ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ್ ಇವರು ಕೊರೋನಾ ಮಹಾಮಾರಿಯ ನೆಪದಲ್ಲಿ ಅನ್ವಯಿಸಿದ ನಿರ್ಬಂಧವು ಕೊನೆಗೆ ಜನರ ಜೀವಕ್ಕೆ ಕುತ್ತು ತರುವುದರಿಂದ ಲಕ್ಷಗಟ್ಟಲೆ ಚೀನೀ ನಾಗರಿಕರು ಬೀದಿಗಿಳಿದು ಅದನ್ನು ತೀವ್ರವಾಗಿ ವಿರೋಧಿಸಿದರು. ಈ ಆಂದೋಲನವು ಎಷ್ಟು ತೀವ್ರವಾಗಿತ್ತೆಂದರೆ, ಜಿನಪಿಂಗ್ ಇವರು ಹಿಂಜರಿದು ನಿರ್ಬಂಧವನ್ನು ಶಿಥಿಲಗೊಳಿಸಬೇಕಾಯಿತು. ಯಾವಾಗಲೂ ಚೀನೀ ನಾಗರಿಕರ ಧ್ವನಿಯನ್ನು ಅದುಮುವ ಜಿನಪಿಂಗ್ ಇವರಿಗೆ ಇದು ದೊಡ್ಡ ಆಘಾತವಾಗಿದೆ. ಚೀನಾದಲ್ಲಿ ಈ ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಈ ಲೇಖನದಲ್ಲಿ ವಿಚಾರವಿನಿಮಯ ಮಾಡಲಾಗಿದೆ. |
೧. ಕೊರೋನಾದ ವಿಷಯದ ನಿರ್ಬಂಧದಿಂದಾಗಿ ಜನರಿಗೆ ಜಿನಪಿಂಗ್ ಇವರ ಬಗ್ಗೆ ತೀವ್ರ ಅಸಮಾಧಾನ !
‘ಚೀನಾದಲ್ಲಿ ಕಳೆದ ತಿಂಗಳಿಂದ ಆಗುತ್ತಿರುವ ಅಲ್ಲೋಲ ಕಲ್ಲೋಲವು ಚೀನಾದ ವಿಷಯದಲ್ಲಿ ವಿಶ್ಲೇಷಣೆ ಮಾಡುವ ತಜ್ಞರ ಕಲ್ಪನೆಗೆ ನಿಲುಕದ ವಿಷಯವಾಗಿದೆ. ಹಿಂದಿನ ಮಾವೋವಾದಿಗಳ ‘ದ ರಿಪಬ್ಲಿಕ್ ಆಫ್ ಚಾಯನಾ’ ಈ ಪಕ್ಷವು ೧೯೪೯ ರಲ್ಲಿ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ’ ಆಯಿತು. ಮಾವೋವಾದಿ ಆಡಳಿತದ ವಿರುದ್ಧ ಮಾತನಾಡುವವರನ್ನು ತಕ್ಷಣ ಬಂಧಿಸಿ ಚೀನಾದಲ್ಲಿ ಸೆರೆಮನೆಯ ಕಗ್ಗತ್ತಲಿಗೆ ತಳ್ಳಲಾಗುತ್ತದೆ. ಲಕ್ಷಗಟ್ಟಲೆ ‘ಬಾತಮಿದಾರರು (ಮಾಹಿತಿ ನೀಡುವವರು) ಹಾಗೂ ಸಾರ್ವಜನಿಕ ಸುರಕ್ಷಾ ವ್ಯವಸ್ಥೆಯ ಪೊಲೀಸ್ ಅಧಿಕಾರಿಗಳು’ ಇವರೆಲ್ಲರು ನಾಗರಿಕರ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿರುತ್ತಾರೆ. ಲಕ್ಷಗಟ್ಟಲೆ ‘ಸಿಸಿಟಿವಿ ಕ್ಯಾಮೆರಾಗಳು’ ಹಾಗೂ ಆಧುನಿಕ ತಂತ್ರಜ್ಞಾನದ ಪ್ರತಿಯೊಂದು ಸಾಧನಗಳು ಇವುಗಳ ಆಧಾರದಲ್ಲಿ ಚೀನಾದ ಯಾವುದೇ ಮೂಲೆಯಲ್ಲಿ ಜನರು ಒಟ್ಟಾದರೆ ಅದರ ಮಾಹಿತಿಯನ್ನು ಸಂಗ್ರಹಿಸಿ ಆ ಗುಂಪನ್ನು ಅದು ತಡೆಯುತ್ತದೆ. ಆದರೂ ನವೆಂಬರ್ ೨೦೨೨ ರಲ್ಲಿ ಚೀನಾದಲ್ಲಿನ ‘ಶೂನ್ಯ ಕೊವಿಡ್ ನೀತಿ’ (ಝೀರೋ ಕೋವಿಡ್ ಪಾಲಿಸಿ) ಹಾಗೂ ಪ್ರತ್ಯೇಕೀಕರಣದ ಹೆಸರಿನಲ್ಲಿ ಲಕ್ಷಗಟ್ಟಲೆ ನಾಗರಿಕರನ್ನು ಬಂಧಿಸಿರುವುದರಿಂದ ಜನರು ಅಸಮಾಧಾನದಿಂದ ಉದ್ರಿಕ್ತರಾದರು. ಈ ಉದ್ರೇಕವು ಎಷ್ಟು ಭಯಂಕರವಾಗಿತ್ತೆಂದರೆ, ಚೀನಾದಲ್ಲಿನ ೧೦೦ ಕ್ಕಿಂತಲೂ ಹೆಚ್ಚು ನಗರಗಳ ಸಾವಿರಾರು ನಾಗರಿಕರು ಬೀದಿಗಿಳಿದು ಪೊಲೀಸರು ನಿರ್ಮಿಸಿದ ಅಡ್ಡಗಟ್ಟುಗಳನ್ನು ಕಿತ್ತೆಸೆದರು. ಇದರಲ್ಲಿ ಶೀ ಜಿನ್‌ಪಿಂಗ್ ಇವರು ರಾಜೀನಾಮೆ ನೀಡಬೇಕೆಂದು ತೀವ್ರ ಆಗ್ರಹ ಕೇಳಿಬಂದಿತು. ಅದರಿಂದ ಸಾರ್ವಜನಿಕ ಸುರಕ್ಷಾ ವ್ಯವಸ್ಥೆಯ ಜನಸಂದಣಿ ನಿರ್ವಹಣೆ ನಿಲುವು ಕುಸಿದುಬಿತ್ತು. ಚೀನಾದಲ್ಲಿ ಇಂಟರ್‌ನೆಟ್, ಟಿವಿ. ಸಂಚಾರಿವಾಣಿ ಹಾಗೂ ಪ್ರಸಾರಮಾಧ್ಯಮಗಳ ಮೇಲೆ ಸರಕಾರದ ಸಂಪೂರ್ಣ ನಿಯಂತ್ರಣವಿದ್ದರೂ ಈ ಆಂದೋಲನವು ಅಂತರರಾಷ್ಟ್ರೀಯ ಸಾಮಾಜಿಕ ಮಾಧ್ಯಮಗಳಿಗೆ ತಲಪಿತು. ಇದರಿಂದ ಚೀನಾದಲ್ಲಿ ಅಲ್ಲಲ್ಲಿ ವಿದ್ಯಾರ್ಥಿಗಳು ಹೂವು, ಮೇಣದ ಬತ್ತಿ ಹಾಗೂ ಪ್ರತೀಕಾತ್ಮಕ ಬಿಳಿ ಕಾಗದವನ್ನು ಹಿಡಿದು ಸರಕಾರವನ್ನು ಖಂಡಿಸುವುದನ್ನು ಜಗತ್ತು ನೋಡಿತು. ಇದಲ್ಲದೆ ಪೊಲೀಸರು ವಿಶಿಷ್ಟವಾದ ಸ್ಥಳಗಳಲ್ಲಿ ನಿರ್ಮಾಣ ಮಾಡಿರುವ ಅಡ್ಡಗಟ್ಟನ್ನು ನಾಗರಿಕರು ಬದಿಗೊತ್ತುವ ದೃಶ್ಯಗಳು ಜಗತ್ತಿನಾದ್ಯಂತ ಪ್ರಸಾರವಾಯಿತು. ಇದರಿಂದ ಶೀ ಜಿನಪಿಂಗ್ ಮತ್ತು ಅವರ ಮಾವೋವಾದಿ ಪಕ್ಷದ ವಿರುದ್ಧ ಇರುವ ಜನಾಕ್ರೋಶವು ಕಾಣಿಸಿತು.
೨. ೧೯೮೯ ರಲ್ಲಿನ ಆಂದೋಲನದ ಪುನರಾವೃತ್ತಿ !
