ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಆ ಆಹಾರದಲ್ಲಿ ಯಾವ ಯಾವ ಘಟಕಗಳನ್ನು ಬೆರೆಸುತ್ತಾರೆಯೋ, ಆ ಘಟಕಗಳಲ್ಲಿ ಯಾವುದಾದರೊಂದು ಔಷಧಿ ಉಪಯೋಗ ನಿಶ್ಚಿತವಾಗಿ ಇರುತ್ತದೆ; ಆದುದರಿಂದ ನಮ್ಮ ಭಾರತೀಯ ಪಾಕಕಲೆಯು ಆರೋಗ್ಯದ ದೃಷ್ಟಿಯಿಂದ ಸರ್ವಶ್ರೇಷ್ಠವಾಗಿದೆ ಈಗ ಈ ಘಟಕಗಳು ಯಾವುವು ಮತ್ತು ಅವುಗಳಿಂದ ಔಷಧೀಯ ಪಯೋಗವನ್ನು ಹೇಗೆ ಮಾಡಬೇಕು ? ಎಂಬುದನ್ನು ನಾವು ಈ ವಾರ ತಿಳಿದುಕೊಳ್ಳುವವರಿದ್ದೇವೆ. ಈ ಮಾಹಿತಿಯನ್ನು ನಾವು ಮನೆಯಲ್ಲಿಯೇ ಚಿಕ್ಕ-ಪುಟ್ಟ ಕಾಯಿಲೆಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲು ಉಪಯೋಗಿಸಬಹುದು. ಚಿಕ್ಕ-ಪುಟ್ಟ (ಸಾಮಾನ್ಯ ಆರೋಗ್ಯದ ತೊಂದರೆಗಳಿಗೆ ಈ ರೀತಿ ಮನೆಯಲ್ಲಿಯೇ ಉಪಚಾರ ಮಾಡಲು ಯಾವುದೇ ಅಡಚಣೆ ಇಲ್ಲ; ಆದರೆ ಇಲ್ಲಿ ಎಲ್ಲರೂ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಅದೇನೆಂದರೆ ಯಾವುದಾದರೊಬ್ಬ ವ್ಯಕ್ತಿಗೆ ಗಂಭೀರ ಕಾಯಿಲೆ ಇದ್ದರೆ ಈ ಮನೆಮದ್ದುಗಳ ಮೇಲೆ ಅವಲಂಬಿಸಿರಬಾರದು. ವೈದ್ಯರ ಸಲಹೆಯನ್ನು ಪಡೆಯಬೇಕು. ಈ ಉಪಚಾರಗಳು ಪ್ರಾಥಮಿಕ ಸ್ವರೂಪದ್ದಾಗಿವೆ. ಆದುದರಿಂದ ತಾರತಮ್ಯದಿಂದ ಈ ಮಾಹಿತಿಯನ್ನು ರೋಗಗಳ ನಿರ್ಮೂಲನೆಗಾಗಿ ಉಪಯೋಗಿಸಬೇಕು.
