ಯುವಕರೇ, ಧರ್ಮಾಭಿಮಾನ ಮೂಡಲು ಧರ್ಮಾಚರಣೆ ಮಾಡಿರಿ !

ಹಿಂದೂ ಸಂಸ್ಕೃತಿಯಲ್ಲಿನ ವಿವಿಧ ಉಪಾಸನಾ ಮಾರ್ಗಗಳು, ಹಬ್ಬ-ಉತ್ಸವಗಳು, ಆಚಾರವಿಚಾರ, ಆಹಾರವಿಹಾರ ಪದ್ಧತಿ, ಇವುಗಳಿಂದಷ್ಟೇ ಅಲ್ಲ, ದೈನಂದಿನ ಜೀವನದಲ್ಲಿನ ಪ್ರತಿಯೊಂದು ಕೃತಿಯಿಂದಲೂ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ವ್ಯವಸ್ಥೆಯು ಹಿಂದೂ ಧರ್ಮದಲ್ಲಿದೆ. ಇದು ಹಿಂದೂ ಧರ್ಮದ ಅದ್ವಿತೀಯ ವೈಶಿಷ್ಟ್ಯವಾಗಿದೆ. ಹಿಂದೂ ಧರ್ಮದಂತೆ ಆಚರಿಸುವುದೆಂದರೆ, ಈಶ್ವರನ ಸಮೀಪ ಹೋಗುವುದು. ದೈನಂದಿನ ಧಾರ್ಮಿಕ ಕೃತಿಗಳು, ಉದಾ. ಪೂಜಾರ್ಜನೆ, ಆರತಿ, ಪ್ರಾಸಂಗಿಕ ಹಬ್ಬ ಮತ್ತು ಉತ್ಸವಗಳ ಶಾಸ್ತ್ರವನ್ನು ತಿಳಿದುಕೊಂಡು ಮಾಡುವುದು; ಹಾಗೆಯೇ ಕುಲಾಚಾರ, ಕುಲಪರಂಪರೆಯನ್ನು ನಿಭಾಯಿಸುವುದಕ್ಕೆ ‘ಧರ್ಮಾಚರಣೆ’ ಎನ್ನುತ್ತಾರೆ. ನಾವು ಸ್ವತಃ ಧರ್ಮಾಚರಣೆ ಮಾಡಬೇಕು ಮತ್ತು ಕಾರ್ಯಕರ್ತರು ಧರ್ಮಾಚರಣೆಯ ಬಗ್ಗೆ ಹಿಂದೂ ಸಮಾಜದಲ್ಲಿಯೂ ಪ್ರಸಾರ ಮಾಡಬೇಕು.