಮಾತನಾಡಿ, ತರಗತಿಯ 15 ಮಕ್ಕಳಲ್ಲಿ 13 ಮಕ್ಕಳು ಈ ಘಟನೆಯಲ್ಲಿ ಭಾಗಿಯಾಗಿದ್ದರು. ಒಬ್ಬ ವಿದ್ಯಾರ್ಥಿಯು ಬಾಂಬ್ ತಯಾರಿಸಿದ್ದನು, ಇನ್ನೊಬ್ಬನು ಕುರ್ಚಿಯ ಕೆಳಗೆ ಬಾಂಬ್ ಇಟ್ಟಿದ್ದನು ಮತ್ತು ಮೂರನೇಯ ವಿದ್ಯಾರ್ಥಿಯು ರಿಮೋಟ್ ಮೂಲಕ ಬಾಂಬ್ ಸ್ಫೋಟ ಮಾಡಿದ್ದನು. ಈ ಮಕ್ಕಳನ್ನು ಶಾಲೆಯಿಂದ ಅಮಾನತುಗೊಳಿಸುವ ಬಗ್ಗೆ ಚರ್ಚೆ ನಡೆಯಿತು; ಆದರೆ ಕುಟುಂಬದವರು ಲಿಖಿತ ಕ್ಷಮಾಪಣೆ ಕೋರಿದ್ದಾರೆ. ಮಹಿಳಾ ಶಿಕ್ಷಕಿಯೂ ಕೂಡ ಮಕ್ಕಳನ್ನು ಕ್ಷಮಿಸಿದ್ದಾರೆ.

ಶಿಕ್ಷಕಿ ಈ ಬಗ್ಗೆ ಮಾತನಾಡಿ, ಮಕ್ಕಳು ಒಂದು ವೇಳೆ ಅದರ ಮಾಡೆಲ್ ತಯಾರಿಸಿ ಪ್ರಸ್ತುತಪಡಿಸಿದ್ದರೆ, ನಾವು ಅವರನ್ನು ಗೌರವಿಸುತ್ತಿದ್ದೆವು; ಆದರೆ ಈಗ ಈ ಎಲ್ಲ ಪ್ರಕರಣ ಮುಗಿದಿದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

ವಿದ್ಯಾರ್ಥಿಗಳು ಶಾಲೆಯಲ್ಲಿ ಪಡೆದ ಜ್ಞಾನವನ್ನು ಈ ರೀತಿ ಉಪಯೋಗ ಮಾಡುತ್ತಾರೆಂದರೆ ಶಾಲೆಯಲ್ಲಿ ನೈತಿಕ ಮೌಲ್ಯಗಳ ಶಿಕ್ಷಣ ಮತ್ತು ಸಂಸ್ಕಾರ ಕಲಿಸದೇ ಇರುವುದನ್ನು ಬಿಂಬಿಸುತ್ತದೆ. ಇಂತಹ ಶಿಕ್ಷಣದಿಂದ ಏನು ಉಪಯೋಗ ?