ಚೀನಾದಲ್ಲಿ ಜೂನ್ ೧೯೮೯ ರಲ್ಲಿ ಇದೇ ರೀತಿಯ ಆಂದೋಲನವು ಅಂದಿನ ಮಾವೋವಾದಿ ಆಡಳಿತದ ವಿರುದ್ಧ ನಡೆದಿತ್ತು. ಈ ಆಂದೋಲನದಲ್ಲಿ ಚೀನಾದಲ್ಲಿನ ೪೦೦ ನಗರಗಳಲ್ಲಿನ ವಿಶ್ವವಿದ್ಯಾಲಯಗಳ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಬೇಡಿಕೆಯನ್ನು ಮುಂದಿಟ್ಟು ಬೀದಿಗಿಳಿದಿದ್ದರು. ಆ ಸಮಯದ ಚೀನಾದ ಅಧ್ಯಕ್ಷ ಲೀ ಪೇಂಗ್ ಇವರು ೩ ಲಕ್ಷ ಬಂದೂಕುಧಾರಿ ಸೈನಿಕರ ಮೂಲಕ ವಿದ್ಯಾರ್ಥಿಗಳ ಈ ದಂಗೆಯನ್ನು ಧ್ವಂಸ ಮಾಡಿದ್ದರು. ಇಷ್ಟು ಮಾತ್ರವಲ್ಲ ಆಂದೋಲನ ಮಾಡುವವರನ್ನು ಯುದ್ಧಟ್ಯಾಂಕ್‌ಗಳ ಅಡಿಗೆ ಹಾಕಿ ಜಜ್ಜಿ ಹಾಕಿದ್ದರು. ಇದರಲ್ಲಿ ಸುಮಾರು ೧ ಲಕ್ಷದಷ್ಟು ವಿದ್ಯಾರ್ಥಿಗಳ ಹತ್ಯೆಯಾಯಿತು; ಆದರೆ ಚೀನಾದ ಆಡಳಿತವು ಈ ಸಂಖ್ಯೆಯನ್ನು ಎಲ್ಲಿಯೂ ಪ್ರಕಟಿಸಲು ಬಿಡಲಿಲ್ಲ. ಕಳೆದ ೩ ದಶಕಗಳಲ್ಲಿ ಚೀನಾವು ಇವೆಲ್ಲ ಕುರುಹುಗಳನ್ನು ಅಳಿಸಿ ಹಾಕಿತು. ಅನಂತರ ಚೀನಾದಲ್ಲಿ ‘ಜೂನ್ ೧೯೮೯’ ಎಂದು ಉಲ್ಲೇಖಿಸುವುದೂ ಅಪರಾಧವೆಂದು ಪರಿಗಣಿಸಲು ಆರಂಭವಾಯಿತು. ೧೯೮೯ರ ನಂತರ ಚೀನಾದಲ್ಲಿ ಜನಾಂದೋಲನ ನಡೆಯಲಿಲ್ಲ ಎಂದೇನಿಲ್ಲ. ಆಯಾಯ ಸಮಯದ ಸರಕಾರಗಳು ಕಾರ್ಖಾನೆ, ಅಣೆಕಟ್ಟು, ಗಣಿಗಾರಿಕೆ ಹಾಗೂ ಹೊಸ ನಗರಗಳಿಗಾಗಿ ಜನರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡಿರುವುದರ ವಿರುದ್ಧ ಜನರು ಬೀದಿಗಿಳಿದು ಆಂದೋಲನ ಮಾಡಿದ್ದಾರೆ. ಆದರೂ ಈ ಆಂದೋಲನಗಳನ್ನು ಸ್ಥಳೀಯ ಪೊಲೀಸರು ಹಾಗೂ ಆಡಳಿತದವರು ಹೊಸಕಿ ಹಾಕಿದರು. ಟಿಬೇಟ್, ಶಿನ್‌ಜಿಯಾಂಗ್ (ಪೂರ್ವ ತುರ್ಕಿಸ್ತಾನ), ದಕ್ಷಿಣ ಮಂಗೋಲಿಯಾ ಹಾಗೂ ಈಗ ಹಾಂಗ್‌ಕಾಂಗ್ ಇಲ್ಲಿಯೂ ಇಂತಹ ಚಿತ್ರಣ ಕಾಣಿಸಿತು. ವಿಶೇಷವೆಂದರೆ, ಚೀನಾದ ಈ ಕುಕೃತ್ಯಕ್ಕೆ ಅಂತರರಾಷ್ಟ್ರೀಯ ಸ್ತರದಲ್ಲಿ ವಿರೋಧವಾದರೂ ಚೀನಾ ಇಂತಹ ಆಂದೋಲನಗಳನ್ನು ಇಂದಿಗೂ ಹೊಸಕಿ ಹಾಕುತ್ತಿದೆ.
