ಬೆಳಗ್ಗೆ ಎದ್ದ ಮೇಲೆ ಬರುವ ಸೀನುಗಳು

ವೈದ್ಯ ಮೇಘರಾಜ ಪರಾಡಕರ

೧. ತಂಪು ಗಾಳಿಯೂ ಸೀನುಗಳಿಗೆ ಕಾರಣ ಆಗಿರಬಹುದು

‘ಕೆಲವೊಮ್ಮೆ ಬೆಳಗ್ಗೆ ಎದ್ದಾಗ ಮೂಗು ಬಂದಾಗಿರುತ್ತದೆ ಮತ್ತು ಬಹಳಷ್ಟು ಸೀನು ಬರುತ್ತಿರುತ್ತವೆ. ಇಂತಹ ಸಮಯದಲ್ಲಿ ‘ನನಗೇನು ‘ಕೊರೊನಾ’, ಆಗಿಲ್ಲವಲ್ಲ !’, ಎಂದೆನಿಸಿ ಕೆಲವರು ಗಾಬರಿಗೊಳ್ಳುತ್ತಾರೆ. ಪ್ರತಿ ಬಾರಿ ಸೀನುಗಳು ಬರುವ ಕಾರಣ ಕೊರೊನಾವೇ ಆಗಿರುತ್ತದೆ ಎಂದೇನಿಲ್ಲ. ರಾತ್ರಿಯ ತಂಪು ಗಾಳಿಯಿಂದ ಮೂಗು ಬಂದಾಗುವುದು ಸಹ ಒಂದು ಪ್ರಾಥಮಿಕ ಕಾರಣವಾಗಿರುತ್ತದೆ. ತಂಪು ಗಾಳಿಯಿಂದ ಮೂಗಿನ ಸೈನಸ್‌ಗಳಿಂದ ಹರಿಯುವ ದ್ರವ ಪದಾರ್ಥ ಗಟ್ಟಿಯಾಗಿ ಗಾಳಿ ಆಡುವ ದಾರಿ ಬಂದಾಗುತ್ತದೆ. ಶ್ವಸನಮಾರ್ಗದಲ್ಲಿನ ಈ ಅಡಚಣೆ ದೂರವಾಗಬೇಕೆಂದು ಸೀನುಗಳು ಬರುತ್ತವೆ. ಕೆಲವೊಮ್ಮೆ ನಾವು ಮಲಗಿದಾಗ ಬಾಯಿ ತೆರೆದಿರುತ್ತದೆ ಮತ್ತು ಮೂಗು ಬಂದಾಗಿರುವುದರಿಂದ ಉಸಿರಾಟವು ಬಾಯಿಯಿಂದ ಆಗುತ್ತಿರುತ್ತದೆ. ಇಂತಹ ಸಮಯದಲ್ಲಿ ಗಂಟಲಿಗೆ ತಂಪು ಗಾಳಿ ತಾಗುವುದರಿಂದ ಗಂಟಲು ಕೆಂಪಾಗುತ್ತದೆ.

೨. ಸೀನುಗಳು ಬರುತ್ತಿದ್ದರೆ ಮಾಡಬೇಕಾದ ಉಪಾಯ

ಬೆಳಗ್ಗೆ ಎದ್ದ ಮೇಲೆ ಸೀನುಗಳು ಬರುತ್ತಿದ್ದರೆ, ಹಾಗೆಯೇ ಗಂಟಲು ಕೆಂಪಾಗಿ ದವಡೆಯ ಸಂದಿಗಳ (ಕೀಲುಗಳ) ಮೇಲೆ ಒತ್ತಿದಾಗ ಅಲ್ಲಿ ನೋವಾಗುತ್ತಿದ್ದರೆ ಮೂಗು, ಕಿವಿ ಗಂಟಲು, ಹಾಗೆಯೇ ದವಡೆಯ ಸಂದುಗಳಿಗೆ ಶಾಖ ಕೊಡಬೇಕು. ಶಾಖವನ್ನು ಕೊಡಲು ಬಿಸಿನೀರಿನ ಚೀಲವನ್ನು (ಹಿಟಿಂಗ್ ಪ್ಯಾಡ್) ಬಳಸಬೇಕು. ನೀರಿನ ಹಬೆಯನ್ನು ತೆಗೆದುಕೊಳ್ಳುವುದಕ್ಕಿಂತ ಈ ರೀತಿ ಒಣ ಶಾಖವನ್ನು ನೀಡಿದರೆ ಹೆಚ್ಚು ಲಾಭವಾಗುತ್ತದೆ. ಅನಂತರ ಮೂಗನ್ನು ಸಿಂಡರಿಸುವುದರಿಂದ ಕಟ್ಟಿದ ದ್ರವ ಪದಾರ್ಥ ಹೊರಗೆ ಬೀಳುತ್ತದೆ. ಉಸಿರಾಟದ ಮಾರ್ಗದಲ್ಲಿನ ಅಡಚಣೆಯು ದೂರವಾದಾಗ ಸೀನುಗಳು ಬರುವುದು ನಿಲ್ಲುತ್ತದೆ.

೩. ಪ್ರತಿಬಂಧಾತ್ಮಕ ಉಪಾಯ

ಸೀನುಗಳು ಬರಲೇಬಾರದು ಎಂದಾದರೆ, ರಾತ್ರಿ ಮಲಗುವಾಗ ತಲೆಯ ಸುತ್ತಲೂ ಹೊದಿಕೆಯನ್ನು ಸುತ್ತಿಕೊಂಡು, ತಲೆಯನ್ನು ಮುಚ್ಚಿಕೊಂಡು ಮಲಗಬೇಕು. ಕಿವಿಗಳಲ್ಲಿ ಹತ್ತಿಯ ಉಂಡೆಗಳನ್ನು ಹಾಕಿಕೊಳ್ಳಬೇಕು. ಮೂಗಿನ ಒಳಭಾಗಕ್ಕೆ ಎಣ್ಣೆಯನ್ನು ಹಚ್ಚಬೇಕು. ರಾತ್ರಿ ಮಲಗುವಾಗ ಹಾಲು ಅಥವಾ ನೀರು ಕುಡಿಯಬಾರದು. ನೀರು ಕುಡಿಯಲೇ ಬೇಕು ಎಂದಾದರೆ ಒಂದು ಗುಟುಕಿನಷ್ಟು ನೀರು ಕುಡಿಯಬಹುದು.’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ಗೋವಾ. (೧೧.೭.೨೦೨೨)