ಅಯೋಧ್ಯಾನಗರದ ಶ್ರೀರಾಮಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮನ ಮಂದಿರದೊಂದಿಗೆ ಇನ್ನೂ ಕೆಲವು ಮಂದಿರಗಳ ಜೀರ್ಣೋದ್ಧಾರವನ್ನು ಮಾಡಲಾಗುವುದು, ಹಾಗೆಯೇ ಭಕ್ತರಿಗೆ ಬೇಕಾಗುವ ವಿವಿಧ ಸೌಲಭ್ಯಗಳ ಕಾರ್ಯವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ವಿಷಯದಲ್ಲಿ ಭಕ್ತರಲ್ಲಿ ಕುತೂಹಲವಿದೆ ಮತ್ತು ಉತ್ಸುಕತೆಯೂ ಇದೆ. ‘ಅಲಕೆಮಿ ಸ್ಟೋನ್ಸ್ ಮೆಟ್ರಿಕ್ಸ್ ಪ್ರೈ. ಲಿ.’ (ಂಟಛಿಹೆಮ್ಥಿ ಶ್ಣಒಟಿಎಸ್ ಒಚಿಣಡೀ ಫ್ವ್ಣ. ಐಣಜ.) ಈ ಕಂಪನಿಯ ಮೂಲಕ ಶ್ರೀರಾಮಜನ್ಮಭೂಮಿಯ ಪರಿಸರದಲ್ಲಿ ಮಂದಿರಗಳ ಜೀರ್ಣೋದ್ಧಾರ ಮತ್ತು ವಿವಿಧ ಕಟ್ಟಡಗಳ ಕಾಮಗಾರಿಯಾಗುತ್ತಿದೆ. ಗುಜರಾತನಲ್ಲಿ ಸ್ಥಾಪಿಸಲಾಗಿರುವ ಸರದಾರ ವಲ್ಲಭಭಾಯಿ ಪಟೇಲರ ‘ಸ್ಟ್ಯಾಚ್ಯು ಆಫ್ ಯುನಿಟಿ’ ಈ ಜಗತ್ತಿನಲ್ಲಿನ ಅತಿದೊಡ್ಡ ಪ್ರತಿಮೆಯನ್ನು ಈ ಕಂಪನಿಯವರೇ ನಿರ್ಮಿಸಿದ್ದಾರೆ. ಈ ಕಂಪನಿಯ ಯೋಜನಾಧಿಕಾರಿ (ಪ್ರೊಜೆಕ್ಟ್ ಮೆನೇಜರ್) ಶ್ರೀ. ಆದಿತ್ಯ ಚೌಧರಿ ಇವರು ಶ್ರೀರಾಮಜನ್ಮಭೂಮಿ ಪರಿಸರದಲ್ಲಿನ ನಿರ್ಮಾಣ ಕಾರ್ಯದ ಬಗ್ಗೆ ದೈನಿಕ ‘ಸನಾತನ ಪ್ರಭಾತ’ಕ್ಕೆ ವಿಶೇಷ ಸಂದರ್ಶನ ನೀಡಿದರು. ಈ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ !
ಶ್ರೀ ರಾಮಮಂದಿರದ ಮುಂದಿನ ಕಾಮಗಾರಿಯ ಪ್ರಸ್ತಾಪಿತ ನೀಲನಕ್ಷೆ
೧. ಶ್ರೀರಾಮಜನ್ಮಭೂಮಿ ಪರಿಸರದಲ್ಲಿನ ಮಂದಿರಗಳ ಜೀರ್ಣೋದ್ಧಾರ ಮತ್ತು ವಿಕಾಸದ ಕೆಲಸಗಳು !
ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಪ್ರಭು ಶ್ರೀರಾಮನ ಮುಖ್ಯ ಮಂದಿರದೊಂದಿಗೆ ಇತರ ೮ ಮಂದಿರಗಳಿವೆ. ಮುಂಬರುವ ಕಾಲದಲ್ಲಿ ಇವೆಲ್ಲ ಮಂದಿರಗಳ ಜೀರ್ಣೋದ್ಧಾರ ಮಾಡಲಾಗುವುದು. ಇದಲ್ಲದೇ ಮುಖ್ಯ ಮಂದಿರದ ದಕ್ಷಿಣ ದಿಕ್ಕಿನಲ್ಲಿರುವ ಕುಬೇರ ಟಿಳಾವ ಎಂಬ ಹೆಸರಿನ ಸಣ್ಣ ಗುಡ್ಡದ ಮೇಲಿನ ಶಿವನ ಮಂದಿರದ ಜೀರ್ಣೋದ್ಧಾರವನ್ನು ಮಾಡಲಾಗುವುದು. ಈ ಮಂದಿರದಲ್ಲಿ ೫೦೦ ವರ್ಷಗಳಷ್ಟು ಪುರಾತನವಾದ ಶಿವಲಿಂಗವಿದೆ. ಅದನ್ನು ಬೇರೆ ಕಡೆಗೆ ಸರಿಸದೆ, (ಅದನ್ನ ಸ್ಪರ್ಶಿಸದೇ) ಮಂದಿರದ ಜೀರ್ಣೋದ್ಧಾರವನ್ನು ಮಾಡಲಾಗಿದೆ. ಇದೇ ಗುಡ್ಡದ ಮೇಲೆ ಜಟಾಯುವಿನ ಮೂರ್ತಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಜಟಾಯುವಿನ ಕಥೆಯನ್ನೂ ಕೊಡಲಾಗಿದೆ.
೨. ಎಲ್ಲ ಮಂದಿರಗಳ ನಿರ್ಮಾಣಕ್ಕಾಗಿ ‘ಗ್ರೆನೈಟ್ ಕಲ್ಲುಗಳ ಉಪಯೋಗ !
ಶ್ರೀರಾಮನ ಮುಖ್ಯ ಮಂದಿರ ಮತ್ತು ಸುತ್ತಮುತ್ತಲಿನ ಎಲ್ಲ ಮಂದಿರಗಳನ್ನು ಕಟ್ಟಲು ‘ಗ್ರೆನೈಟ್’ ಕಲ್ಲುಗಳನ್ನೇ ಉಪಯೋಗಿಸಲಾಗಿದೆ. ರಾಜಸ್ಥಾನದಲ್ಲಿನ ಬನ್ಸಿ ಪಹಾಡಪುರ ದಿಂದ ಈ ಕಲ್ಲುಗಳನ್ನು ತರಿಸಲಾಗಿದೆ. ದರ್ಶನಾರ್ಥಿ ಗಳಿಗಾಗಿ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲು ಸಹ ಇದೇ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಈ ಕಲ್ಲುಗಳ ವೈಶಿಷ್ಟ್ಯವೆಂದರೆ ಸಾವಿರಾರು ವರ್ಷ ಈ ಕಲ್ಲುಗಳಿಗೆ ಏನೂ ಆಗುವುದಿಲ್ಲ. ಈ ಕಲ್ಲುಗಳು ಸಂಪೂರ್ಣ ನೈಸರ್ಗಿಕವಾಗಿವೆ. ಈ ಕಲ್ಲುಗಳಿಗೆ ಬಿಸಿಲು, ಮಳೆ ಮತ್ತು ಚಳಿ ಇವುಗಳಿಂದ ಏನೂ ಪರಿಣಾಮವಾಗುವುದಿಲ್ಲ. ಈ ಕಲ್ಲುಗಳ ಮೇಲೆ ಯಾವುದೇ ತಾಪಮಾನದ ಪ್ರಭಾವ ಬೀಳುವುದಿಲ್ಲ ಮತ್ತು ಅವುಗಳ ಬಣ್ಣವೂ ಬದಲಾಗುವುದಿಲ್ಲ. ಮುಖ್ಯ ಮಂದಿರ ನಿರ್ಮಾಣದ ಹೊರತು ಇನ್ನಿತರ ಮಂದಿರಗಳ ನಿರ್ಮಾಣಕ್ಕಾಗಿ ಇಷ್ಟರ ವರೆಗೆ ೧೦ ದೊಡ್ಡ ಟ್ರಕ್‌ಗಳಷ್ಟು ಇಂತಹ ಕಲ್ಲುಗಳನ್ನು ತರಲಾಗಿದೆ. ಅವುಗಳ ಕೆಲಸ ಇನ್ನೂ ನಡೆಯುತ್ತಿದೆ.
