ಇಚ್ಛಿತ ಕಾರ್ಯವನ್ನು ಶುಭಮುಹೂರ್ತದಲ್ಲಿ ಮಾಡುವುದರ ಮಹತ್ವ !

‘ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಶುಭಮುಹೂರ್ತದಲ್ಲಿ ಮಾಡುವ ಪರಂಪರೆ ಇದೆ. ನಮ್ಮ ದಿನನಿತ್ಯದ ಜೀವನದಲ್ಲಿ ಮುಹೂರ್ತದ ಸಂಬಂಧ ಆಗಾಗ ಬರುತ್ತದೆ. ಈ ಲೇಖನದ ಮೂಲಕ ‘ಮುಹೂರ್ತ ದ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಶ್ರೀ. ರಾಜ ಕರ್ವೆ

೧. ಮುಹೂರ್ತ ಎಂದರೆ ಏನು ?

ಮುಹೂರ್ತ ಶಬ್ದದ ಜೋತಿಷ್ಯಶಾಸ್ತ್ರೀಯ ಅರ್ಥವು ‘೪೮ ನಿಮಿಷಗಳ ಕಾಲಾವಧಿ ಎಂದಾಗಿದೆ. ಆದರೆ ಪ್ರಸ್ತುತ ಪ್ರಚಲಿತವಿರುವ ಅರ್ಥವೆಂದರೆ ‘ಶುಭ ಅಥವಾ ಅಶುಭ ಕಾಲಾವಧಿ. ಭಾರತದಲ್ಲಿ ವೈದಿಕ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವ ಪರಂಪರೆ ಇದೆ. ‘ಶ್ರೌತ, ‘ಗ್ರಹ್ಯ ಮತ್ತು ‘ಧರ್ಮಸೂತ್ರ ಇವುಗಳಲ್ಲಿ (ಧರ್ಮಶಾಸ್ತ್ರವನ್ನು ಹೇಳುವ ಪ್ರ್ರಾಚೀನ ಗ್ರಂಥಗಳು) ಧಾರ್ಮಿಕ ವಿಧಿ ಮತ್ತು ಸಂಸ್ಕಾರಗಳನ್ನು ಯಾವ ಮುಹೂರ್ತದಲ್ಲಿ ಮಾಡಬೇಕು, ಎಂಬುದನ್ನು ಹೇಳಲಾಗಿದೆ. ಮುಹೂರ್ತಗಳ ಬಗ್ಗೆ ಸ್ವತಂತ್ರ ಮಾಹಿತಿ ನೀಡುವ ಅನೇಕ ಗ್ರಂಥಗಳಿದ್ದು ಅವುಗಳಲ್ಲಿ ಅನೇಕ ಮಹತ್ವದ ಕೆಲಸಗಳನ್ನು ಯಾವ ಮುಹೂರ್ತದಲ್ಲಿ ಮಾಡಬೇಕು, ಎಂಬುದನ್ನು ಸವಿಸ್ತಾರವಾಗಿ ನೀಡಲಾಗಿದೆ. ಜೋತಿಷ್ಯಶಾಸ್ತ್ರವು ಕಾಲಗಣನೆ ಮತ್ತು ಕಾಲವರ್ಣನೆಯ ಶಾಸ್ತ್ರವಾಗಿರುವುದರಿಂದ ‘ಮುಹೂರ್ತವನ್ನು ತೆಗೆಯುವುದು, ಇದು ಕೇವಲ ಜ್ಯೋತಿಷ್ಯಶಾಸ್ತ್ರದ ಮೂಲಕವೇ ಸಾಧ್ಯವಿದೆ. ಜ್ಯೋತಿಷ್ಯಶಾಸ್ತ್ರವು ೬ ವೇದಾಂಗಗಳಲ್ಲಿ ಒಂದಾಗಿದೆ; ಏಕೆಂದರೆ ಕಾಲದ ಜ್ಞಾನವಾದ ನಂತರವೇ ವೇದಗಳಲ್ಲಿ ಹೇಳಿದ ಕರ್ಮ ಗಳನ್ನು ಮಾಡಲು ಬರುತ್ತದೆ.

೨. ಮುಹೂರ್ತವನ್ನು ನೋಡಿ ಕಾರ್ಯವನ್ನು ಆರಂಭಿಸುವುದರ ಉದ್ದೇಶ

ವಿಶ್ವದಲ್ಲಿ ಘಟಿಸುವ ಪ್ರತಿಯೊಂದು ಘಟನೆಯು ವಿಶಿಷ್ಟ ಸ್ಥಳದಲ್ಲಿ ಮತ್ತು ವಿಶಿಷ್ಟ ಕಾಲದಲ್ಲಿ ಘಟಿಸುತ್ತದೆ; ಅಂದರೆ ಪ್ರತಿಯೊಂದು ಘಟನೆಗೆ ಸ್ಥಳ-ಕಾಲದ ಬಂಧನವಿರುತ್ತದೆ. ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗಬೇಕಾದರೆ ಸ್ಥಳ ಮತ್ತು ಕಾಲ ಇವುಗಳ ಅನುಕೂಲತೆ ಆವಶ್ಯಕವಾಗಿದೆ. ಈ ಸಂದರ್ಭದಲ್ಲಿ ಮಹಾಭಾರತದಲ್ಲಿರುವ ಮುಂದಿನ ಶ್ಲೋಕವು ಮಾರ್ಗದರ್ಶಕವಾಗಿದೆ.