೨೫/೧ ರ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ಕೊತ್ತಂಬರಿ ಬೀಜ, ಅಜವಾನ್, ಲವಂಗ, ಜಾಜಿಕಾಯಿ, ದಾಲಚಿನ್ನಿ ಇವುಗಳ ಔಷಧಿ ಉಪಯೋಗದ ಬಗ್ಗೆ ತಿಳಿದುಕೊಂಡೆವು. ಈ ವಾರ ಕರಿಮೆಣಸು, ಬಡೇಸೋಪು, ಹಸಿಶುಂಠಿ (ಅಲ್ಲಾ), ಶುಂಠಿ ಇತ್ಯಾದಿಗಳ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ. – ಭಾಗ ೩
೧೦. ಕರಿಮೆಣಸು (ಮೆಣಸಿನ ಕಾಳು)
ಅ. ಕರಿಮೆಣಸುಗಳು ಬಹಳ ಉಷ್ಣ, ಅವು ಪಿತ್ತವನ್ನು ಹೆಚ್ಚಿಸು ತ್ತವೆ. ಆದುದರಿಂದ ಕರಿಮೆಣಸುಗಳನ್ನು ನಮ್ಮ ಆಹಾರದಲ್ಲಿ ಬಳಸುವಾಗ, ನಮ್ಮ ಪ್ರಕೃತಿ, ನಮಗಾಗುವ ತೊಂದರೆ ಮತ್ತು ಋತು ಇವುಗಳ ವಿಚಾರ ಮಾಡುವುದು ಆವಶ್ಯಕವಾಗಿದೆ. ಕಫ ಪ್ರಕೃತಿಯ ವ್ಯಕ್ತಿಗೆ ಕರಿಮೆಣಸಿನಿಂದ ಕೂಡಲೇ ತೊಂದರೆ ಯಾಗುವುದಿಲ್ಲ; ಆದರೆ ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಮಾತ್ರ ಮೆಣಸು ತಿಂದ ತಕ್ಷಣ ಪಿತ್ತದ ತೊಂದರೆಯಾಗಬಹುದು. ಬೇಸಿಗೆಯಲ್ಲಿ ಅಥವಾ ಶರದ ಋತುವಿನಲ್ಲಿ ನಮ್ಮ ಆಹಾರದಲ್ಲಿ ಕರಿ ಮೆಣಸಿನ (ಮೆಣಸಿನ ಕಾಳು) ಪ್ರಮಾಣ ಅತ್ಯಲ್ಪವಿರಬೇಕು.
ಆ. ಎದೆಯಲ್ಲಿ ಕಫ ಆಗಿದ್ದರೆ ಅಥವಾ ಶೀತ ಆಗಿದ್ದರೆ ಚಿಟಿಕೆಯಷ್ಟು ಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ನೆಕ್ಕಿದರೆ ಕಫ ತಿಳುವಾಗುತ್ತದೆ.
೧೧. ಬಡೇಸೋಪ
ಅ. ಬಡೇಸೋಪಿನ ಶೀತಲ ಗುಣಧರ್ಮದ್ದಾಗಿದೆ. ಆದುದರಿಂದ ಅದು ಪಿತ್ತವನ್ನು ಕಡಿಮೆ ಮಾಡುತ್ತದೆ.
ಆ. ಚಿಕ್ಕ ಮಕ್ಕಳಲ್ಲಿ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು ಇತ್ಯಾದಿಗಳಿಗೆ ಬಡೇಸೋಪಿನ ಅರ್ಕವನ್ನು ೫ ರಿಂದ ೧೦ ಮಿ.ಲಿ. ಎರಡೂ ಸಮಯದ ಭೋಜನದ ಮೊದಲು ಕೊಟ್ಟರೆ ಕೂಡಲೇ ಆರಾಮವಾಗುತ್ತದೆ .
ಇ. ಬಡೇಸೋಪಿನ ಪುಡಿಯನ್ನು ಅರ್ಧ ಚಮಚದಷ್ಟು ಕಲ್ಲುಸಕ್ಕರೆಯೊಂದಿಗೆ ಕೊಟ್ಟರೆ ಮೇಲಿಂದ ಮೇಲೆ ಬರುವ ಕೆಮ್ಮು ಕಡಿಮೆಯಾಗುತ್ತದೆ.
ಈ. ಬಾಣಂತಿಗೆ ಪ್ರತಿದಿನ ಬಡೇಸೋಪು ಕೊಟ್ಟರೆ ಲಾಭ ವಾಗುತ್ತದೆ.