೩. ಮಂದಿರದ ಪರಿಸರದಲ್ಲಿ ಭಕ್ತರಿಗಾಗಿ ವಿವಿಧ ಸೌಲಭ್ಯಗಳು !
ಶ್ರೀರಾಮಜನ್ಮಭೂಮಿಯ ಪರಿಸರದಲ್ಲಿ ಮುಖ್ಯ ಮಂದಿರದೊಂದಿಗೆ ಭಕ್ತರ ಸೌಲಭ್ಯಗಳಿಗಾಗಿ ೮ ಕಟ್ಟಡ ಗಳಿರುವವು. ಅವುಗಳಲ್ಲಿ ಕೆಲವು ಕಟ್ಟಡಗಳ ಕಾಮಗಾರಿ ಪೂರ್ಣ ವಾಗಿದ್ದು ಕೆಲವು ಪೂರ್ಣಗೊಳ್ಳುವ ಹಂತದಲ್ಲಿವೆ. ಅವುಗಳಲ್ಲಿ ದರ್ಶನಾರ್ಥಿಸೌಲಭ್ಯ ಕೇಂದ್ರ, ನೀರು ಶುದ್ಧೀಕರಣ ಯೋಜನೆ, ಅಗ್ನಿಶಮನ ವ್ಯವಸ್ಥೆ, ಪ್ರತೀಕ್ಷಾ ಕೊಠಡಿ, ಪ್ರಸಾದ ಹಂಚುವ ಕೇಂದ್ರ ಇತ್ಯಾದಿ ಕಟ್ಟಡಗಳಿವೆ. ಮಂದಿರದ ಮೊದಲ ಹಂತದ ಕಾರ್ಯ ೨೦೨೪ ರ ಕೊನೆಗೆ ಪೂರ್ಣಗೊಳ್ಳುವುದು.
೪. ೫ ಸಾವಿರ ‘ಲಾಕರ್’ಗಳ ವ್ಯವಸ್ಥೆ ಮತ್ತು ಪ್ರತೀಕ್ಷಾ ಕೊಠಡಿ
ದರ್ಶನಾರ್ಥಿಗಳಿಗಾಗಿ ಸೌಲಭ್ಯ ಕೇಂದ್ರಗಳಲ್ಲಿ ಸಂಚಾರಿವಾಣಿ, ಹಣದ ಪಾಕೇಟ್, ಮಹಿಳೆಯರ ಪರ್ಸ್‌ಗಳ ಜೊತೆಗೆ ದರ್ಶನಾರ್ಥಿಗಳೊಂದಿಗಿರುವ ಸಾಹಿತ್ಯಗಳನ್ನಿಡಲು ೫ ಸಾವಿರ ‘ಲಾಕರ್’ಗಳನ್ನು ತಯಾರಿಸಲಾಗುತ್ತಿದೆ. ಭಕ್ತರಿಗಾಗಿ ೩ ಪ್ರತೀಕ್ಷಾ ಕೊಠಡಿಗಳನ್ನು ಕೂಡ (ವೇಟಿಂಗ್ ರೂಮ್) ನಿರ್ಮಿಸಲಾಗುತ್ತಿದೆ. ದರ್ಶನ ಪಡೆದು ಬಂದ ಭಕ್ತರು ಇಲ್ಲಿ ವಿಶ್ರಾಂತಿ ಪಡೆಯಬಹುದು. ಇವು ಒಂದುಸಲಕ್ಕೆ ೨ ಸಾವಿರ ಭಕ್ತರು ಉಳಿಯಬಹುದಾದಷ್ಟು ಕ್ಷಮತೆಯ ಪ್ರತೀಕ್ಷಾ ಕೊಠಡಿಗಳಾಗಿವೆ. ದರ್ಶನ ಪಡೆದು ಬರುವವರು ತಮ್ಮ ವಸ್ತುಗಳನ್ನು ಈ ಕಟ್ಟಡಗಳಲ್ಲಿ ಇಡಬಹುದು ಮತ್ತು ದರ್ಶನ ಪಡೆದ ನಂತರ ವಿಶ್ರಾಂತಿಯನ್ನೂ ಪಡೆಯಬಹುದು. ಇಲ್ಲಿ ಭಕ್ತರಿಗಾಗಿ ಸಣ್ಣ ಪ್ರಮಾಣದ ಆಸ್ಪತ್ರೆಯ ಸೌಲಭ್ಯವನ್ನೂ ಮಾಡಲಾಗಿದೆ.