೩. ಜಿನಪಿಂಗ್ ಇವರ ಹಟಮಾರಿತನದಿಂದಲೇ ಚೀನಾದಲ್ಲಿ ಕೊರೊನಾದ ಸೋಂಕು !
ಚೀನಾದ ವುಹಾನದಿಂದ ಕೊರೋನಾದ ಸೋಂಕು ಉತ್ಪನ್ನವಾಗಿರುವುದರಿಂದ ಜಿನಪಿಂಗ್ ಇವರ ಮಾವೋವಾದಿ ಸರಕಾರದ ವಿರುದ್ಧ ಮೊತ್ತಮೊದಲು ಜನರ ಕೋಪವು ಉದ್ರೇಕವಾಯಿತು. ಆರಂಭದಲ್ಲಿ ‘ವುಹಾನದಿಂದ ಈ ವೈರಾಣು ಜಗತ್ತಿನಾದ್ಯಂತ ಹರಡಿತು’, ಎಂಬ ವಾಸ್ತವವನ್ನು ಚೀನಾದ ಎಲ್ಲ ವ್ಯವಸ್ಥೆಯು ಮುಚ್ಚಿಟ್ಟಿತು ಹಾಗೂ ಕೊರೋನಾದ ಸೋಂಕು ಆಗಿರುವುದನ್ನು ನಿರಾಕರಿಸುತ್ತಿತ್ತು. ಮುಂದಿನ ಕೆಲವು ತಿಂಗಳಲ್ಲಿಯೆ ಚೀನಾದಲ್ಲಿಯೂ ಎಲ್ಲೆಡೆ ಕೊರೋನಾದ ಸೋಂಕು ಹರಡಿತು. ನಂತರ ಚೀನಾ ‘ನಾವು ಮೊತ್ತಮೊದಲು ಕೊರೋನಾದ ಲಸಿಕೆಯನ್ನು ಕಂಡುಹಿಡಿದೆವು’, ಎಂದು ಸುಳ್ಳು ಹೇಳಿತ್ತು, ಆದರೆ ಅದರಿಂದ ಅದಕ್ಕೇ ಹಾನಿಯಾಯಿತೆೆಂದು ಸಿದ್ಧವಾಯಿತು; ಈ ಲಸಿಕೆ ಪರಿಣಾಮಕಾರಿ ಮತ್ತು ಕಡಿಮೆ ದರದ್ದಿದೆ ಎಂದು ಚೀನಾ ಹೇಳಿತ್ತು. ಆದರೆ ಅವರ ಲಸಿಕೆಯು ಸಂಪೂರ್ಣ ನಿರುಪಯೋಗಿ ಎನಿಸಿತು. ಪಾಶ್ಚಾತ್ಯ ದೇಶ ಅಥವಾ ಭಾರತದಿಂದ ಪರಿಣಾಮಕಾರಿ ಲಸಿಕೆಯನ್ನು ತರಿಸದಿರುವ ಜಿನಪಿಂಗ್ ಇವರ ಹಟಮಾರಿತನದಿಂದ ಚೀನಾದಲ್ಲಿ ಎಲ್ಲೆಡೆ ಕೊರೋನಾದ ಸೋಂಕು ಹರಡಿತು.
೪. ಜಿನಪಿಂಗ್ ಇವರ ಸಂಚಾರನಿಷೇಧದ (ಲಾಕ್‌ಡೌನ್) ಅತಿರೇಕದಿಂದ ಜನಾಕ್ರೋಶ !