೧೨. ಹಸಿಶುಂಠಿ ಮತ್ತು ಶುಂಠಿ
ಅ. ಹಸಿಶುಂಠಿ (ಆಲಾ) ಮತ್ತು ಶುಂಠಿ ಇವೆರಡೂ ಉಷ್ಣ ಗುಣಧರ್ಮದ್ದಾಗಿವೆ. ಗಡ್ಡೆ ಹಸಿಯಾಗಿದ್ದರೆ ಅದಕ್ಕೆ ‘ಹಸಿಶುಂಠಿ ಅಥವಾ ‘ಆಲಾ’ ಎಂದು ಹೇಳುತ್ತಾರೆ, ಅದು ಒಣಗಿದ ನಂತರ ಮತ್ತು ಅದರ ಮೇಲೆ ವಿಶಿಷ್ಟ ಪ್ರಕ್ರಿಯೆಯನ್ನು ಮಾಡಿದ ಮೇಲೆ ‘ಒಣಶುಂಠಿ’ ತಯಾರಾಗುತ್ತದೆ. ಉಷ್ಣವಾಗಿರುವುದರಿಂದ ಬೇಸಿಗೆ ಮತ್ತು ಶರದ ಋತುವಿನಲ್ಲಿ ಹಸಿಶುಂಠಿ ಮತ್ತು ಶುಂಠಿಯನ್ನು ಬಳಸಬಾರದು.
ಆ. ಹಸಿಶುಂಠಿಯ ರಸದೊಂದಿಗೆ ಏಲಕ್ಕಿ, ಜಾಜಿಕಾಯಿ, ಜಾಯಪತ್ರಿ ಮತ್ತು ಲವಂಗ ಇವೆಲ್ಲವುಗಳನ್ನು ಹಾಕಿ ತಯಾರಿ ಸಿದ ಆಲೆಪಾಕ್, ಹಸಿವೆ ಆಗದಿರುವುದು, ಬಾಯಿಗೆ ರುಚಿ ಇಲ್ಲ ದಿರುವುದು, ಶೀತ ಮತ್ತು ಕೆಮ್ಮಿಗೆ ಉತ್ತಮ ಔಷಧಿ ಆಗಿದೆ.
ಇ. ಅಜೀರ್ಣವಾಗುತ್ತಿದ್ದರೆ ಕಾಲು ಚಮಚ ಹಸಿಶುಂಠಿಯ ರಸದಲ್ಲಿ, ಚಿಟಿಕೆಯಷ್ಟು ಸೈಂಧವ ಲವಣ(ಉಪ್ಪು) ಮತ್ತು ಸ್ವಲ್ಪ ನಿಂಬೆರಸವನ್ನು ಹಾಕಬೇಕು, ಭೋಜನಕ್ಕೆ ಮೊದಲು ಈ ಮಿಶ್ರಣವನ್ನು ಸ್ವಲ್ಪ ನೆಕ್ಕಿದರೆ ಬಾಯಿಗೆ ರುಚಿ ಬರುತ್ತದೆ ಮತ್ತು ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
ಈ. ಕೆಮ್ಮಿಗೆ ಕಾಲು ಚಮಚದಷ್ಟು ಹಸಿಶುಂಠಿಯ (ಆಲಾದ) ರಸವನ್ನು ಜೇನುತುಪ್ಪದೊಂದಿಗೆ ನೆಕ್ಕಲು ಕೊಡಬೇಕು. (ಇದರಲ್ಲಿ ಪ್ರಮಾಣ ತುಂಬ ಮಹತ್ವದ್ದಾಗಿದೆ; ಏಕೆಂದರೆ ಚಿಕಿತ್ಸೆ ಗೊತ್ತಿದೆ, ಆದರೆ ಪ್ರಮಾಣ ಗೊತ್ತಿರದಿದ್ದರೆ, ಅದರಿಂದ ಲಾಭವಾಗದೇ ಅಪಾಯವೇ ಹೆಚ್ಚಾಗುತ್ತದೆ. ಒಮ್ಮೆ ಓರ್ವ ರೋಗಿಗೆ ಬಹಳ ಕಫ ವಾದುದರಿಂದ ಅವನ ಸಂಬಂಧಿಕರು ಅವನಿಗೆ ಮನೆಮದ್ದಿನ ಹೆಸರಿನಲ್ಲಿ ಅರ್ಧ ಬಟ್ಟಲಿನಷ್ಟು ಹಸಿಶುಂಠಿಯ ರಸ ಮತ್ತು ಜೇನುತುಪ್ಪವನ್ನು ನೀಡಿದ್ದರು. ಆ ರೋಗಿಯ ಕಫವಂತೂ ಅದರಿಂದ ಕಡಿಮೆಯಾಗಲಿಲ್ಲ, ಬದಲಾಗಿ ಉಷ್ಣತೆಯ ತೊಂದರೆ
ಯಿಂದ ಅವನು ತುಂಬಾ ತೊಂದರೆಗೀಡಾದನು. ಆದುದರಿಂದ ನಮಗೆ ಪೂರ್ಣ ಮಾಹಿತಿ ಇಲ್ಲದಿರುವ ಚಿಕಿತ್ಸೆ ಯನ್ನು ಯಾವುದೇ ರೋಗಿಗೆ ಮಾಡಬಾರದು ಎಂದು ಇಲ್ಲಿ ಹೇಳ ಬೇಕೆನಿಸುತ್ತದೆ. ಈ ಸಮಯದಲ್ಲಿ ವೈದ್ಯರ ಸಲಹೆ ಪಡೆದಿದ್ದರೆ, ರೋಗಿಗೆ ತೊಂದರೆಯಾಗುತ್ತಿರಲಿಲ್ಲ.)
೧೩. ಹುಣಸೆ
ಅ. ಹುಣಸೆ ಹುಳಿ ಇರುತ್ತದೆ. ಹಸಿ ಹುಣಸೆಕಾಯಿ ಉಷ್ಣ ಗುಣಧರ್ಮದ್ದಾಗಿರುತ್ತದೆ. ಆದುದರಿಂದ ಅದು ಪಿತ್ತವನ್ನು ಹೆಚ್ಚಿಸುತ್ತದೆ. ಹಣ್ಣು ಹುಣಸೆಯೂ ಉಷ್ಣವೇ ಆಗಿರುತ್ತದೆ; ಆದರೆ ಹುಣಸೆಕಾಯಿಗಿಂತ ಲಾಭದಾಯಕವಾಗಿರುತ್ತದೆ.
ಆ. ಹಸಿವಾಗದಿರುವುದು, ಆಹಾರ ಜೀರ್ಣವಾಗದಿರುವಾಗ, ಬಾಯಿಗೆ ರುಚಿ ಇರದಿರುವುದು, ಹೊಟ್ಟೆ ತೊಳೆಸುವಿಕೆ, ಮೈ ಉರಿಯುವುದು, ಇವುಗಳಿಗೆ ಹುಣಸೆಯ ಶರಬತ್ತು ಬಹಳ ಲಾಭದಾಯಕವಾಗಿದೆ.
ಹುಣಸೆಯ ಶರಬತ್ತು ತಯಾರಿಸುವ ಕೃತಿ :
ಆ ೧. ಒಂದು ಲೋಟದಷ್ಟು ಶರಬತ್ತು ತಯಾರಿಸಲು ೧ ಲೋಟ ನೀರು, ನೀರಿನ ಕಾಲು ಭಾಗದಷ್ಟು ಹುಣಸೆಯನ್ನು ತೆಗೆದುಕೊಳ್ಳಬೇಕು.
ಆ ೨. ರಾತ್ರಿಯಿಡಿ ಹುಣಸೆಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಹುಣಸೆಯನ್ನು ಗಿವುಚಿ ಆ ನೀರನ್ನು ಸೋಸಬೇಕು.