೫. ನೀರಿನ ಶುದ್ಧೀಕರಣಕ್ಕಾಗಿ ಸ್ವತಂತ್ರ ಕಟ್ಟಡ !
ಮಂದಿರದ ಪರಿಸರದಲ್ಲಿನ ಗಿಡಗಳಿಗೆ ಉಪಯೋಗಿಸುವ ನೀರನ್ನು ಮೊದಲು ಶುದ್ಧೀಕರಣಗೊಳಿಸಲು ಸ್ವತಂತ್ರ ಕಟ್ಟಡವನ್ನು ಕಟ್ಟಲಾಗುವುದು ಈ ಕಟ್ಟಡದಲ್ಲಿ ನೀರಿನ ಶುದ್ಧೀಕರಣ ಪ್ರಕ್ರಿಯೆ ಆದನಂತರ ಆ ನೀರನ್ನು ವೃಕ್ಷಗಳಿಗೆ ಉಪಯೋಗಿಸಲಾಗುವುದು. ಈ ಕಟ್ಟಡದ ನಿರ್ಮಾಣ ಇದುವರೆಗೆ ಆಗಿಲ್ಲ. ಮುಂಬರುವ ೩-೪ ತಿಂಗಳೊಳಗೆ ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವುದು.
೬. ಪ್ರತಿಯೊಬ್ಬ ದರ್ಶನಾರ್ಥಿಯ ಮತ್ತು ವಸ್ತುಗಳ ‘ಸ್ಕ್ಯಾನಿಂಗ್’ ಮಾಡಲಾಗುವುದು (ಯಂತ್ರದಿಂದ ತಪಾಸಣೆ)
ಕಟ್ಟಡಗಳಲ್ಲಿ ದರ್ಶನಕ್ಕಾಗಿ ಬರುವ ಭಕ್ತರ ಮತ್ತು ಅವರ ವಸ್ತುಗಳನ್ನು ‘ಸ್ಕ್ಯಾನಿಂಗ್’ ಮಾಡಲಾಗುತ್ತದೆ. ಸ್ಕ್ಯಾನಿಂಗ್ ಮಾಡಲು ೮ ರಿಂದ ೯ ‘ಕೌಂಟರ್’ಗಳಿರುವವು. ಅವುಗಳಲ್ಲಿ ೧೮ ಮಶೀನ್‌ಗಳಿರುವವು. ಮಂದಿರಕ್ಕೆ ಬರುವ ಪ್ರತಿಯೊಬ್ಬರ ಮತ್ತು ಅವರ ವಸ್ತುಗಳ ಸ್ಕ್ಯಾನಿಂಗ್ನ್ನು ಈ ಯಂತ್ರಗಳ ಮೂಲಕ ಮಾಡಲಾಗುವುದು. ಇಲ್ಲಿ ಮೊದಲು ಭಕ್ತರ ಸ್ಕ್ಯಾನಿಂಗ್ ಆದ ನಂತರ ಸಂಚಾರಿವಾಣಿ, ಕೆಮೆರಾ ಮುಂತಾದವುಗಳ ತಪಾಸಣೆಗಾಗಿ ಪುನಃ ಬೇರೆಯೆ ಪ್ರಕಾರದ ‘ಸ್ಕ್ಯಾನಿಂಗ್’ ಮಾಡಲಾಗುವುದು.
