ಕಾಶಿ ವಿಶ್ವೇಶ್ವರನ ಪ್ರಾಚೀನ ಇತಿಹಾಸ ಮತ್ತು ಅವರ ಮೇಲಾದ ಆಕ್ರಮಣಗಳು

ಜ್ಞಾನವಾಪಿ ಮಸೀದಿ ಕಾಶಿ ವಿಶ್ವನಾಥ ದೇವಸ್ಥಾನ

ಕಳೆದ ಕೆಲವು ತಿಂಗಳುಗಳಿಂದ ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ಇವು ಚರ್ಚೆಯಲ್ಲಿವೆ. ವಾರಣಾಸಿಯಲ್ಲಿರುವ ಮೂಲ ಕಾಶಿ ವಿಶ್ವೇಶ್ವರನ ಈ ಜಾಗವನ್ನು ಮೊಗಲರ ಕಾಲದಲ್ಲಿ ಭ್ರಷ್ಟಗೊಳಿಸಲಾಯಿತು ಮತ್ತು ದೇವಸ್ಥಾನವನ್ನು ಕೆಡವಿ ಆ ಜಾಗದಲ್ಲಿ ಮಸೀದಿಯನ್ನು ಕಟ್ಟಲಾಯಿತು, ಇದು ಈ ಪ್ರಕರಣದ ವಿಷಯವಾಗಿದೆ. ಜ್ಞಾನವಾಪಿಯ ಪ್ರಕರಣ ಏನಿದೆ, ಎಂಬುದನ್ನು ಸ್ವಲ್ಪದರಲ್ಲಿ ನೋಡೋಣ.

೧. ಸ್ಕಂದ ಪುರಾಣದಲ್ಲಿ ಮತ್ತು ಸಾಮ್ರಾಟ ಗುಪ್ತರ ಕಾಲದಲ್ಲಿ ಕಾಶಿಯ ಉಲ್ಲೇಖವಿದೆ

ಕಾಶಿ ವಿಶ್ವೇಶ್ವರನೆಂದರೆ ಹಿಂದೂ ಧರ್ಮದ ಅತ್ಯಂತ ಗೌರವದ ಶ್ರದ್ಧಾಸ್ಥಾನ ! ಕಾಶಿಯ ಅತ್ಯಂತ ಪುರಾತನ ಉಲ್ಲೇಖವು ಸ್ಕಂದ ಪುರಾಣದಲ್ಲಿರುವ ೧೦೦ ಅಧ್ಯಾಯಗಳ ಕಾಶಿ ಖಂಡದಲ್ಲಿ ಬರುತ್ತದೆ. ಸ್ಕಂದ ಪುರಾಣದ ಬರವಣಿಗೆಯ ಕಾಲವನ್ನು ನಿಖರವಾಗಿ ಪತ್ತೆಹಚ್ಚಲು ಆಗದಿದ್ದರೂ, ಅದು ಗುಪ್ತರ ಆಳ್ವಿಕೆಯ ಮುಂಚಿನದಾಗಿರುವುದು ಕಂಡು ಬರುತ್ತದೆ. ಸಮ್ರಾಟ ಗುಪ್ತರ ಕಾಲದಲ್ಲಿ ಮಾತ್ರ ಕಾಶಿ ವಿಶ್ವೇಶ್ವರನ ರೂಪವು ಅತ್ಯಂತ ಭವ್ಯ ಮತ್ತು ಉತ್ತುಂಗವಾಗಿತ್ತು ಎಂದು ಆಗಿನ ವರ್ಣನೆಗನುಸಾರ ಹೇಳಬಹುದು.

