ಕಾಶಿ ವಿಶ್ವೇಶ್ವರನ ಪುರಾತನ ಇತಿಹಾಸ ಮತ್ತು ಮೊಗಲರಿಂದ ದೇವಸ್ಥಾನದ ಮೇಲಾದ ಆಕ್ರಮಣ

ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ

ಕಳೆದ ಕೆಲವು ತಿಂಗಳುಗಳಿಂದ ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿಯ ವಿಷಯ ತುಂಬಾ ಚರ್ಚೆಯಲ್ಲಿದೆ. ವಾರಣಾಸಿಯಲ್ಲಿರುವ ಮೂಲ ಕಾಶಿ ವಿಶ್ವೇಶ್ವರನ ಸ್ಥಾನವನ್ನು ಮೊಗಲರ ಕಾಲದಲ್ಲಿ ಭ್ರಷ್ಟಗೊಳಿಸಲಾಯಿತು ಮತ್ತು ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ಕಟ್ಟಲಾಯಿತು. ಇಲ್ಲಿ ಜ್ಞಾನವಾಪಿ ಮಸೀದಿಯ ಪ್ರಕರಣ ಏನಿದೆ, ಎಂಬುದನ್ನು ಸ್ವಲ್ಪದರಲ್ಲಿ ನೋಡೋಣ. ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ಸ್ಕಂದ ಪುರಾಣದಲ್ಲಿ ಮತ್ತು ಸಾಮ್ರಾಟ ಗುಪ್ತರ ಆಳ್ವಿಕೆಯಲ್ಲಿ ಕಾಶಿಯ ಉಲ್ಲೇಖವಿರುವುದರ ಮಾಹಿತಿ, ಚೀನಾದ ಪ್ರವಾಸಿ ಹ್ಯುಯನ್ ತ್ಸಂಗ್‌ನು ಬರೆದ ಟಿಪ್ಪಣಿಗಳಲ್ಲಿ ವಿಶ್ವೇಶ್ವರ ದೇವಸ್ಥಾನದ ಉಲ್ಲೇಖವಿರುವ ಮಾಹಿತಿ, ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ದೀನ ಐಬಕ್‌ನು ಕಾಶಿ ವಿಶ್ವೇಶ್ವರನ ಮೇಲೆ ಮೊದಲ ಬಾರಿಗೆ ಆಕ್ರಮಣ ಮಾಡುವುದು ಮತ್ತು ಪ್ರಸಿದ್ಧ ಮರಾಠಿ ಧರ್ಮಪಂಡಿತರಾದ ನಾರಾಯಣ ಭಟ್ಟರು ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಪುನಃ ಕಟ್ಟುವುದು, ಇವುಗಳ ಬಗ್ಗೆ ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಅದರ ಕೊನೆಯ ಭಾಗವನ್ನು ನೋಡೋಣ.

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/77860.html

೬. ಬ್ರಿಟಿಷ ಪ್ರವಾಸಿ ಪೀಟರ್ ಮಂಡಿ ಇವರು ತಮ್ಮ ಪುಸ್ತಕದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಚಿತ್ರಸಹಿತ ವರ್ಣನೆ ಮಾಡಿದ್ದಾರೆ

