ತಿರುಪತಿ (ಆಂಧ್ರಪ್ರದೇಶ) – ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಈ ತಂತ್ರಜ್ಞಾನದಿಂದಾಗಿ ದರ್ಶನಕ್ಕಾಗಿ ಕಾಯುವ ಸಮಯವು ಅಂದಾಜು ಅರ್ಧ ಗಂಟೆ ಕಡಿಮೆಯಾಗಲಿದ್ದು, ದರ್ಶನಕ್ಕಾಗಿ 2-3 ಗಂಟೆಗಳವರೆಗೆ ಸಮಯ ಹಿಡಿಯಲಿದೆ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು ಮಾಹಿತಿ ನೀಡಿದರು. ಮಂಡಳಿಯ ಸಭೆಯಲ್ಲಿ ಹಲವು ಮಹತ್ವಪೂರ್ಣ ನಿರ್ಣಯಗಳನ್ನು ತೆಗೆದುಗೊಳ್ಳಲಾಗಿದ್ದು ಅವುಗಳ ಮಾಹಿತಿಯನ್ನು ಅವರು ಪತ್ರಕರ್ತರಿಗೆ ನೀಡುತ್ತಿದ್ದರು. “ತಿರುಪತಿಯ ಸ್ಥಳೀಯ ಜನರಿಗೆ ಪ್ರತಿ ತಿಂಗಳ ಮೊದಲ ಮಂಗಳವಾರದಂದು ವಿಶೇಷ ದರ್ಶನ ಸೌಲಭ್ಯವನ್ನು ಒದಗಿಸಲಾಗುವುದು” ಎಂದೂ ಅವರು ಪ್ರಕಟಿಸಿದರು.
ಹಿಂದೂಯೇತರರನ್ನು ನೇಮಕ ಮಾಡದಂತೆ ಸರಕಾರಕ್ಕೆ ಹೇಳುತ್ತೇವೆ !
ನಾಯ್ಡು ಅವರು ಮಾತನಾಡುತ್ತಾ, ದೇವಸ್ಥಾನದ ಆಡಳಿತದಲ್ಲಿ ಎಷ್ಟು ಹಿಂದೂಯೇತರ ಸಿಬ್ಬಂದಿಗಳಿದ್ದಾರೆ ಎಂಬುದನ್ನು ಮಂಡಳಿಯು ನಿರ್ಣಯಿಸಲಿದೆ. ನಾವು ರಾಜ್ಯ ಸರಕಾರಕ್ಕೆ ಪತ್ರ ಬರೆದು ತಿರುಮಲ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ಅದರಲ್ಲಿ ಹಿಂದೂಯೇತರ ಸಿಬ್ಬಂದಿಯನ್ನು ನೇಮಿಸಬಾರದು ಎಂದು ಮನವಿ ಮಾಡುತ್ತೇವೆ. ಅನ್ಯ ಧರ್ಮೀಯ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳುವಂತೆ ಅಥವಾ ಸ್ವಯಂ ನಿವೃತ್ತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಅವರು ತಿಳಿಸಿದರು. 2018ರ ವರದಿಯ ಪ್ರಕಾರ ತಿರುಪತಿ ದೇವಸ್ಥಾನದಲ್ಲಿ ಒಟ್ಟು 44 ಹಿಂದೂಯೇತರ ಸಿಬ್ಬಂದಿಗಳಿದ್ದಾರೆ.
ರಾಜಕೀಯ ಹೇಳಿಕೆಗೆ ನಿರ್ಬಂಧ !
ನಾಯ್ಡು ಅವರು ತಮ್ಮ ಮಾತನ್ನು ಮುಂದುವರಿಸಿ, ದೇವಸ್ಥಾನಕ್ಕೆ ಸಂಬಂಧಿಸಿದವರು ತಿರುಮಲದಲ್ಲಿ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಮಂಡಳಿ ನಿರ್ಧರಿಸಿದೆ. ಯಾರಾದರೂ ಹಾಗೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಖಡಕ್ ಆಗಿ ಹೇಳಿದರು.