ಚೀನಾದಲ್ಲಿ ಆಗಸ್ಟ್-ಸಪ್ಟೆಂಬರ ೨೦೨೨ ರಲ್ಲಿ ಕೊರೋನಾದ ಸೋಂಕು ಹೆಚ್ಚಾದಾಗ ಜಿನಪಿಂಗ್ ಇವರು ಪ್ರತ್ಯೇಕೀಕರಣದ ವಿಷಯವನ್ನು ಅಡಗಿಸಿಡಲು ಆದೇಶ ನೀಡಿದರು. ಈಗ ಜಿನಪಿಂಗ್ ಇವರ ಮಹತ್ವಾಕಾಂಕ್ಷಿ ‘ಝೀರೋ ಕೋವಿಡ್’ ನಿಲುವಿನ ಕಾರ್ಯಾಚರಣೆಯ ಮೂಲಕ ಲಕ್ಷಗಟ್ಟಲೆ ನಾಗರಿಕರ ಮೇಲೆ ೧೦೦ ಕ್ಕಿಂತಲೂ ಹೆಚ್ಚು ದಿನಗಳ ವರೆಗೆ ಬಲವಂತವಾಗಿ ಸಂಚಾರನಿಷೇಧವನ್ನು ಹೇರಿದರು. ಅದರ ಪರಿಣಾಮದಿಂದ ಆಹಾರ ಧಾನ್ಯ, ಔಷಧಗಳು, ಹಣ ಹಾಗೂ ವಿದ್ಯುತ್ ಇತ್ಯಾದಿಗಳ ಕೊರತೆಯುಂಟಾದ ಕಾರಣ ಜನರ ಆಕ್ರೋಶವು ಮುಗಿಲು ಮುಟ್ಟಿತು. ಈ ಜನಾಕ್ರೋಶದ ಮೊದಲ ಜ್ವಾಲೆಯು ೧೯ ಸಪ್ಟೆಂಬರ ೨೦೨೨ ರಂದು ಒಂದು ಬಸ್ ಅಪಘಾತದಲ್ಲಿ ೨೭ ರೋಗಿಗಳು ಮೃತರಾದ ಘಟನೆಯ ನಂತರ ಕಾಣಿಸಿತು. ಈ ೨೭ ರೋಗಿಗಳನ್ನು ಅವರ ಮನೆಯಿಂದ ಬಲವಂತವಾಗಿ ಎತ್ತಿಕೊಂಡು ಇದೇ ಬಸ್‌ನಲ್ಲಿ ಪ್ರತ್ಯೇಕೀಕರಣದ ಸ್ಥಳಕ್ಕೆ ಒಯ್ಯಲಾಗುತ್ತಿತ್ತು. ಆಗ ಈ ಬಸ್‌ಗೆ ಅಪಘಾತವಾಗಿತ್ತು. ಈ ಘಟನೆಯ ನಂತರ ಜಿನಪಿಂಗ್ ಇವರಿಗೆ ಜನರ ರೋಷವನ್ನು ಎದುರಿಸಬೇಕಾಯಿತು. ಅನಂತರ ೨೪ ನವೆಂಬರ್ ೨೦೨೨ ರಂದು ಶಿನಜಿಯಾಂಗ್ ಪ್ರಾಂತದಲ್ಲಿನ ಉರೂಮಕ್ಕಿ ಪರಿಸರದಲ್ಲಿನ ಹೇನ್ ಸೆಟ್ಲರ್ಸ್ ವಸತಿಯಲ್ಲಿ ಒಂದು ಬಹುಮಹಡಿ ಕಟ್ಟಡವು ಬೆಂಕಿಗಾಹುತಿಯಾಗಿ ಅದರಲ್ಲಿ ನೂರಾರು ನಾಗರಿಕರು ಸುಟ್ಟುಬೂದಿಯಾದರು. ಸರಕಾರ ಹೇರಿದ ಸಂಚಾರನಿಷೇಧದಿಂದಾಗಿ ಸೂಕ್ತ ಸಮಯದಲ್ಲಿ ಸಹಾಯ ಸಿಗದಿರುವುದರಿಂದ ಈ ಕಟ್ಟಡ ೩ ಗಂಟೆಯ ವರೆಗೆ ಬೆಂಕಿಯ ಜ್ವಾಲೆಯನ್ನು ಉಗುಳುತ್ತಿತ್ತು. ತನ್ನ ಜೀವವನ್ನು ಉಳಿಸಿಕೊಳ್ಳಲು ಈ ಕಟ್ಟಡದಲ್ಲಿದ್ದ ಅನೇಕ ನಾಗರಿಕರು ನೇರವಾಗಿ ಕೆಳಗೆ ಜಿಗಿದರು ಹಾಗೂ ಅದರಿಂದಲೂ ಕೆಲವರು