ಮುಂಬರುವ ಆಪತ್ಕಾಲದಲ್ಲಿ ರೋಗದ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದಕ್ಕನುಸಾರ ಆಚರಣೆ ಮಾಡಿ !

೧. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಯಮಿತವಾಗಿ ಪ್ರಯತ್ನಿಸುವುದು ಆವಶ್ಯಕ

‘ಎಲ್ಲ ರೋಗಗಳಲ್ಲಿ ವಿಶೇಷವಾಗಿ ಸೋಂಕು ರೋಗಗಳಲ್ಲಿ ಶರೀರದ ರೋಗನಿರೋಧಕ ಶಕ್ತಿಯ ಪಾತ್ರವು ಮಹತ್ವದ್ದಾಗಿರುತ್ತದೆ; ಆದರೆ ರೋಗನಿರೋಧಕ ಶಕ್ತಿಯು ಒಂದೇ ದಿನದಲ್ಲಿ ಹೆಚ್ಚಾಗುವುದಿಲ್ಲ. ಅದಕ್ಕಾಗಿ ನಿಯಮಿತ ಪ್ರಯತ್ನ ಮಾಡಬೇಕಾಗುತ್ತದೆ. ಈಗಿನಿಂದಲೇ ನಾವು ಆಯುರ್ವೇದದಲ್ಲಿ ಹೇಳಿದಂತೆ ದಿನಚರ್ಯ (ಪ್ರತಿದಿನ ಮಾಡುವ ಕೃತಿಗಳು) ಮತ್ತು ಋತುಚರ್ಯ (ಋತುಗಳಿಗನುಸಾರ ಮಾಡಬೇಕಾದ ಆಚರಣೆಗಳು) ಇವುಗಳನ್ನು ಪಾಲಿಸಿದದರೆ, ಕೇವಲ ಕೊರೊನಾದಂತಹ ಸೋಂಕು ರೋಗವನ್ನು ಮಾತ್ರವಲ್ಲ ಇತರ ರೋಗಗಳನ್ನೂ ನಿರೋಧಿಸಲು ನಮಗೆ ಸಹಾಯವಾಗುವುದು.

ವೈದ್ಯೆ (ಡಾ.) (ಕು.) ಮೊನಿಕಾ ಅರವಿಂದ

೨. ಎಲ್ಲರೂ ನಿಯಮಿತವಾಗಿ ಪಾಲಿಸಬೇಕಾದ ಪಥ್ಯಗಳು

 

ಅ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು

ಆ. ಬೆಳಗ್ಗೆ ನಿಯಮಿತವಾಗಿ ವ್ಯಾಯಾಮ ಮತ್ತು ಪ್ರಾಣಾಯಾಮಗಳನ್ನು ಮಾಡುವುದು

ಇ. ಯೋಗ್ಯ ಸಮಯಕ್ಕೆ ಮತ್ತು ಯೋಗ್ಯ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು

ಈ. ಹೆಚ್ಚು ಅಥವಾ ಕಡಿಮೆ ನೀರನ್ನು ಕುಡಿಯದೆ ಅವಶ್ಯಕತೆಗನುಸಾರ ನೀರು ಕುಡಿಯುವುದು

ಉ. ಮಲಮೂತ್ರಗಳನ್ನು ತಡೆಹಿಡಿಯಬಾರದು, ಹಾಗೆಯೇ ಮಲ ಮೂತ್ರಗಳಿಗೆ ಒತ್ತಡವನ್ನು ಹಾಕಬಾರದು

ಊ. ಮನಸ್ಸನ್ನು ಸತತವಾಗಿ ಸಕಾರಾತ್ಮಕ, ಉತ್ಸಾಹಿ ಮತ್ತು ಆನಂದದಲ್ಲಿಡಬೇಕು.

೩. ಋತುಗಳಿಗನುಸಾರವಾಗಿ ಆಹಾರಗಳ ನಿಯಮಗಳು

ಅ. ಚಳಿಗಾಲದಲ್ಲಿ ಹಸಿವು ಹೆಚ್ಚಿರುತ್ತದೆ. ಆದುದರಿಂದ ಚಳಿಗಾಲದಲ್ಲಿ ದಿನದಲ್ಲಿ ೩ ಅಥವಾ ೪ ಬಾರಿ ಆಹಾರ ಸೇವಿಸಬಹುದು.