೭. ಶ್ರೀರಾಮಜನ್ಮಭೂಮಿ ‘ಕಾರಿಡಾರ್’ ಆಗುವುದು (ಸುಸಜ್ಜಿತ ಮಾರ್ಗ) !
ವಾರಾಣಸಿಯಲ್ಲಿ ಭಗವಾನ ಕಾಶಿ ವಿಶ್ವನಾಥ ಮಂದಿರದ ಪರಿಸರದಲ್ಲಿ ಭವ್ಯ ಸುಸಜ್ಜಿತ ಮಾರ್ಗವನ್ನು ನಿರ್ಮಿಸಲಾಗಿದೆ. ಅದೇ ರೀತಿ ಅಯೋಧ್ಯೆಯಲ್ಲಿಯೂ ಭವ್ಯ ‘ಕಾರಿಡಾರ್’ ಅನ್ನು ನಿರ್ಮಿಸಲಾಗುವುದು. ಮಂದಿರದ ಮಧ್ಯಭಾಗದಲ್ಲಿ ಉದ್ಯಾನವನ ಇರುವುದು. ಈ ಉದ್ಯಾನವನದಲ್ಲಿ ಮನಸೆಳೆಯುವ ವಿವಿಧ ಪ್ರಕಾರದ ಹೂವಿನ ಗಿಡಗಳಿರುವವು. ಈ ಉದ್ಯಾನವನ್ನು ರಚಿಸುವ ಕಂಪನಿಯ ಅಧಿಕಾರಿಗಳು ಮತ್ತು ಕಾರ್ಮಿಕರು ಅಯೋಧ್ಯೆಗೆ ಬಂದಿದ್ದು ಶೀಘ್ರದಲ್ಲಿಯೇ ಈ ಕಾರ್ಯ ಆರಂಭವಾಗುವುದು.
೮. ಮಂದಿರದ ಪರಿಸರದಲ್ಲಿ ಇನ್ನಿತರ ಕಾರ್ಯಾಲಯಗಳು !
ಮಂದಿರದ ಉತ್ತರಕ್ಕೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕಾರ್ಯಾಲಯ, ದಕ್ಷಿಣಕ್ಕೆ ಮಂದಿರದ ಪುರೋಹಿತರಿಗಾಗಿ ಕಟ್ಟಡವಿದೆ. ಅವರಿಗಾಗಿ ಈ ಎರಡೂ ಸ್ಥಳಗಳಲ್ಲಿ ಆವಶ್ಯಕ ಸೌಲಭ್ಯಗಳನ್ನು ಮಾಡಲಾಗಿದೆ. ಮಂದಿರದ ಹಿಂದಿನ ಭಾಗದಲ್ಲಿ ಸ್ವಚ್ಛತಾಗೃಹಗಳು (ಬಾತರೂಮ) ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಸ್ತನಪಾನ ಮಾಡುವ ಶಿಶುಗಳಿಗಾಗಿ ೨ ಸ್ವತಂತ್ರ ಕೋಣೆಗಳಿವೆ. ಅಗ್ನಿಶಮನ ವ್ಯವಸ್ಥೆಗಾಗಿ ಸ್ವತಂತ್ರ ಕಟ್ಟಡವನ್ನು ನಿರ್ಮಿಸಲಾಗಿದೆ. ಮಂದಿರದ ಪರಿಸರದಲ್ಲಿ ಪ್ರಧಾನಮಂತ್ರಿಗಳಿಗೆ ಸ್ವತಂತ್ರ ಕಾರ್ಯಾಲಯವನ್ನು ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಗಣ್ಯವ್ಯಕ್ತಿಗಳಿಗೂ ಸ್ವತಂತ್ರ ವ್ಯವಸ್ಥೆ ಮಾಡಲಾಗಿದೆ.
– ಶ್ರೀ. ಪ್ರೀತಮ್ ನಾಚಣಕರ, ವಿಶೇಷ ಪ್ರತಿನಿಧಿ, ದೈನಿಕ ‘ಸನಾತನ ಪ್ರಭಾತ’. (೩೧.೧.೨೦೨೪)