೨. ಚೀನಾದ ಪ್ರವಾಸಿ ಹ್ಯುಯೆನ್ ತ್ಸಂಗ್‌ನ ದಾಖಲೆಗಳಲ್ಲಿ ವಿಶ್ವೇಶ್ವರನ ದೇವಸ್ಥಾನದ ಉಲ್ಲೇಖವಿದೆ

ಹ್ಯುಯೆನ್ ತ್ಸಂಗ್ ಎಂಬ ಓರ್ವ ಚೀನೀ ಪ್ರವಾಸಿಯು ಇದೇ ಕಾಲದಲ್ಲಿ ಭಾರತದ ಪ್ರವಾಸದಲ್ಲಿರುವಾಗ ವಾರಣಾಣಸಿಯ ಬಗ್ಗೆ ಕೆಲವು ಟಿಪ್ಪಣಿಗಳನ್ನು ಮಾಡಿದ್ದಾನೆ. ಅವನು ಟಿಪ್ಪಣಿಯಲ್ಲಿ, ‘ರಾಜಧಾನಿ ಕಾಶಿಯು ಒಂದು ಜನನಿಬಿಡ ನಗರವಾಗಿದೆ. ಅಲ್ಲಿನ ಕುಟುಂಬಗಳು ಬಹಳ ಶ್ರೀಮಂತವಾಗಿವೆ. ಜನರ ಸ್ವಭಾವ ಮೃದು ಮತ್ತು ಮನುಷ್ಯತ್ವ ಇರುವುದಾಗಿದೆ. ಅಲ್ಲಿನ ಜನರಿಗೆ ಜ್ಞಾನಾರ್ಜನೆಗಾಗಿ ಬಹಳ ದಾನವನ್ನು ನೀಡಲಾಗುತ್ತದೆ’, ಎಂದು ಬರೆದಿದ್ದಾನೆ. ಹ್ಯುಯೆನ್ ತ್ಸಂಗ್‌ನು ವಿಶ್ವೇಶ್ವರನ ದೇವಸ್ಥಾನ ಎಷ್ಟು ಭವ್ಯವಾಗಿತ್ತು, ಎಂಬುದರ ಬಗ್ಗೆಯೂ ಕೆಲವು ಟಿಪ್ಪಣಿಗಳನ್ನು ಬರೆದಿದ್ದಾನೆ.

೩. ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ದೀನ ಐಬಕ್‌ನು ಕಾಶಿ ವಿಶ್ವೇಶ್ವರನ ಮೇಲೆ ಮೊದಲ ಬಾರಿಗೆ ದಾಳಿ ಮಾಡುವುದು

ಗುಪ್ತರ ಆಳ್ವಿಕೆಯ ಕಾಲವನ್ನು ಭಾರತದಲ್ಲಿನ ಹಿಂದುತ್ವದ ಒಂದು ಸುವರ್ಣ ಕಾಲವೆಂದು ಒಪ್ಪಿಕೊಳ್ಳಲಾಗುತ್ತದೆ. ಸಾಮ್ರಾಟ ಗುಪ್ತರ ರಾಜ್ಯಾಡಳಿತ ಸಮಾಪ್ತವಾದರೂ ಧರ್ಮದ ಪ್ರಭಾವ ಉತ್ತುಂಗಕ್ಕೇರಿತ್ತು. ಆ ಸಮಯದಲ್ಲಿ ಪಶ್ಚಿಮದ ಕಡೆಯಿಂದ ಸಿಂಧ ಪ್ರಾಂತದ ಮೇಲೆ ಬಿನ್ ಕಾಸಿಮ್‌ನಿಂದ ಮೊದಲು ವಿದೇಶಿ ಆಕ್ರಮಣವಾಯಿತು. ಇದರಿಂದ ಕ್ರಮೇಣ ಎಲ್ಲ ಧಾರ್ಮಿಕ ಪರಂಪರೆಗಳ ಮೇಲೆ ಹತೋಟಿ ಬರತೊಡಗಿತು. ಈ ಮಧ್ಯದ ಕಾಲದಲ್ಲಿ ಕಾಶಿಯ ವಿಶ್ವೇಶ್ವರನ ಮೇಲೆ ಎರಡು ಬಾರಿ ಆಕ್ರಮಣವಾಯಿತು. ಮೊದಲ ಆಕ್ರಮಣ ೧೨ ನೇ ಶತಕ ಕೊನೆಗೊಳ್ಳುವಾಗ ಆಯಿತು. ದೆಹಲಿಯ ಸಿಂಹಾಸನದ ಮೇಲೆ ಕುಳಿತ ಮಹಮ್ಮದ ಘೋರಿಯ ಸೇನಾಪತಿ ಕುತುಬುದ್ಧಿನ ಐಬಕ್‌ನು ಕನೌನ ಎಲ್ಲ ಪ್ರಾಂತಗಳನ್ನು ಗೆದ್ದನು ಮತ್ತು ಇದೇ ಸಮಯದಲ್ಲಿ ವಿಶ್ವೇಶ್ವರನ ದೇವಸ್ಥಾನಕ್ಕೆ ತೊಂದರೆಗಳು ಪ್ರಾರಂಭವಾದವು. ಸುಮಾರು ಒಂದು ಸಾವಿರ ದೇವಸ್ಥಾನಗಳು ನೆಲಸಮವಾದವು ಮತ್ತು ಅಲ್ಲಿ ಮಸೀದಿಗಳನ್ನು ಕಟ್ಟಲಾಯಿತು.