ಮೃತಪಟ್ಟರು. ಈ ಭೀಕರ ಘಟನೆಯ ದೃಶ್ಯಗಳನ್ನು ಚೀನಾದ ಪ್ರಸಾರಮಾಧ್ಯಮಗಳು ಪ್ರಸಾರ ಮಾಡಿದವು. ಅದರಿಂದ ಜನರ ಭಾವನೆಯು ಎಷ್ಟು ಉದ್ರೇಕವಾಯಿತೆಂದರೆ, ಸರಕಾರದ ಇಂಟರ್‌ನೆಟ್‌ನ ಮೇಲೆ ನಿಯಂತ್ರಣವನ್ನಿಡುವ ವ್ಯವಸ್ಥೆಯೆ ಸಂಪೂರ್ಣ ಕುಸಿದುಬಿತ್ತು. ಚೀನಾದ ‘ವಿ ಚಾಟ್’ ಈ ಸಾಮಾಜಿಕ ಮಾಧ್ಯಮಸಹಿತ ಇತರ ಸಾಮಾಜಿಕ ಜಾಲತಾಣಗಳನ್ನು ಚೀನಾದ ಅಧಿಕೃತ ಇಂಟರ್‌ನೆಟ್ ವ್ಯವಸ್ಥೆಯಿಂದ ತೆಗೆಯಿತು. ಅನಂತರವೂ ಜನರು ಶಾಂತರಾಗಲಿಲ್ಲ. ಅವರು ಚೀನಾದ ಅಧಿಕೃತ ಇಂಟರ್‌ನೆಟ್ ವ್ಯವಸ್ಥೆಯನ್ನು ಬದಿಗೊತ್ತಿ ಗುಪ್ತ ‘ಸಾಫ್ಟ್ವೆಯರ್’ ಉಪಯೋಗಿಸಿ ಈ ಮೇಲಿನ ದೃಶ್ಯಗಳನ್ನು ಟ್ವಿಟರ್‌ನಂತಹ ಅಂತರರಾಷ್ಟ್ರೀಯ ವೇದಿಕೆ ಮೂಲಕ ಜಗತ್ತಿನಾದ್ಯಂತ ಪ್ರಸಾರ ಮಾಡಿದವು. ಕತಾರನಲ್ಲಿ ‘ಫಿಫಾ’ ವಿಶ್ವಕಪ್ ಫುಟ್‌ಬಾಲ್ ಸ್ಪರ್ಧೆಯಲ್ಲಿ ‘ಜಗತ್ತಿನಾದ್ಯಂತದ ಫುಟ್‌ಬಾಲ್ ಪ್ರೇಮಿಗಳು ತಮ್ಮ ತಮ್ಮ ದೇಶದ ತಂಡಗಳಿಗೆ ಸಾಮಾಜಿಕ ಅಂತರವನ್ನು ಪಾಲಿಸದೆ ಹಾಗೂ ಮಾಸ್ಕ್ ಧರಿಸದೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ’, ಎಂಬುದನ್ನು ಚೀನಾದ ಕೋಟ್ಯಾವಧಿ ನಾಗರಿಕರು ನೋಡಿದರು. ಅದರಿಂದ ಜಿನಪಿಂಗ್ ಇವರ ‘ಝೀರೋ ಕೋವಿಡ್’ ನಿಲುವಿನ ವಿರುದ್ಧ ಜನರ ಅಸಮಾಧಾನವು ಇನ್ನಷ್ಟು ಹೆಚ್ಚಾಯಿತು. ಈ ವಿಚಿತ್ರ ಯೋಗಾಯೋಗದಿಂದ ‘ಟಾಯಿನ್ ಮನ್’ ವೃತ್ತದಲ್ಲಿ ಜೂನ್ ೧೯೮೯ ರಲ್ಲಿ ಘಟಿಸಿದ ಘಟನೆಯ ನೆನಪಾಯಿತು. ೧೯೮೯ ರಲ್ಲಿ ನಡೆದ ದಂಗೆಯ ಸಮಯದಲ್ಲಿ ಚೀನಾದ ಮಾಜಿ ಅಧ್ಯಕ್ಷ ಹ್ಯೂ ಜಿಂತಾವ ಇವರು ಮೃತಪಟ್ಟಿದ್ದರಿಂದ ಅಂದಿನ ಮಾವೋವಾದಿ ಸರಕಾರದ ಅನ್ಯಾಯಕಾರಿ ಆಡಳಿತದ ವಿರುದ್ಧ ಇದೇ ರೀತಿ ಜನಾಕ್ರೋಶ ಭುಗಿಲೆದ್ದಿತ್ತು.