‘ನಾದೇಶಕಾಲೇ ಕಿತ್ರಚ್ಚತ್ರಯಾತ್ ದೇಶಕಾಲೌ ಪ್ರತೀಕ್ಷತಾಮ್ | – ಮಹಾಭಾರತ, ವನಪರ್ವ, ಅಧ್ಯಾಯ ೨೮, ಶ್ಲೋಕ ೩೨

ಅರ್ಥ : ದೇಶಕಾಲ (ಸ್ಥಳ-ಕಾಲ) ಅನುಕೂಲವಿಲ್ಲದಿದ್ದರೆ ಏನೂ ಸಾಧ್ಯವಾಗಲಾರದು. ಆದುದರಿಂದ ದೇಶಕಾಲದ ಕಡೆಗೆ ಗಮನ ಕೊಡಬೇಕು.

ಆದುದರಿಂದ ‘ಕಾರ್ಯ ಯಶಸ್ವಿಯಾಗಲು ಕಾಲ ಅನುಕೂಲವಾಗಿರಬೇಕು ಇದು ಮುಹೂರ್ತವನ್ನು ನೋಡಿ ಕಾರ್ಯವನ್ನು ಆರಂಭ ಮಾಡುವುದರ ಹಿಂದಿನ ಉದ್ದೇಶವಾಗಿದೆ.

ಹಿಂದೂ ಧರ್ಮವು ಕೇವಲ ಮಹತ್ವದ ಕಾರ್ಯಗಳನ್ನಷ್ಟೇ ಕಾಲವನ್ನು ನೋಡಿ ಮಾಡಲು ಹೇಳಿದೆ, ಎಂದೇನಿಲ್ಲ, ‘ಮನುಷ್ಯನು ಯಾವ ಯುಗದಲ್ಲಿ ಯಾವ ಸಾಧನೆಯನ್ನು ಮಾಡಬೇಕು ?, ಜೀವನದ ಯಾವ ಕಾಲಖಂಡದಲ್ಲಿ ಯಾವ ಪುರುಷಾರ್ಥವನ್ನು ಸಾಧಿಸಬೇಕು ?, ದಿನನಿತ್ಯದ ನಿತ್ಯಕರ್ಮಗಳನ್ನು ಯಾವ ಸಮಯದಲ್ಲಿ ಮಾಡಬೇಕು ?, ಇತ್ಯಾದಿ ವಿಷಯಗಳ ಬಗ್ಗೆಯೂ ವಿಸ್ತಾರವಾಗಿ ಹೇಳಿದೆ. ಸ್ವಲ್ಪದರಲ್ಲಿ ಹಿಂದೂ ಧರ್ಮವು ಕಾಲಕ್ಕನುಸಾರ ಜೀವನವನ್ನು ನಡೆಸುವ ಶಿಕ್ಷಣವನ್ನು ಕೊಡುತ್ತದೆ.