ಆ ೩. ಅದರಲ್ಲಿ ರುಚಿಗನುಸಾರ ಕಲ್ಲುಸಕ್ಕರೆ, ಕರಿ ಉಪ್ಪು, ಚಿಟಿಕೆಯಷ್ಟು ಕರಿ ಮೆಣಸಿನ ಪುಡಿಯನ್ನು ಹಾಕಬೇಕು ಮತ್ತು ಕಲ್ಲುಸಕ್ಕರೆ ಕರಗುವವರೆಗೆ ಚಮಚದಿಂದ ತಿರುಗಿಸಬೇಕು.
ಆ ೪. ಇಲ್ಲಿ ಗಮನದಲ್ಲಿಡಬೇಕಾದ ವಿಷಯವೆಂದರೆ ನಾವು ಹುಣಸೆಯ ಶರಬತ್ತು ಮಾಡಿದ ನಂತರ ಅದರ ಗುಣಧರ್ಮ ಬದಲಾಗುತ್ತದೆ. ಕೇವಲ ಹುಣಸೆಯನ್ನು ತಿಂದರೆ ಪಿತ್ತ ಹೆಚ್ಚಾಗುತ್ತದೆ; ಆದರೆ ಹುಣಸೆಯ ಶರಬತ್ತನ್ನು ಸೇವಿಸಿದರೆ ಪಿತ್ತದಿಂದ ಗಂಟಲಿನಲ್ಲಿ ಅಥವಾ ಹೊಟ್ಟೆ ಉರಿಯುವಿಕೆ ಕಡಿಮೆಯಾಗುತ್ತದೆ.
೧೪. ಕೋಕಮ್
ಅ. ಕೊಂಕಣದಲ್ಲಿ ಇದಕ್ಕೆ ‘ರಾತಾಂಬೆ’ ಎನ್ನುತ್ತಾರೆ. ಇದರ ಹಸಿಕಾಯಿ ಮತ್ತು ಹಣ್ಣಿನ ಗುಣಧರ್ಮಗಳು ಬೇರೆ ಬೇರೆ ಆಗಿರುತ್ತವೆ. ಹಣ್ಣು ಪಿತ್ತಶಾಮಕವಾಗಿದೆ. ಕೊಕಮ್ ಶರಬತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ. ಬಹಳಷ್ಟು ಪಿತ್ತದಿಂದ ಶರೀರ ಉರಿಯುತ್ತಿದ್ದರೆ ಕೊಕಮ್ ಶರಬತ್ತನ್ನು ಕುಡಿಯಬೇಕು.
ಆ. ಶರೀರದ ಮೇಲೆ ಪಿತ್ತದಿಂದ ಚರ್ಮದ ಮೇಲೆ ಕೆಂಪು ಕಲೆಗಳು ಮತ್ತು ಬೊಕ್ಕೆಗಳೆದ್ದರೆ, ಅದರ ಮೇಲೆ ಕೋಕಮ್‌ನ ನೀರು ಅಥವಾ ಕೋಕಮ್ ರಸವನ್ನು ಹಚ್ಚಬೇಕು.
ಇ. ಕೋಕಮ್‌ನ ಬೀಜಗಳಿಂದ ಎಣ್ಣೆಯನ್ನು ತೆಗೆಯಬಹುದು. ಈ ಎಣ್ಣೆಯು ಚರ್ಮದ ರೋಗಗಳು, ಒಣ ಚರ್ಮ, ಒಣ ತುಟಿಗಳು, ಬಿರುಕು ಬಿಟ್ಟ ಪಾದಗಳಿಗೆ ಉಪಯುಕ್ತವಾಗಿದೆ.
ಈ. ಆಮಶಂಕೆಗೆ, ಕೋಕಮ್ ಎಣ್ಣೆಯನ್ನು ಒಂದು ಚಮಚದಷ್ಟು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಸಕ್ಕರೆಯ ಪುಡಿಯನ್ನು ಹಾಕಿ ಸೇವಿಸಬೇಕು. ಆಮ ಬೀಳುವುದು ಕಡಿಮೆಯಾಗುತ್ತದೆ.