೩೦ ನವೆಂಬರ್ ೨೦೨೨ ರಂದು ಚೀನಾದ ಮಾಜಿ ಅಧ್ಯಕ್ಷ ಜಿಆಂಗ್ ಝೆಮಿನ್ ಇವರ ಪುಣ್ಯತಿಥಿಯ ನಿಮಿತ್ತ, ಅಂದರೆ ‘ಪ್ಯಾಚ್ ಚಾಯನಾ’ ಆಂದೋಲನದ ಸ್ಮರಣಾರ್ಥ ರಾಷ್ಟ್ರೀಯ ಶೋಕವನ್ನು ವ್ಯಕ್ತಪಡಿಸಲು ಹೂವು ಮತ್ತು ಮೇಣದಬತ್ತಿಯನ್ನು ಹಿಡಿದು ಬೀದಿಯಲ್ಲಿ ಆಂದೋಲನ ಮಾಡುವ ಅವಕಾಶವು ಆಂದೋಲನಕಾರರಿಗೆ ಸಿಕ್ಕಿತು. ಈ ಆಂದೋಲನಕ್ಕೆ ಜಿನಪಿಂಗ್ ಇವರ ವಿರೋಧಿಯಾಗಿರುವ ಚೀನಾ ಮಾವೋವಾದಿ ಪಕ್ಷ ಹಾಗೂ ಜಿನಪಿಂಗ್ ಇವರು ವಜಾಗೊಳಿಸಿದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಯ ನೇತಾರರು ಬೆಂಬಲವನ್ನು ತೋರಿಸಿದರು, ಎಂಬುದನ್ನು ಗಮನಿಸಬೇಕು.
೫. ಜನಾಕ್ರೋಶದ ಮುಂದೆ ಸೌಮ್ಯವಾದ ಚೀನಾ ಅಧ್ಯಕ್ಷ ಜಿನಪಿಂಗ್ !
ತೀರಾ ಇತ್ತೀಚೆಗಿನ ವಾರ್ತೆ ಹೇಳುವುದಾದರೆ, ವಿದ್ಯಾರ್ಥಿಗಳನ್ನು ಆಂದೋಲನದಿಂದ ದೂರವಿಡಲು ಚೀನಾದಲ್ಲಿನ ೧೦೦ ಕ್ಕಿಂತಲೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದ್ದು ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಹೇಳಲಾಗಿದೆ. ಜನರ ಆಕ್ರೋಶ ಕಡಿಮೆಗೊಳಿಸಲು ಗುನಾಂಗಝೋವೂ ಹಾಗೂ ಶಾಂಘಾಯ ಈ ನಗರಗಳಲ್ಲಿ ಪ್ರತ್ಯೇಕೀಕರಣದಂತಹ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ‘ಬಲಾಢ್ಯ ಚೀನಾ ಸರಕಾರಕ್ಕೆ ಆಘಾತವನ್ನು ನೀಡಿ ಆಂದೋಲನಕರ್ತರು ಗಳಿಸಿದ ಮೊದಲ ವಿಜಯ ಇದಾಗಿದೆ’, ಎಂದು ಹೇಳಬಹುದು.
ಚೀನಾದಲ್ಲಿನ ಹೊಸಪೀಳಿಗೆಯು ಅನ್ಯಾಯವನ್ನು ಸಹಿಸಿಕೊಳ್ಳಲಿಕ್ಕಿಲ್ಲ !
೨೦೧೨ ರಿಂದ ಜಿನಪಿಂಗ್ ಇವರು ಅಧಿಕಾರಕ್ಕೇರಿದ ನಂತರ ಚೀನಾದ ಆರ್ಥಿಕ ಸ್ಥಿತಿ ಕುಸಿಯುತ್ತಾ ಹೋಯಿತು. ಆದ್ದರಿಂದ ಜಿನಪಿಂಗ್ ಇವರ ಮುಂದಿರುವ ಪರ್ಯಾಯಗಳು ಸೀಮಿತವಾಗಿವೆ. ಅವುಗಳಲ್ಲಿನ ಮೊದಲ ಪರ್ಯಾಯವೆಂದರೆ ಜನರ ಕೋಪವನ್ನು ಶಮನಗೊಳಿಸಲು ಕೊರೋನಾದ ನಿರ್ಬಂಧ ಹಾಗೂ ಅದಕ್ಕೆ ಸಂಬಂಧಿಸಿದ ಧೋರಣೆಗಳನ್ನು