ಪೀಟರ್ ಮಂಡಿ ಎಂಬ ಓರ್ವ ಬ್ರಿಟಿಷ ಪ್ರವಾಸಿಗರು ೧೭ ನೇ ಶತಮಾನದಲ್ಲಿ ಭಾರತಕ್ಕೆ ಬಂದಿದ್ದರು. ಆ ಸಮಯದಲ್ಲಿ ಅವರು ತಮ್ಮ ಪುಸ್ತಕದಲ್ಲಿ ಕಾಶಿ ವಿಶ್ವೇಶ್ವರನ ಬಗ್ಗೆ ಬರೆದಿದ್ದಾರೆ. ೪ ಸೆಪ್ಟೆಂಬರ್ ೧೬೩೨ ರಂದು ಪೀಟರ್ ಮಂಡಿ ಇವರು ವಾರಣಾಸಿಯನ್ನು ತಲುಪಿದರು. ಅವರು ವಾರಣಾಣಸಿಯ ಬಗ್ಗೆ ಬರೆದಿದ್ದಾರೆ; ಆದರೆ ಅವರು ವಿಶೇಷವಾಗಿ ಕಾಶಿ ವಿಶ್ವೇಶ್ವರನ ದೇವಸ್ಥಾನದ ಬಗ್ಗೆ ಬರೆದಿದ್ದಾರೆ. ಅವರು, ‘ವಾರಣಾಸಿಯಲ್ಲಿ ಅನೇಕ ದೇವಸ್ಥಾನಗಳಿವೆ; ಆದರೆ ಅವುಗಳಲ್ಲಿನ ಮುಖ್ಯ ದೇವಸ್ಥಾನಕ್ಕೆ ‘ಕಾಶಿ ವಿಶ್ವ’ ಎಂದು ಹೇಳುತ್ತಾರೆ, ಅದು ಮಹಾದೇವನ(ಶಿವನ) ದೇವಸ್ಥಾನವಾಗಿದೆ. ನಾನು ಆ ದೇವಸ್ಥಾನಕ್ಕೆ ಹೋಗಿದ್ದೆನು. ಅದರ ಮಧ್ಯಭಾಗದಲ್ಲಿ ಒಂದು ಕಲ್ಲು ಇದ್ದು ಅದರ ಆಕಾರ ಸಾಧಾರಣ (ಮಧ್ಯಭಾಗದಲ್ಲಿ ಉಬ್ಬಿದಂತೆ ಮತ್ತು ಬದಿಯಿಂದ ಗೋಲಾಕಾರವಾಗಿ) ‘ಹ್ಯಾಟ್’ ನಂತಿದೆ. ಆ ಕಲ್ಲು ಒರಟಾಗಿದೆ ಮತ್ತು ಅದರ ಮೇಲೆ ಲೋಹದ ಹೊದಿಕೆಯನ್ನು ಹಾಕಲಾಗಿದೆ. ಅದರ ಮೇಲೆ ಜನರು ಗಂಗಾ ನದಿಯ ನೀರು, ಹೂವು, ಅಕ್ಕಿ ಮತ್ತು ಬೆಣ್ಣೆ ಇತ್ಯಾದಿಗಳನ್ನು ಸುರಿಯುತ್ತಿದ್ದರು. ಇವೆಲ್ಲವುಗಳ ಒಂದು ಮಿಶ್ರಣವಾಗಿ ಅದು ಕಲ್ಲಿನ ಮೇಲಿನಿಂದ ಕೆಳಗೆ ಹರಿಯುತ್ತಿತು. ಜೊತೆಗಿದ್ದ ಬ್ರಾಹ್ಮಣರು ಯಾವುದೋ ಅಗಮ್ಯ (ಬುದ್ಧಿಗೆಟುಕದ)  ಭಾಷೆಯಲ್ಲಿ ಏನೋ ಓದುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಇವೆಲ್ಲವುಗಳ ಮೇಲೆ ಒಂದು ಡೇರೆಯನ್ನು (ರೇಶ್ಮೆ ಬಟ್ಟೆಯ ಮೇಲೆ ಆಕರ್ಷಕ ರೀತಿಯಲ್ಲಿ ಚಿನ್ನದ-ಬೆಳ್ಳಿಯ ದಾರಗಳಿಂದ ಮಾಡಿದ ಸುಂದರ ಕಲಾಕಸುರಿ) ಕಟ್ಟಲಾಗಿದ್ದು ಅಲ್ಲಿಯೇ ಹಲವಾರು ದೀಪಗಳನ್ನು ಹಚ್ಚಲಾಗಿತ್ತು.’ ಈ ವರ್ಣನೆಯನ್ನು ಮಾಡುವಾಗ ಮಂಡಿಯು ಆಗಿನ ಕಾಶಿ ವಿಶ್ವೇಶ್ವರನ ರೇಖಾಚಿತ್ರವನ್ನೂ ಬಿಡಿಸಿದ್ದಾನೆ ಅದನ್ನು ನೋಡಿದರೆ ಅದರ ಅಂದಾಜು ಬರಬಹುದು.

