ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ

ಪ.ಪೂ. ಸ್ವಾಮಿ ವರದಾನಂದ ಭಾರತಿ

ಪ್ರಶ್ನೆ : ಧನಾನಾಂ ಸ್ಯಾತ್‌  ಕಿಮ್‌ ಉತ್ತಮಂ ?

ಅರ್ಥ : ಶ್ರೇಷ್ಠವಾದ ಧನ ಯಾವುದು ?

ಉತ್ತರ : ಶೃತಂ

ಅರ್ಥ : ಜ್ಞಾನ (ಇದೇ ಶ್ರೇಷ್ಠ ಧನವಾಗಿದೆ)

ಎಲ್ಲಾ ತರಹದ ಧನಗಳಲ್ಲಿ ಜ್ಞಾನ ಅಥವಾ ವಿದ್ಯಾಧನವೇ ಶ್ರೇಷ್ಠ ಧನವಾಗಿದೆ. ಭತೃಹರಿಯು ಅವನ ‘ನೀತಿ ಶತಕದಲ್ಲಿ’ ಈ ವಿಷಯವನ್ನು ಬಹಳ ಸುಂದರವಾಗಿ  ಹೇಳಿದ್ದಾನೆ. ಭತೃಹರಿಯು ಹೇಳುತ್ತಾನೆ, ‘ವಿದ್ಯೆಯು ಎಂತಹ ಧನವಾಗಿದೆ ಎಂದರೆ, ಅದನ್ನು ಕಳ್ಳರಿಗೆ ಕದ್ದೊಯ್ಯಲು ಬರುವುದಿಲ್ಲ. ಅಣ್ಣ ತಮ್ಮಂದಿರಲ್ಲಿ ಪಾಲು ಮಾಡಲು ಬರುವುದಿಲ್ಲ, ವಿದ್ಯೆಯ ಹೊರೆಯು ಭಾರ ಎನಿಸುವುದಿಲ್ಲ. ವಿದ್ಯಾಧನವನ್ನು ದಾನ ಮಾಡಿದರೆ ಅದು ಕಡಿಮೆ ಆಗುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ. ಆದುದರಿಂದ ವಿದ್ಯಾಧನವೇ ಎಲ್ಲ ಧನಗಳಲ್ಲಿ ಶ್ರೇಷ್ಠ ಧನವೆಂದು ಒಪ್ಪಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಬಹಳಷ್ಟು ಗ್ರಂಥಗಳು ಸಿಗದೇ ಇದ್ದಾಗ ಅವರು ಶ್ರವಣದ ಮೂಲಕ ವಿದ್ಯೆಯನ್ನು ಕಲಿಯಬೇಕಾಗಿತ್ತು; ಆದುದರಿಂದ ಅದಕ್ಕೆ ‘ಶೃತ’ ಎಂದಿದ್ದಾರೆ. ಮುದ್ರಣದ ಆರಂಭವಾದ (ಪ್ರಸಾರದ) ಕಾಲದಲ್ಲೂ ಶ್ರವಣದ ಮೂಲಕ ಜ್ಞಾನಪಡೆಯುವ ವಿಧಾನವನ್ನು ಸಂಪೂರ್ಣವಾಗಿ  ನಷ್ಟ ಮಾಡಲು  ಸಾಧ್ಯವಾಗಿಲ್ಲ. ಹಾಗೆ ಮಾಡಲು ಸಾಧ್ಯವಾಗಿದ್ದರೆ, ಅಥವಾ  ಹಾಗೆ ಮಾಡುವ ಇಷ್ಟ ಇದ್ದರೆ ವಿದ್ಯಾಲಯ ಮಹಾವಿದ್ಯಾಲಯಗಳನ್ನು ನಡೆಸಿ ಪ್ರಯೋಜನ  ಆಗುತ್ತಿರಲಿಲ್ಲ. ಆದುದರಿಂದ ಇಂದಿಗೂ ಸಹ ಜ್ಞಾನಕ್ಕೆ ‘ಶೃತ’ ಹೇಳುವುದು ಯೋಗ್ಯವಾಗಿದೆ. ದುಡ್ಡು ನಷ್ಟವಾಗುತ್ತದೆ, ಶ್ರೀಮಂತಿಕೆ ಚಂಚಲವಾಗಿದೆ, ಶ್ರೀಮಂತಿಕೆಯಿಂದ ಸಿಗುವ ಪ್ರತಿಷ್ಠೆಯು ಸ್ಥಳ ಕಾಲದ ದೃಷ್ಟಿಯಿಂದ ಸೀಮಿತವಾಗಿರುತ್ತದೆ; ಆದರೆ ಜ್ಞಾನದ ವಿಷಯ ಹಾಗಿಲ್ಲ. ಜ್ಞಾನವಂತನ ಪ್ರತಿಷ್ಠೆಗೆ ಮತ್ತು ಮಾನಸನ್ಮಾನಕ್ಕೆ ಸ್ಥಳ ಕಾಲದ ಬಂಧನ ಇರುವುದಿಲ್ಲ. ಮಹರ್ಷಿ ವ್ಯಾಸರು, ಶಂಕರಾಚಾರ್ಯರು, ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಮತ್ತು ಇನ್ನು ಅನೇಕ ಸಂಶೋಧಕರು, ಇವರ ವಿದ್ವತ್ತಿನ ಪ್ರಭಾವವು ಸಾವಿರಾರು ವರ್ಷಗಳು ಕಳೆದರೂ, ಆಯಾಯ ಕಾಲಕಾಲಕ್ಕೂ ಅದು ಹೆಚ್ಚು ಹೆಚ್ಚಾಗುತ್ತಲೆ ಇದೆ. ಮನುಷ್ಯನ ಮನುಷ್ಯತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ವಿದ್ಯಾಧನ ಅಥವಾ ಜ್ಞಾನಸಂಪತ್ತು ಇವುಗಳ ಉಪಯೋಗ ಆಗಬೇಕಾಗುತ್ತದೆ. ಅದೇ ಮನುಷ್ಯನ ವೈಶಿಷ್ಟ್ಯ ಮತ್ತು ಭೂಷಣವಾಗಿದೆ.

– ಪರಮಪೂಜ್ಯ ಸ್ವಾಮಿ ವರದಾನಂದ ಭಾರತಿ (ಪೂರ್ವಾಶ್ರಮದ ಅನಂತರಾವ್‌ ಆಠವಲೆ)

(ಆಧಾರ: ಗ್ರಂಥ ‘ಯಕ್ಷಪ್ರಶ್ನೆ’).