೧೫. ಖರ್ಜೂರ
ಅ. ರುಚಿಯಲ್ಲಿ ಸಿಹಿ ಮತ್ತು ಶೀತ ಗುಣಧರ್ಮದ ಖರ್ಜೂರ ಉಷ್ಣತೆ ಮತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ.
ಆ. ಬಹಳ ಭೇದಿ, ವಾಂತಿಯಾದ ನಂತರ ಶರೀರದಲ್ಲಿ ನೀರು ಕಡಿಮೆಯಾಗುತ್ತದೆ (ಡಿಹೈಡ್ರೇಶನ್ ಆಗುತ್ತದೆ). ಇದರಿಂದ ಆಯಾಸ, ತಲೆ ತಿರುಗುವುದು, ಕಣ್ಣಗಳೆದುರು ಕತ್ತಲು ಬರುವುದು, ಈ ರೀತಿ ಆಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ಉತ್ಸಾಹ ಬರಲು ಖರ್ಜೂರವನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ ಅದನ್ನು ಸ್ವಲ್ಪ ಕಿವುಚಬೇಕು. ಆ ನೀರನ್ನು ಕುಡಿದರೆ ತಕ್ಷಣ ಉತ್ಸಾಹ ಬರುತ್ತದೆ.
ಇ. ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇದ್ದರೆ ಆಹಾರದಲ್ಲಿ ಖರ್ಜೂರವನ್ನು ಅವಶ್ಯ ಸೇವಿಸಬೇಕು.
ಈ ರೀತಿ ನಾವು ಹಿಂದಿನ ೩ ಲೇಖನಗಳಲ್ಲಿ ಅಡುಗೆ ಮನೆಯಲ್ಲಿನ ವಿವಿಧ ಘಟಕಗಳ ಗುಣಧರ್ಮ ಮತ್ತು ಔಷಧೀಯ ಉಪಯೋಗಗಳ ಬಗ್ಗೆ ತಿಳಿದುಕೊಂಡೆವು. ಇದರಿಂದÀ ನಮಗೆ ಪ್ರಾಥಮಿಕ ಚಿಕಿತ್ಸೆಗಾಗಿ ಹಾಗೂ ನಮಗೆ ನಮ್ಮ ಪ್ರಕೃತಿಗನುಸಾರ, ನಮಗಾಗುವ ತೊಂದರೆಗಳಿಗನುಸಾರ ನಾವು ಯಾವ ಪದಾರ್ಥಗಳನ್ನು ಸೇವಿಸಬೇಕು ? ಮತ್ತು ಯಾವ ಪದಾರ್ಥಗಳನ್ನು ಸೇವಿಸಬಾರದು ? ಎಂಬುದೂ ಗಮನಕ್ಕೆ ಬರುತ್ತದೆ. ನಮ್ಮ ಅಡುಗೆಯಲ್ಲಿ ಬಹುತೇಕ ಉಷ್ಣ ಪದಾರ್ಥ ಗಳಿರುತ್ತವೆ. ಆದುದರಿಂದ ನಾವು ತಿನ್ನುವ ಪಲ್ಯಗಳು ಪಚನವಾಗಲು ನಮಗೆ ಈ ಪದಾರ್ಥಗಳು ಸಹಾಯ ಮಾಡು ತ್ತಿರುತ್ತವೆ; ಆದರೆ ಆ ಪದಾರ್ಥಗಳ ಯೋಗ್ಯ ಪ್ರಮಾಣ ಇರುವುದು ಬಹಳ ಮಹತ್ವದ್ದಾಗಿದೆ.
(ಮುಕ್ತಾಯ)
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ. (೨೩.೭.೨೦೨೩)
ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆ ಪಡೆಯುವುದು ಆವಶ್ಯಕವಾಗಿದೆ.