೭. ಔರಂಗಜೇಬನು ದೇವಸ್ಥಾನವನ್ನು ಕೆಡವಲು ಆದೇಶವನ್ನು ನೀಡುವುದು ಮತ್ತು ಕಾಶಿ ವಿಶ್ವೇಶ್ವರನ ಅರ್ಚಕರಿಗೆ ಅದರ ಬಗ್ಗೆ ತಿಳಿದ ಕೂಡಲೆ ಅವರು ದೇವಸ್ಥಾನದಲ್ಲಿನ ಶಿವಲಿಂಗವನ್ನು ಬಾವಿಯಲ್ಲಿ ಬಿಡುವುದು

ಪಂಡಿತ ನಾರಾಯಣ ಭಟ್ಟರು ನಿರ್ಮಿಸಿದ ಈ ಕಾಶಿ ವಿಶ್ವೇಶ್ವರನ ದೇವಸ್ಥಾನವು ಸುಮಾರು ೧೨೫ ವರ್ಷಗಳ ಕಾಲ ಇತ್ತು. ಮೊಗಲರ ಅಧಿಕಾರ ಉತ್ತುಂಗಕ್ಕೇರಿದ ಸಮಯದಲ್ಲಿ ಔರಂಗಜೇಬನ ಮತಾಂಧತೆ ಇದ್ದಕ್ಕಿದ್ದಂತೆ ಉಕ್ಕಿ ಬಂದಿತು ಮತ್ತು ಅವನು ಹಿಂದುಸ್ಥಾನದಲ್ಲಿನ ದೇವಸ್ಥಾನಗಳನ್ನು ನೆಲಸಮಮಾಡುವ ಕೆಲಸವನ್ನೇ ಪ್ರಾರಂಭಿಸಿದನು. ಔರಂಗಜೇಬನು ಕರ್ಣಾವತಿ (ಅಹ ಮದಾಬಾದ) ಯಲ್ಲಿನ ಚಿಂತಾಮಣಿ ದೇವಾಲಯದಲ್ಲಿ ಹಸುವನ್ನು ಕೊಂದು ದೇವಾಲಯವನ್ನು  ಭ್ರಷ್ಟಗೊಳಿಸಿದನು ಮತ್ತು ಆ ದೇವಾಲಯವನ್ನು ಮಸೀದಿಯಾಗಿ ರೂಪಾಂತರಿಸಿದನು. ನಂತರ ಅವನು ಆ ಪ್ರಾಂತದಲ್ಲಿನ ಎಲ್ಲ ದೇವಾಲಯಗಳನ್ನು ಕೆಡವಿದನು. ಅವನು ತನ್ನ ಆಳ್ವಿಕೆಯ ಆರಂಭದ ೧೦-೧೨ ವರ್ಷಗಳಲ್ಲಿ ಓಡಿಶಾ ಪ್ರಾಂತದಲ್ಲಿ ಕಟ್ಟಲಾದ ಎಲ್ಲ ದೇವಾಲಯಗಳನ್ನು ಕೆಡವಲು ಆದೇಶವನ್ನು ನೀಡಿದ್ದನು.

