ನಿಯಮಿತವಾಗಿ ವ್ಯಾಯಾಮವನ್ನು ಮಾಡಿರಿ !

`ನಿಯಮಿತ ವ್ಯಾಯಾಮ ಮಾಡುವುದರಿಂದ ಶಾರೀರಿಕ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಮನಸ್ಸಿನ ಕ್ಷಮತೆಯೂ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮಾಡುವವರ ಮನಸ್ಸು ಒತ್ತಡವನ್ನು ಸಹಿಸಲು ಸಕ್ಷಮವಾಗುತ್ತದೆ. ವ್ಯಾಯಾಮ ಮಾಡುವವರಿಗೆ ವಾತಾವರಣದಲ್ಲಿ ಅಥವಾ ಆಹಾರದಲ್ಲಿ ಬದಲಾವಣೆಯಾದಾಗ ಯಾವುದೇ ಪರಿಣಾಮ ವಾಗುವುದಿಲ್ಲ. ವ್ಯಾಯಾಮ ಮಾಡಿ ಶರೀರ ಸದೃಢವಾಗಿಟ್ಟು ಕೊಂಡರೇ ಸಾಂಕ್ರಾಮಿಕ ರೋಗಗಳನ್ನು ಪ್ರತಿರೋಧಿಸಲು ಸಹಾಯವಾಗುತ್ತದೆ. ವ್ಯಾಯಾಮ ಮಾಡಲು ಯಾವುದೇ ಖರ್ಚು ಬರುವುದಿಲ್ಲ. ರೋಗವನ್ನು ನಿವಾರಿಸುವ ಉಚಿತ ಚಿಕಿತ್ಸೆಯು ಪ್ರತಿಯೊಬ್ಬರಿಗೆ ಸಹಜವಾಗಿ ಸಾಧ್ಯವಿರುವಾಗ ಕೇವಲ `ಆಲಸ್ಯ’ ಈ ಸ್ವಭಾವದೋಷದಿಂದಾಗಿ ಅದು ನಿಯಮಿತವಾಗಿ ಮಾಡಲಾಗುತ್ತಿಲ್ಲ ! ಇಂದಿನಿಂದ ನಿಯಮಿತವಾಗಿ ವ್ಯಾಯಾಮ ಮಾಡೋಣ !’

ಇಂದಿನಿಂದ ಕನಿಷ್ಠ ೩೦ ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವ ಗುರಿಯನ್ನಿಡಿ !

`ನಿಯಮಿತವಾಗಿ ವ್ಯಾಯಾಮವನ್ನು ಮಾಡಿದರೆ ಮಾತ್ರ ಅದರ ಲಾಭಗಳು ಕಂಡುಬರುತ್ತದೆ. ‘ವ್ಯಾಯಾಮ ಮಾಡಿದೆ ಆದರೆ ಅದರಿಂದ ಯಾವುದೇ ಲಾಭವಾಗಲಿಲ್ಲ’, ಹೀಗಾಗುವುದೇ ಇಲ್ಲ. `ಯಾವುದಾದರೊಂದು ಅಂಶವನ್ನು ಅಂಗೀಕರಿಸಲು ಕನಿಷ್ಠ ೨೧ ದಿನಗಳ ಕಾಲ ಪ್ರತಿದಿನ ಮಾಡಬೇಕು’ ಎಂದು ಮನೋವಿಜ್ಞಾನ ಹೇಳುತ್ತದೆ. ಆದ್ದರಿಂದ ಇಂದಿನಿಂದ ನಿಯಮಿತವಾಗಿ ವ್ಯಾಯಾಮ ಮಾಡುವ ಗುರಿಯನ್ನು ಇಟ್ಟುಕೊಳ್ಳಿರಿ. `ಬೆಳಿಗ್ಗೆ ವ್ಯಾಯಾಮ ಮಾಡದಿದ್ದರೆ ಮಧ್ಯಾಹ್ನದ ಊಟ ಮಾಡುವುದಿಲ್ಲ’ ಅಥವಾ ಸಂಜೆ ವ್ಯಾಯಾಮ ಮಾಡುವವರಾಗಿದ್ದರೆ `ವ್ಯಾಯಾಮ ಮಾಡದಿದ್ದರೆ ರಾತ್ರಿ ಊಟ ಮಾಡುವುದಿಲ್ಲ’ ಎಂದು ನಿರ್ಧರಿಸಿ. ನೀವು ಎಷ್ಟೇ ಬಿಡುವಿಲ್ಲದ್ದರೂ ದಿನಕ್ಕೆ ಕನಿಷ್ಠ ೩೦ ನಿಮಿಷ ವ್ಯಾಯಾಮಕ್ಕೆ ಮೀಸಲಿಡಿ. ಒಂದೇ ತರಹದ ವ್ಯಾಯಾಮ ಮಾಡದೆ ತನ್ನ ಕ್ಷಮತೆಯನುಸಾರ ನಡಿಗೆ, ಓಟ, ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ ಹೀಗೆ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡಿ. ಪ್ರತಿದಿನ ಹಂತಹಂತವಾಗಿ ವ್ಯಾಯಾಮವನ್ನು ಹೆಚ್ಚಿಸಿ. ಒಂದು ತಿಂಗಳ ನಂತರ, ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳು ಹೆಚ್ಚಿವೆ ಮತ್ತು ನೀವು ಆರೋಗ್ಯಕರ ಜೀವನ ದತ್ತ ಸಾಗುತ್ತಿರುವಿರಿ ಎಂದು ನೀವು ಖಂಡಿತವಾಗಿಯೂ ಅನುಭವಿಸುವಿರಿ.’

