ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ !

ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

ರಿಯೊ ಡಿ ಜನೈರೊ (ಬ್ರೆಜಿಲ್) – ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ ಯಿ ಅವರನ್ನು ಭೇಟಿಯಾದರು. ಈ ಭೇಟಿಯ ಸಮಯದಲ್ಲಿ, ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಅವರು ಪರಿಶೀಲಿಸಿದರು. ಸೇನೆಯನ್ನು ಹಿಂಪಡೆಯುವ ನಿರ್ಧಾರದ ನಂತರ ಉಭಯ ನಾಯಕರ ನಡುವಿನ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ.

ವಾಂಗ್ ಅವರೊಂದಿಗಿನ ಚರ್ಚೆಯ ನಂತರ ಡಾ. ಜೈಶಂಕರ್ ಅವರು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕುರಿತು ನಾವು ಚರ್ಚಿಸಿದ್ದೇವೆ. ಹಾಗೆಯೇ ಜಾಗತಿಕ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಹೇಳಿದರು. ಕಳೆದ ತಿಂಗಳು, ಭಾರತ ಮತ್ತು ಚೀನಾದ ಪಡೆಗಳು ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಲ್ಲಿ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದವು. ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಎರಡೂ ಸೇನೆಗಳು ತಮ್ಮ-ತಮ್ಮ ಪ್ರದೇಶಗಳಲ್ಲಿ ಮತ್ತೊಮ್ಮೆ ಗಸ್ತು ತಿರುಗಲು ಪ್ರಾರಂಭಿಸಿವೆ.