‘ಸದ್ಯ ‘ಥೈರಾಯ್ಡ್’ ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ. ‘ಥೈರಾಯ್ಡ್’ನ ತೊಂದರೆಯಿದೆ ಮತ್ತು ಅದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಎಂದು ನಾವು ಅನೇಕ ಜನರಿಂದ ಕೇಳುತ್ತೇವೆ. ‘ಥೈರಾಯ್ಡ್’ ಅಂದರೆ ಅದು ಒಂದು ಗ್ರಂಥಿ ಮತ್ತು ಅದು ನಮ್ಮ ಶರೀರದಲ್ಲಿ ಮಹತ್ವದ ಕಾರ್ಯ ಮಾಡುತ್ತದೆ. ಈ ಗ್ರಂಥಿಯ ಕಾರ್ಯದಲ್ಲಿ ತೊಡಕುಂಟಾದರೆ ಅದರಿಂದ ಅನೇಕ ದುಷ್ಪರಿಣಾಮಗಳಾಗುತ್ತವೆ. ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಮತ್ತು ಸರಿಯಾದ ಔಷಧೋಪಚಾರಗಳನ್ನು ಮಾಡುವುದು ಮಹತ್ವದ್ದಾಗಿದೆ. ಈ ವಾರ ನಾವು ‘ಥೈರಾಯ್ಡ್’ ಗ್ರಂಥಿ, ಅದರ ಕಾರ್ಯ ಮತ್ತು ಅದು ಅಕಾರ್ಯಕ್ಷಮವಾದರೆ ಏನು ಪರಿಣಾಮವಾಗುತ್ತವೆ, ಎಂಬುದನ್ನು ತಿಳಿದುಕೊಳ್ಳಲಿದ್ದೇವೆ.
೧. ‘ಥೈರಾಯ್ಡ್’ ಗ್ರಂಥಿಯ ಕಾರ್ಯ
‘ಥೈರಾಯ್ಡ್’ ಇದೊಂದು ಅಂತಃಸ್ರಾವ ಗ್ರಂಥಿಯಾಗಿದೆ. ಇದು ಕುತ್ತಿಗೆಯಲ್ಲಿ ಧ್ವನಿಪೆಟ್ಟಿಗೆಯ ಹಿಂದಿರುತ್ತದೆ. ಈ ಗ್ರಂಥಿಯಿಂದ ತಯಾರಾಗುವ ಸ್ರವಿಸುವಿಕೆಗೆ ಅಂತಃಸ್ರಾವಕ (Hormone) ಎಂದು ಕರೆಯುತ್ತಾರೆ. ಈ ಅಂತಃಸ್ರಾವದ ಉತ್ಪತ್ತಿಗಾಗಿ ಗ್ರಂಥಿಗೆ ‘ಅಯೋಡಿನ್’ ಮತ್ತು ಪ್ರೋಟೀನ್ ಆವಶ್ಯಕವಿರುತ್ತದೆ. ಈ ಗ್ರಂಥಿಯ ಕಾರ್ಯದಲ್ಲಿ ತಲೆಯಲ್ಲಿರುವ ‘ಪಿಟ್ಯುಟರಿ’ ಗ್ರಂಥಿ ಮತ್ತು ‘ಹೈಪೊಥ್ಯಾಲಮಸ್’ (ಮೆದುಳಿನ ಒಂದು ಭಾಗ) ಇವುಗಳ ನಿಯಂತ್ರಣವಿರುತ್ತದೆ. ನಮ್ಮ ಶರೀರದಲ್ಲಿನ ಗ್ರಂಥಿಗಳು ಪರಸ್ಪರರ ಸಹಕಾರ್ಯದಿಂದ ದೇಹದ ವ್ಯವಹಾರವನ್ನು ನಡೆಸಲು ಮಹತ್ವದ ಪಾತ್ರವನ್ನು ನಿಭಾಯಿಸುತ್ತವೆ.
೨. ನಮ್ಮ ದೇಹದಲ್ಲಿನ ಅಂತಃಸ್ರಾವಗಳ ಕಾರ್ಯ
ಅ. ನಾವು ಸೇವಿಸುವ ಆಹಾರದಿಂದ ನಮಗೆ ಪಿಷ್ಟಮಯ ಮತ್ತು ಸ್ನಿಗ್ಧ ಪದಾರ್ಥಗಳು ಸಿಗುತ್ತವೆ. ಅವುಗಳಿಂದ ನಮಗೆ ಊರ್ಜೆ ಸಿಗುತ್ತದೆ. ಅವುಗಳ ಚಯಾಪಚಯವನ್ನು ಮಾಡಿ ಊರ್ಜೆ ಸಿಗಲು ‘ಥೈರಾಯ್ಡ್’ನ ಅಂತಃಸ್ರಾವಗಳ ಆವಶ್ಯಕತೆ ಇರುತ್ತದೆ.
ಆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದು.
ಇ. ಹೃದಯ ಬಡಿತವನ್ನು ನಿಯಂತ್ರಣದಲ್ಲಿಡುವುದು.
ಈ. ಜೀರ್ಣಕಾರಿ ಸ್ರಾವವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಮಾಡಿಸುವುದು.
ಉ. ಸ್ನಾಯುಗಳ ಕಾರ್ಯವನ್ನು ನಿಯಂತ್ರಣದಲ್ಲಿಡುವುದು.
ಊ. ಇವುಗಳ ಜೊತೆಗೆ ನಿದ್ದೆಯ ಮೇಲೆಯೂ ಈ ಅಂತಃಸ್ರಾವಗಳ ಪರಿಣಾಮವಾಗುತ್ತದೆ.
ಎ. ಸ್ತ್ರೀಯರಲ್ಲಿ ಮಾಸಿಕ ಸರದಿಯು ನಿಯಮಿತ ಬರಲು ‘ಥೈರಾಯ್ಡ್’ನ ಅಂತಃಸ್ರಾವವು ಪರೋಕ್ಷ ರೀತಿಯಲ್ಲಿ ಕೆಲಸ ಮಾಡುತ್ತವೆ.
ಐ. ರಕ್ತ ಮತ್ತು ಮೂಳೆಗಳಲ್ಲಿನ ಕ್ಯಾಲ್ಸಿಯಮ್ ಪ್ರಮಾಣವನ್ನು ವ್ಯವಸ್ಥಿತವಾಗಿಡುವ ಕೆಲಸವನ್ನೂ ‘ಥೈರಾಯ್ಡ್’ ಗ್ರಂಥಿಯ ಅಂತಃಸ್ರಾವಕಗಳು ಮಾಡುತ್ತಿರುತ್ತವೆ.
ಓ. ಮೆದುಳಿನ ಕಾರ್ಯವು ವ್ಯವಸ್ಥಿತ ಹಾಗೂ ಬೌದ್ಧಿಕ ಕೆಲಸಗಳು ಸುಲಲಿತವಾಗಲು ‘ಥೈರಾಯ್ಡ್’ ಗ್ರಂಥಿಯು ಮಹತ್ವದ ಕಾರ್ಯ ವನ್ನು ಮಾಡುತ್ತಿರುತ್ತದೆ.
೩. ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯ ಸಂಬಂಧದಲ್ಲಿ
ಥೈರಾಯ್ಡ್ ಈ ಗ್ರಂಥಿಯ ಕಾರ್ಯಕ್ಷಮತೆಗನುಸಾರ ಅದರ ೨ ವಿಕೃತಿಗಳು ಸಂಭವಿಸುತ್ತವೆ –
ಅ. ಥೈರಾಯ್ಡ್ ಗ್ರಂಥಿಯ ಕಾರ್ಯ ಕಡಿಮೆ ಆಗುವುದು (Hypothyroidism)
ಆ. ಥೈರಾಯ್ಡ್ ಗ್ರಂಥಿಯ ಕಾರ್ಯ ಹೆಚ್ಚಾಗುವುದು (Hyperthyroidism)
ರಕ್ತದಲ್ಲಿನ ‘ಥೈರಾಯ್ಡ್’ ಗ್ರಂಥಿಯಿಂದಾಗುವ ಅಂತಃಸ್ರಾವದ (‘‘T3’’ ಮತ್ತು ‘T4’ ಈ ಹೆಸರಿನಿಂದ ಗುರುತಿಸಲಾಗುವ ಸ್ರಾವ) ಪ್ರಮಾಣವು ಯಾವಾಗ ಕಡಿಮೆಯಾಗುತ್ತದೆಯೋ, ಆಗ ಅದಕ್ಕೆ ‘ಥೈರಾಯ್ಡ್ ಗ್ರಂಥಿಯು ಅಕಾರ್ಯಕ್ಷಮ ಆಗುವುದು’ (Hypothyroidism), ಎಂದು ಹೇಳುತ್ತಾರೆ. ‘ಖಿ3’ ಮತ್ತು ‘ಖಿ4’ ಈ ಸ್ರಾವವನ್ನು ತಯಾರಿಸಲು ಅಯೋಡಿನ್‌ನ ಆವಶ್ಯಕತೆ ಇರುತ್ತದೆ. ಯಾವಾಗ ಆಹಾರದಿಂದ ಆಯೋಡಿನ್ ಸಿಗುವುದಿಲ್ಲವೋ, ಆಗ ‘ಥೈರಾಯ್ಡ್’ ಗ್ರಂಥಿಯ ಕಾರ್ಯವು ಕಡಿಮೆಯಾಗುತ್ತದೆ. ಆದ್ದರಿಂದ ‘ಥೈರಾಯ್ಡ್’ ಗ್ರಂಥಿಯ ಆಕಾರವೂ ದೊಡ್ಡದಾಗುತ್ತದೆ. ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಪ್ರದೇಶಗಳು ಮತ್ತು ತಂಪು ಗಾಳಿಯ ಪ್ರದೇಶಗಳಲ್ಲಿ ಅಯೋಡಿನ್ ಕೊರತೆಯಿರುತ್ತದೆ. ಅಲ್ಲಿ ‘ಥೈರಾಯ್ಡ್’ ಗ್ರಂಥಿಯ ಆಕಾರವು ದೊಡ್ಡದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
೪. ಅಂತಃಸ್ರಾವದ ಪ್ರಮಾಣ ಕಡಿಮೆಯಾಗಿರುವುದರಿಂದ ದೇಹದಲ್ಲಿ ಕಾಣಿಸುವ ಲಕ್ಷಣಗಳು
ಅ. ತೂಕ ಹೆಚ್ಚಾಗತೊಡಗುತ್ತದೆ.