‘ಮಾಸಿರ್-ಎ-ಅಲಾಮಗಿರಿ’ ಈ ಪುಸ್ತಕದಲ್ಲಿ, (೯ ಎಪ್ರಿಲ್ ೧೬೬೯ ಈ ದಿನ) ಔರಂಗಜೇಬನು, ಕಾಫೀರರ ಎಲ್ಲ ದೇವಾಲಯಗಳನ್ನು ಕೆಡವಬೇಕು ಮತ್ತು ಅವರ ಧಾರ್ಮಿಕ ಆಚರಣೆಗಳನ್ನು ಹಾಗೂ ಕಲಿಕೆಯನ್ನು ಹತ್ತಿಕ್ಕಬೇಕೆಂದು ಒಂದು ಆದೇಶವನ್ನು ಹೊರಡಿಸಿದನು ಎಂದು ನಮೂದಿಲಾಗಿದೆ. ಈ ಆದೇಶದ ಕಾರ್ಯತತ್ಪರತೆಯಿಂದ ಆರಂಭವಾಯಿತು. ಮುಂದಿನ ೪ ತಿಂಗಳುಗಳಲ್ಲಿಯೇ ಮತಾಂಧರು ಕಾಶಿ ವಿಶ್ವೇಶ್ವರನ ದೇವಸ್ಥಾನದ ಮೇಲೆ ದಂಡೆತ್ತಿ ಹೋದರು ಮತ್ತು ಆಗಸ್ಟ್ ೧೬೬೯ ರಲ್ಲಿ ಅದನ್ನು ಭಂಗಗೊಳಿಸಿದರು. ದೇವಸ್ಥಾನದ ಮೇಲೆ ಮತಾಂಧರು ದಂಡೆತ್ತಿ ಬರಲಿದ್ದಾರೆ ಎಂಬುದು ದೇವಸ್ಥಾನದ ಮುಖ್ಯ ಅರ್ಚಕರಿಗೆ ಮೊದಲೇ ತಿಳಿದುದರಿಂದ ಅವರು ವಿಶ್ವೇಶ್ವರನ ಶಿವಲಿಂಗವನ್ನು ದೇವಸ್ಥಾನದಿಂದ ಮೊದಲೇ ಹೊರಗೆ ತೆಗೆದು ಪಕ್ಕದಲ್ಲಿರುವ ಬಾವಿಯಲ್ಲಿ ಬಿಟ್ಟರು.

೮. ಔರಂಗಜೇಬನ ಕಾಲದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನದ ಅವಶೇಷಗಳಿಂದ ಕಟ್ಟಲಾದ ಜ್ಞಾನವಾಪಿ ಮಸೀದಿ !

ಇದೇ ಸುಮಾರಿಗೆ ಕಾಶಿಯ ಬಿಂದುಮಾಧವ, ಮಥುರೆಯ ಕೇಶವರಾಯ ಮುಂತಾದ ಇತರ ದೇವಸ್ಥಾನಗಳೂ ಮತಾಂಧರ ಆಕ್ರಮಣಕ್ಕೆ ಬಲಿಯಾದವು. ಔರಂಗಜೇಬ್‌ನ ಈ ಎಲ್ಲ ಹುಕುಮುಗಳನ್ನು (ಆದೇಶಗಳನ್ನು) ಮತ್ತು ಫತವಾಗಳು ‘ದಿ ರಿಲಿಜಿಯಸ್ ಪಾಲಿಸಿ ಆಫ್ ದಿ ಮುಘಲ್ ಎಂಪರರ‍್ಸ್’ ಎಂಬ ಶ್ರೀರಾಮ ಶರ್ಮಾ ಇವರ ಪುಸ್ತಕದಲ್ಲಿವೆ. ನಮ್ಮಲ್ಲಿನ ಜೆಧೆ ಶಕಾವಲಿಯಲ್ಲಿ ಇದರ ಉಲ್ಲೇಖವಿದೆ. ಒಟ್ಟಾರೆ ಔರಂಗಜೇಬನು ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಕೆಡವಿದನು, ಮುಂದೆ ಈ ದೇವಸ್ಥಾನವನ್ನು ಪೂರ್ಣ ನಾಶಮಾಡುವ ಬದಲು ಅದರ ಅಳಿದುಳಿದ ಭಾಗಗಳನ್ನು ಬಳಸಿ ಅಲ್ಲಿ ಮಸೀದಿಯನ್ನು ಕಟ್ಟಲಾಯಿತು. ಈ ದೇವಸ್ಥಾನದ ಅವಶೇಷಗಳು ಇಂದಿಗೂ ಅಲ್ಲಿ ನೋಡಲು ಸಿಗುತ್ತವೆ. ವಿಶ್ವೇಶ್ವರನ ಶಿವಲಿಂಗವು ಪಕ್ಕದ ಬಾವಿಯಲ್ಲಿತ್ತು. ಈ ಬಾವಿಯು ಗಂಗೆಯ ಒಂದು ಝರಿಯೇ ಆಗಿತ್ತು ಮತ್ತು ಆ ಜ್ಞಾನದ ಬಾವಿ ಎಂದರೆ, ಈ ಜ್ಞಾನವಾಪಿ !