೪. ಬಾದಶಾಹ ಅಲ್ತಮಶನ್‌ನ ಕಾಲದಲ್ಲಿ ಓರ್ವ ವ್ಯಾಪಾರಿಯು ವಿಶ್ವೇಶ್ವರನ ದೇವಸ್ಥಾನವನ್ನು ಪುನಃ ಕಟ್ಟುವುದು ಮತ್ತು ಇಬ್ರಾಹಿಮ್ ಲೋಧಿಯ ಕಾಲದಲ್ಲಿ ದೇವಸ್ಥಾನವನ್ನು ಕೆಡವಿ ಪುನಃ ಮಸೀದಿಯನ್ನು ಕಟ್ಟುವುದು

ವಾರಾಣಸಿಯು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿರುವುದರಿಂದ ಅಲ್ಲಿ ಗಾಝಿಯ ಸೇನೆಯು ಮಾಡಿದ ಗಲಭೆಯ ಬಗ್ಗೆ ಘೋರಿಯ ದರಬಾರಿನಲ್ಲಿನ ಹಸನ್ ನಿಝಾಮೀಯನ್ ಬರೆದ ‘ತಾಜ್-ಉಲ್-ಮಾಸಿರ್’ನಲ್ಲಿ ಓದಲು ಸಿಗುತ್ತದೆ. ಇದರ ಅನುವಾದವನ್ನು ಎಲಿಯಟ್ ಮತ್ತು ಡಾಸನ್ ಇವರ ಎರಡನೇಯ ಖಂಡದಲ್ಲಿ ಓದಲು ಸಿಗುತ್ತದೆ. ಮುಂದೆ ೫೦ ವರ್ಷಗಳ ನಂತರ ಬಾದಶಾಹ ಅಲ್ತಮಶನ್‌ನ ಆಳ್ವಿಕೆಯಲ್ಲಿ ಓರ್ವ ವ್ಯಾಪಾರಿಯು ಈ ದೇವಸ್ಥಾನವನ್ನು ಪುನಃ ಮೊದಲಿನ ಸ್ಥಿತಿಗೆ ತಂದನು. ಇವೆಲ್ಲವುಗಳಿಗೆ ೨೦೦ ವರ್ಷಗಳು ತುಂಬುವುದರ ಒಳಗೆ, ಇಬ್ರಾಹಿಮ್ ಲೋಧಿಯ ಆಳ್ವಿಕೆಯಲ್ಲಿ ಪುನಃ ವಿಶ್ವೇಶ್ವರನ ಮೇಲೆ ದಾಳಿಯಾಗಿ ದೇವಸ್ಥಾನವನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಲಾಯಿತು. ಆ ಮಸೀದಿ ಮುಂದಿನ ಸುಮಾರು ೧೦೦-೧೨೫ ವರ್ಷಗಳ ಕಾಲ ಅದೇ ರೀತಿ ಇತ್ತು.

೫. ಮಹಾರಾಷ್ಟ್ರದ ಖ್ಯಾತ ಧರ್ಮಪಂಡಿತ ನಾರಾಯಣ ಭಟ್ಟರಿಂದ ಕಾಶಿ ವಿಶ್ವೇಶ್ವರನ ದೇವಸ್ಥಾನದ ಪುನರ್ನಿರ್ಮಾಣ

ಲೋಧಿಯ ರಾಜ್ಯಾಡಳಿತದಲ್ಲಿ ನಾಶವಾದ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಮತ್ತೊಮ್ಮೆ ಕಟ್ಟುವ ನಿಶ್ಚಯವನ್ನು ಓರ್ವ ಮಹಾರಾಷ್ಟ್ರದ ಖ್ಯಾತ ಧರ್ಮಪಂಡಿತರು ಮಾಡಿದರು. ಅವರ ಹೆಸರು ನಾರಾಯಣ ಭಟ್ಟ ಎಂದಾಗಿತ್ತು. ನಾರಾಯಣ ಭಟ್ಟರೆಂದರೆ ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವನ್ನು ಮಾಡಿದ ಗಾಗಾ ಭಟ್ಟರ ಮುತ್ತಜ್ಜ. ಮೂಲತಃ ಪೈಠಣದಿಂದ ಬಂದ ಭಟ್ಟರು ಆವಾಗಿನಿಂದ ಕಾಶಿಯಲ್ಲಿ ನೆಲೆಸಿದರು ಮತ್ತು ನಂತರ ಗಾಗಾ ಭಟ್ಟರು ಕಾಶಿಯಿಂದ ಮಹಾರಾಷ್ಟ್ರಕ್ಕೆ ಬಂದು ಮಹಾರಾಜರ ರಾಜ್ಯಾಭಿಷೇಕವನ್ನು ಮಾಡಿದರು. ನಾರಾಯಣ ಭಟ್ಟರು ಕಟ್ಟಿದ ಈ ದೇವಸ್ಥಾನವು ಹೇಗಿತ್ತು, ಎಂಬುದರ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ.

– ಕೌಸ್ತುಭ ಕಸ್ತುರೆ (ಆಧಾರ : ಫೆಸ್‌ಬುಕ್)