‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !

ನಾವು ಕೆಲವೊಮ್ಮೆ ಆನಂದದಿಂದಿರಲು ಏಕೆ ಆಗುವುದಿಲ್ಲ ? ಎಂಬ ವಿಚಾರವನ್ನು ನಾವು ಸ್ವತಃ ಆತ್ಮನಿರೀಕ್ಷಣೆ ಮಾಡಿ ನೋಡಬೇಕು. ನಮ್ಮ ಸದ್ಯದ ಸ್ಥಿತಿಯಲ್ಲಿ ನಾವೇ ಜವಾಬ್ದಾರರಾಗಿರುತ್ತೇವೆ, ಎಂಬುದನ್ನು ಗಮನದಲ್ಲಿಡಬೇಕು. ಕೆಲಮೊಮ್ಮೆ ಅತೀಮಹತ್ವಾಕಾಂಕ್ಷೆಯಿಂದ ಮತ್ತು ಅದು ಈಡೇರದಿರುವುದರಿಂದ ನಾವು ಮನಸ್ಸಿನಲ್ಲಿ ಸತತವಾಗಿ ವಿಚಾರ ಮಾಡುತ್ತಿರುತ್ತೇವೆ. ‘ನಾವೇ ನಮ್ಮ ಜೀವನದ ಶಿಲ್ಪಿಗಳಾಗಿದ್ದೇವೆ’, ಎಂಬುದನ್ನು ನೆನಪಿನಲ್ಲಿಡಬೇಕು. ಆಯಾ ವ್ಯಕ್ತಿಯ ಅಭ್ಯಾಸಕ್ಕನುಸಾರ ದುಃಖ ಅಥವಾ ಆನಂದವು ಅವಲಂಬಿಸಿರುತ್ತದೆ. ನಾವು ಅಲಕ್ಷ್ಯದಿಂದ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ ಮತ್ತು ನಂತರ ಅನಾರೋಗ್ಯಕ್ಕೆ ಒಳಗಾಗಿ ನಾವು ಆನಂದದಿಂದಿರಲು ಸಾಧ್ಯವಾಗುವುದಿಲ್ಲ. ‘ನಾವು ನಮಗಾಗಿ ಬದುಕುತ್ತಿಲ್ಲ, ಇತರರಿಗಾಗಿ ಬದುಕುತ್ತಿದ್ದೇವೆ’, ಎಂಬ ವಿಚಾರ ಮಾಡಬೇಕು. ನಮ್ಮ ವರ್ತನೆಯಿಂದ ಇನ್ನೊಬ್ಬರಿಗೆ ಆನಂದ ಹೇಗೆ ಸಿಗುವುದು ? ಎಂಬ ವಿಚಾರ ಮಾಡಿದರೆ ಇತರರಿಗೆ ಸಿಗುವ ಆನಂದದಿಂದ ನಮಗೆ ಆಗುವ ಆನಂದವೇ ನಿಜವಾದ ಆನಂದವಾಗಿರುತ್ತದೆ, ಇದು ಗಮನಕ್ಕೆ ಬರಹುದು. ನಮ್ಮ ಜೀವನದಲ್ಲಿ ಏನು ಸಾಧಿಸಬೇಕು ? ಎಂಬುದರ ಅರಿವನ್ನಿಟ್ಟು ನಂತರ ತನ್ನ ಧ್ಯೇಯವನ್ನು ತಲುಪಲು ಕಷ್ಟಪಟ್ಟು ಶ್ರಮಿಸಿದರೆ ಅದರಲ್ಲಿನ ಆನಂದವೇ ಬೇರೆ ಇರುತ್ತದೆ. ‘ನಾವು ಮಾತನಾಡುವಾಗ ಇತರರ ಮನಸ್ಸನ್ನು ನೋಯಿಸಬಾರದು. ಇನ್ನೊಬ್ಬರ ನಿಂದನೆ ಅಥವಾ ತಿರಸ್ಕರಿಸಬಾರದು; ಆದರೆ ಇಷ್ಟೊಂದು ಸರಳವಾಗಿರುವುದನ್ನೂ ಎಷ್ಟೋ ಜನರು ಮಾಡುವುದಿಲ್ಲ. ಮನೆಯಲ್ಲಿನ ಜನರೂ ಯಾವಾಗ ಪರಸ್ಪರರಲ್ಲಿ ಅರ್ಥ ಮಾಡಿಕೊಂಡು ಸಹಕರಿಸಿದಾಗ ಮಾತ್ರ ಮನೆ ಮನೆಯಾಗುತ್ತದೆ. ಇಂತಹ ಮನೆಯಲ್ಲಿ ಲಕ್ಷ್ಮಿ, ಸರಸ್ವತಿ ಮತ್ತು ಸಮೃದ್ಧಿ ನೆಲೆಸುತ್ತಾರೆ. ಕೆಲವರು ಜೀವನದಲ್ಲಿ ಸೋಮಾರಿಯಾಗಿ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ನಂತರ ಆನಂದವನ್ನು ಕಳೆದುಕೊಳ್ಳುತ್ತಾರೆ. ‘ತುಕ್ಕು ಹಿಡಿಯುವುದಕ್ಕಿಂತ ಸವೆಯುವುದೇ ಹೆಚ್ಚು ಒಳ್ಳೆಯದು’, ಎಂಬುದನ್ನು ಅವರು ಮರೆಯುತ್ತಾರೆ.

– ಡಾ. ಪ್ರಚಾರ್ಯ ಪ್ರ.ಚಿಂ. ಶೆಜವಲಕರ