ಆ. ಇತರ ಋತುಗಳಲ್ಲಿ ದಿನದಲ್ಲಿ ಕೇವಲ ೨ ಸಲ ಆಹಾರವನ್ನು ಸೇವಿಸುವುದರ ರೂಢಿಯನ್ನು ಮಾಡಿಕೊಳ್ಳಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು.

೪. ಹೆಚ್ಚು ಶಾರೀರಿಕ ಶ್ರಮವನ್ನು ಮಾಡದಿರುವವರಿಗೆ ಆಹಾರದ ಬಗ್ಗೆ ಮಾರ್ಗದರ್ಶಕ ಅಂಶಗಳು

ಅ. ಚಳಿಗಾಲವನ್ನು ಬಿಟ್ಟು ಬೇರೆ ಋತುಗಳಲ್ಲಿ ಆದಷ್ಟು ಬೆಳಗಿನ ತಿಂಡಿಯನ್ನು ಸೇವಿಸಬಾರದು. ಅಲ್ಪಹಾರದ ಸಮಯದಲ್ಲಿ ರೂಢಿಗನುಸಾರ ಹಸಿವಾದಾಗ ಶರೀರದ ಚಲನವಲನೆಯಾಗುವಂತಹ, ಮನೆಯಲ್ಲಿ ಕೆಲಸಗಳನ್ನು ಮಾಡಬೇಕು ಅಥವಾ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಹಸಿವು ಕಡಿಮೆಯಾಗುತ್ತದೆ; ಏಕೆಂದರೆ ಆ ಹಸಿವು ನಿಜವಾದ ಹಸಿವಾಗಿರುವುದಿಲ್ಲ. ಕೆಲವರಿಗೆ ಪ್ರತಿನಿತ್ಯದ ರೂಢಿಯಂತೆ ಬೆಳಗ್ಗೆ ತಿಂಡಿಯ ಸಮಯಕ್ಕೆ ಸರಿಯಾಗಿ ಹಸಿವಾಗಿ ಅದನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳು ಅಕ್ಕಿ ಅಥವಾ ಜೋಳದ ಅರಳು; ಹುರಿದ ಹೆಸರುಬೇಳೆ, ಗೋದಿ ಅಥವಾ ರಾಗಿ ಹಿಟ್ಟಿನ ಅಥವಾ ಅರಳಿನ ಉಂಡೆ, ಇಂತಹ ಪಚನಕ್ಕೆ ಹಗುರವಾದ ಯಾವುದಾದರೊಂದು ಪದಾರ್ಥವನ್ನು ತಿನ್ನಬಹುದು ಅಥವಾ ಒಂದು ಚಮಚ ಬೆಲ್ಲವನ್ನು ಬಾಯಿಯಲ್ಲಿಟ್ಟುಕೊಳ್ಳಬೇಕು.

ಆ. ಮಧ್ಯಾಹ್ನ ಚೆನ್ನಾಗಿ ಹೊಟ್ಟೆ ಹಸಿದಾಗ ಊಟವನ್ನು ಮಾಡಬೇಕು. ಹೊಟ್ಟೆ ತುಂಬ ಊಟವನ್ನು ಮಾಡದೆ ೨ ತುತ್ತು ಕಡಿಮೆ ಊಟ ಮಾಡಬೇಕು.

ಇ. ಬೆಳಗ್ಗೆ ಸಾಧಾರಣ ೧೧ ಗಂಟೆಯ ನಂತರ ಮತ್ತು ರಾತ್ರಿ ಸಾಧಾರಣ ೮ ಗಂಟೆಯ ಮೊದಲು ಊಟ ಮಾಡಬೇಕು.

ಈ. ಬಾಯಾರಿಕೆಯಾದಾಗ ಎಷ್ಟು ಬೇಕೋ ಅಷ್ಟೇ ನೀರನ್ನು ಕುಡಿಯಬೇಕು. ಬಾಯಾರಿಕೆ ಇಲ್ಲದಾಗ ಅನಾವಶ್ಯಕ ನೀರು ಕುಡಿಯಬಾರದು.’

– ವೈದ್ಯೆ (ಕು.) ಮೊನಿಕಾ ಅರವಿಂದ ಕಲ್ಯಾಣಕರ, ರಾಮನಾಥಿ, ಗೋವಾ. (೧೨.೩.೨೦೨೨)