India Slam Pakistan: ಪಾಕಿಸ್ತಾನದೊಂದಿಗಿನ ಮಾತುಕತೆಯ ಮೊದಲ ಷರತ್ತು ಅಂದರೆ ಅದು ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು!

ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹೇಳಿಕೆ

ಭಾರತದ ರಾಯಭಾರಿ ಪಾರ್ವತನೇನಿ ಹರೀಶ್

ನ್ಯೂಯಾರ್ಕ್ (ಅಮೇರಿಕ) – ಪಾಕಿಸ್ತಾನವು ಯಾವಾಗ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೋ, ಆಗ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಲು ಸಾಧ್ಯ, ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಪಾರ್ವತನೇನಿ ಹರೀಶ್ ಅವರು ಹೇಳಿದ್ದಾರೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆಗೆ ಗುರಿಯಾಗಿದೆ ಮತ್ತು ಭಯೋತ್ಪಾದನೆಯ ಸಂದರ್ಭದಲ್ಲಿ ನಾವು ಶೂನ್ಯ ಸಹನಶೀಲತೆಯ ನೀತಿಯನ್ನು ಹೊಂದಿದ್ದೇವೆ. ಪಾಕಿಸ್ತಾನದೊಂದಿಗಿನ ನಮ್ಮ ಮುಖ್ಯ ಅಂಶ ಈ ಭಯೋತ್ಪಾದನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.’ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಅಂಡ್ ಪಬ್ಲಿಕ್ ಅಫೇರ್ಸ್’ ಎಂಬ ಕೊಲಂಬಿಯಾ ವಿಶ್ವವಿದ್ಯಾಲಯದ ವಿಭಾಗವು ‘ರೆಸ್ಪಾಂಡಿಂಗ್ ಟು ಮೇಜರ್ ಗ್ಲೋಬಲ್ ಚಾಲೆಂಜೆಸ್: ದಿ ಇಂಡಿಯಾ ವೇ’ (ಭಾರತದ ದೃಷ್ಟಿಕೋನದಿಂದ ನಿರ್ಣಾಯಕ ಜಾಗತಿಕ ಸವಾಲುಗಳಿಗೆ ಸ್ಪಂದಿಸುವುದು) ಈ ವಿಷಯದ ಮೇಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹರೀಶ್ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ರಾಯಭಾರಿ ಹರೀಶ್ ಅವರಿಗೆ ಪಾಕಿಸ್ತಾನದ ಬಗ್ಗೆ ಕೇಳಿದಾಗ ಅವರು ಹೀಗೆ ಹೇಳಿದರು:

1. ಭಾರತವು ಪಾಕಿಸ್ತಾನದ ಮೇಲಿನ ವಿಶ್ವಾಸ ಕಳೆದು ಕೊಂಡಿದೆ!

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರು; ಆದರೆ ಭಾರತದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳಿಂದ ಪಾಕ್ ಬಗ್ಗೆ ನಮ್ಮ ವಿಶ್ವಾಸ ಮುರಿದು ಹೋಗಿದೆ.

2. ಭಯೋತ್ಪಾದನೆ ಎಂಬುದು ಮಾನವೀಯತೆಯ ‘ಅಸ್ತಿತ್ವಕ್ಕೆ ಆಘಾಕಾರಿಯಾಗಿದೆ’!

ಭಾರತವು ಧೀರ್ಘಕಾಲದಿಂದಲೂ ಗಡಿಯಾಚೆಗಿನ ಮತ್ತು ಜಾಗತಿಕ ಭಯೋತ್ಪಾದನೆಯ ಬಲಿಪಶುವಾಗಿದೆ. ಭಯೋತ್ಪಾದನೆ ಮಾನವೀಯ ‘ಅಸ್ತಿತ್ವಕ್ಕೆ ಆಘಾತಕಾರಿಯಾಗಿದೆ’. ಭಯೋತ್ಪಾದನೆಗೆ ಯಾವುದೇ ಗಡಿ ಎಂಬುದಿಲ್ಲ, ರಾಷ್ಟ್ರೀಯತೆಯೂ ಇರುವುದಿಲ್ಲ.

3. ಅಂತಾರಾಷ್ಟ್ರೀಯ ಸಹಕಾರದಿಂದ ಮಾತ್ರ ಭಯೋತ್ಪಾದನೆಯನ್ನು ಎದುರಿಸಲು ಸಾಧ್ಯ!

ಅಂತಾರಾಷ್ಟ್ರೀಯ ಸಹಕಾರದಿಂದ ಮಾತ್ರ ಭಯೋತ್ಪಾದನೆಯನ್ನು ಎದುರಿಸಲು ಸಾಧ್ಯವಿದೆ, ಭಯೋತ್ಪಾದನೆ ವಿರುದ್ಧ ಹೋರಾಡಲು ತನ್ನ ಅಂತರಾಷ್ಟ್ರೀಯ ಪಾಲುದಾರರ ಜೊತೆ ಸೇರಿ ಮುನ್ನಡೆಯಲು ಭಾರತದ ಲಕ್ಷ್ಯವಿದೆ. ನಮಗೆ ಇನ್ನೊಂದು 9/11 ರ ದಾಳಿ ಅಥವಾ 26/11 ಮಾದರಿಯ ಮುಂಬಯಿ ಮೇಲಿನ ದಾಳಿ ಬೇಕಾಗಿಲ್ಲ ಎಂದವರು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನವು ಭಯೋತ್ಪಾದನೆಯ ಸೃಷ್ಟಿಕರ್ತ ಮತ್ತು ಪೋಷಕನಾಗಿರುವುದರಿಂದ, ಅದು ಎಂದಿಗೂ ಭಯೋತ್ಪಾದನೆಯನ್ನು ಕೊನೆಗೊಳಿಸುವುದಿಲ್ಲ. ಹಾಗಾಗಿ ಭಾರತವು ಇಸ್ರೇಲ್ ನಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಕ್ರಮ ಕೈಗೊಳ್ಳಬೇಕು, ಇದೇ ಯೋಗ್ಯವಾಗಿದೆ!