೯. ಕಾಶಿ ವಿಶ್ವೇಶ್ವರನನ್ನು ಮುಕ್ತಗೊಳಿಸಬೇಕು ಎಂಬ ಇಚ್ಛೆ ಛತ್ರಪತಿ ಶಿವಾಜಿ ಮಹಾರಾಜರದ್ದಾಗಿತ್ತು !

ಕಾಶಿ ವಿಶ್ವೇಶ್ವರನನ್ನು ಮುಕ್ತಗೊಳಿಸಬೇಕೆಂಬ ಇಚ್ಛೆ ಖಂಡಿತ ವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರದಾಗಿರಬೇಕು, ಆದರೆ ಅದನ್ನು ಎಲ್ಲಿಯೂ ನಮೂದಿಸಿದ್ದು ಕಂಡು ಬರುವುದಿಲ್ಲ. ಹೀಗಿದ್ದರೂ ಶಿವಛತ್ರಪತಿಗಳ ಅಷ್ಟಪ್ರಧಾನ ಮಂಡಳದಲ್ಲಿನ ಅಮಾತ್ಯರಾಗಿರುವ (ಮಂತ್ರಿ) ಮತ್ತು ಮುಂದಿನ ಕಾಲದಲ್ಲಿ ಔರಂಗಜೇಬನನ್ನು ತುಂಬಾ ಸಂಕಟದಲ್ಲಿ ಸಿಲುಕಿಸಿದ ಮುತ್ಸದ್ದಿ ರಾಮಚಂದ್ರಪಂತ ಅಮಾತ್ಯರು (ಮಂತ್ರಿ) ಕೊಲ್ಹಾಪುರದ ಛತ್ರಪತಿ ಸಂಭಾಜಿರಾಜರ ಸಲುವಾಗಿ ಒಂದು ಗ್ರಂಥವನ್ನು ನಿರ್ಮಿಸಿದರು. ಸರ್ವಸಾಮಾನ್ಯವಾಗಿ ಅದಕ್ಕೆ ‘ಆಜ್ಞಾಪತ್ರ’ ಎಂದು ಹೇಳಲಾಗುತ್ತದೆ. ಈ ಆಜ್ಞಾಪತ್ರದಲ್ಲಿ ಅನೇಕ ಕಡೆಗಿರುವ ಉಲ್ಲೇಖಗಳಿಂದ ಮಹಾರಾಜರ ಇಚ್ಛೆಯೂ ‘ಕಾಶಿ ವಿಶ್ವೇಶ್ವರನನ್ನು ಮುಕ್ತಗೊಳಿಸುವುದಾಗಿರಬೇಕು ಎಂಬುದು’ ಸ್ಪಷ್ಟವಾಗುತ್ತದೆ.

೧೦. ಪೇಶವೆಯವರ ಆಡಳಿತಾವಧಿಯಲ್ಲಿ ಕಾಶಿ ವಿಶ್ವೇಶ್ವರನ ಪುನರ್ಸ್ಥಾಪನೇಯ ಉಲ್ಲೇಖವು ಕಂಡು ಬರುವುದು

ಹಿರಿಯ ಬಾಜಿರಾವ್ ಪೇಶ್ವೆಯವರ ಕಾಲದಲ್ಲಿಯೂ ಕಾಶಿ ವಿಶ್ವೇಶ್ವರನ ಪುನರ್ಸ್ಥಾಪನೆಯನ್ನು ಮಾಡುವುದರ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಹಿರಿಯ ಬಾಜೀರಾವರ ನಂತರ ಚಿಮಾಜಿ ಅಪ್ಪಾ ಇವರ ಒಂದು ಪತ್ರದಲ್ಲಿ, ದೇವಬ್ರಾಹ್ಮಣರನ್ನು ಸ್ಥಾಪಿಸಿ ಕಾಶಿಯ ಮಹಾಸ್ಥಳದಲ್ಲಿ ವಿಶ್ವೇಶ್ವರನ ಜೀರ್ಣೋದ್ಧಾರವನ್ನು ಮಾಡಲು ನಿರತರಾದರು ಎಂಬ ಒಂದು ಉಲ್ಲೇಖವಿದೆ. ಬಾಜೀರಾವರ ಪುತ್ರ, ಅಂದರೆ  ಹಿರಿಯ ನಾನಾಸಾಹೇಬ ಪೇಶವೆ ಇವರ ಇತರ ಪತ್ರಗಳಲ್ಲಿ ಸತತವಾಗಿ ಕಾಶಿ ನಮ್ಮ ಕಡೆಗೆ ಬರಬೇಕು, ಎಂಬ ರಾಜಕಾರಣವೇ ಕಂಡು ಬರುತ್ತದೆ.