ಸಂಪೂರ್ಣ ಬದಲಾಯಿಸಿ ಆರ್ಥಿಕ ಸುಧಾರಣೆಯನ್ನು ಮಾಡುವ ಘೋಷಣೆ ಮಾಡುವುದು. ಆದರೂ ಭ್ರಷ್ಟಾಚಾರದಿಂದ ಗಂಭೀರ ಪರಿಣಾಮವಾಗಿರುವ ಅರ್ಥವ್ಯವಸ್ಥೆ ಮತ್ತು ಸಾಲದ ಸುಳಿಯಲ್ಲಿರುವ ಬ್ಯಾಂಕ್‌ಗಳು, ಇಂತಹ ಪರಿಸ್ಥಿತಿಯಲ್ಲಿ ಸುಧಾರಣೆ ಮಾಡುವುದು ಕಠಿಣವಾಗಿದೆ, ಎಂಬುದೂ ನಿಜ. ಇನ್ನೊಂದು ಪರ್ಯಾಯವೆಂದರೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಗೆ ಆದೇಶ ನೀಡಿ ಯುದ್ಧ ಟ್ಯಾಂಕ್‌ಗಳ ಸಹಾಯದಲ್ಲಿ ಈ ಆಂದೋಲನವನ್ನು ಹೊಸಕಿ ಹಾಕುವುದು. ಇದರ ಅರ್ಥ ಹೀಗೆ ಮಾಡುವಾಗ ಜಿನಪಿಂಗ್ ಇವರಿಗೆ ಜೂನ್ ೧೯೮೯ ರಲ್ಲಿ ಆಂದೋಲನ ಮಾಡುವ ಯುವಕರು ಹಾಗೂ ಈಗ ೨೦೨೨ ರಲ್ಲಿ ಆಂದೋಲನ ಮಾಡುವ ಹೊಸ ಪೀಳಿಗೆಯ ಯುವಕರಲ್ಲಿ ಬಹಳಷ್ಟು ವ್ಯತ್ಯಾಸವಿದೆಯೆಂಬುದನ್ನು ಗಮನಿಸಬೇಕಾಗುವುದು. ಚೀನಾದಲ್ಲಿನ ಪ್ರಖ್ಯಾತ ನೇತಾರ ಡೇಂಗ್ ಇವರು ಚೀನಾದಲ್ಲಿನ ಜನರಿಗೆ ‘ಶ್ರೀಮಂತರಾಗಿರುವುದು, ಅಂದರೆ ಗುಣವಂತರಾಗಿರುವುದು’, ಎಂಬ ಬೋಧನೆಯನ್ನು ನೀಡಿದ್ದಾರೆ. ಚೀನಾದಲ್ಲಿನ ಹೊಸ ಪೀಳಿಗೆ ಅತೀ ಮಹತ್ವಾಕಾಂಕ್ಷಿ ಆಗಿದೆ. ಅವರು ಆರ್ಥಿಕ ಅಭಿವೃದ್ಧಿಯ ಫಲವನ್ನು ಸವಿದಿದ್ದು ಅವರಿಗೆ ಐಷಾರಾಮದ ಅಭ್ಯಾಸವಾಗಿದೆ.
ಜೂನ್ ೧೯೮೯ ರಲ್ಲಿ ಯುವಕರು ಪರಸ್ಪರರಿಗೆ ಸಂದೇಶವನ್ನು ನೀಡಿ ಸಂಪರ್ಕಿಸುತ್ತಿದ್ದರು, ಆದರೆ ಇಂದಿನ ಹೊಸ ಪೀಳಿಗೆಯ ಬಳಿ ಇಂಟರ್ ನೆಟ್, ಸಂಚಾರಿವಾಣಿಯಂತಹ ಸಂಪರ್ಕ ವ್ಯವಸ್ಥೆಯ ಆಧುನಿಕ ‘ಶಸ್ತ್ರ’ಗಳಿವೆ. ಆದ್ದರಿಂದ ಒಂದು ಗುಂಡಿಯೊತ್ತಿದರೆ ಯಾವುದೇ ಕ್ಷಣದಲ್ಲಿ ಲಕ್ಷಗಟ್ಟಲೆ ಜನರು ಪ್ರತಿಭಟನೆ ಮಾಡಲು ಬೀದಿಗಿಳಿಯುವರು. ಅದರ ಮೂಲಕ ಅವರು ಸರಕಾರ ಸಾಮಾನ್ಯ ನಾಗರಿಕರ ಅದುಮಿದ ಧ್ವನಿಯನ್ನು ಸುನಾಮಿಯ ಹಾಗೆ ದೊಡ್ಡ ಧ್ವನಿಯಾಗಿ ಸಹಜವಾಗಿ ರೂಪಾಂತರಿಸುವರು.
ಲೇಖಕರು : ವಿಜಯ ಕ್ರಾಂತಿ (ಆಧಾರ : ಸಾಪ್ತಾಹಿಕ ‘ಆರ್ಗನೈಸರ್’ನ ಜಾಲತಾಣ, ೩.೧೨.೨೦೨೨)