ಆ. ರಕ್ಕದೊತ್ತಡ (blood pressure) ಹೆಚ್ಚಾಗುತ್ತದೆ.
ಇ. ಇದರಿಂದ ವ್ಯಕ್ತಿಗಳು ಆಲಸಿಗಳಾಗುತ್ತಾರೆ. ಈ ವಿಕಾರವಾಗಿರುವ ವ್ಯಕ್ತಿಗಳು ತುಂಬಾ ಮಲಗುತ್ತಾರೆ.
ಈ. ಧ್ವನಿ ಗಡಸಾಗುತ್ತದೆ ಮತ್ತು ನಾಲಿಗೆ ಭಾರವಾಗುತ್ತದೆ.
ಉ. ಇಂತಹ ವ್ಯಕ್ತಿಯ ಬುದ್ಧಿಯು ಮಂದವಾಗುತ್ತದೆ (ಬುದ್ಧಿಮಾಂದ್ಯ).
ಊ. ಕಣ್ಣುಗಳ ಸುತ್ತಲೂ ಬಾವು ಬರುತ್ತದೆ.
ಎ. ಸ್ತ್ರೀಯರಲ್ಲಿ ಮುಟ್ಟಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಇದರೊಂದಿಗೆ ತೂಕ ಹೆಚ್ಚಾಗುತ್ತಿದೆ, ನಿದ್ರೆ ಬರುತ್ತಿದೆ, ಇಂತಹ ಲಕ್ಷಣಗಳು ಕಂಡುಬರುತ್ತಿದ್ದರೆ ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
೫. ‘ಥೈರಾಯ್ಡ್ ನ ಅತಿಕಾರ್ಯ (Hyperthyroidism)
ಇದರಲ್ಲಿ ‘ಥೈರಾಯ್ಡ್’ ಗ್ರಂಥಿಯ ಅಂತಃಸ್ರಾವದ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಅಂತಃಸ್ರಾವದ ಯಾವ ಕಾರ್ಯವನ್ನು ನಾವು ನೋಡಿದೆವೋ, ಅವು ಶೀಘ್ರಗತಿಯಿಂದ ಆಗತೊಡಗುತ್ತವೆ.
ಅ. ನಿತ್ಯದಂತೆ ಹಸಿವಿದ್ದರೂ ಮತ್ತು ಸರಿಯಾಗಿ ಊಟ ಮಾಡಿದರೂ ವ್ಯಕ್ತಿಯ ತೂಕ ಕಡಿಮೆಯಾಗತೊಡಗುತ್ತದೆ.
ಆ. ರಾತ್ರಿ ನಿದ್ರೆ ಬರುವುದಿಲ್ಲ.
ಇ. ಸ್ವಭಾವ ಸಿಡುಕುತನದ್ದಾಗುತ್ತದೆ.
ಈ. ಇಂತಹ ವ್ಯಕ್ತಿಗಳಿಗೆ ಉಷ್ಣ ವಾತಾವರಣವನ್ನು ಸ್ವಲ್ಪವೂ ಸಹಿಸಲು ಆಗುವುದಿಲ್ಲ.
ಉ. ಅತ್ಯಧಿಕ ಬೆವರು ಬರುತ್ತದೆ.
ಊ. ರೋಗಿಯು ತೆಳ್ಳಗಾಗುತ್ತ ಹೋಗುತ್ತಾನೆ ಮತ್ತು ಒತ್ತಡದಿಂದಲೇ ಬದುಕುತ್ತಾನೆ.
ಎ. ರೋಗಿಯ ಕೈಗಳು ನಡುಗುತ್ತವೆ.
ಐ. ಕಣ್ಣುಗುಡ್ಡೆಗಳು ಹೊರಗೆ ಬಂದಂತೆ ಕಾಣಿಸುತ್ತವೆ.
ಇಂದಿನ ಲೇಖನದಲ್ಲಿ ನಾವು ‘ಥೈರಾಯ್ಡ್’ ಅಕಾರ್ಯಕ್ಷಮ ಇರುವುದು ಮತ್ತು ಅತೀ ಕಾರ್ಯವನ್ನು ಮಾಡುತ್ತಿರುವಾಗಿನ ಲಕ್ಷಣಗಳನ್ನು ನೋಡಿದೆವು. ಮುಂದಿನ ಲೇಖನದಲ್ಲಿ ನಾವು ‘ಥೈರಾಯ್ಡ್’ ದೃಷ್ಟಿಯಿಂದ ಯೋಗ್ಯ ಜೀವನಶೈಲಿಯನ್ನು ನೋಡಲಿದ್ದೇವೆ.’
ಮುಂದುವರಿಯುವುದು)
– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ. (೬.೨.೨೦೨೪)