ಇ.ಸ. ೧೭೪೨ ರಲ್ಲಿ ನಾನಾಸಾಹೇಬರು ಕಾಶಿಯನ್ನು ಜಯಿಸಲು ಹೆಜ್ಜೆಗಳನ್ನು ಹಾಕಿದ್ದರು. ಈ ಬಗ್ಗೆ ಪೇಶವೆ ಶಕಾವಲಿಯಲ್ಲಿ ಸವಿಸ್ತಾರ ವಿವರಣೆಯನ್ನು ಮಾಡಲಾಗಿದೆ. ಇನ್ನೊಂದು ಉಲ್ಲೇಖಕ್ಕನುಸಾರ ನಾನಾಸಾಹೇಬರು ಮಲ್ಹಾರರಾವ ಹೋಳಕರರನ್ನು ಕಾಶಿಯನ್ನು ವಶಪಡಿಸಿಕೊಳ್ಳಲು ಕಳುಹಿಸಿದ್ದರು. ಹೋಳಕರರ ಕಾಗದಪತ್ರಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ಅನಂತರದ ಕಾಲದಲ್ಲಿ ಮಾಧವರಾವ ಪೇಶವೆಯವರು ಮೃತ್ಯುವಿನ ಸಮಯದಲ್ಲಿ ೯ ಕಲಮ್‌ಗಳ ಒಂದು ಯಾದಿಯನ್ನು ತಯಾರಿಸಿದ್ದರು. ಅದರಲ್ಲಿ ‘ಕಾಶಿ ಮತ್ತು ಪ್ರಯಾಗ ಈ ಸ್ಥಳಗಳು ಸರಕಾರದ ಕಡೆ ಬರಬೇಕು ಎಂಬುದು ತೀರ್ಥರೂಪರ (ನಾನಾಸಾಹೇಬರ) ಉದ್ದೇಶವಾಗಿತ್ತು’, ಎಂದು ಹೇಳಲಾಗಿದೆ. ಸಂಕ್ಷಿಪ್ತದಲ್ಲಿ ಮಾಧವರಾವ ಇವರ ಜೀವನ ಕಾಲದಲ್ಲಿ ಅವರ ಈ ಕನಸು ನನಸಾಗಲಿಲ್ಲ.

೧೧. ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಇವರು ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಹೊಸತಾಗಿ ಸ್ಥಾಪಿಸುವುದು ಮತ್ತು ನಾನಾ ಫಡಣವೀಸ್ ಇವರು ಮಹಾದಜಿ ಶಿಂದೆ ಇವರಿಗೆ ಕಾಶಿಯೊಂದಿಗೆ ಮಥುರಾ, ವೃಂದಾವನವನ್ನು ವಶಪಡಿಸಿಕೊಳ್ಳುವ ಬಗ್ಗೆ ತಿಳಿಸುವುದು

