ನನ್ನ ಮೊಬೈಲನ್ನು ಹ್ಯಾಕ ಮಾಡಲಾಗುತ್ತದೆ !

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿಯ ಹೇಳಿಕೆ

ರಾಹುಲ್ ಗಾಂಧಿ

ಲಂಡನ (ಬ್ರಿಟನ್)- ನನ್ನ ಸಂಚಾರವಾಣಿಯನ್ನು (ಮೊಬೈಲನ್ನು) ಹ್ಯಾಕ ಮಾಡಲಾಗುತ್ತದೆ. ಭಾರತದಲ್ಲಿನ ವಿರೋಧ ಪಕ್ಷದ ನಾಯಕನಾಗಿರುವುದರಿಂದ ನನಗೆ ಈ ರೀತಿಯ ಒತ್ತಡವನ್ನು ಯಾವಾಗಲೂ ಸಹಿಸಬೇಕಾಗುತ್ತದೆ. ಬಹಳಷ್ಟು ರಾಜಕೀಯ ನೇತಾರರ ಸಂಚಾರವಾಣಿಯಲ್ಲಿ ಪೆಗಾಸಸ್ (ಬೇಹುಗಾರಿಕೆಯ ವ್ಯವಸ್ಥೆ) ಇರುತ್ತದೆ. ನನ್ನ ಸಂಚಾರವಾಣಿಯಲ್ಲಿಯೂ ಪೆಗಾಸಸ್ ಇತ್ತು. ಪತ್ತೆದಾರಿ ಅಧಿಕಾರಿಗಳು ನನ್ನನ್ನು ಕರೆದು ‘ನೀವು ಸಂಚಾರ ವಾಣಿಯಲ್ಲಿ ಮಾತನಾಡುವಾಗ ಎಚ್ಚರವಹಿಸಿ; ಏಕೆಂದರೆ ನಾವು ಅದನ್ನು ರೆಕಾರ್ಡ ಮಾಡುತ್ತಿರುತ್ತೇವೆ’ ಎಂದು ಹೇಳಿದ್ದಾರೆ. ಇದು ಒಂದು ರೀತಿಯ ಒತ್ತಡವಾಗಿದ್ದು ನಮಗೆ ಯಾವಾಗಲೂ ಇದರ ಅರಿವಾಗುತ್ತದೆ, ಎಂಬ ಹೇಳಿಕೆಯನ್ನು ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ನೀಡಿದ್ದಾರೆ. ಬ್ರಿಟನ್ನಿನಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿಯನ್ನು ಆಮಂತ್ರಿತ ಅತಿಥಿಯೆಂದು ಕರೆಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಒಂದು ವಿಡಿಯೋ ಕಾಂಗ್ರೆಸ್ ನಾಯಕ ಸ್ಯಾಮ್ ಪಿಟ್ರೋದಾ ಶೇರ್ ಮಾಡಿದ್ದಾರೆ. ಅದರಲ್ಲಿ ಗಾಂಧಿಯವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ.

ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಮಾತು ಮುಂದುವರಿಸಿ, ವಿರೋಧಿಗಳ ಮೇಲೆ ದೂರು ದಾಖಲಿಸಲಾಗುತ್ತದೆ. ನನ್ನ ವಿರುದ್ಧವೂ ಅನೇಕ ಕ್ರಿಮಿನಲ್‌ ದೂರುಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಅನೇಕ ದೂರುಗಳನ್ನು ತಪ್ಪು ಕಾರಣಗಳ ಮೇರೆಗೆ ದಾಖಲಿಸಲಾಗಿದೆ. ದೇಶದಲ್ಲಿನ ಪ್ರಸಾರ ಮಾಧ್ಯಮಗಳು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಇದೇ ರೀತಿಯಲ್ಲಿ ದಾಳಿ ನಡೆಯುತ್ತಿದ್ದರೆ, ಆಗ ವಿರೋಧಕನೆಂದು ನಿಮ್ಮೊಂದಿಗೆ ಮಾತನಾಡುವುದು ಕಷ್ಟವಾಗುತ್ತದೆ. ಪ್ರಜಾಪ್ರಭುತ್ವಕ್ಕೆ ಆವಶ್ಯಕವಾಗಿರುವ ಸಂಸತ್ತು, ಸ್ವತಂತ್ರ ಪ್ರಸಾರ ಮಾಧ್ಯಮಗಳು, ನ್ಯಾಯವ್ಯವಸ್ಥೆ ಈ ಎಲ್ಲ ವ್ಯವಸ್ಥೆಗಳು ಹತಬಲವಾಗಿವೆ. ಆದುದರಿಂದ ನಾವು ಭಾರತೀಯ ಪ್ರಜಾಪ್ರಭುತ್ವದ ಮೂಲ ಸಂರಚನೆಯ ಮೇಲಿನ ದಾಳಿಗಳನ್ನು ಎದುರಿಸುತ್ತಿದ್ದೇವೆ. ಭಾರತೀಯ ಸಂವಿಧಾನದಲ್ಲಿ ಭಾರತವನ್ನು ರಾಜ್ಯಗಳ ಸಂಘ ಎಂದು ಹೇಳಲಾಗಿದೆ. ಈ ಸಂಘಗಳ ನಡುವಿನ ಚರ್ಚೆಯು ಅವಶ್ಯವಾಗಿರುತ್ತದೆ. ಈಗ ಈ ಸಂವಾದವೇ ಕಷ್ಟಕ್ಕೆ ಸಿಲುಕಿದೆ. ವಿರೋಧ ಪಕ್ಷದ ನೇತಾರರು ಕೆಲವು ಅಂಶಗಳ ಮೇಲೆ ಚರ್ಚೆ ಮಾಡುತ್ತಿದ್ದರು. ಅವರನ್ನು ಜೈಲಿಗೆ ಅಟ್ಟಲಾಯಿತು. ಹೀಗೆ ೩-೪ ಬಾರಿ ಆಗಿದೆ. ಇದು ಬಹಳ ಹಿಂಸಾತ್ಮಕವಾಗಿತ್ತು.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ವಿದೇಶಿ ಮಿತ್ರರ ಸಹಾಯದಿಂದ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಾರೆ ! – ಭಾಜಪ

ಭಾಜಪದ ಕೇಂದ್ರ ಸಚಿವ ಮತ್ತು ಭಾಜಪದ ಮುಖಂಡ ಅನುರಾಗ ಠಾಕೂರರು ಮಾತನಾಡುತ್ತ ರಾಹುಲ್ ಗಾಂಧಿಯ ಹೇಳಿಕೆಯನ್ನು ಟೀಕಿಸಿದರು. ಪೆಗಾಸಸ್ ಬೇರೆ ಎಲ್ಲೂ ಇಲ್ಲ, ಅದು ರಾಹುಲ್ ತಲೆಯಲ್ಲಿದೆ. ಅವರು ತಮ್ಮ ಸಂಚಾರವಾಣಿಯನ್ನು ಯಾವ ಭಯದಿಂದ ತನಿಖಾ ದಳಗಳ ಬಳಿ ಪರಿಶೀಲನೆಗೆಂದು ಜಮೆ ಮಾಡಿಲ್ಲ ? ಅದರಲ್ಲಿ ಅಂತಹದ್ದು ಏನಿತ್ತು ? ಸತತವಾಗಿ ಬರುತ್ತಿರುವ ಸೋಲು ಅವರಿಗೆ ಜೀರ್ಣವಾಗುತ್ತಿಲ್ಲ. ರಾಹುಲ್ ವಿದೇಶಕ್ಕೆ ಹೋಗಿ ವಿದೇಶಿ ಸ್ನೇಹಿತರ ಸಹಾಯದಿಂದ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್ಸಿನ ಧೋರಣೆ ಏನು ?