೩. ಮುಹೂರ್ತವನ್ನು ನೋಡಲು ವಿಚಾರ ಮಾಡುವ ಘಟಕಗಳು  

ಮುಹೂರ್ತಕ್ಕಾಗಿ ಮುಖ್ಯವಾಗಿ ತಿಥಿ, ನಕ್ಷತ್ರ, ವಾರ, ಯೋಗ ಮತ್ತು ಕರಣ ಈ ೫ ಅಂಗಗಳ ವಿಚಾರವಾಗುತ್ತದೆ. ಅವಶ್ಯಕತೆ ಇದ್ದರೆ ಮಾಸ, ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ) ಮತ್ತು ವರ್ಷ ಇವುಗಳ ವಿಚಾರವಾಗುತ್ತದೆ. ಮುಹೂರ್ತವನ್ನು ನಿರ್ಧರಿಸುವಾಗ ಕಾರ್ಯದ ಸ್ವರೂಪಕ್ಕೆ ಪೂರಕವಾಗಿರುವ ಗುಣಧರ್ಮಗಳಿರುವ ತಿಥಿ, ನಕ್ಷತ್ರ ಇತ್ಯಾದಿ ಘಟಕಗಳನ್ನು ಆರಿಸಲಾಗುತ್ತದೆ. ಉದಾ. ಪ್ರವಾಸವನ್ನು ಆರಂಭ ಮಾಡಲು ಅಶ್ವಿನೀ, ಮೃಗಶಿರಾ, ಪುನರ್ವಸು, ಚಿತ್ರಾ ಇತ್ಯಾದಿ ವಾಯುತ್ತ್ವದ (ಗತಿಯನ್ನು ತೋರಿಸುವ) ನಕ್ಷತ್ರಗಳು ಉಪಯುಕ್ತವಾಗಿರುತ್ತವೆ; ವಿವಾಹ ಸಂಸ್ಕಾರಕ್ಕಾಗಿ ಅಮಾವಾಸ್ಯೆ ಮತ್ತು ‘ರಿಕ್ತಾ ತಿಥಿಗಳು ವರ್ಜ್ಯವಾಗಿವೆ. (ಚತುರ್ಥಿ, ನವಮಿ ಮತ್ತು ಚತುರ್ದಶಿ ಇವು ರಿಕ್ತಾ ತಿಥಿಗಳಾಗಿವೆ. ರಿಕ್ತಾ ಎಂದರೆ ನ್ಯೂನತೆ); ವಿದೆಯನ್ನು ಪ್ರಾಪ್ತ ಮಾಡಿಕೊಳ್ಳಲು ಅಶ್ವಿನೀ, ಪುಷ್ಯ, ಹಸ್ತ, ರೇವತಿ ಇತ್ಯಾದಿ ‘ದೇವಗಣಿ ನಕ್ಷತ್ರಗಳು (ಸತ್ವಗುಣಿ ನಕ್ಷತ್ರಗಳು) ಯೋಗ್ಯವಾಗಿವೆ; ದೇವತೆಗಳ ಪ್ರತಿಷ್ಠಾಪನೆಯನ್ನು ಮಾಡಲು ಉತ್ತರಾಯಣ ಕಾಲವು ಯೋಗ್ಯವಾಗಿದೆ ಇತ್ಯಾದಿ.

೪. ಶುಭ ಮುಹೂರ್ತದಲ್ಲಿ ಕಾರ್ಯವನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಕೆಲವೊಂದು ಸಲ ಮುಹೂರ್ತಕ್ಕೆ ಸರಿಯಾಗಿ ಕಾರ್ಯವನ್ನು ಆರಂಭ ಮಾಡುವುದು ವ್ಯಕ್ತಿಯ ಕೈಯಲ್ಲಿರುವುದಿಲ್ಲ, ಉದಾ. ಪರೀಕ್ಷೆ ಇದ್ದರೆ, ಸಾರ್ವಜನಿಕ ವಾಹನದಿಂದ ದೂರದ ಪ್ರವಾಸ ಮಾಡುವುದಿದ್ದರೆ ಇತ್ಯಾದಿ. ಇಂತಹ ಸಮಯದಲ್ಲಿ ಉಪಾಸ್ಯ ದೇವತೆಗೆ ಕಾರ್ಯದಲ್ಲಿನ ಅಡೆತಡೆಗಳನ್ನು ದೂರಗೊಳಿಸಲು ಮತ್ತು ಕಾರ್ಯವು ಯಾವುದೇ ವಿಘ್ನಗಳು ಬರದೇ ಪೂರ್ಣವಾಗಲು ಭಾವಪೂರ್ಣ ಪ್ರಾರ್ಥನೆ ಮಾಡಬೇಕು.

೫. ಸಂತರು ಹೇಳಿದ ಸಮಯದ ಹಿಂದೆ ಅವರ ಸಂಕಲ್ಪಶಕ್ತಿ ಇರುವುದರಿಂದ ಅದೇ ಮುಹೂರ್ತವಾಗುವುದು

ಸಂತರು ಯಾವುದಾದರೊಂದು ಕಾರ್ಯಕ್ಕಾಗಿ ವಿಶಿಷ್ಟ ಸಮಯವನ್ನು ಹೇಳಿದ್ದರೆ, ಬೇರೆ ಮುಹೂರ್ತವನ್ನು ನೋಡುವ ಅವಶ್ಯಕತೆ ಇರುವುದಿಲ್ಲ. ಸಂತರು ಈಶ್ವರಸ್ವರೂಪರಾಗಿರುತ್ತಾರೆ. ಈಶ್ವರನು ಸ್ಥಳ ಮತ್ತು ಕಾಲದ ಆಚೆಗೆ ಇರುತ್ತಾನೆ. ಆದುದರಿಂದ ಸಂತರು ಯಾವುದಾದರೊಂದು ಕಾರ್ಯಕ್ಕಾಗಿ ಹೇಳಿದ ಸಮಯದ ಹಿಂದೆ ಅವರ ಸಂಕಲ್ಪಶಕ್ತಿ ಇರುವುದರಿಂದ ಅದೇ ಮುಹೂರ್ತವಾಗಿರುತ್ತದೆ.

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೨.೨೦೨೨)