ನಾನಾಸಾಹೇಬ ಪೇಶವೆ ಮತ್ತು ಮಲ್ಹಾರರಾವ ಹೋಳಕರ್ ಇವರ ಈ ಕನಸನ್ನು ಮುಂದೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರರು ಅಂಶತಃ ಪೂರ್ಣಗೊಳಿಸಿದರು. ಅವರು ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಮತ್ತೊಮ್ಮೆ ಹೊಸತಾಗಿ ಜ್ಞಾನವಾಪಿ ಮಸೀದಿಗೆ ತಾಗಿಸಿ ದಕ್ಷಿಣಕ್ಕೆ ಕಟ್ಟಿದರು. ಇಲ್ಲಿ ಹೊಸ ಶಿವಲಿಂಗವನ್ನು ಸ್ಥಾಪಿಸಿರುವುದು ಕಂಡು ಬರುತ್ತದೆ. ಮುಂದೆ ಇ.ಸ. ೧೭೮೯ ರಲ್ಲಿ ನಾನಾ ಫಡಣವೀಸ ಇವರು ಮಹಾದಜಿ ಶಿಂದೆ ಇವರಿಗೆ ‘ಶ್ರೀ ಕಾಶಿಯ ವಿಶ್ವೇಶ್ವರನ ದೇವಾಲಯವು ಸಾವಿರ ವರ್ಷಗಳಷ್ಟು ಪುರಾತನ ಎಂದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಪಾತಶಾಹಿಯಲ್ಲಿ ಯಾರು ಏನು ಹೇಳಿ ಇದನ್ನು ಮಸೀದಿಯನ್ನು ಮಾಡಿದ್ದಾರೆ ? ವಿಶ್ವೇಶ್ವರನ ಸ್ಥಳವು ಮುಕ್ತವಾಗಿ, ಮೊದಲಿನಂತೆ ದೇವಾಲಯ ಮತ್ತು ದೇವರ ಸ್ಥಾಪನೆಯಾಬೇಕು, ಇದು ಹಿಂದೂ ಧರ್ಮಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದ್ದರು. ಮಥುರಾ, ವೃಂದಾವನ ಈ ಸ್ಥಳಗಳೂ ಸರಕಾರದಲ್ಲಿರಬೇಕು, ಆದರೆ ಮುಂದೆ ಇದರ ಬಗ್ಗೆ ಹೆಚ್ಚಿಗೇನೂ ಆಗಲಿಲ್ಲ.

೧೨. ಕಾಶೀ ವಿಶ್ವೇಶ್ವರನ ಒಂದು ಬಾರಿಯಲ್ಲ, ಮೂರು ಬಾರಿ ಕಟ್ಟಲಾದ ಮಸೀದಿ ಎಂದರೆ ಜ್ಞಾನವಾಪಿ ಮಸೀದಿ !

ಅಹಿಲ್ಯಾದೇವಿಯವರು ಕಾಶಿಯಲ್ಲಿ ಮಣಿಕರ್ಣಿಕಾ ಘಟ್ಟ, ದಶಾಶ್ವಮೇಧ ಘಟ್ಟ ಮುಂತಾದವುಗಳ ಪುನಃನಿರ್ಮಾಣ, ಗಂಗಾಮೂರ್ತಿ ಮತ್ತು ಇತರ ಚಿಕ್ಕ ದೇವಸ್ಥಾನಗಳು, ಧರ್ಮಶಾಲೆ, ದೇವರ ಕಟ್ಟೆಗಳು ಇತ್ಯಾದಿಗಳನ್ನು ಕಟ್ಟಿದರು. ಹಿರಿಯ ಬಾಜೀರಾವರ ಕಾಲದಲ್ಲಿ ೧೭೩೫ ರಿಂದ ಕಾಶಿಯಲ್ಲಿ ಘಟ್ಟಗಳನ್ನು ನಿರ್ಮಿಸುವ ಕಾರ್ಯವು ಆರಂಭವಾಯಿತು. ಅಂದಿನಿಂದ ಅಹಿಲ್ಯಾದೇವಿಯವರ ಕಾಲದವರೆಗೆ ಈ ಧಾರ್ಮಿಕ ಕಾರ್ಯಗಳು ಮರಾಠಿಗರಿಂದ ಆಗತೊಡಗಿದವು. ಒಟ್ಟಾರೆ ಹೇಳಬೇಕೆಂದರೆ, ಮೂಲ ಕಾಶಿಯಲ್ಲಿನ ಮೂಲ ವಿಶ್ವೇಶ್ವರನ ಒಂದು ಬಾರಿಯಲ್ಲ, ಮೂರು ಬಾರಿ ಆಗಿರುವ ಮಸೀದಿ ಎಂದರೆ ಪಕ್ಕದ ‘ಜ್ಞಾನವಾಪಿ’ಯ ವಿಷಯ !

(ಮುಕ್ತಾಯ)

– ಕೌಸ್ತುಭ ಕಸ್ತುರೆ (ಆಧಾರ : ಫೆಸ್‌ಬುಕ್)