ವಾತ, ಪಿತ್ತ ಮತ್ತು ಕಫ ಇವು ಸಮತೋಲನದಲ್ಲಿರಲು ವ್ಯಾಯಾಮ ಉಪಯುಕ್ತ

`ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫ ಇವುಗಳಿಗೆ `ದೋಷ’ ಎಂದು ಕರೆಯಲಾಗುತ್ತದೆ. ವಾತ, ಪಿತ್ತ ಮತ್ತು ಕಫ ಈ ದೋಷಗಳ ಕಾರ್ಯದಲ್ಲಿ ತೊಡಕುಂಟಾಗುವುದು, ಅಂದರೆ ರೋಗ ! ಆಯುರ್ವೇದಕ್ಕನುಸಾರ ಸರಿಯಾದ ಸಮಯದಲ್ಲಿ ಊಟ ಮಾಡುವುದು, ಜೀರ್ಣವಾಗುವುದನ್ನೇ ಸೇವಿಸುವುದು, ದೇಹಕ್ಕಾಗಿ ಅಹಿತಕರ ಪದಾರ್ಥಗಳನ್ನು ತಡೆಯುವುದು ಇತ್ಯಾದಿ ಆಹಾರದ ನಿಮಯಗಳನ್ನು ಪಾಲಿಸುವುದರಿಂದ ವಾತಾದಿ ದೋಷಗಳ ಕಾರ್ಯದಲ್ಲಿ ಸಮತೋಲನವಿದ್ದು ಆರೋಗ್ಯ ಚೆನ್ನಾಗಿರುತ್ತದೆ; ಆದರೆ ಅನೇಕ ಬಾರಿ ಊಟದ ಸಂದರ್ಭದ ನಿಮಯಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ದೇಹವನ್ನು ಆರೋಗ್ಯವಂತವಾಗಿಡಲು ಸರ್ವೋತ್ತಮ ಮಾರ್ಗವೆಂದರೆ `ವ್ಯಾಯಾಮ ಮಾಡುವುದು’. ಆಹಾರದ ನಿಮಯಗಳನ್ನು ಪಾಲಿಸದಿರುವುದರಿಂದ ವಾತಾದಿ ದೋಷಗಳು ಅಸಮತೋಲನವಾದರೂ, ನಿಯಮಿತವಾದ ವ್ಯಾಯಾಮದಿಂದ ಅದು ಪುನಃ ಸಮತೋಲನವಾಗಲು ಸಹಾಯ ವಾಗುತ್ತದೆ. ಆದುದರಿಂದ ದೇಹವನ್ನು ಆರೋಗ್ಯವಾಗಿಡಲು ಪ್ರತಿದಿನ ಕಡಿಮೆ ಪಕ್ಷ ಅರ್ಧ ಗಂಟೆ ವ್ಯಾಯಾಮ ಮಾಡಿರಿ !’

ವ್ಯಾಯಾಮ ಯಾವಾಗ ಮಾಡಬೇಕು ?

`ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮವನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು. ಊಟದ ನಂತರ ಹೊಟ್ಟೆ ಹಗುರವಾಗುವವರೆಗೆ, ಅಂದರೆ ಸುಮಾರು ೩ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು. ವ್ಯಾಯಾಮದ ನಂತರ ಕಡಿಮೆ ಪಕ್ಷ ೧೫ ನಿಮಿಷಗಳ ವರೆಗೆ ಏನನ್ನು ತಿನ್ನುವುದು-ಕುಡಿಯುವುದು ಮಾಡಬಾರದು.’

ವ್ಯಾಯಾಮ ಯಾವಾಗ ಮಾಡಬಾರದು ?

`ಜ್ವರ ಬಂದಿರುವಾಗ, `ಸೇವಿಸಿದ ಆಹಾರ ಜೀರ್ಣವಾಗದೆ ಅದು ಹೊಟ್ಟೆಯಲ್ಲಿ ಹಾಗೇ ಇದೆ’, ಎಂದೆನಿಸಿದಾಗ ವ್ಯಾಯಾಮ ಮಾಡಬಾರದು. ಇತರ ಸಮಯದಲ್ಲಿ ಮಾತ್ರ ತಮ್ಮ ಕ್ಷಮತೆಯ ನುಸಾರ ನಿಯಮಿತ ವ್ಯಾಯಾಮ ಮಾಡಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.